CONNECT WITH US  

ಹಿನಕಲ್‌ನಲ್ಲಿ ಚಿಬ್ಲು ಇಡ್ಲಿ 

 ಒಂದು ಇಡ್ಲಿಗೆ 6 ರೂ. ಬೆಲೆ ಇದ್ದು, ಆರೋಗ್ಯಕರವಾದ ಸ್ವಾದಿಷ್ಟ ಚಿಬ್ಲು ಇಡ್ಲಿ ಜೇಬಿಗೂ ಭಾರವಲ್ಲ. ಚಿಬ್ಲು ಇಡ್ಲಿಯ ಜೊತೆಗೆ ರೈಸ್‌ ಬಾತ್‌, ಪೂರಿ-ಸಾಗು, ಉದ್ದಿನವಡೆ, ಮಸಾಲೆ ವಡೆಯನ್ನು ಮಾಡಲಾಗುತ್ತಾದರೂ ಜನ ನೈಸರ್ಗಿಕವಾದ ಚಿಬ್ಲು ಇಡ್ಲಿ ತಿನ್ನುವ ಸಲುವಾಗಿಯೇ ಈ ಹೋಟೆಲ್‌ ಹುಡುಕಿಕೊಂಡು ಬರುತ್ತಾರೆ.

ಸಾಂಸ್ಕೃತಿಕ ನಗರಿ ಮೈಸೂರಿಗೆ ಹೊಂದಿಕೊಂಡಿರುವ  ಹಿನಕಲ್‌ ಗ್ರಾಮದ ವೈಭವಿ ಟಿಫಾನೀಸ್‌ ಚಿಬ್ಲು ಇಡ್ಲಿಗೆ (ಕುಕ್ಕೆ ಇಡ್ಲಿ) ಭಾರೀ ಫೇಮಸ್‌. ಮೈಸೂರು-ತಲಶವೇರಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿದೆ ಈ ಗ್ರಾಮ.  ಪುಟ್ಟ ಇಡ್ಲಿ, ಮಾಮೂಲು ಇಡ್ಲಿ, ತಟ್ಟೆ ಇಡ್ಲಿ, ಮಲ್ಲಿಗೆ ಇಡ್ಲಿ, ರವೆ ಇಡ್ಲಿ ಹೀಗೆ ನಾನಾ ವಿಧದ ಇಡ್ಲಿಗಳನ್ನು ಇಲ್ಲಿ ಮಾಡಲಾಗುತ್ತದೆ. ಆದರೆ, ಹಿನಕಲ್‌ನ ಈ ಚಿಬ್ಲು ಇಡ್ಲಿ ಪಕ್ಕಾ ನೈಸರ್ಗಿಕ ಆಹಾರ.

ಯಾವುದೇ ಹೋಟೆಲ್‌ಗೆ ಹೋದರೂ ಇಡ್ಲಿ ತಟ್ಟೆಗಳಲ್ಲಿ ಆರೋಗ್ಯಕ್ಕೆ ಮಾರಕವಾದ ಪ್ಲಾಸ್ಟಿಕ್‌ ಹಾಳೆಗಳನ್ನು ಹಾಸಿ ಅದರ ಮೇಲೆ ಸಂಪಣ ಹೊಯ್ದು ಇಡ್ಲಿ ಬೇಯಿಸುವುದನ್ನು ಕಾಣುತ್ತೇವೆ. ಆದರೆ, ಹಿನಕಲ್‌ನಲ್ಲಿ ಸುರೇಶ್‌ ಅವರು ಕಳೆದ 18 ವರ್ಷಗಳಿಂದ ಹೋಟೆಲ್‌ ನಡೆಸುತ್ತಿದ್ದಾರೆ.  ಚಿಬ್ಲು ಇಡ್ಲಿ ಬೇಯಿಸಲು ಪ್ಲಾಸ್ಟಿಕ್‌ ಹಾಳೆ ಬಳಸುವುದಿಲ್ಲ. ಬದಲಿಗೆ ಬಿಳಿಯ ಕೋರಾ ಬಟ್ಟೆಯನ್ನು ಖರೀದಿಸಿ, ಚಿಬ್ಲು ಅಳತೆಗೆ ಕತ್ತರಿಸಿ ಬಳಸಲಾಗುತ್ತದೆ.

ಚಿಬ್ಲು ಇಡ್ಲಿ ಮಾಡುವ ವಿಧಾನ
 ಇಡ್ಲಿ ಮಾಡುವ ಸಲುವಾಗಿಯೇ ಗೋಲ್ಡ್‌ ಬ್ರಾಂಡ್‌ನ‌ ಅಕ್ಕಿಯನ್ನು ತರುತ್ತಾರೆ. ಸಂಜೆ ವೇಳೆ ಒಂದು ಕೆ.ಜಿ ಅಕ್ಕಿಗೆ ಕಾಲು ಕೆ.ಜಿ ಉದ್ದಿನ ಬೇಳೆಯಂತೆ ಬೆರೆಸಿ, ಮೂರ್‍ನಾಲ್ಕು ಬಾರಿ ತೊಳೆದ ನಂತರ ನೆನೆಯಲು ಬಿಟ್ಟು ಬೆಳಗಿನ ಜಾವ ಸಂಪಣ ರುಬ್ಬಿಕೊಳ್ಳಲಾಗುತ್ತದೆ. ಆ ನಂತರ ದೊಡ್ಡದಾದ ಇಡ್ಲಿ ಪಾತ್ರೆಗೆ ತಳದಲ್ಲಿ 3 ಇಂಚಿನಷ್ಟು ನೀರು ಹಾಕಿ, ಅದರೊಳಗೆ ನಾಲ್ಕು ಇಂಚು ಎತ್ತರದ ಕಬ್ಬಿಣದ ಸ್ಟಾಂಡ್‌ ಇಟ್ಟು, ಬಿದಿರಿನ ಚಿಬ್ಲು (ಕುಕ್ಕೆ)ಗಳಿಗೆ ಬಟ್ಟೆ ಹಾಸಿ, ಅಕ್ಕಿಯ ಸಂಪಣ ಹೊಯ್ದು ಒಂದರ ಮೇಲೊಂದರಂತೆ ಇಡ್ಲಿ ಪಾತ್ರೆಯೊಳಗೆ ಜೋಡಿಸಲಾಗುತ್ತದೆ. ಈ ರೀತಿ ಜೋಡಿಸಲು ಸುಮಾರು 15 ನಿಮಿಷ ಹಿಡಿಯುತ್ತದೆ. ಆನಂತರ ಇಡ್ಲಿಪಾತ್ರೆಯ ಮುಚ್ಚಳ ಮುಚ್ಚಿ 15 ನಿಮಿಷ ಬೇಯಿಸಿದರೆ ಆರೋಗ್ಯಕರವಾದ ಚಿಬ್ಲು ಇಡ್ಲಿ ತಿನ್ನಲು ಸಿದ್ಧವಾಗುತ್ತದೆ.

ಹಿಂದೆಲ್ಲಾ ನೆನೆಸಿದ ಅಕ್ಕಿ-ಉದ್ದಿನಬೇಳೆಯನ್ನು ಒರಳುಕಲ್ಲಿನಲ್ಲಿ ರುಬ್ಬಿ, ಸೌದೆ ಒಲೆಯಲ್ಲಿ, ಹಿತ್ತಾಳೆಯ ಕಡಾಯಿ (ಇಡ್ಲಿಪಾತ್ರೆ)ಯಲ್ಲಿ ಚಿಬ್ಲಿುಗಳನ್ನು ಜೋಡಿಸಿ ಇಡ್ಲಿ ಬೇಯಿಸಲಾಗುತ್ತಿತ್ತು. ಕಾಲ ಬದಲಾದಂತೆ ರುಬ್ಬುವ ಕೆಲಸಕ್ಕೆ ಗ್ರೈಂಡರ್‌, ಇಡ್ಲಿ ಬೇಯಿಸಲು ಗ್ಯಾಸ್‌ ಮತ್ತು ಅಲ್ಯೂಮಿನಿಯಂ ಪಾತ್ರೆ ಬಂದಿದೆ ಎನ್ನುತ್ತಾರೆ ಹೋಟೆಲ್‌ ಮಾಲೀಕ ಸುರೇಶ್‌ ಅವರ ಮಗ ಸುನೀಲ್‌.

ನಾವು ಉತ್ತಮವಾದ ಬ್ರ್ಯಾಂಡ್‌ನ‌ ಅಕ್ಕಿಯನ್ನೇ ಬಳಸುವುದರಿಂದ ಅಕ್ಕಿ ಅಂಟು ಬರಲ್ಲ ಮತ್ತು ಗಂಟೂ ಬರುವುದಿಲ್ಲ. ಜೊತೆಗೆ ಚಿಬ್ಲುಗೆ ಬಟ್ಟೆ ಹಾಸಿ ಇಡ್ಲಿ ಬೇಯಿಸುವುದರಿಂದ ಇಡ್ಲಿ ಮೃದುವಾಗಿರುತ್ತದೆ. ಇಡ್ಲಿ ಜೊತೆಗೆ ತೆಂಗಿನಕಾಯಿ ಚಟ್ನಿ ಮತ್ತು ಆಲೂಗಡ್ಡೆ ಪಲ್ಯವನ್ನು ನೀಡಲಾಗುತ್ತದೆ. ಈ ವಿಷಯದಲ್ಲೂ ಆರೋಗ್ಯದ ಬಗ್ಗೆ ಕಾಳಜಿವಹಿಸಿರುವ ಹೋಟೆಲ್‌ ಮಾಲೀಕರು, ಗ್ರಾಹಕರಿಗೆ ಗ್ಯಾಸ್ಟ್ರಿಕ್‌ ಸಮಸ್ಯೆ ಬಾರದಿರಲಿ ಎಂದು ಕಾಯಿ ಚಟ್ನಿಗೆ ಹಸಿ ಮೆಣಸಿನ ಕಾಯಿ ಬಳಸುವುದಿಲ್ಲ. ಒಣ ಮೆಣಸಿನ ಕಾಯಿ ಬಳಸಿ ರುಬ್ಬಿದ ಕೆಂಪು ಚಟ್ನಿ ಮಾತ್ರ ನೀಡುತ್ತಾರೆ. ಕಾಫಿ-ಟೀ ಕೂಡ ಇಲ್ಲಿ ಮಾಡುವುದಿಲ್ಲ.

ಒಂದು ಇಡ್ಲಿಗೆ 6 ರೂ. ಬೆಲೆ ಇದ್ದು, ಆರೋಗ್ಯಕರವಾದ ಸ್ವಾದಿಷ್ಟ ಚಿಬ್ಲು ಇಡ್ಲಿ ಜೇಬಿಗೂ ಭಾರವಲ್ಲ. ಚಿಬ್ಲು ಇಡ್ಲಿಯ ಜೊತೆಗೆ ರೈಸ್‌ ಬಾತ್‌, ಪೂರಿ-ಸಾಗು, ಉದ್ದಿನವಡೆ, ಮಸಾಲೆ ವಡೆಯನ್ನು ಮಾಡಲಾಗುತ್ತಾದರೂ ಜನ ನೈಸರ್ಗಿಕವಾದ ಚಿಬ್ಲು ಇಡ್ಲಿ ತಿನ್ನುವ ಸಲುವಾಗಿಯೇ ಈ ಹೋಟೆಲ್‌ ಹುಡುಕಿಕೊಂಡು ಬರುತ್ತಾರೆ. ಪ್ರತಿ ನಿತ್ಯ ಬೆಳಗ್ಗೆ 4ಗಂಟೆಗೆ ಬಾಗಿಲು ತೆರೆದರೆ 11.30ಕ್ಕೆ ಅಂದಿನ ವ್ಯವಹಾರ ಮುಕ್ತಾಯ. ಮತ್ತೆ ಮರುದಿನವೇ ಬಾಗಿಲು ತೆರೆಯುವುದು. ಇವರ ಕುಟುಂಬದವರೆಲ್ಲಾ ಹೋಟೆಲ್‌ನ ಕೆಲಸಗಳನ್ನು ಮಾಡುವುದರಿಂದ ಕಾರ್ಮಿಕರ ಸಮಸ್ಯೆ ತಲೆದೋರಿಲ್ಲ.

ಏನಿದು ಚಿಬ್ಲು
ಬಿದಿರಿನಿಂದ ಸಣ್ಣದಾಗಿ ಹೆಣೆದ ಕುಕ್ಕೆಗಳನ್ನು ಚಿಬ್ಲು ಎನ್ನಲಾಗುತ್ತದೆ. ಸೂಕ್ಷ್ಮ ಕೆಲಸವಾಗಿರುವುದರಿಂದ ನಂಜನಗೂಡಿನಲ್ಲಿ ಕುಕ್ಕೆ ಹೆಣೆಯುವವರಿಗೆ ತಿಂಗಳ ಮೊದಲೇ ಆರ್ಡರ್‌ ಕೊಟ್ಟು ಚಿಬ್ಲು ಮಾಡಿಸಿ ತರಬೇಕು. ಮೊದಲೆಲ್ಲಾ ಒಂದು 8 ರೂಪಾಯಿಗೆ ಚಿಬ್ಲು ಸಿಗುತ್ತಿತ್ತು. ಈಗ ಅದರ ಬೆಲೆಯೂ 20 ರಿಂದ 25 ರೂಪಾಯಿ ಆಗಿದೆ. ಇಡ್ಲಿ ಬೇಯಿಸಿದ ನಂತರ ಚಿಬ್ಲುಗಳನ್ನು ನೀರಿನಲ್ಲಿ ನೆನೆಹಾಕಿ ಉಜ್ಜಿ ತೊಳೆಯುವುದರಿಂದ ಚಿಬ್ಲುಗಳು ಮತ್ತು ಕೋರಾ ಬಟ್ಟೆ ಒಂದು ತಿಂಗಳಷ್ಟೇ ಬಾಳಿಕೆ ಬರುತ್ತವೆ. ಮತ್ತೆ ಹೊಸದಾಗಿ ತರಬೇಕು ಎನ್ನುತ್ತಾರೆ ಸುನೀಲ್‌.

ಗಿರೀಶ್‌ ಹುಣಸೂರು


Trending videos

Back to Top