CONNECT WITH US  

ಲಾಸ್‌ನಲ್ಲೂ ಲಾಭ ಇದೆ

ಇ-ಕಾಮರ್ಸ್‌ ರಿಯಾಯಿತಿಯ ಹಿಂದಿನ ಸರ್ಕಸ್‌!

ಸೋಪ್‌, ಪೇಸ್ಟ್‌, ಟಿವಿ, ಫ್ರಿಡ್ಜ್... ಹೀಗೆ ಯಾವುದೇ ಉತ್ಪನ್ನವನ್ನು ಮಾರಿದರೂ ಅದರಿಂದ ಅಂಗಡಿಯವರಿಗೆ ಶೇ.40ರವರೆಗೂ ಕಮಿಷನ್‌ ಸಿಗುತ್ತದೆ. ಹೀಗೆ ಸಿಗುವ ಕಮಿಷನ್‌ನಲ್ಲಿಯೇ 5 ಪರ್ಸೆಂಟ್‌ ರಿಯಾಯಿತಿ ಘೋಷಿಸಿ, ಗ್ರಾಹಕರನ್ನು ಆಕರ್ಷಿಸುತ್ತಾರೆ. ಆದರೆ, ಇ ಕಾಮರ್ಸ್‌ ವೆಬ್‌ಸೈಟ್‌ಗಳ ವ್ಯವಹಾರ ಹಾಗಿಲ್ಲ. ಅವು ಶೇ.40ರಷ್ಟು ಕಮಿಷನ್‌ ಪಡೆದರೂ, ಶೇ.43 ರಿಯಾಯಿತಿ ನೀಡಿ ಉತ್ಪನ್ನವನ್ನು ಮಾರಿಬಿಡುತ್ತವೆ! ಲಾಸ್‌ ಮಾಡಿಕೊಂಡರೂ "ಲಾಭದಲ್ಲಿರುವ' ಇ ಕಾಮರ್ಸ್‌ ವ್ಯವಹಾರದ ಕುರಿತ ಇಣುಕುನೋಟ ಇಲ್ಲಿದೆ...

ಯಾವ ಸಾಮಗ್ರಿಯ ಮೇಲೆ ರಿಯಾಯಿತಿ ಕೊಟ್ಟರೂ, ಅದು ನಮಗೆ ಅಗತ್ಯವಿರಲಿ ಅಥವಾ ಅನಗತ್ಯವೇ ಆಗಿರಲಿ, ನಾವು ಏನನ್ನಾದರೂ ಖರೀದಿಸಿಬಿಡುತ್ತೇವೆ! ಅದು ಕೊಳ್ಳುಬಾಕ ಮನಸ್ಥಿತಿಯ ಮೊದಲ ಮೆಟ್ಟಿಲು. ಒಮ್ಮೆ ನೀವು ರಿಯಾಯಿತಿ ದರದಲ್ಲಿ ದುಬಾರಿ ಬೆಲೆಯ ಟೂತ್‌ಪೇಸ್ಟ್‌ ಖರೀದಿಸುತ್ತೀರಿ ಎಂದುಕೊಳ್ಳಿ. ಅದು ಖಾಲಿಯಾದ ನಂತರ ಪುನಃ ಕಡಿಮೆ ಬೆಲೆಯ ಟೂತ್‌ಪೇಸ್ಟ್‌ ಖರೀದಿಸಲು ಮನಸ್ಸು ಮಾಡುವುದಿಲ್ಲ. ಏಕೆಂದರೆ, ಈ ಹಿಂದೆ ಖರೀದಿಸಿದ ವಸ್ತುವಿಗೇ ಮನಸ್ಸು ಅಡಿಕ್ಟ್ ಆಗಿರುತ್ತೆ. ಹಾಗಾಗಿ, ರಿಯಾಯಿತಿ ಇಲ್ಲದಿದ್ದರೂ ಅದೇ ಟೂತ್‌ಪೇಸ್ಟ್‌ಅನ್ನು ಖರೀದಿಸುತ್ತೇವೆ. ಇದು ರಿಯಾಯಿತಿಯ ಹಿಂದಿರುವ ಲಾಜಿಕ್‌. ಬೀದಿ ಬದಿಯಲ್ಲಿರುವ ಅಂಗಡಿಯಲ್ಲೇ ಆಗಲಿ ಅಥವಾ ವೆಬ್‌ಸೈಟ್‌ಗಳಲ್ಲೇ ಆಗಲಿ ಇದೇ ಮನಸ್ಥಿತಿ ಕೆಲಸ ಮಾಡುತ್ತದೆ.

ಇ-ಕಾಮರ್ಸ್‌ ವೆಬ್‌ಸೈಟ್‌ಗಳು ಆರಂಭವಾದಾಗ ಅವು ಮನೆಗೇ ಸಾಮಗ್ರಿಯನ್ನು ತಂದುಕೊಡುತ್ತವೆ ಎಂಬ ಆಕರ್ಷಕ ಸಂಗತಿಯೇನೋ ಜನರನ್ನುಮರಳು ಮಾಡಿತ್ತು. ಆದರೆ ಜನರನ್ನು ವೆಬ್‌ಸೈಟ್‌ಗೆ ಕರೆತರುವುದಕ್ಕೆ ಅದಷ್ಟೇ ಸಾಲದು. ರಿಯಾಯಿತಿ ಕೊಡುವುದು ಅನಿವಾರ್ಯ ಎಂಬಂತೆ ಇ-ಕಾಮರ್ಸ್‌ ಸೈಟ್‌ಗಳು ಭಾವಿಸಿದವು. ಅದರ ಪ್ರತಿಫ‌ಲವಾಗಿಯೇ ರಿಯಾಯಿತಿ ಸೇಲ್‌ಗ‌ಳು ಶುರುವಾದವು. ಮೊದಲ ಬಾರಿಗೆ ಫ್ಲಿಪ್‌ಕಾರ್ಟ್‌ನಿಂದ ಬಿಗ್‌ ಬಿಲಿಯನ್‌ ಡೇ ಎಂಬ ರಿಯಾಯಿತಿ ದರದ ಮಾರಾಟ ಮೇಳ ಆರಂಭವಾದಾಗ ಭಾರಿ ಸದ್ದು ಮಾಡಿತು. ಅದೃಷ್ಟವಿದ್ದವರಿಗೆ 1 ರೂಪಾಯಿಯಲ್ಲೂ ಸಾಮಗ್ರಿಗಳು ಸಿಕ್ಕವು. 2014ರಲ್ಲಿ ಫ್ಲಿಪ್‌ಕಾರ್ಟ್‌ ಆರಂಭಿಸಿದ ಈ ಹೊಸ ಟ್ರೆಂಡ್‌ ಇಡೀ ಇ-ಕಾಮರ್ಸ್‌ ಕ್ಷೇತ್ರಕ್ಕೆ ಮೈ ಛಳಿ ಬಿಡಿಸಿತು.

ಈ ಇ-ಕಾಮರ್ಸ್‌ ವೆಬ್‌ಸೈಟ್‌ಗಳು ವಿದೇಶಿ ಹೂಡಿಕೆ ಹೊಂದಿರುವುದರಿಂದಾಗಿ, ನೇರವಾಗಿ ಸಾಮಗ್ರಿಗಳನ್ನು ಮಾರಾಟ ಮಾಡುವಂತಿಲ್ಲ. ಇದಕ್ಕಾಗಿ ಇವರು ಕಂಡುಕೊಂಡ ತಂತ್ರವೆಂದರೆ, ಮಾರಾಟಗಾರರು ವೆಬ್‌ಸೈಟ್‌ನಲ್ಲಿ ಲಿಸ್ಟ್‌ ಮಾಡುವುದು. ಆ ಮೂಲಕ ಸಾಮಗ್ರಿಗಳನ್ನು ಗ್ರಾಹಕರಿಗೆ ಮಾರುವುದು. ಅಂದರೆ, ನಾವು ಖರೀದಿಸುವ ಯಾವುದೇ ವಸ್ತುವನ್ನೂ ಫ್ಲಿಪ್‌ಕಾರ್ಟ್‌ ನಮಗೆ ನೇರವಾಗಿ ಮಾರುವುದಿಲ್ಲ ಹಾಗೂ ನಾವು ಫ್ಲಿಪ್‌ಕಾರ್ಟ್‌ನಿಂದ ಖರೀದಿಸುವುದಿಲ್ಲ. ಬದಲಿಗೆ ಫ್ಲಿಪ್‌ಕಾರ್ಟ್‌ ಒಪ್ಪಂದ ಮಾಡಿಕೊಂಡ ಮಾರಾಟಗಾರರಿಂದ ನಾವು ಸಾಮಗ್ರಿಯನ್ನು ಖರೀದಿಸುತ್ತೇವೆ. ಫ್ಲಿಪ್‌ಕಾರ್ಟ್‌ ಕೇವಲ ಸಾಮಗ್ರಿಗಳ ಮಾಹಿತಿ ಸಂಗ್ರಹಿಸುವುದು, ಪಾವತಿ ವರ್ಗಾವಣೆ ಮತ್ತು ಡೆಲಿವರಿ ಕೆಲಸವನ್ನು ಮಾತ್ರ ಮಾಡುತ್ತದೆ. ನೇರವಾಗಿ ಮಾರಾಟ ಮಾಡುವ ಅವಕಾಶವಿಲ್ಲದ್ದರಿಂದ ಬೆಲೆಯ ಮೇಲೆಯೂ ಫ್ಲಿಪ್‌ಕಾರ್ಟ್‌ಗೆ ನಿಯಂತ್ರಣ ಇರುವುದಿಲ್ಲ. 

ಒಂದು ಪೆನ್‌, ಬಿಸ್ಕತ್‌ ಪ್ಯಾಕ್‌, ಬುಕ್‌, ಗಡಿಯಾರ, ಕುಕ್ಕರ್‌, ಟಿವಿ- ಹೀಗೆ ಯಾವುದೇ ಆಗಿರಲಿ, ಅದನ್ನು ಮಾರಾಟಕ್ಕೆ ಬಿಟ್ಟಾಗ ಉತ್ಪಾದಕ ಕಂಪನಿಗಳು ಮಾರಾಟಗಾರರಿಗೆ ಕಮಿಷನ್‌ ಕೊಡುತ್ತವೆ. ಉದಾಹರಣೆಗೆ ನಾವು ತಿನ್ನುವ ಬಿಸ್ಕತ್‌ ಪ್ಯಾಕ್‌ನ ಮೂಲ ಮಾರಾಟ ಬೆಲೆ 10 ರೂ. ಎಂದುಕೊಂಡರೆ, ಅದರಲ್ಲಿ ಶೇ.30ರಷ್ಟು (ಅಂದರೆ 3 ರೂ.) ಹಣ, ಕಮಿಷನ್‌ ರೂಪದಲ್ಲಿ ಅಂಗಡಿಯವರಿಗೆ ಸೇರುತ್ತದೆ. ಶೇ.15ರಷ್ಟು ಹಣ (ಅಂದರೆ ತಲಾ 1.5 ರೂ) ಮಧ್ಯವರ್ತಿಯ ಪಾಲಾಗುತ್ತದೆ. ಹೆಚ್ಚು ಗ್ರಾಹಕರನ್ನು ಸೆಳೆಯಬೇಕೆಂದು ಅಂಗಡಿಯವರು ಶೇ.10 ರಿಯಾಯಿತಿ ಘೋಷಿಸಿದರೆ, ಬರುವ ಕಮಿಷನ್‌ ಹಣದಲ್ಲಿ ಅಷ್ಟು ಕೈಬಿಟ್ಟಂತೆಯೇ. ಆದರೆ, ಅಮೆಜಾನ್‌, ಫ್ಲಿಪ್‌ಕಾರ್ಟ್‌ನಂಥ ಕಂಪನಿಗಳು ಹೇಗೆ ವ್ಯವಹಾರ ಮಾಡುತ್ತಿವೆ ಅಂದರೆ, ಉತ್ಪಾದಕರಿಂದ ಶೇ.40 ಪಡೆದು, ಗ್ರಾಹಕರಿಗೆ ಶೇ.45 ರಿಯಾಯಿತಿ ದರದಲ್ಲಿ ಮಾರಾಟ ಮಾಡಿಬಿಡುತ್ತವೆ!

ಲಾಭ ಮಾಡಬೇಕು ಎಂಬುದೇ ಮಾರಾಟಗಾರರ "ಧರ್ಮ ಆಗಿರುವಾಗ, ಹೀಗೆ ಲಾಸ್‌ ಮಾಡಿಕೊಂಡೂ ಕಂಪನಿಗಳು ಉಳಿಯುವುದಾದರೂ ಹೇಗೆ ಎಂಬ ಪ್ರಶ್ನೆ ಹಲವರಿಗಿದೆ. ಏಕೆಂದರೆ- ಸಾಮಾನ್ಯ ದಿನಗಳಲ್ಲೂ ಹಲವು ಸಾಮಗ್ರಿಗಳಿಗೆ ಫ್ಲಿಪ್‌ಕಾರ್ಟ್‌, ಅಮೆಜಾನ್‌ನಂಥ ಇ-ಕಾಮರ್ಸ್‌ ವೆಬ್‌ಸೈಟ್‌ಗಳು ರಿಯಾಯಿತಿ ನೀಡುತ್ತವೆ. ಅದರಲ್ಲೂ ಡಿಸ್ಕೌಂಟ್‌ ಸೇಲ್‌ಗ‌ಳಲ್ಲಂತೂ ಭಾರಿ ಪ್ರಮಾಣದ ರಿಯಾಯಿತಿ ಘೋಷಿಸಿರುತ್ತವೆ. ಇದರ ಹಿಂದಿರುವ ತಂತ್ರಗಳನ್ನು ನೀವು ತಿಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ.

ಸಾಮಾನ್ಯವಾಗಿ ರಿಯಾಯಿತಿ ಸೇಲ್‌ಗ‌ಳ ಸಮಯದಲ್ಲಿ ಮಾರಾಟಗಾರರಿಗೆ ತಮ್ಮ ಉತ್ಪನ್ನಗಳ ಮೇಲೆ ರಿಯಾಯಿತಿ ಘೋಷಿಸಲು ಆಗ್ರಹಿಸಲಾಗುತ್ತದೆ. ಒಂದು ವೇಳೆ ಒಂದು ಟೂತ್‌ಪೇಸ್ಟ್‌ ಬೆಲೆ 50 ರೂ. ಇದ್ದರೆ, ಅದರ ಮೇಲೆ ಶೇ.10 ರಷ್ಟು ರಿಯಾಯಿತಿಯನ್ನು ನೀವು ಘೋಷಿಸಿದರೆ, ನಾವು ಶೇ. 10ರಷ್ಟು ರಿಯಾಯಿತಿ ನೀಡಿ ಗ್ರಾಹಕರಿಗೆ ಮಾರುತ್ತೇವೆ ಎಂದು ವ್ಯಾಪಾರಿಗಳಿಗೆ ಹೇಳಲಾಗುತ್ತದೆ. ಆಗ ಕಡಿಮೆ ಬೆಲೆಗೆ ಟೂತ್‌ಪೇಸ್ಟ್‌ ಸಿಗುತ್ತದೆ ಎಂಬ ಕಾರಣಕ್ಕೆ ಜನರು ಮುಗಿಬೀಳುತ್ತಾರೆ ಎಂಬ ಕಾರಣಕ್ಕೆ ವ್ಯಾಪಾರಿಗಳು ಒಪ್ಪಿಕೊಳ್ಳುತ್ತಾರೆ. ಇಲ್ಲಿ ನಾವು ಗಮನಿಸಬೇಕಾದ ಸಂಗತಿಯೆಂದರೆ, ಅಮೆಜಾನ್‌ ಶೇ. 10ರಷ್ಟು ರಿಯಾಯಿತಿಯನ್ನು ಅಂದರೆ 5 ರೂ. ಅನ್ನು ತನ್ನ ಕೈಯಿಂದ ವ್ಯಾಪಾರಿಗೆ ಕೊಡುತ್ತದೆ. ಇದು ಅಮೆಜಾನ್‌ಗೆ ನಷ್ಟ. ಇದನ್ನು ಆ ಕಂಪನಿ ಅಥವಾ ಅಮೆಜಾನ್‌ನಂತೆಯೇ ವ್ಯವಹಾರ ಮಾಡುವ ಕಂಪನಿಗಳು ಹೇಗೆ ಭರ್ತಿ ಮಾಡಿಕೊಳ್ಳುತ್ತವೆ?

ವ್ಯಾಪಾರ ಎಂದಾಕ್ಷಣ ಮೊದಲು ಜನರ ಮನಸ್ಸಿಗೆ ಬರುವುದೇ ಲಾಭ. ಅದು ಅಂತಿಮ ಗುರಿಯೂ ಹೌದು. ಆದರೆ ಅದು ಆರಂಭದಲ್ಲೇ ಪರಿಗಣನೆಯ ಸಂಗತಿಯಲ್ಲ. ಬೆಂಗಳೂರು ಸೇರಿದಂತೆ ದೇಶದಲ್ಲಿ ಹುಟ್ಟಿಕೊಂಡ ಬಹುತೇಕ ಸ್ಟಾರ್ಟಪ್‌ಗ್ಳ ಅಲ್ಪಾವಧಿ ಗುರಿ ಲಾಭ ಮಾಡುವುದು ಅಲ್ಲವೇ ಅಲ್ಲ. ನಷ್ಟವಾದ ಮಾತ್ರಕ್ಕೆ ವ್ಯಾಪಾರದಲ್ಲಿ ಸೋಲಾಯಿತು ಎಂದೂ ಅಲ್ಲ. ಆದರೆ ಮುಂದೊಂದು ದಿನ ಲಾಭ ಮಾಡಬಹುದಾದ ಸಾಧ್ಯತೆ ಇದೆ ಎಂದಾದರೆ ಆ ಸ್ಟಾರ್ಟಪ್‌ ಗೆದ್ದಂತೆ. 

ಇ-ಕಾಮರ್ಸ್‌ ತಾಣಗಳ ವ್ಯಾಪಾರವೂ ಇದೇ ರೀತಿಯದ್ದು. ಇಲ್ಲಿ ಲಾಭ ಮಾಡುವುದು ಇ ಕಾಮರ್ಸ್‌ ಕಂಪನಿಗಳ ಗುರಿಯಲ್ಲ. ಫ್ಲಿಪ್‌ಕಾರ್ಟ್‌ ಸೇರಿದಂತೆ ಭಾರತದಲ್ಲಿರುವ ಬಹುತೇಕ ಇ-ಕಾಮರ್ಸ್‌ ತಾಣಗಳು ಇಂದಿಗೂ ನಷ್ಟದಲ್ಲೇ ಇವೆ. ಇತ್ತೀಚೆಗಷ್ಟೇ ಫ್ಲಿಪ್‌ಕಾರ್ಟ್‌ಅನ್ನು ಖರೀದಿಸುವ ನಿರ್ಧಾರವನ್ನು ಅಮೆರಿಕದ ಸಗಟು ವಹಿವಾಟು ಮಾರಾಟದ ಬೃಹತ್‌ ಕಂಪನಿ ವಾಲ್‌ಮಾರ್ಟ್‌ ಘೋಷಿಸಿದಾಗ, ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಹಠಾತ್ತನೆ ಷೇರು ಮೌಲ್ಯ ಕುಸಿದಿತ್ತು. ಅಷ್ಟೇ ಅಲ್ಲ, ಒಂದಷ್ಟು ದಿನಗಳವರೆಗೆ ಹಲವು ಚಿಲ್ಲರೆ ಹೂಡಿಕೆದಾರರು ವಾಲ್‌ಮಾರ್ಟ್‌ ಕಡೆ ತಲೆ ಹಾಕಲೇ ಇಲ್ಲ. ಇದಕ್ಕೆ ಕಾರಣವೇ ಫ್ಲಿಪ್‌ಕಾರ್ಟ್‌ ನಷ್ಟದಲ್ಲಿರುವ ಸಂಗತಿ. ಆದರೆ ವಾಲ್‌ಮಾರ್ಟ್‌ಗೆ ಖಚಿತವಾಗಿರುವ ಸಂಗತಿಯೇನೆಂದರೆ, ಇನ್ನೊಂದಷ್ಟು ವರ್ಷಗಳವರೆಗೆ ಇದೇ ರೀತಿ ಜನರನ್ನು ಸೆಳೆಯುವ ಇ-ಕಾಮರ್ಸ್‌ ತಾಣಗಳು ಮುಂದೊಂದು ದಿನ ಲಾಭದತ್ತ ಸಾಗುತ್ತವೆ. ಏಕಸ್ವಾಮ್ಯ ಸಾಧಿಸುವ ಸನಿಹಕ್ಕೆ ಬಂದರೆ ಸಾಕು, ಲಾಭ ದೋಚಬಹುದು ಎಂಬುದು ಕಂಪನಿಗಳ ಲೆಕ್ಕಾಚಾರ. ಇದು ವಾಸ್ತವವೂ ಹೌದು. 

ಗ್ರಾಹಕರಿಗೂ, ವ್ಯಾಪಾರಿಗಳಿಗೂ ಲಾಭ
ಇ ಕಾಮರ್ಸ್‌ ವೆಬ್‌ಸೈಟ್‌ಗಳಿಂದ ಗ್ರಾಹಕರಿಗೆ ವ್ಯಾಪಕ ಲಾಭ ಆಗುವುದಂತೂ ನಿಜ. ಇಲ್ಲಿ ಸಾಮಗ್ರಿಗಳು ಕಡಿಮೆ ಬೆಲೆಗೆ ಲಭ್ಯವಾಗುತ್ತವೆ. ಒಂದೆಡೆ ಸಾಂಪ್ರದಾಯಿಕ ದಲ್ಲಾಳಿಗಳು ಭಾರಿ ಪ್ರಮಾಣದ ಕಮಿಷನ್‌ ನುಂಗುತ್ತಿದ್ದರೆ, ಈ ತಾಣಗಳು ಕಮಿಷನ್‌ ಬಿಟ್ಟುಕೊಡುವುದಷ್ಟೇ ಅಲ್ಲ, ನಷ್ಟವನ್ನೂ ಮಾಡಿಕೊಂಡು ಜನರಿಗೆ ಉತ್ಪನ್ನಗಳನ್ನು ಕೊಡುತ್ತವೆ. ಇದು ಯಾರನ್ನು ತಾನೇ ಆಕರ್ಷಿಸುವುದಿಲ್ಲ ಹೇಳಿ? ಆದರೆ ಇದನ್ನು ಸ್ಲೋ ಪಾಯಿಸನ್‌ ಎಂದೂ ಹೇಳುವವರಿದ್ದಾರೆ. ನಾವು ಇ-ಕಾಮರ್ಸ್‌ಗೆ ಅಡಿಕ್ಟ್ ಆದ ನಂತರ ನಮ್ಮನ್ನು ಸುಲಿಗೆ ಮಾಡುವ ಹುನ್ನಾರ ಇದು ಎಂದೂ ವಾದಿಸುವವರಿದ್ದಾರೆ. ಆದರೆ ಚಿಲ್ಲರೆ ಮಾರುಕಟ್ಟೆ ಎಂಬುದು ಅಷ್ಟು ಸುಲಭಕ್ಕೆ ಜನರನ್ನು ಸುಲಿಗೆ ಮಾಡಲು ಬಿಡುವಂಥದ್ದಲ್ಲ ಎಂಬುದು ಆಗಾಗ್ಗೆ ಸಾಬೀತಾಗುತ್ತಲೇ ಇದೆ.

ಮೌಲ್ಯವೇ ಲಾಭ
ಇ-ಕಾಮರ್ಸ್‌ ಕ್ಷೇತ್ರದಲ್ಲಿ ವ್ಯಾಪಾರಿಗಳು, ಗ್ರಾಹಕರು ಹಾಗೂ ಕಂಪನಿಗಳ ವೃತ್ತದ ಸುಳಿಗೆ ಸಿಕ್ಕು ತಲೆ ಮೇಲೆ ಕೈಹೊತ್ತು ಕುಳಿತವರೆಂದರೆ ಹೂಡಿಕೆದಾರರು. ಫ್ಲಿಪ್‌ಕಾರ್ಟ್‌ನಲ್ಲಿ ಟೈಗರ್‌ ಗ್ಲೋಬಲ್‌ ಹಾಗೂ ನ್ಯಾಸ್ಪರ್ಸ್‌ ಸೇರಿದಂತೆ ಹಲವು ಕಂಪನಿಗಳು ಹೂಡಿಕೆ ಮಾಡಿದ್ದರೆ, ಸ್ನ್ಯಾಪ್‌ಡೀಲ್‌ನಲ್ಲಿ ಸಾಫ್ಟ್ಬ್ಯಾಂಕ್‌ ಹೂಡಿಕೆ ಮಾಡಿದೆ. ಇನ್ನು ಅಮೆಜಾನ್‌ಗೆ ಅಮೆರಿಕದಲ್ಲಿ ಹೂಡಿಕೆದಾರರ ದೊಡ್ಡ ಸಮೂಹವೇ ಇದೆ. ಈ ಯಾವುದೇ ಹೂಡಿಕೆದಾರರು ತಕ್ಷಣಕ್ಕೆ ತಮ್ಮ ಹಣವನ್ನು ದುಪ್ಪಟ್ಟು ಮಾಡಿಕೊಳ್ಳುವ ಹಪಹಪಿಯನ್ನು ಹೊಂದಿದವರಲ್ಲ. 

ಒಂದು ವೇಳೆ ಕಂಪನಿಯ ಮಂಡಳಿಗಳು ಲಾಭವನ್ನೇ ದೃಷ್ಟಿಯಲ್ಲಿಟ್ಟುಕೊಂಡು ವಹಿವಾಟು ನಡೆಸಲು ಹೊರಟರೆ ಲಾಭ ಮಾಡುವುದು ಸದ್ಯದ ಮಟ್ಟಿಗೆ ದೊಡ್ಡ ಸಂಗತಿಯೇ ಅಲ್ಲ. ಆದರೆ ಆ ಲಾಭದ ಪ್ರಮಾಣವನ್ನು ಕಾಯ್ದುಕೊಂಡು ಹೋಗಲು ಕಂಪನಿ ಕಷ್ಟಪಡಬೇಕಾಗುತ್ತದೆ. ಯಾಕೆಂದರೆ ಹೊರಗಿನ ಮಾರುಕಟ್ಟೆಯಲ್ಲಿ ಸಿಗುವ ಬೆಲೆಗೇ ಇ-ಕಾಮರ್ಸ್‌ನಲ್ಲಿ ಸಾಮಗ್ರಿ ಸಿಗುತ್ತದೆ ಎಂದಾದರೆ ಗ್ರಾಹಕ ಒಂದೆರಡು ಬಾರಿ ಖರೀದಿ ಮಾಡಿಯಾನು. ಆದರೆ ನಂತರ ಆತ ಇಲ್ಲಿಗೇ ಬರುತ್ತಾನೆ ಎಂದು ಹೇಳಲಾಗದು. ಅಷ್ಟೇ ಅಲ್ಲ, ಆತನನ್ನು ರಿಯಾಯಿತಿಯಿಲ್ಲದೇ ಪುನಃ ಕರೆತರುವುದೂ ಕಷ್ಟವಾದೀತು. ಹೀಗಾಗಿ ಈ ರಿಯಾಯಿತಿಯ ಸರ್ಕಸ್‌ ಎಂಬುದು ಇನ್ನಷ್ಟು ದಿನಗಳವರೆಗೆ ನಡೆಯುವುದಂತೂ ಸತ್ಯ.

- ಕೃಷ್ಣ ಭಟ್


Trending videos

Back to Top