CONNECT WITH US  

ಮೊಬೈಲ್‌ ಮನೆ

ಆಡಿಸಿ ನೋಡು, ಬೀಳಿಸಿ ನೋಡು- ಉದುರಿ ಹೋಗದು

ಒಮ್ಮೆ ಒಂದು ಮನೆಯನ್ನು ನಿರಾಯಾಸವಾಗಿ ಒಂದೆರಡು ಅಡಿ ದೂಡಬಹುದಾದರೆ ಅದನ್ನು ನೂರಾರು ಕಿಲೋ ಮೀಟರ್‌ ಹೊತ್ತು ಹೋದರೂ ಏನೂ ಆಗುವುದಿಲ್ಲ.  ಮೊಬೈಲ್‌ ಮನೆಗಳ ವಿಶೇಷವೇ ಇದು, ಈ ಮನೆಗಳನ್ನು ಹೊತ್ತೂಯ್ಯಲೆಂದೇ ವಿನ್ಯಾಸ ಮಾಡಿರಿವುದರಿಂದ ನಾವು ನಮ್ಮ ನಿವೇಶನ ಇಲ್ಲ ಹೊಲ- ತೋಟದಲ್ಲಿ ಕೆಲವಾರು ಅಡಿ ಸ್ಥಳಾಂತರಗೊಂಡರೆ, ಮತ್ತೆ ಎಳೆದು ತಂದು ಮೂಲ ಸ್ಥಾನದಲ್ಲಿ ಯಾವುದೇ ಹಾನಿ ಇಲ್ಲದೆ ನಿಲ್ಲಿಸಿಕೊಳ್ಳಬಹುದು!

ಮನೆ ಎಂದರೆ ಅದು ಸುಸ್ಥಿರವಾಗಿರುತ್ತದೆ. ಗಾಳಿಮಳೆ ಎಷ್ಟೇ ಜೋರಾಗಿ ಬೀಸಿ, ಅಪ್ಪಳಿಸಿದರೂ ಏನೂ ಆಗುವುದಿಲ್ಲ.  ಭದ್ರ ಬುನಾದಿಯ ಮೇಲೆ ನಮ್ಮ ಮನೆ ನಿಂತಿದೆ ಎಂಬುದು ಬಹುತೇಕ ಗೃಹಸ್ಥರ ನಂಬಿಕೆ. ಆದರೆ, ಮನೆಯ ಬುನಾದಿಯೇ ಅಲುಗಾಡಿದರೆ? ಭೂಕುಸಿತ ಉಂಟಾದರೆ? ಗುಡ್ಡ ಕುಸಿದು ಮನೆಯನ್ನು ದಬ್ಬಿಹಾಕಿದರೆ ಏನಾಗಬಹುದು? ಬಹುತೇಕ ಮನೆಗಳನ್ನು ನೇರಭಾರವನ್ನು ಹೊರುವಂತೆ ವಿನ್ಯಾಸ ಮಾಡಲಾಗಿದೆಯೇ ಹೊರತು ಅಕ್ಕಪಕ್ಕದಿಂದ ಬೀಳುವ ಹೊಡೆತಗಳನ್ನು ತಾಳಿಕೊಳ್ಳುವಂತೆ ಸದೃಢಪಡಿಸಿರುವುದಿಲ್ಲ. ನಮ್ಮ ನಂಬಿಕೆಯ ಪ್ರಕಾರ ಭೂಮಿ ಎಂದೆಂದೂ ಸ್ಥಿರ. ಅದು ಯಾವತ್ತೂ ಗಟ್ಟಿಯಾಗೇ ಇರುತ್ತದೆ ಎಂಬ ಭಾವನೆ ಮನದಲ್ಲಿ ಅದೆಷ್ಟು ಆಳವಾಗಿ ಬೇರೂರಿರುತ್ತದೆ ಎಂದರೆ - ಎಲ್ಲ ಭಾರ ಹೊರುವ ಕಾಲಕೆಳಗಣ ಮಣ್ಣು ಸ್ವಲ್ಪ ಅಲುಗಿದರೂ ಆತಂಕವಾಗುತ್ತದೆ. ಕೆಲವೇ ಇಂಚುಗಳಷ್ಟು ಭೂಮಿ ಕದಲಿದರೂ ಸಾವಿರಾರು ಮನೆಗಳು ಬಿರುಕು ಬಿಟ್ಟು ವಾಸಯೋಗ್ಯ ಆಗಿ ಉಳಿಯುವುದಿಲ್ಲ. ಮಾಮೂಲಿ ವಿನ್ಯಾಸದ ಮನೆಗಳು ಭೂಕಂಪ ನಿರೋಧಕ ಗುಣಗಳನ್ನಾಗಲಿ, ಭೂಕುಸಿತದ ಆಘಾತವನ್ನು ತಡೆದುಕೊಳ್ಳುವಂತಾಗಲಿ ವಿನ್ಯಾಸವನ್ನು ಮಾಡಿರುವುದಿಲ್ಲ. ಹಾಗಾಗಿ, ವಿಶೇಷ ಪರಿಸರಿಗಳಲ್ಲಿ, ವಿಪರೀತ ಮಳೆ ಭೂಕುಸಿತ, 
ಭೂಕಂಪನ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಅನಿವಾರ್ಯವಾಗಿ ಪರ್ಯಾಯ ರೀತಿಯ ವಿನ್ಯಾಸಗಳನ್ನು ಮಾಡಬೇಕಾಗುತ್ತದೆ. 

ಮೊಬೈಲ್‌ ಮನೆಗಳು
ಮನೆ ಎಂದರೆ ಒಂದೇ ಸ್ಥಳದಲ್ಲಿ ಬೇರೂರಿರಬೇಕು ಎಂದೇನೂ ಇಲ್ಲ, ನಾನಾ ಕಾರಣಗಳಿಂದಾಗಿ ಒಮ್ಮೆ ಕಟ್ಟಿದ ಮನೆಯನ್ನು ಬೇರೆಡೆಗೆ ಇಲ್ಲವೇ ಇರುವ ನಿವೇಶನದಲ್ಲೇ ಬದಲಾಯಿಸಿ ಇಡಬೇಕಾಗುತ್ತದೆ. ಮಾಮೂಲಿ ಇಟ್ಟಿಗೆ, ಕಾಂಕ್ರಿಟ್‌ ಬ್ಲಾಕ್‌ ಮನೆಗಳನ್ನು ಒಂದು ಇಂಚೂ ಕೂಡ ದೂಡಲು ಆಗುವುದಿಲ್ಲ! ಏಕೆಂದರೆ ಇವೆಲ್ಲ ನೇರ ಭಾರ ಅಂದರೆ ಮೇಲಿನಿಂದ ಅಂದರೆ, ಸೂರಿನ ಭಾರವನ್ನು ಹೊರಲು ಸಾಧ್ಯವೇ ವಿನಃ ಅಡ್ಡಾದಿಡ್ಡಿಯಾಗಿ ಎದುರಾಗುವ ವಿವಿಧ ರೀತಿಯ ಭಾರ ಹಾಗೂ ಹೊರೆಯನ್ನಲ್ಲ. ಯಾವುದೇ ದಿಕ್ಕಿನಿಂದ ಬಂದರೂ ಭಾರ - ಲೋಡ್‌ ಹಾಗೂ ಸ್ಟ್ರೆಸ್‌ - ಒತ್ತಡ ಹೊರುವಂತಿರಬೇಕು ಎಂದರೆ ಆಗ ಮನೆಗಳನ್ನು ವಿಶೇಷ ರೀತಿಯಲ್ಲಿ ವಿನ್ಯಾಸ ಮಾಡಬೇಕಾಗುತ್ತದೆ. ಒಮ್ಮೆ ಒಂದು ಮನೆಯನ್ನು ನಿರಾಯಾಸವಾಗಿ ಒಂದೆರಡು ಅಡಿ ದೂಡಬಹುದಾದರೆ ಅದನ್ನು ನೂರಾರು ಕಿಲೋ ಮೀಟರ್‌ ಹೊತ್ತು ಹೋದರೂ ಏನೂ ಆಗುವುದಿಲ್ಲ.  ಮೊಬೈಲ್‌ ಮನೆಗಳ ವಿಶೇಷವೇ ಇದು, ಈ ಮನೆಗಳನ್ನು ಹೊತ್ತೂಯ್ಯಲೆಂದೇ ವಿನ್ಯಾಸ ಮಾಡಿರಿವುದರಿಂದ ನಾವು ನಮ್ಮ ನಿವೇಶನ ಇಲ್ಲ ಹೊಲ- ತೋಟದಲ್ಲಿ ಕೆಲವಾರು ಅಡಿ ಸ್ಥಳಾಂತರಗೊಂಡರೆ, ಮತ್ತೆ ಎಳೆದು ತಂದು ಮೂಲ ಸ್ಥಾನದಲ್ಲಿ ಯಾವುದೇ ಹಾನಿ ಇಲ್ಲದೆ ನಿಲ್ಲಿಸಿಕೊಳ್ಳಬಹುದು!

ಗಟ್ಟಿಮುಟ್ಟು, ಆದರೆ ತೆಳ್ಳಗೆ ಇರಬೇಕು!
ಮನೆಯನ್ನು ಎಲ್ಲೆಂದರಲ್ಲಿ ಎತ್ತಿ ಇಡಬೇಕು ಎಂದರೆ ಅದು ಸ್ವಾಭಾವಿಕವಾಗೇ ಮಾಮೂಲಿ ಮನೆಗಳಿಗಿಂತಲೂ ಹೆಚ್ಚು ಗಟ್ಟಿಗಿರುತ್ತಲೆ ಲಘು ಭಾರವಿದ್ದೂ ಆಗಿರಬೇಕು. ಇಲ್ಲದಿದ್ದರೆ ಇಡೀ ಮನೆಯನ್ನು ಹೊತ್ತು ಒಯ್ಯುವುದೇ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಮಾಮೂಲಿ ಒಂಭತ್ತು ಇಂಚಿನ ಗೋಡೆ ಹೊಂದಿರುವ ಮನೆಯ ಪ್ರತಿ ಚದರಕ್ಕೆ ಅಂದರೆ ಒಂದು ಕೋಣೆ ಹತ್ತು ಅಡಿಗೆ ಹತ್ತು ಅಡಿ ಇದ್ದರೆ,  ಅದರ ಭಾರ ಸುಮಾರು 40ಟನ್‌ ಇರುತ್ತದೆ. ಇನ್ನು ಇಡೀ ಮನೆ ಲೆಕ್ಕ ನೋಡಿದರೆ ಸುಮಾರು ನಾನೂರು ಟನ್‌ ಆಗಿಬಿಡುತ್ತದೆ. ಮೊದಲನೆಯದಾಗಿ ಇಟ್ಟಿಗೆ ಮನೆಗಳನ್ನು ಕೆಲವೇ ಇಂಚು ಜರುಗಿಸಲೂ ಕೂಡ ದುಬಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. 

ಇತ್ತೀಚೆಗೆ, ಇಟ್ಟಿಗೆಯಲ್ಲಿ ಕಟ್ಟಿದ ಮದ್ದಿನ ಮನೆಯನ್ನು ಕೆಲವಾರು ಅಡಿ ಜರುಗಿಸಿ ರೈಲು ಹಳಿಗಳಿಗೆ ದಾರಿಮಾಡಲು ಶ್ರೀರಂಗಪಟ್ಟಣದಲ್ಲಿ ಹತ್ತಾರು ಕೋಟಿ ವ್ಯಯಿಸಿದ್ದು ನಮಗೆಲ್ಲ ತಿಳಿದೇ ಇದೆ. ಹಾಗಾಗಿ, ಮನೆ ಮೊಬೈಲ್‌ ಆಗಲು ಅದು ಇಟ್ಟಿಗೆ ಕಾಂಕ್ರಿಟ್‌ ಬ್ಲಾಕ್‌ ಬಿಟ್ಟು ಇತರೆ ವಸ್ತುಗಳಲ್ಲಿ ಮಾಡಬೇಕಾದ್ದು ಅನಿವಾರ್ಯ!

ಮೊಬೈಲ್‌ ಮನೆ ಕಟ್ಟುವ ಸಾಮಗ್ರಿಗಳು
ವಿಶೇಷ ವಿನ್ಯಾಸ,  ಸದೃಢ, ತೆಳು, ಲಘು ಭಾರದ್ದು ಎಂದಾಕ್ಷಣ ನಾವು ದುಬಾರಿ ಬೆಲೆಯ, ಆಮದಾದ ವಸ್ತುಗಳು ಎಂದು ಕೊಳ್ಳುತ್ತೇವೆ.  ಇದರಿಂದ ಎಲ್ಲೆಂದರಲ್ಲಿ ಹೊತ್ತೂಯ್ಯಬಹುದಾದ ಮನೆಗಳನ್ನು ಕಟ್ಟಬೇಕು ಎಂದೇನೂ ಇಲ್ಲ. ನಮಗೆಲ್ಲ ಚಿರುಪರಿಚಿತವಾದ, ಸಾವಿರಾರು ವರ್ಷಗಳಿಂದ ರೋಮ್‌ ಸಾಮ್ರಾಜ್ಯದಲ್ಲಿ ಬಳಕೆಯಲ್ಲಿ ಇದ್ದ ಕಾಂಕ್ರಿಟ್‌ ಅನ್ನೇ ಬಳಸಬಹುದು! ಆದರೆ ಮಾಮೂಲಿ ಕಾಂಕ್ರಿಟ್‌ ಸೆಳೆಯುವ ಭಾರವನ್ನು -ಟೆನÒನ್‌ ಸ್ಪೇಸ್‌ ಎದುರಿಸಲು ನಿಶ್ಯಕ್ತ. ಆದ ಕಾರಣ  ಉಕ್ಕಿನ ಸರಳುಗಳನ್ನು ಬಳಸಿ ಮೊಬೈಲ್‌ ಮನೆ ಕಟ್ಟಬಹುದು. ನಮ್ಮ ಸೂರಿಗಳಿಗೆ ಆರ್‌ಸಿಸಿ ಬಳಸುವುದು ತುಂಬಾ ಸಾಮಾನ್ಯ ಆಗಿದೆ. ಅದೇ ರೀತಿ, ನಮ್ಮ ಮನೆಯ ಗೋಡೆಗಳನ್ನೂ ಸೂಕ್ತ ರೀತಿಯಲ್ಲಿ ವಿನ್ಯಾಸ ಮಾಡಿ ಕಟ್ಟಿದರೆ, ಭೂಕಂಪ ನಿರೋಧಕ ಗುಣ ಹೊಂದುವುದರ ಜೊತೆಗೆ ಮನೆ ಅತ್ತಿಂದಿತ್ತ ಜರುಗಿದರೂ ಮತ್ತೆ ಹೊತ್ತುತಂದು ಅದನ್ನು ಮೊದಲಿದ್ದ ಜಾಗದಲ್ಲೇ ಇಟ್ಟುಕೊಳ್ಳಬಹುದು. ಸೂರಿಗಾದರೆ ಕಡಿಮೆ ಎಂದರೂ ನಾಲ್ಕೂವರೆ ಇಂಚಿನಷ್ಟಾದರೂ ಆರ್‌ ಸಿ ಸಿಯ ದಪ್ಪ ಇರಬೇಕಾಗುತ್ತದೆ. ಗೋಡೆಗಳಿಗೆ ಸುಮಾರು ಮೂರು ನಾಲ್ಕು ಇಂಚು ಇದ್ದರೂ ನಡೆಯುತ್ತದೆ. ಆದರೆ ಮೊಬೈಲ್‌ ಮನೆ ಕಟ್ಟುವ ಮೊದಲು ನುರಿತ ಆರ್ಕಿಟೆಕ್ಟ್ ಇಂಜಿನಿಯರ್‌ ಗಳಿಂದ ವಿನ್ಯಾಸ ಮಾಡಿಸುವುದು ಕಡ್ಡಾಯ. 

ಪಾಶ್ಚಾತ್ಯ ದೇಶಗಳಲ್ಲಿ ಮೊಬೈಲ್‌ ಮನೆ
ಮುಂದುವರಿದ ದೇಶಗಳಲ್ಲಿ ದುಬಾರಿ ವಸ್ತುಗಳನ್ನು ಬಳಸಿ ಐಷಾರಾಮಿ ಮೊಬೈಲ್‌ ಮನೆಗಳನ್ನು ಇಲ್ಲ ಕ್ಯಾರವಾನ್‌ ಗಳನ್ನು ತಯಾರು ಮಾಡಲಾಗುತ್ತದೆ. ಇವನ್ನು ಬಹುತೇಕ ಉಕ್ಕು ಇಲ್ಲವೇ ಅಲ್ಯೂಮಿನಿಯಮ್‌ ಬಳಸಿ ತಯಾರು ಮಾಡಿ, ಶಾಖನಿರೋಧಕ ಗುಣ ಹೆಚ್ಚಿಸಲು ಸೂಕ್ತ ಪದರಗಳನ್ನು ನೀಡಿ, ಒಳಾಂಗಣವನ್ನು ಸಾಮಾನ್ಯವಾಗಿ ಮರದ ಹಲಗೆಗಳಿಂದ ಅಲಂಕರಿಸಿರುತ್ತಾರೆ. ಆದರೆ ನಮ್ಮ ದೇಶದಲ್ಲಿ ಇವೆಲ್ಲ ಬಹು ದುಬಾರಿ ಆಗುತ್ತದೆ. ಜೊತೆಗೆ ನಮ್ಮ ನೆಲ ಜಲ ಹಾಗೂ ಸಂಸ್ಕೃತಿಗೆ ಹೊಂದುವಂತೆ ಇತ್ತೀಚೆಗೆ ಸಾಂಪ್ರದಾಯಿಕ ವಸ್ತು ಆದ ಇಟ್ಟಿಗೆಗಿಂತಲೂ ಕಾಂಕ್ರಿಟ್‌ ಬ್ಲಾಕ್‌ ಉಪಯೋಗಿಸಿ ಮನೆ ಕಟ್ಟುವುದು ಸಾಮಾನ್ಯ ಆಗುತ್ತಿದೆ. ಹಾಗಾಗಿ ಇದರ ಮುಂದುವರಿದ ಭಾಗವಾಗಿ ಇಡೀ ಮನೆಯನ್ನು, ಗೋಡೆ ಸಹಿತ ಆರ್‌ ಸಿ ಸಿ ಯಲ್ಲೆ ಕಟ್ಟುವುದರಿಂದ, ಹೆಚ್ಚು ಸದೃಢ ಮಾಡಿಕೊಳ್ಳುವುದರ ಜೊತೆಗೆ ಮೊಬೈಲ್‌ ಆರ್ಕಿಟೆಕ್ಚರ್‌ ಕಡೆಗೂ ನಾವು ಹೊರಳಬಹುದು.

ಭಾರ ಕಡಿಮೆ ಮಾಡಲು ವಿವಿಧ ವಿನ್ಯಾಸಗಳ ಪ್ರಯೋಗ
ಮೊಬೈಲ್‌ ಮನೆ ಸಾಕಾರಗೊಳ್ಳಬೇಕಾದರೆ ಅದರ ಭಾರ ಆದಷ್ಟೂ ಕಡಿಮೆ ಇರಬೇಕು. ಬೆಂಗಳೂರಿನಲ್ಲೇ ನಡೆದ ಒಂದು ಪ್ರಯೋಗದಲ್ಲಿ ಪೀಠೊಪಕರಣವನ್ನೂ ಮನೆಯ ವಿನ್ಯಾಸದಲ್ಲಿ ಅಳವಡಿಸಲಾಯಿತು. ಗೋಡೆಗಳನ್ನು ವಾಲಿದಂತೆ ಕಟ್ಟಿ, ಅದು ಸೋಫಾಗಳಲ್ಲಿ ಇರುವಂತೆ ಬೆನ್ನು ಒರಗಲು ಅನುವು ಮಾಡಲಾಯಿತು. ಹಾಗೆಯೇ, ನೆಲವನ್ನು ಕೋಣೆಯ ಸುತ್ತಲೂ ಎತ್ತರಿಸಿ, ಕೂರಲು ವ್ಯವಸ್ಥೆ ಮಾಡಲಾಯಿತು. 

ಈ ಮಾದರಿಯ ಮನೆಗಳಲ್ಲಿ ಮರದ ಸೋಫಾ ಕುರ್ಚಿಗಳ ಅಗತ್ಯ ಇರುವುದಿಲ್ಲ. ಮನೆ ಎಂದರೆ ಹೀಗೆ ಇರಬೇಕು ಎಂಬುದಕ್ಕೆ ಸವಾಲು ಮಾಡುವುದರ ಜೊತೆಗೆ ಈ ರೀತಿಯ ವಿಶೇಷ ವಿನ್ಯಾಸ ಭಾರವನ್ನೂ ಕಡಿಮೆ ಮಾಡಿತು. ಈ ಮನೆಯನ್ನು ನಾಲ್ಕಾರು ಮೈಲಿ ಹೊತ್ತೂಯ್ದದರೂ ಯಾವುದೇ ಬಿರುಕು ಉಂಟಾಗಲಿಲ್ಲ! 

ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆ ಎಂತಯ್ಯ? ಎಂಬಂತೆ, ಗುಡ್ಡ ಬೆಟ್ಟಗಳಲ್ಲಿ ಭೂಕುಸಿತ ಇರುವೆಡೆ, ಅತಿ ಮಳೆ ಬೀಳುವ ಪ್ರದೇಶಗಳಲ್ಲಿ ಮೊಬೈಲ್‌ ಮನೆಗಳ ಬಳಕೆ ಅನಿವಾರ್ಯ ಆಗುತ್ತದೆ.

- ಆರ್ಕಿಟೆಕ್ಟ್ ಕೆ. ಜಯರಾಮ್‌

Trending videos

Back to Top