CONNECT WITH US  

ವಾಹನ ವಿಮೆಯ ಸತ್ಯಗಳು

ಬೈಕ್‌ ಅಥವಾ ಕಾರು ಖರೀದಿಸಿದವರನ್ನು ಇನ್ಶೂರೆನ್ಸ್ ಮಾಡಿದೀರ ತಾನೆ? ಎಂದು ಹಲವರು ಕೇಳುವುದುಂಟು. ಈ ಇನ್ಶೂರೆನ್ಸ್ ನಿಂದ ಏನೇನು ಉಪಯೋಗಗಳಿವೆ? ವಾಹನ ವಿಮೆಯ ಮಹತ್ವವೇನು ಎಂಬ ಕುರಿತು ಇಲ್ಲಿ ವಿವರಣೆಯಿದೆ... 

ನಮ್ಮ ದೇಶದಲ್ಲಿ ಜನಸಂಖ್ಯೆ ಹೆಚ್ಚಿದಂತೆ ವಾಹನಗಳ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ರಸ್ತೆಗಳು ಕಿರಿದಾಗುತ್ತಿವೆ, ಅಪಘಾತಗಳು ಹೆಚ್ಚುತ್ತಿವೆ. ಮನೆಯಿಂದ ಹೊರಟ ವ್ಯಕ್ತಿ ವಾಪಾಸು ಬರುವತನಕ ಆತಂಕದಿಂದಿರಬೇಕಾದ ಪರಿಸ್ಥಿತಿಯೂ ಇದೆ.  ಪ್ರತಿನಿತ್ಯ ಅಪಘಾತದ ಸುದ್ದಿಗಳ ಸರಮಾಲೆಯನ್ನೇ ಓದುತ್ತಿರುತ್ತೇವೆ, ನೋಡುತ್ತಿರುತ್ತೇವೆ.  

ಇಂಥ ವಿಷಮ ಸನ್ನಿವೇಶದಲ್ಲಿ ಬದುಕುತ್ತಿರುವಾಗ ವಾಹನ ವಿಮೆ ಎಷ್ಟು ಅಗತ್ಯ ಮತ್ತು ವಾಹನ ವಿಮೆಯನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎಂಬುದರ ಬಗ್ಗೆಯೂ ಒಂದಷ್ಟು ಮಾಹಿತಿ ತಿಳಿದುಕೊಂಡಿರುವುದು ಸೂಕ್ತ.

ವಾಹನಗಳ ಕುರಿತಾದ ಜನರಲ್‌ ಇನ್ಶೂರೆನ್ಸ್  ಕ್ಷೇತ್ರದ ವ್ಯಾಪ್ತಿ ದೊಡ್ಡದು.  ಅನೇಕ ಖಾಸಗಿ ಕಂಪೆನಿಗಳೂ ವಿಮಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ವಾಹನ ವಿಮೆ ವಿಚಾರಕ್ಕೆ ಬಂದಾಗ ಕಾಂಪ್ರಹೆನ್ಸಿವ್‌ ಇನ್ಶೂರೆನ್ಸ್  ಮತ್ತು ಥರ್ಡ್‌ ಪಾರ್ಟಿ ಇನ್ಶೂರೆನ್ಸ್  ಎಂಬ ಎರಡು ವರ್ಗಗಳಿವೆ.  ಕಾಂಪ್ರಹೆನ್ಸಿವ್‌ ವಿಮೆಯನ್ನು ಆಡುಭಾಷೆಯಲ್ಲಿ ಫ‌ಸ್ಟ್‌ ಪಾರ್ಟಿ ಇನ್ಶೂರೆನ್ಸ್  ಎನ್ನುತ್ತಾರೆ.  ಇದರಡಿ ವಾಹನಕ್ಕೆ ಮತ್ತು ಅಪಘಾತದ ಸಂದರ್ಭದಲ್ಲಿ ಹಾನಿ, ಪ್ರಾಣಾಪಾಯ ವಗೈರೆ ಎಲ್ಲದಕ್ಕೂ ಪರಿಹಾರ ಸಿಗುತ್ತದೆ. ಆದರೆ ಥಡ್‌ ì ಪಾರ್ಟಿ ವಿಮೆಯಲ್ಲಿ ಹಾಗಲ್ಲ. ಈ ವಿಮಾಧಾರಕ ವಾಹನಕ್ಕೆ ಅಪಘಾತದ ಸಂದರ್ಭದಲ್ಲಿ ಯಾವ ಪರಿಹಾರವೂ ಸಿಗುವುದಿಲ್ಲ, ಬದಲಾಗಿ ಅಪಘಾತದ ಸಂದರ್ಭದಲ್ಲಿ ಹಾನಿಗೆ ಒಳಗಾದ ಮೃತಪಟ್ಟ ವ್ಯಕ್ತಿಯ ಅವಲಂಬಿತರಿಗೆ ವಿಮೆಯ ಪರಿಹಾರ ದಕ್ಕುತ್ತದೆ.

ಇವೆಲ್ಲವೂ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಸಂಗತಿಗಳೇ. ಆದರೆ, ವಾಹನ ಅಪಘಾತಕ್ಕೆ ಒಳಗಾದಾಗ ಏನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎಂಬ ಅರಿವು ಬಹಳ ಮುಖ್ಯ. ಅದರತ್ತ ಗಮನ ಹರಿಸೋಣ ಬನ್ನಿ

1. ಎಫ್.ಐ.ಆರ್‌.
ಸಾಮಾನ್ಯವಾಗಿ ವಾಹನ ಅಪಘಾತದ ಸಂದರ್ಭದಲ್ಲಿ ಪೊಲೀಸ್‌ ಕಂಪ್ಲೆಂಟ್‌ ಕೊಟ್ಟು ಎಫ್.ಐ.ಆರ್‌. ದಾಖಲಿಸುತ್ತಾರೆ. ಆದರೆ ಕೆಲವೊಂದು ಸಂದರ್ಭದಲ್ಲಿ ಕೆಲ ವಾಹನ ಮಾಲೀಕರು ಎಫ್.ಐ.ಆರ್‌. ಮಾಡಿಸಲು  ಹೋಗುವುದಿಲ್ಲ. ಎದಿರುಪಾರ್ಟಿಯೊಂದಿಗೆ ರಾಜಿ ಮಾಡಿಕೊಂಡು ಅಥವಾ ಒಂದಷ್ಟು ಹಣವನ್ನು ಪಾವತಿ ಮಾಡಿ ವ್ಯವಹಾರ ಚುಕ್ತಾ ಮಾಡಿಕೊಂಡು ಬಿಡುತ್ತಾರೆ. ಆದರೆ ವಾಹನ ಅಪಘಾತದಿಂದ ಯಾರಿಗಾದರೂ ದೈಹಿಕ ಘಾಸಿಯಾದಾಗ, ವಾಹನ ನಜ್ಜುಗುಜಾjದಾಗ, ಮರಣ ಸಂಭವಿಸಿದಾಗ, ವಾಹನ ಕಳವಿಗೆ ಒಳಪಟ್ಟಾಗ ಎಫ್.ಐ.ಆರ್‌. ಅಗತ್ಯ ಮತ್ತು ಕಡ್ಡಾಯವೂ ಹೌದು. 

2. ಕಂಪೆನಿಗೆ ಮಾಹಿತಿ ಕೊಡುವುದು:
ಅಪಘಾತವಾದಾಗ, ನೀವು ಯಾವ ವಿಮಾ ಕಂಪೆನಿಯ ಪಾಲಿಸಿ ಹೊಂದಿದ್ದೀರೋ ಅವರಿಗೆ ಮೌಖೀಕ/ಲಿಖೀತ ಮಾಹಿತಿಯನ್ನು ಕೊಡಬೇಕು.  ಅಪಘಾತವಾದ ಏಳುದಿವಸಗಳ ಒಳಗಾಗಿ ಲಿಖೀತರೂಪದ ಮಾಹಿತಿ ಸಲ್ಲಿಕೆಯಾಗಬೇಕು ಎಂಬ ನಿಯಮವಿತ್ತು. ಈಗ ಬದಲಾಗಿದೆ.  ಅಪಘಾತ ಸಂಭವಿಸಿದ 24 ರಿಂದ 48 ಗಂಟೆಗಳ ಒಳಗಾಗಿ ಮಾಹಿತಿ ನೀಡದೇ ಇದ್ದಲ್ಲಿ ವಿಮಾ ಕಂಪೆನಿ ನಿಮ್ಮ ಕ್ಲೈಮನ್ನು ನಿರಾಕರಿಸಲೂಬಹುದು.

3. ಅಪಘಾತದ ಸ್ಥಳದಿಂದ ವಾಹನ ಕದಲಿಸುವ ಮುನ್ನವೇ ಕಂಪನಿಗೆ ತಿಳಿಸಿ:  ಇದು ತುಂಬಾ ಉತ್ತಮ ಕ್ರಮ. ಕೆಲವೊಮ್ಮೆ ವಿಮಾ ಕಂಪನಿಯವರ ಕಡೆಯಿಂದ ಅಪಘಾತಕ್ಕೆ ಒಳಗಾದ ವಾಹನವನ್ನು ಗ್ಯಾರೇಜಿಗೆ ಸಾಗಿಸುವ ಟೋಯಿಂಗ್‌ ವ್ಯವಸ್ಥೆ ಇರುತ್ತದೆ.  ಅದನ್ನು ಪಡೆದುಕೊಳ್ಳುವುದರ ಜೊತೆಗೆ ಕಂಪನಿಗೆ ತಿಳಿಸುವುದರಿಂದ ಕ್ಲೆÉ„ಮು ಕೇಳಿಕೆ ಮತ್ತು ದಾಖಲೆ ಸಲ್ಲಿಕೆ ಸುಲಭವಾಗುತ್ತದೆ.

4. ಅಪಘಾತ ಸ್ಥಳದ ಫೋಟೋಗಳನ್ನು ತಕ್ಷಣ ತೆಗೆದು ವಿಮಾಕಂಪೆನಿಗೆ ಕಳಿಸಿ, ನಂತರದಲ್ಲಿ ವಾಹನವನ್ನು ಅಲ್ಲಿಂದ ಸಾಗಿಸುವ ಕೆಲಸವನ್ನು ಮಾಡಿದರೆ ಕ್ಲೈಮು ಸುಲಭವಾಗುತ್ತದೆ. 

5. ದಾಖಲೆಗಳನ್ನು ಸರಿಯಾಗಿ ಸಲ್ಲಿಸಿ: ನೀವು ವಿಮಾಕ್ಲೈಮಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಮರ್ಪಕವಾಗಿ ಕಂಪನಿಗೆ ಕಳುಹಿಸಿದ ನಂತರದಲ್ಲಿಯೇ ಪರಿಹಾರ ಕ್ರಮದ ನಡವಳಿಕೆ ಆರಂಭವಾಗುತ್ತದೆ. ವಿಮಾಪಾಲಿಸಿ, ವಾಹನದ ರಿಜಿಸ್ಟ್ರೇಶನ್‌ ಸರ್ಟಿಫಿಕೇಟ್‌, ಚಾಲಕ ಪರವಾನಗಿ ಮುಂತಾದ ಅಗತ್ಯ ದಾಖಲೆಗಳನ್ನು ಒದಗಿಸಬೇಕು. 

6. ಎಲ್ಲಕ್ಕಿಂತ ಬಹುಮುಖ್ಯವಾಗಿ ವಿಮಾಪಾಲಿಸಿ ಕೊಳ್ಳುವಾಗ ಪಾಲಿಸಿ ಡಾಕ್ಯುಮೆಂಟಿನಲ್ಲಿರುವ ಎಲ್ಲ ಷರತ್ತುಗಳನ್ನು ಓದಿ ಮನನ ಮಾಡಿಕೊಳ್ಳಿ. ಎಲ್ಲ ಕಂಪನಿಗಳ ನಿಯಮ ಒಂದೇ ರೀತಿ ಇರಲಾರದು. ಯಾವ್ಯಾವ ಸಂಗತಿಗಳು ವಿಮೆಯಲ್ಲಿ ಅಡಕವಾಗುವುದಿಲ್ಲ, ಯಾವ್ಯಾವುದಕ್ಕೆ ಪರಿಹಾರ ಸಿಗುತ್ತದೆ, ಸಿಗುವುದಿಲ್ಲ ಎಂಬುದು ಗೊತ್ತಿರಬೇಕು.

ಹೀಗೆ ಮಾಡಿ
1.ಇನ್ಸುರೆನ್ಸ್‌ ಕ್ಲೆಮ್‌ ಅಪ್ರುವಲ್‌ ಆಗುವ ಮುನ್ನ ವಾಹನದ ರಿಪೇರಿಗಳನ್ನು ಮಾಡಿಸಬೇಡಿ.
2. ಅಪಘಾತಕ್ಕೆ ಸಂಬಂಧಪಟ್ಟ ಯಾವುದೇ ವಾಸ್ತವ ಮಾಹಿತಿಗಳನ್ನು ಮರೆಮಾಚುವುದರಿಂದ ಪರಿಹಾರ ಪ್ರಕ್ರಿಯೆ ವಿಳಂಬವಾಗುವ ಅಥವಾ ನಿರಾಕರಣೆಗೆ ಒಳಗಾಗುವ ಸಾಧ್ಯತೆ ಇರುತ್ತದೆ.
3. ಅಪಘಾತದ ಸಂದರ್ಭದಲ್ಲಿ ಥರ್ಡ್‌ ಪಾರ್ಟಿ ಜೊತೆಗೆ ಒಪ್ಪಂದ ಮಾಡಿಕೊಂಡು ಪ್ರಕರಣ ಮುಕ್ತಾಯಪಡಿಸಬೇಡಿ. ಅದರಿಂದ ಮುಂದೊಂದು ದಿನ ನಿಮಗೆ ತೊಂದರೆ ಎದುರಾಗಬಹುದು.  ಇದು ಕಾನೂನು ರೀತಿ ಸಮ್ಮತವಾದದ್ದೂ ಅಲ್ಲ.
4. ವಿಮಾ ಕ್ಲೈಮು ಪರಿಹಾರದ ಅಂತಿಮ ಸೆಟಲ್‌ ಮೆಂಟ್‌ ಪೇಪರುಗಳನ್ನು ಸಾವಧಾನದಿಂದ ಪರಿಶೀಲನೆ ಮಾಡಿ ನಂತರ ನಿಮ್ಮ ಸ್ವೀಕೃತಿ ಸಹಿಯನ್ನು ಮಾಡಿ. ಏಕೆಂದರೆ, ವಿಮಾಕಂಪನಿಯವರು ಅವರ ಷರತ್ತುಗಳ ಅನ್ವಯ ನಿಮಗೆ ಕೊಡಬೇಕಾದ ಸವಲತ್ತುಗಳು  ನೀವು ಪಡೆಯಲು ಅಡ್ಡಿಯಾಗಬಹುದು.

- ನಿರಂಜನ


Trending videos

Back to Top