CONNECT WITH US  

ಬಾಳೆಯಿಂದ ಬಾಳು ಬಂಗಾರ

ಹದಿಮೂರು ಹೆಕ್ಟೇರ್‌ ಜಮೀನಿನಲ್ಲಿ ಬಾಳೆ ಕೃಷಿ ಮಾಡಿರುವ ಪ್ರಕಾಶ್‌, ಅದರಿಂದ ಲಕ್ಷಾಂತರ ರೂಪಾಯಿ ಲಾಭ ಪಡೆದಿದ್ದಾರೆ. ಅವರು ಸಾವಯವ ಕೃಷಿ ಪದ್ಧತಿ ಅನುಸರಿಸಿ ಗೆದಿದ್ದಾರೆ ಎಂಬುದು ಹೇಳಲೇಬೇಕಾದ ಸಂಗತಿ. 

ಬೆಳಗಾವಿಯ ಗೋಕಾಕ್‌ ತಾಲೂಕಿನ ಕುಲಗೋಡದ ಪ್ರಕಾಶ್‌ ಬಿಸ್ನೆಕೊಪ್ಪ ತಮ್ಮ ಹೊಲದ ತುಂಬೆಲ್ಲಾ ಬಾಳೆ ಬೆಳೆದು ಸಾಕಷ್ಟು ಆದಾಯ ಪಡೆಯುತ್ತಿದ್ದಾರೆ. ಪ್ರಕಾಶ್‌ ಅವರಿಗೆ ಹದಿಮೂರು ಹೆಕ್ಟೇರ್‌ ಜಮೀನಿದೆ. ಐದು ವರ್ಷದಿಂದ ಅಷ್ಟೂ ಜಮೀನಿನಲ್ಲಿ ಬಾಳೆ ಹಾಕಿದ್ದಾರೆ. ಮೊದಲಿಗೆ ನಾಲ್ಕೂವರೆ ಹೆಕ್ಟೇರ್‌ನಲ್ಲಿ ಮಣ್ಣನ್ನು ಸಾಕಷ್ಟು ಹದಮಾಡಿಕೊಂಡು, ಹಸಿರೆಲೆ ಗೊಬ್ಬರ, ಸೆಣಬು, ಕುರಿ ಮತ್ತು ಕೊಟ್ಟಿಗೆ ಗೊಬ್ಬರವನ್ನು ಹಾಕಿದರು. ನಂತರ ಆರು ಅಡಿಗೆ ಒಂದರಂತೆ ಸಾಲುಗಳನ್ನು ಮಾಡಿ, ಸಾಲಿನಲ್ಲಿ ಪ್ರತಿ ಐದು ಅಡಿಗೊಂದಂತೆ ಕೊಯಮತ್ತೂರಿನ ಜೈನ್‌ ಕಂಪೆ ತಳಿಯ ಸುಮಾರು 6000 ಬಾಳೆ ಸಸಿಗಳನ್ನು ನಾಟಿ ಮಾಡಿದರು.

ನಾಟಿ ಮತ್ತು ಪೋಷಣೆ
ಪ್ರಾರಂಭದಲ್ಲಿ ಎರಡು ದಿನಕ್ಕೊಮ್ಮೆ ಡ್ರಿಪ್‌ ಮೂಲಕ ನೀರನ್ನು ಅರ್ಧ ಗಂಟೆಗಳಷ್ಟು ಕಾಲ ಹರಿಬಿಟ್ಟರು. ನಾಲ್ಕು ದಿನಕ್ಕೊಮ್ಮೆ ಅದರಲ್ಲಿಯೇ ಫಾಸ್ಪರಸ್‌, 12-61 ಮುಂತಾದ ರಾಸಾಯನಿಕ ಗೊಬ್ಬರವನ್ನು ನೀರಿನಲ್ಲಿ ಕರಗಿಸಿ ಗಿಡಕ್ಕೆ ತಲುಪಿಸಿದ್ದಾರೆ. 

ಮಿಶ್ರಬೆಳೆಯಿಂದಲೂ ಲಾಭ
ನಾಟಿ ಮಾಡಿದ ಸುಮಾರು ಹತ್ತು ತಿಂಗಳಿಗೆ ಬಾಳೆ ಕಟಾವಿಗೆ  ಸಿದ್ದವಾಗುತ್ತದೆ.  ಅಲ್ಲಿಯವರೆಗೂ ಬಾಳೆ ಬೆಳೆಯ ಮಧ್ಯೆ ಉಳಿದಿದ್ದ ಜಾಗದಲ್ಲಿ  ಮಿಶ್ರಬೆಳೆಯಾಗಿ ಕಲ್ಲಂಗಡಿ ಬೆಳೆದು ಅದರಿಂದ ಸುಮಾರು ಹತ್ತು ಲಕ್ಷದಷ್ಟು ಆದಾಯ ಪಡೆದಿದ್ದಾರೆ. 

ಬಾಳೆಯಿಂದ ಸುಮಾರು 12ಲಕ್ಷ ಆದಾಯ ಬಂದಿದೆ. ಅಲ್ಲಿಂದ ಮುಂದೆ ಸುಮಾರು ಎರಡು ಹೆಕ್ಟೇರ್‌ನಲ್ಲಿ ಮೂರು ಸಾವಿರ ಬಾಳೆ ಸಸಿ ನೆಟ್ಟು, ಅದರೊಟ್ಟಿಗೆ ಮೆಣಸಿನಗಿಡವನ್ನು ಮಿಶ್ರಬೆಳೆಯಾಗಿ ಬೆಳೆದಿದ್ದಾರೆ.  ಇವೆರಡರಿಂದ ಒಟ್ಟಾರೆ ಹತ್ತು ಲಕ್ಷಕ್ಕೂ ಅಧಿಕ ಆದಾಯವನ್ನು ಗಳಿಸಿದ್ದಾರೆ ಪ್ರಕಾಶ್‌.  ಆರಂಭದಲ್ಲಿ ನಾಲ್ಕೂವರೆ ಹೆಕ್ಟೇರ್‌ನಲ್ಲಿ ನೆಟ್ಟ ಬಾಳೆಯು ಇಂದು ಅದಾಗಲೇ ಆರನೇ ಕಟಾವಿಗೆ ಸಿದ್ಧವಾಗಿದೆ. ಆನಂತರ ಎರಡು ಹೆಕ್ಟೇರ್‌ನಲ್ಲಿ ನೆಟ್ಟ ಬಾಳೆ ಇನ್ನು ಕೆಲವೇ ದಿನಗಳಲ್ಲಿ ನಾಲ್ಕನೇ ಕಟಾವಿಗೆ ಬರಲಿದೆ.  ಐದು ಹೆಕ್ಟೇರ್‌ನಲ್ಲಿ ನಾಟಿ ಮಾಡಿದ್ದ ಬಾಳೆಯಿಂದ 250 ಟನ್‌ ಇಳುವರಿ ದೊರೆತಿದ್ದು, 25.50 ಲಕ್ಷ ರೂ. ಗಳಷ್ಟು ಆದಾಯ ತಂದುಕೊಟ್ಟಿದೆ. 

ಲಾಭ ಹೀಗೆ
ಪ್ರಕಾಶ್‌ ಹೇಳುವಂತೆ, ಒಮ್ಮೆ ನಾಟಿ ಮಾಡಿದ ಬಾಳೆ ಕಟಾವಿಗೆ ಬಂದ ನಂತರ ಅದರ ಬುಡದಲ್ಲೇ ಮತ್ತಷ್ಟು  ಸಸಿಗಳು ಬೆಳೆಯುತ್ತವೆ. ಅದರಲ್ಲಿ ಯೋಗ್ಯವಾದ ಒಂದನ್ನು ಮಾತ್ರ ಉಳಿಸಿಕೊಂಡು, ಉಳಿದದ್ದೆಲ್ಲವನ್ನೂ ಕಡಿದುಹಾಕಿ ಎರೆಹುಳು ಬಿಟ್ಟು ಕೊಳೆಸುತ್ತಾರಂತೆ. ರಾಸಾಯನಿಕ ಗೊಬ್ಬರದ ಅವಶ್ಯಕತೆ ಬರದಂತೆ ಹೆಚ್ಚು ಸಾವಯವ ಗೊಬ್ಬರ ಉಪಯೋಗಿಸಿ, ಉತ್ತಮ ಇಳುವರಿ ಪಡೆಯಬಹುದು ಎಂದು ಇವರು ಸಾಧಿಸಿ ತೋರಿಸಿದ್ದಾರೆ.  ಮೊದಲ ಕಟಾವಿನಲ್ಲಿ ಅಷ್ಟೊಂದು ಉತ್ತಮ ಇಳುವರಿ ಪಡೆಯಲಾಗದಿದ್ದರೂ ತದನಂತರದ ಎರಡು ಕಟಾವುಗಳಲ್ಲಿ ಸಾಕಷ್ಟು ಇಳುವರಿ ದೊರೆಯುತ್ತದಂತೆ. 

 ಪ್ರಾರಂಭದ ಮೂರು-ನಾಲ್ಕು ತಿಂಗಳವರೆವಿಗೂ ಮಿಶ್ರಬೆಳೆಯಾಗಿ ಚೆಂಡು ಹೂ, ಕಲ್ಲಂಗಡಿ, ಹಸಿಮೆಣಸಿನ ಕಾಯಿ ಹೀಗೆ ಹಲವಾರು ಬೆಳೆಗಳನ್ನು ಬೆಳೆದು ಹಣ ಮಾಡಿದ್ದಾರೆ. ತದನಂತರ ಬಾಳೆ ಗಿಡಗಳು ದೊಡ್ಡದಾಗುವುದರಿಂದ ನೆರಳು ಹೆಚ್ಚಿ ಮಿಶ್ರಬೆಳೆ ಬೆಳೆಯಲು ಸಾಧ್ಯವಾಗಿಲ್ಲವಂತೆ. ಬಾಳೆ ಬೆಳೆಗೆ  ಹೆಕ್ಟೇರ್‌ಗೆ ಒಂದು ಲಕ್ಷದವರೆಗೂ ಖರ್ಚು ತಗುಲುತ್ತದೆ.  ಮೊದಲ ಕಟಾವಿನ ನಂತರ ಮುಂದಿನ ಕಟಾವುಗಳವರೆಗೆ ಹೆಕ್ಟೇರ್‌ಗೆ ಕೇವಲ 25ಸಾವಿರವಷ್ಟೇ ಖರ್ಚು. ಮುತುವರ್ಜಿ ವಹಿಸಿ ಕೃಷಿ ಮಾಡಿದರೆ, ಎಂಟರಿಂದ ಹತ್ತು ಕಟಾವುಗಳನ್ನು ಮಾಡಲು ಅವಕಾಶರುತ್ತದೆ ಎನ್ನುತ್ತಾರೆ ಪ್ರಕಾಶ್‌. ಇವರ ಸಾಧನೆಗೆ ಬೆಳಗಾವಿಯ ಕೃಷಿ ತಂತ್ರಜಾnನ ನಿರ್ವಹಣಾ ಸಂಸ್ಥೆಯು 2017-18ನೇ ಸಾಲಿನ 'ಶ್ರೇಷ್ಠ ಕೃಷಿಕ 'ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 

ಪ.ನಾ.ಹಳ್ಳಿ.ಹರೀಶ್‌ ಕುಮಾರ್‌

ಇಂದು ಹೆಚ್ಚು ಓದಿದ್ದು

ಬೆಂಗಳೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ ಜಾರಕಿಹೊಳಿ.

Nov 19, 2018 06:00am

ಬಾಗಲಕೋಟೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಬೆಂಕಿಗೆ ಆಹುತಿ.

Nov 19, 2018 06:00am

Trending videos

Back to Top