CONNECT WITH US  

ಅನಾರೋಗ್ಯಕರ ಮನಃಸ್ಥಿತಿಯ ಸುತ್ತಮುತ್ತ ಆರೋಗ್ಯ ಮಂತ್ರ!

ಸರ್ಕಾರ ಸಂಗ್ರಹಿಸಿರುವ ಮಾಹಿತಿಗಳ ಪ್ರಕಾರ, ದೇಶದ ಶೇ. 62.58 ಜನ ಇವತ್ತೂ ತಮ್ಮ ಕೈಯಿಂದಲೇ ಹಣ ವೆಚ್ಚ ಮಾಡಿ ತಮ್ಮ ಕುಟುಂಬದವರ ಆರೋಗ್ಯ ಚಿಕಿತ್ಸೆಗಳನ್ನು ಪಡೆಯುತ್ತಿದ್ದಾರೆ.  ಅಂಕಿ-ಅಂಶಗಳು ಹೇಳುವ ಪ್ರಕಾರ, ತಮ್ಮವರ ಆರೋಗ್ಯ ರಕ್ಷಣೆಗೆ ಮುಂದಾಗುವ ಕುಟುಂಬಗಳು ಕೈಯಲ್ಲಿರುವ ಹಣ, ಆಸ್ತಿಗಳನ್ನು ವ್ಯಯಿಸಿ ಹಾಗೂ ಸಾಲಗಳನ್ನೂ ತೆಗೆದುಕೊಂಡು ಬಡತನಕ್ಕೆ ತಳ್ಳಲ್ಪಡುತ್ತಿದ್ದಾರೆ. ಪ್ರತಿ 100ರಲ್ಲಿ 4.6 ಕುಟುಂಬಗಳು ಈ ಕಾರಣಕ್ಕಾಗಿ ಉನ್ನತಿಯಿಂದ ಬಡತನದ ರೇಖೆಯ ಕೆಳಗೆ ಇಳಿಯುತ್ತಿವೆ.

ಹಿಂದೆಯೂ ಒಮ್ಮೆ ಈ ಥರಹದ ಲೆಕ್ಕ ಮಾಡಿದಂತೆ ನೆನಪು. ಇವತ್ತಿನ ಭಾರತದ ಜನಸಂಖ್ಯೆ 112 ಕೋಟಿ. ಈ ಸಂಖ್ಯೆಯಲ್ಲಿ ಕಡಿಮೆ ಎಂದರೂ ಶೇ. 60ರಷ್ಟು ಜನ ಅಂದರೆ 67 ಕೋಟಿ ಮಂದಿ ವಾರ್ಷಿಕ 100 ರೂ. ಉಳಿಸಿ ಕೊಟ್ಟರೂ. 6,700 ಕೋಟಿ ರೂ. ದೇಶದಲ್ಲಿ ಸಂಗ್ರಹವಾಗುತ್ತದೆ. ಈ ಮೊತ್ತ ದೇಶದ ಜನರ ಆರೋಗ್ಯ ವಿಮೆಯ ಕಂತು ಎಂದುಕೊಳ್ಳೋಣ. 67 ಕೋಟಿ ಜನರಲ್ಲಿ ವಾರ್ಷಿಕ ಶೇ. 0.01ರಷ್ಟು ಜನ ತೀವ್ರ ಅನಾರೋಗ್ಯಕ್ಕೆ ಈಡಾಗುತ್ತಾರೆ ಎಂದರೆ ಅವರಿಗೆ ಒಟ್ಟಾದ 6700 ಕೋಟಿ ರೂ. ಹಂಚಿದರೆ ತಲಾ 10 ಲಕ್ಷ ರೂ. ಲಭಿಸುತ್ತದೆ. ಅಂಕಿ-ಅಂಶಗಳ ಬಗ್ಗೆ ಅನುಮಾನ ಮೂಡುವವರು ಕೇಂದ್ರದ ಆರೋಗ್ಯ ಇಲಾಖೆಯ ಅಂದಾಜನ್ನು ಗಮನಿಸಿ.

ಕಳೆದ ಮೂರು ದಶಕಗಳಲ್ಲಿ ಭಾರತದ ವೈದ್ಯಕೀಯ ಕ್ಷೇತ್ರ ಬ್ರಹ್ಮಾಂಡ ಅಭಿವೃದ್ಧಿಯನ್ನು ಕಂಡಿದೆ. ಇಲ್ಲಿಸಿಗುವ ಸೌಲಭ್ಯಗಳು ವಿಶ್ವದರ್ಜೆಗೇರಿವೆ. ಬಿಲ್‌ಗ‌ಳು ಕೈಗೆ ಬಿಸಿ ತುಪ್ಪವಾಗಿದೆ. ಹಾಗಿದ್ದೂ, ಭಾರತದಲ್ಲಿ 2020ರ ವೇಳೆಗೆ ವೈದ್ಯಕೀಯ ಕ್ಷೇತ್ರ 280 ಬಿಲಿಯನ್‌ ಅಮೆರಿಕನ್‌ ಡಾಲರ್‌ ಪ್ರಮಾಣದಷ್ಟು ಬೆಳೆದಿರುತ್ತದೆ ಎಂದು ಅಂದಾಜಿಸಲಾಗಿದೆ. ಇವತ್ತಿನ ಮೌಲ್ಯದ ವಿನಿಮಯ ದರದಲ್ಲಿ ಆಗುವ ವಾರ್ಷಿಕ ಖರ್ಚು ಮೊತ್ತ 1963 ಕೋಟಿ ರೂ. ಮಾತ್ರ.  ಹಾಗೆ ಯೋಚಿಸಿದರೆ ದೇಶದ ಜನಸಂಖ್ಯೆಯಲ್ಲಿ ಶೇ. 15ರಷ್ಟು ಜನ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರೂ ಸಾಕು.

ರೋಗಕ್ಕಿಂತ ಬಿಲ್‌ನಿಂದ ಪ್ರಾಣಭಯ!
ಇಂದು ಭಾರತದ ಆರೋಗ್ಯ ಕ್ಷೇತ್ರದ ವೆಚ್ಚಗಳು ನಮ್ಮನ್ನು ಭಯದ ಮಡಿಲಿಗೆ ತಂದು ಹಾಕುತ್ತಿವೆ. ಸಣ್ಣದೊಂದು ಕಾಯಿಲೆಯ ಕಾರಣಕ್ಕೆ ಆಸ್ಪತ್ರೆ ಸೇರಿದರೂ, ಕೆಲವು ಲಕ್ಷಗಳಿಗಿಂತ ಕಡಿಮೆ ಬಿಲ್‌ಗೆ ನಮ್ಮನ್ನು ಆಸ್ಪತ್ರೆಯಿಂದ ಹೊರಗೆ ಬಿಡುತ್ತಿಲ್ಲ. ಭಾರತದಲ್ಲಿ ಈಗಿರುವ ಹತ್ತಾರು ಆರೋಗ್ಯ ವಿಮೆಗಳು, ಷರತ್ತುಗಳೆಂಬ ನಾಟಕದಡಿ ಇದ್ದೂ ಇಲ್ಲದ ವಿಮೆಗಳಾಗಿವೆ. ಇದರಲ್ಲಿ ಎಲ್‌ಐಸಿಯ ಆರೋಗ್ಯ ವಿಮೆಗಳು ಕೂಡ ಸೇರಿಕೊಂಡಿವೆ. ಇಂದಿನ ಬಹುಪಾಲು ವಿಮೆಗಳು ಆಸ್ಪತ್ರೆಯಲ್ಲಿ ದಾಖಲಾದರೆ ಮಾತ್ರ ಎಂಬ ಷರತ್ತನ್ನು ಹೊಂದಿರುತ್ತವೆ.  ಒಂದೊಮ್ಮೆ ಒಬ್ಬ ವಿಮೆದಾತ ಅಪಘಾತಕ್ಕೊಳಗಾಗಿ ಕಾಲು ಮೂಳೆ ಮುರಿದುಕೊಂಡು ಆಸ್ಪತ್ರೆಯಲ್ಲಿ ಬ್ಯಾಂಡೇಜ್‌ ಹಾಕಿಸಿಕೊಂಡು ಮನೆಗೆ ಬಂದು ಮಲಗಿದರೆ ಅವನಿಗೆ ವಿಮೆ ಅನ್ವಯ ಆಗುವುದಿಲ್ಲ!

ಖುದ್ದು ಭಾರತ ಸರ್ಕಾರ ಸಂಗ್ರಹಿಸಿರುವ ಮಾಹಿತಿಗಳ ಪ್ರಕಾರ, ದೇಶದ ಶೇ. 62.58 ಜನ ಇವತ್ತೂ ತಮ್ಮ ಕೈಯಿಂದಲೇ ಹಣ ವೆಚ್ಚ ಮಾಡಿ ತಮ್ಮ ಕುಟುಂಬದವರ ಆರೋಗ್ಯ ಚಿಕಿತ್ಸೆಗಳನ್ನು ಪಡೆಯುತ್ತಿದ್ದಾರೆ.  ಅಂಕಿ-ಅಂಶಗಳು ಹೇಳುವ ಪ್ರಕಾರ, ತಮ್ಮವರ ಆರೋಗ್ಯ ರಕ್ಷಣೆಗೆ ಮುಂದಾಗುವ ಕುಟುಂಬಗಳು ಕೈಯಲ್ಲಿರುವ ಹಣ, ಆಸ್ತಿಗಳನ್ನು ವ್ಯಯಿಸಿ ಹಾಗೂ ಸಾಲಗಳನ್ನೂ ತೆಗೆದುಕೊಂಡು ಬಡತನಕ್ಕೆ ತಳ್ಳಲ್ಪಡುತ್ತಿದ್ದಾರೆ. ಪ್ರತಿ 100ರಲ್ಲಿ 4.6 ಕುಟುಂಬಗಳು ಈ ಕಾರಣಕ್ಕಾಗಿ ಉನ್ನತಿಯಿಂದ ಬಡತನದ ರೇಖೆಯ ಕೆಳಗೆ ಇಳಿಯುತ್ತಿವೆ.

ಈ ತರಹದ ಅಂಕಿಅಂಶಗಳ ಆಟದಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಹೆಚ್ಚು ಪರಿಣಿತವಾಗಿದೆ. ಅದು ಈ ಉಚಿತದ ಮಾದರಿಯನ್ನು ಕಳಚಿಕೊಳ್ಳುತ್ತಿದೆ. ಅದು ರೂಪಿಸಿದ 12 ರೂ. ವಾರ್ಷಿಕ ವೆಚ್ಚದ ಪ್ರಧಾನ ಮಂತ್ರಿ ಸುರûಾ ಭೀಮಾ ಯೋಜನೆ ಹಾಗೂ 330 ರೂ. ವೆಚ್ಚದ ಜೀವನ್‌ ಜ್ಯೋತಿ ಯೋಜನೆ ಹಣವನ್ನು ಜನರಿಂದ ಸಾಮೂಹಿಕವಾಗಿ ಸಂಗ್ರಹಿಸಿ ವೈಯುಕ್ತಿಕ ನೆಲೆಯಲ್ಲಿ ಹಂಚುವ ಸರಳ ಸೂತ್ರವನ್ನು ಅವಲಂಬಿಸಿದೆ. 

ಪ್ರಾಥಮಿಕ ಮಾಹಿತಿಗಳ ಪ್ರಕಾರ, ಒಂದು ಕುಟುಂಬದಿಂದ 1324 ರೂ.ಗಳ ವಿಮಾ ಕಂತನ್ನು ಕೇಂದ್ರ ಪಡೆದು ವಾರ್ಷಿಕ ಐದು ಲಕ್ಷ ರೂ.ಗಳವರೆಗೆ ಆರೋಗ್ಯ ವಿಮಾ ಮೊತ್ತ ಕೊಡಲಾಗುತ್ತದೆ ಎಂದು ಹೇಳಲಾಗಿತ್ತು. ತೀರಾ ಬಡವರಲ್ಲದೆ, 
ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದಲ್ಲೂ ಆರೋಗ್ಯದ ಸಮಸ್ಯೆ ಎದುರಿಸುವವರು 5-10 ಲಕ್ಷ ರೂ.ಗಳನ್ನು ಒಮ್ಮೆ ಆಸ್ಪತ್ರೆಗೆ ಸೇರಿದವರಿಗಾಗಿ ವೆಚ್ಚ ಮಾಡುವುದು ತೀರಾ ತ್ರಾಸದ ಸಂಗತಿ. ಅವರ ನೆರವಿಗೂ ಕೇಂದ್ರ ಮೇಲಿನ ಮಾದರಿಯಲ್ಲಿ ಬರುತ್ತದೆ ಎಂಬ ನಿರೀಕ್ಷೆ ಸಧ್ಯಕ್ಕಂತೂ ಹುಸಿ ಹೋಗಿದೆ.

ಅನಾರೋಗ್ಯಕರ ಗೊಂದಲಗಳು!
ಕೇಂದ್ರದ ಆರೋಗ್ಯ ಇಲಾಖೆ ಆರೋಗ್ಯ ಚಿಕಿತ್ಸೆಗಳ ವಿದ್ಯಮಾನಗಳನ್ನು ತೀರ ಹತ್ತಿರದಿಂದ ಗಮನಿಸಿದಂತಿದೆ.  ಆಯುಷ್ಮಾನ್‌ ಭಾರತ್‌ ಹೆಸರಿನಲ್ಲಿ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ ಎನ್‌ಹೆಚ್‌ಪಿಎಂ ಅಗತ್ಯವಿದ್ದವರ ನೆರವಿಗೆ ಧಾವಿಸಲು ಹೊಸ ಯೋಜನೆಯನ್ನು ರೂಪಿಸಿದೆ. 2018-19ರ ಬಜೆಟ್‌ನಲ್ಲಿ ಈ ಯೋಜನೆ ಘೋಷಿಸಿದಾಗ ಕೆಲವು ಅನುಮಾನಗಳಿದ್ದವು. ಆಗಸ್ಟ್‌ 15ರಂದು ಪ್ರಧಾನಿ ನರೇಂದ್ರ ಮೋದಿಯವರು ಕೆಂಪುಕೋಟೆಯ ಮೇಲಿಂದ ಆಯುಷ್ಮಾನ್‌ ಭವ ಎಂದಿದ್ದಾರೆ ನಿಜ. ಆದರೂ ಈ ಯೋಜನೆ ಜಾರಿ ವಿಚಾರದಲ್ಲಿಇನ್ನೂ ಪೂರ್ತಿ ನಿಚ್ಚಳವಾಗಿಲ್ಲ. ಆದರೆ ಜರ್ಮನಿಯಲ್ಲಿ 127 ವರ್ಷಗಳ ನಂತರ ಎಲ್ಲರ ಆರೋಗ್ಯ ಹಿತ ಕಾಯುವ ಯೋಜನೆ ಜಾರಿಯಾಗಿದೆ, ಥೈಲ್ಯಾಂಡ್‌ನ‌ಲ್ಲಿ 30 ವರ್ಷಗಳ ಹಿಂದಿನ ಘೋಷಣೆಯಂತೆ 2002ರಲ್ಲಿ ಸರ್ವ ಆರೋಗ್ಯ ನೀತಿ ಜಾರಿಯಾಯಿತು ಎಂಬ ಅಂಕಿಅಂಶಗಳ ಹಿನ್ನೆಲೆಯಲ್ಲಿ, ಪ್ರಧಾನ ಮಂತ್ರಿ ಜನ ಆರೋಗ್ಯ ಅಭಿಯಾನ ಈ ವರ್ಷದ ಸೆಪ್ಟೆಂಬರ್‌ 25ರಂದು ಚಾಲನೆಗೊಳ್ಳುವುದು ಖುಷಿಯ ಸಂಗತಿಯೇ. 

ಒಂದು ಪಕ್ಷ ಇದನ್ನು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಆಗ ಮತ್ತೇನಲ್ಲದಿದ್ದರೂ ಕೊನೆಪಕ್ಷ ದೇಶದ ಬಡ ಮಧ್ಯಮ ವರ್ಗ ಸಮಾಧಾನದ ನಿಟ್ಟುಸಿರು ಬಿಡುತ್ತದೆ. ಈವರೆಗೆ ಒಡಿಸ್ಸಾ ಹೊರತುಪಡಿಸಿ 29 ರಾಜ್ಯಗಳು ಎಂಓಇಗೆ ಸಹಿ ಹಾಕಿವೆ. ಅಥವಾ ಸರಳವಾಗಿ ಹೇಳುವುದಾದರೆ, ಯೋಜನೆಯ ಜಾರಿಗೆ ಸಮ್ಮತಿ ಸೂಚಿಸಿವೆ. ದೇಶದ ಸುಮಾರು ಎಂಟು ಸಾವಿರ ಆಸ್ಪತ್ರೆಗಳು ಯೋಜನೆಯಲ್ಲಿ ಅಡಕವಾಗಲು ಆಸಕ್ತಿ ತೋರಿವೆ. ಸರ್ಜರಿ, ಔಷಧ, ಹಗಲು ಆರೈಕೆ ಮೊದಲಾದವುಗಳೆಲ್ಲ ಅಡಕವಾದ ಯೋಜನೆಯ ಪರಿಧಿಯಲ್ಲಿ ಸುಮಾರು 1350 ವೈವಿದ್ಯ ಚಿಕಿತ್ಸೆಗಳನ್ನು ಸೇರಿಸಲಾಗಿದೆ. ವಿಮೆಗೆ ಮುನ್ನವೇ ರೋಗ ಲಕ್ಷಣ ಇದ್ದರೂ ಮಾ ವ್ಯಾಪ್ತಿಗೆ ಬಾಧಕವಲ್ಲ ಎಂಬ ನಿಯಮ ರೂಪಿಸಲಾಗಿದೆ. ಒಂದು ಕುಟುಂಬಕ್ಕೆ ವಾರ್ಷಿಕ ಐದು ಲಕ್ಷ ರೂ.ಗಳವರೆಗೆ ವೈದ್ಯಕೀಯ ವೆಚ್ಚಗಳ ನೆರವು ಸಿಗಲಿದೆ. ಮತ್ತೂಮ್ಮೆ ಆಧಾರ್‌, ಪಾನ್‌ಕಾರ್ಡ್‌ ಥರಹದ ಭದ್ರತೆಯನ್ನು ಈಗಾಗಲೇ ಹೇಳಲಾಗುತ್ತಿದೆ.

ಈಗಿನ ಮಾಹಿತಿಗಳ ಪ್ರಕಾರ, 2011ರಲ್ಲಿ ನಡೆದ ರಾಷ್ಟ್ರೀಯ ಸೋಯೋ ಎಕಾನುಕ್‌ ಕಾಸ್ಟ್‌ ಸೆನ್ಸೆಸ್‌ ಎಸ್‌ಇಸಿಸಿ ಆಧಾರದಲ್ಲಿ ದೇಶದ 10 ಕೋಟಿ ಕುಟುಂಬಗಳ 50 ಕೋಟಿ ಜನರು ಈ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ. ಅವರು ಯಾವುದೇ ವಾರ್ಷಿಕ ವಿಮಾಕಂತು ಕೊಡಬೇಕಾದ ಅಗತ್ಯವಿಲ್ಲ. ಅವರಿಗೆಲ್ಲ ಆರೋಗ್ಯ ಕಾರ್ಡ್‌ಅನ್ನು ವಿತರಿಸಲಾಗಿರುತ್ತದೆ. ಅವರೆಲ್ಲರ ಮಾಹಿತಿಗಳ ಡಾಟಾ ಒಂದು ವ್ಯವಸ್ಥೆಯಡಿ ಸಂಗ್ರಹವಾಗಿರುತ್ತದೆ. ಹಣ ಪಾವತಿಯ ಜಂಜಾಟವಿಲ್ಲದೆ ಅವರು 5 ಲಕ್ಷ ರೂ.ಗಳವರೆಗಿನ ಚಿಕಿತ್ಸೆ ಪಡೆಯಬಹುದು. ಇದಕ್ಕೆ ಕೇಂದ್ರ ಶೇ. 60 ಹಾಗೂ ರಾಜ್ಯ ಶೇ. 40ರಷ್ಟು ಹಣ ವೆಚ್ಚ ಮಾಡಬೇಕಾಗುತ್ತದೆ. ಕೆಲವು ನಿರ್ದಿಷ್ಟ ರಾಜ್ಯಗಳಲ್ಲಿ ರಾಜ್ಯ ಸರ್ಕಾರದ ಪಾಲು ಶೇ. 40ಕ್ಕಿಂತ ಕಡಿಮೆ ಇರುತ್ತದೆ. ಈ ಯೋಜನೆಯ ಸದಸ್ಯರಾಗಲು ಅರ್ಜಿ ಸಲ್ಲಿಕೆಯೂ ಅಗತ್ಯವಿಲ್ಲ. ಆದರೆ ವಿಮಾ ಮೊತ್ತ, ಇತರ ನಿಯಮಗಳು ಆಯಾ ರಾಜ್ಯ ಸರ್ಕಾರಗಳ ಚಿಂತನೆಯಲ್ಲಿ ರೂಪಗೊಳ್ಳುತ್ತವೆ.

ರೋಗಿಗಳ ಜೊತೆ ಕಳ್ಳರಿಗೆ ಚಿಕಿತ್ಸೆ!
ಬಹುಶಃ ಈವರೆಗೆ ಜಾರಿಯಲ್ಲಿರುವ ಖಾಸಗಿ ವಿಮಾ ಯೋಜನೆಗಳ ನಿಯಮಗಳು ಕೂಡ ಹೆಚ್ಚು ಕಠಿಣವಾಗುತ್ತಿರಲಿಲ್ಲವೇನೋ. ಆರಂಭದಲ್ಲಿ ಮಾಡಿದ ಲೆಕ್ಕಾಚಾರದ ಪ್ರಕಾರ ವಿಮಾ ಕಂಪನಿಗಳಿಗೆ ಲಾಭವೇ ದಕ್ಕಬೇಕಿತ್ತು. ಆದರೆ ವೈದ್ಯರು, ಆಸ್ಪತ್ರೆಗಳ ದುಷ್ಟ ಜಾಲ ವಿಮೆಯನ್ನು ಹೊಂದಿದ ರೋಗಿಯೊಬ್ಬನ ದಾಖಲಾತಿಯನ್ನು ಲಾಭದ ಗಣಿಯನ್ನಾಗಿಸಿಕೊಂಡವು. ವಿಮಾ ಕಂಪನಿಯಿಂದ ಪಡೆಯಬಹುದಾದ ಪರಮಾವಧಿ ವಿಮೆ ಹಣಕ್ಕೆ ತಕ್ಕುದಾದ ಬಿಲ್‌ ಮಾಡತೊಡಗಿದವು. ಇದಕ್ಕೆ ಕಡಿವಾಣ ಹಾಕಿದರೆ ಎಂತಹ ವಿಮಾ ಯೋಜನೆಯೂ ಯಶಸ್ವಿಯಾಗುತ್ತದೆ. ನಿಯಮಗಳು ಕೂಡ ಕಡಿಮೆಯಾಗಬಹುದು.

ಹೊಸ ವಿಮಾ ಯೋಜನೆಯ ಅನುಕೂಲ ಪಡೆಯಲು ಚೌಕಟ್ಟು ರೂಪಿಸುವ ಅಧಿಕಾರ ರಾಜ್ಯ ಸರ್ಕಾರದ್ದು. ಮತ್ತೆ ಸರ್ಕಾರಿ ಆಸ್ಪತ್ರೆಗೆ ಹೋಗಿ, ಅಲ್ಲಿ ಸಾಧ್ಯ ಇಲ್ಲ ಎಂತಾದರೆ ಮಾತ್ರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿ ಎಂಬ ಚಿಕಿತ್ಸೆ ಎಂದು ಈಗಿನ ಕರ್ನಾಟಕದ ಆರೋಗ್ಯ ಕಾರ್ಡ್‌ನ ನಿಬಂಧನೆಗಳು ಇಲ್ಲೂ ಬಂದರೆ ಕಷ್ಟ. ಭಾರತದಲ್ಲಿ ಪ್ರತಿ 11 ಸಾವಿರ ಜನಕ್ಕೆ ಒಬ್ಬ ಅಲೋಪಥಿಕ್‌ ವೈದ್ಯರಿದ್ದಾರೆ.ವಿ ಶ್ವ ಆರೋಗ್ಯ ಸಂಸ್ಥೆಯ ಆದರ್ಶ ಮಾದರಿ ಪ್ರಕಾರ ಒಂದು ಸಾರ ಜನಕ್ಕೆ ಒಬ್ಬ ಡಾಕ್ಟರ್‌ ಇರಬೇಕಿತ್ತು. ಪರಿಸ್ಥಿತಿ ಬಿಹಾರ, ಉತ್ತರಪ್ರದೇಶದಲ್ಲಿ ಇನ್ನೂ ಹೀನಾಯ. ಬಿಹಾರದಲ್ಲಿ 28,391 ಜನಕ್ಕೆ ಹಾಗೂ ಯುಪಿಯಲ್ಲಿ 19,962 ಪ್ರಜೆಗೆ ಒಬ್ಬರಂತೆ ವೈದ್ಯರಿದ್ದಾರೆ! 

-ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ


Trending videos

Back to Top