CONNECT WITH US  

ಮಳೆಗಾಲಕ್ಕೆ ಬೆಚ್ಚಗಿನ ಮನೆ

ನಾವು ಹೊರಗಿನ ಬಾಗಿಲನ್ನು ತೆರೆದ ಕೂಡಲೆ ಚಳಿ ಎಂದೆನಿಸಿದರೆ ಅದೇ ರೀತಿಯಲ್ಲಿ ಹೊರಗಿನಿಂದ ಮನೆಯೊಳಗೆ ಪ್ರವೇಶಿಸಿದೊಡನೆ ಬೆಚ್ಚನೆಯ ಅನುಭವವೂ ಆಗುತ್ತದೆ. ಹೀಗಾಗಲು ಮುಖ್ಯ ಕಾರಣ, ಮನೆಯೊಳಗೆ ಶೇಖರವಾಗುವ ಶಾಖವೇ ಆಗಿರುತ್ತದೆ. ಮನೆಯೊಳಗೆ ನಾನಾ ಚಟುವಟಿಕೆಗಳಿಂದ ಶಾಖ ಉತ್ಪಾದನೆಯಾಗುತ್ತದೆ. ಇದರಲ್ಲಿ ಮುಖ್ಯವಾದದ್ದು ಅಡುಗೆ ಮನೆಯಲ್ಲಿ ಬಳಸುವ ಒಲೆಯಿಂದಾಗಿ ಸಾಕಷ್ಟು ಶಾಖ ಮನೆಯ ಒಳಾಂಗಣವನ್ನು ಪ್ರವೇಶಿಸುತ್ತದೆ.

ಈಗ ಎಲ್ಲೆಡೆ ಜಿಟಿಜಿಟಿ ಮಳೆಯದೇ ದರ್ಬಾರು. ಒಂದೊಮ್ಮೆ ಜೋರಾಗಿ ಸುರಿದರೂ ಕೆಲಕಾಲದ ನಂತರ ನಿಂತುಹೋಗುತ್ತದೆ. ಇದು ಮುಂಗಾರು ಮಳೆ, ಹಿಂಗಾರಿನಂತೆ ಚಳಿಗಾಲದಲ್ಲಿ ದಿನಗಟ್ಟಲೆ ಸುರಿಯುವುದಿಲ್ಲ. ಆದರೂ ಮಳೆ ಬರುವಾಗ ಹಾಗೂ ನಂತರ ಕೆಲಕಾಲ ಚಳಿ ಚಳಿ ಎಂದೆನಿಸುತ್ತದೆ. ಮುಂಗಾರಿನ ಮಳೆಯನ್ನು "ಬೇಸಿಗೆಯ ಮಳೆ' - ಸಮ್ಮರ್‌ ಮಾನ್‌ಸೂನ್‌ ಅಂದರೆ ನೈಋತ್ಯದಿಂದ ಬೀಸುವ ಗಾಳಿಯಿಂದಾಗಿ ಉಂಟಾಗುವ ಈ ಮಳೆಗಾಲದಲ್ಲಿ ಚಳಿಗಾಲ ಇದ್ದಹಾಗೆ ಅತಿ ಕಡಿಮೆ ತಾಪಮಾನ ಏನೂ ಇರುವುದಿಲ್ಲ. ದಕ್ಷಿಣ ಭಾರತದ ಬಹುತೇಕ ಕಡೆಗಳಲ್ಲಿ ಕನಿಷ್ಠ ತಾಪಮಾನ ಸುಮಾರು ಇಪ್ಪತ್ತು ಡಿಗ್ರಿ ಸೆಲಿಯಸ್‌ನ ಆಸುಪಾಸಿನಲ್ಲಿ ಇರುತ್ತದೆ. ದಿನದಿಂದ ದಿನಕ್ಕೆ ತಾಮಪಾನದಲ್ಲಿ ಹೆಚ್ಚು ವ್ಯತ್ಯಾಸ ಆಗದಿದ್ದರೂ ಮಳೆ ಬಿದ್ದ ಕೂಡಲೆ ಚಳಿ ಹೆಚ್ಚಿರುತ್ತದೆ. ಹಾಗಾಗಿ, ಆರಾಮದಾಯಕ ವಾತಾವರಣ ಸೃಷ್ಟಿಸಿಕೊಂಡು ಆರೋಗ್ಯವಾಗಿರಲು ಕೆಲ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಉತ್ತಮ. ಆರಾಮ ಎನ್ನುವುದು ದೈಕವಾಗಿರುವಂತೆಯೇ ಮಾನಸಿಕವಾದ ಒಂದು ಆಯಾಮವನ್ನೂ ಹೊಂದಿರುತ್ತದೆ.  

ಮನೆಯಲ್ಲಿ ಶಾಖ ಕಾಪಾಡಿಕೊಳ್ಳಿ
ನಾವು ಹೊರಗಿನ ಬಾಗಿಲನ್ನು ತೆರೆದ ಕೂಡಲೆ ಚಳಿ ಎಂದೆನಿಸಿದರೆ ಅದೇ ರೀತಿಯಲ್ಲಿ ಹೊರಗಿನಿಂದ ಮನೆಯೊಳಗೆ ಪ್ರವೇಶಿಸಿದೊಡನೆ ಬೆಚ್ಚನೆಯ ಅನುಭವವೂ ಆಗುತ್ತದೆ. ಹೀಗಾಗಲು ಮುಖ್ಯ ಕಾರಣ, ಮನೆಯೊಳಗೆ ಶೇಖರವಾಗುವ ಶಾಖವೇ ಆಗಿರುತ್ತದೆ. ಮನೆಯೊಳಗೆ ನಾನಾ ಚಟುವಟಿಕೆಗಳಿಂದ ಶಾಖ ಉತ್ಪಾದನೆಯಾಗುತ್ತದೆ. ಇದರಲ್ಲಿ ಮುಖ್ಯವಾದದ್ದು ಅಡುಗೆ ಮನೆಯಲ್ಲಿ ಬಳಸುವ ಒಲೆಯಿಂದಾಗಿ ಸಾಕಷ್ಟು ಶಾಖ ಮನೆಯ ಒಳಾಂಗಣವನ್ನು ಪ್ರವೇಶಿಸುತ್ತದೆ. 

ಹಾಗೆಯೇ, ನಮ್ಮ ದೈನಂದಿನ ಚಟುವಟಿಕೆಗಳೂ ಒಂದಷ್ಟು ಶಾಖವನ್ನು ಮನೆಯ ಒಳಾಂಗಣಕ್ಕೆ ಸೇರಿಸುತ್ತದೆ. ಮಳೆ ಮಳೆ ಎಂದು ನಾವು ಈ ಅವಧಿಯಲ್ಲಿ ಕಿಟಕಿಬಾಗಿಲುಗಳನ್ನು ಮುಚ್ಚಿಟ್ಟರೆ ಸಾಕಷ್ಟು ತಾಪಮಾನ ಶೇಖರಣೆಗೊಳ್ಳುತ್ತದೆ. ಆದರೆ, ಆರೋಗ್ಯದ ದೃಷ್ಟಿಯಿಂದ ಹೀಗೆ ಮಾಡುವುದು ಉತ್ತಮವಲ್ಲ. ಮನೆಯೊಳಗೆ ಒಂದಷ್ಟು ತಾಜ ಗಾಳಿ ಪ್ರವೇಶಿಸುತ್ತಲೇ ಇರಬೇಕು. ಹಾಗೆಯೇ ಮನೆಯೊಳಗೆ ಶೇಖರಣೆಯಾಗುವ ಉಪಯುಕ್ತ ಶಾಖ ಹೊರಗೂ ವಿನಾಕಾರಣ ಹರಿದು ಹೋಗಲು ಬಿಡಬಾರದು. ಹಾಗಾದರೆ, ಹೊಸಗಾಳಿಗೆ ಪ್ರವೇಶಿಸಲು ಅನುವು ಮಾಡಿಕೊಡುತ್ತಲೆ ಶಾಖವನ್ನು ಹಿಡಿದಿಡುವುದು ಹೇಗೆ?

ಧೋ ಎಂದು ಸುರಿಯುವ ಮಳೆಯೊಂದಿಗೆ ಈ ಅವಧಿಯಲ್ಲಿ ಜೋರು ಗಾಳಿಯೂ ಬೀಸುತ್ತದೆ. ಆದುದರಿಂದ ಗಾಳಿ ಮಳೆ ಬರುವ ದಿಕ್ಕು ಅಂದರೆ ಮುಂಗಾರಿನ ಅವಧಿಯಲ್ಲಿ ದಕ್ಷಿಣ ಹಾಗೂ ಪಶ್ಚಿಮ ದಿಕ್ಕಿನ ಕಿಟಕಿಗಳನ್ನು ಮುಚ್ಚಿಡಬಹುದು. ಇದಕ್ಕೆ ವಿರುದ್ಧ ದಿಕ್ಕಾದ ಪೂರ್ವ ಹಾಗೂ ಉತ್ತರದಿಕ್ಕಿನ ಕಿಟಕಿಗಳನ್ನು ತೆರೆದಿಡಬಹುದು. ಈ ದಿಕ್ಕುಗಳಿಂದ ಗಾಳಿ ಬೀಸದಿದ್ದರೂ, ಋಣಾತ್ಮಕ ಒತ್ತಡ ಹೊಂದಿರುವುದರಿಂದ ಮನೆಯಿಂದ ಒಂದಷ್ಟು ಉಚ್ಚಾಟಿತ ಗಾಳಿ ಹೊರಗೆ ಸೆಳೆಯಲ್ಪಡುತ್ತದೆ. ಮನೆಯೊಳಗೆ ಆ ಒಂದು ಫ್ರೆಶ್‌ನೆಸ್‌ ಪಡೆಯಲು ನಿಶ್ವಾಸದ ಗಾಳಿ ಹೊರಗೆ ಹೋಗಲೇ ಬೇಕಾಗುತ್ತದೆ.  ಆದರೆ ಇದು ನಿಧಾನವಾಗಿ ಆಗುವ ಕಾರಣ ಹೆಚ್ಚು ತಾಪವನ್ನು ಮನೆಯಿಂದ ಹೊರಗೆ ಹೊತ್ತು ಹೋಗುವುದಿಲ್ಲ.

ಮುಂಗಾರು ಮಳೆಗೆ ಸೂರಿನ ವಿನ್ಯಾಸ
ಮನೆಯ ಗೋಡೆಗಳು ಮಳೆಯ ನೀರಿಗೆ ನೆನೆದರೆ, ಅದರಲ್ಲಿ ಒಂದಂಶದಷ್ಟಾದರೂ ಒಳಾಂಗಣವನ್ನು ಸೇರುವ ಸಾಧ್ಯತೆ ಇರುತ್ತದೆ. ಆದುದರಿಂದ, ಸಾಧ್ಯವಾದಷ್ಟೂ ಮಳೆಯ ನೀರು ಗೋಡೆಗಳನ್ನು ತೋಯಿಸದಂತೆ ನೋಡಿಕೊಳ್ಳುವುದು ಉತ್ತಮ. ಮನೆಯ ಸುತ್ತಲೂ ಒಂದೆರಡು ಅಡಿಗಳಷ್ಟಾದರೂ ಸೂರನ್ನು ಹೊರಚಾಚಿದಂತೆ ವಿನ್ಯಾಸ ಮಾಡಿದರೆ, ಮಳೆಯ ನೀರು ಗೋಡೆಗಳಿಗೆ ತಾಗದೆ ನೇರವಾಗಿ ನೆಲವನ್ನು ತಲುಪುತ್ತದೆ.  ಹಾಗೆಯೇ, ಸೂರು ಸ್ಲೋಪಿಂಗ್‌ - ಇಳಿಜಾರಾಗಿದ್ದರೆ ಕಡ್ಡಾಯವಾಗಿ ಸೂಕ್ತ ನೀರಿನ ದೋಣಿಗಳನ್ನು ನೀಡಿ ಗೋಡೆಗಳ ಮೇಲೆ ಚೆಲ್ಲದೆ ಕೊಳವೆಗಳ ಮೂಲಕ ನೆಲಮಟ್ಟವನ್ನು ತಲುಪುವಂತೆ ಮಾಡಬೇಕು. ಗೋಡೆಗಳು ಒದ್ದೆಯಾದರೆ, ಬೂಷ್ಟು ಹಿಡಿಯುವುದರ ಜೊತೆಗೆ ಒಳಾಂಗಣಕ್ಕೆ ಹೆಚ್ಚುವರಿ ತೇವಾಂಶ ಸೇರುತ್ತದೆ. ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಜೊತೆಗೆ ಒಂದು ರೀತಿಯ ಕಮಟು ವಾಸನೆಯೂ ಮನೆಯನ್ನು ಆವರಿಸಿ ಆ ಒಂದು ತಾಜಾತನ ಇರುವುದಿಲ್ಲ. 

ಸೂರಿನ ಮೇಲೊಂದು ಟೈಲ್ಸ್‌ ಅಳವಡಿಸಿ
ಆರ್‌ಸಿಸಿ ಸೂರಿನ ಮೇಲೆ ಸಾಮಾನ್ಯವಾಗೇ ನೀರು ನಿರೋಧಕ ರಾಸಾಯನಿಕ ಬೆರೆಸಿ ಒಂದು ಪದರ ಡಬಲ್‌ಯು ಪಿ ಸಿ -ವೆದರ್‌ ಫ‌ೂಪ್‌ ಕೋರ್ಸ್‌ ಅಂದರೆ ಹವಾಮಾನ ವೈಪರೀತ್ಯ ನಿರೋಧ ಪದರವಾಗಿ ಹಾಕಲಾಗುತ್ತದೆ. ಇದರ ಸರಾಸರಿ ದಪ್ಪ ಒಂದೆರಡು ಇಂಚು ಇರುತ್ತದೆ.

ಈ ಪದರ ಕಾಲ ಕ್ರಮೇಣ ಬಿಸಿಲು ಮಳೆಗೆ ಒಡ್ಡಿಕೊಂಡಾಗ ಸಣ್ಣ ಸಣ್ಣ ಬಿರುಕುಗಳು ಮೂಡಿಬಂದು, ಸೂರು ಒಂದಷ್ಟು ತೇವಾಂಶವನ್ನು ಬೀರಿಬಿಡುತ್ತದೆ. ಹೀಗಾದಾಗ ತಂಪಾದ ಸೂರಿಗೆ ತಾಗಿದ ಮನೆಯ ಒಳಾಂಗಣದ ಬೆಚ್ಚನೆಯ ಗಾಳಿ ಕೆಳಗಿಳಿದು ನಮಗೆ ಥಂಡಿಯ ಅನುಭವ ಆಗುತ್ತದೆ. ಆದುದರಿಂದ ಸೂರಿನ ಮೇಲೆ ಹೆಚ್ಚುವರಿಯಾಗಿ ಒಂದು ಪದರ ರೆಡ್‌ ಕ್ಲೇ ಟೈಲ್ಸ್‌ -ಜೇಡಿ ಮಣ್ಣಿನ ಕೆಂಪು ಬಿಲ್ಲೆಕಲ್ಲುಗಳನ್ನು ಹಾಕುವುದು ಉತ್ತಮ. ಈ ಬಿಲ್ಲೆಕಲ್ಲುಗಳು ಮೂಲತಃ ಜಡವಾಗಿದ್ದು, ನಾಲ್ಕಾರು ದಿನ ಜೋರಾಗಿ ಮಳೆ ಬಂದರೂ ಒಳಾಂಗಣಕ್ಕೆ ತೇವಾಂಶವನ್ನು ಬಿಟ್ಟುಕೊಡುವುದಿಲ್ಲ. ಅದೇ ರೀತಿಯಲ್ಲಿ ಜೋರಾಗಿ ಮಳೆ ಆಲಿಕಲ್ಲಿನ ಜೊತೆ ಬಿದ್ದರೂ ತಡೆದುಕೊಳ್ಳುವ ಶಕ್ತಿಹೊಂದಿರುತ್ತದೆ. ಹವಾಮಾನ ವೈಪರೀತ್ಯಕ್ಕೆಂದು ಮಾಮೂಲಿ ಕಾಂಕ್ರಿಟ್‌ ಪದರ ಬಳಸಿದರೆ ಅದು ಕಾಲಾಂತರದಲ್ಲಿ ಚಕ್ಕೆ ಎದ್ದು ನೀರು ಸೋರುವ ಸಾಧ್ಯತೆಯೂ ಇರುತ್ತದೆ. ಸೂರಿನ ಮೇಲೆ ಹೆಚ್ಚುವರಿ ಪದರ ಇದ್ದರೆ, ಒಳಾಂಗಣ ಬೆಚ್ಚಗೂ ಇರುತ್ತದೆ. ಮನೆಯ ಶಾಖ ಹೊರಗೆ ಹೋಗಲು ಅತಿ ಹೆಚ್ಚು ಅನುಕೂಲಕರ ಸ್ಥಳ ಸೂರು ಆಗಿರುತ್ತದೆ. ಸೂರಿನಿಂದ ಶಾಖ ಹೊರಹರಿಯದಂತೆ ತಡೆಯಲು ಕ್ಲೈಟೈಲ್ಸ್‌ ಅತಿ ಉತ್ತಮವೂ ಹೌದು. 

ಕಿಟಕಿ ಬಾಗಿಲಿಗೆ ರಕ್ಷಣೆ ಒದಗಿಸಿ
ಮನೆಯನ್ನು ಬೆಚ್ಚಗಿರಿಸುವಲ್ಲಿ ತೆರೆದ ಸ್ಥಳಗಳೂ ಮುಖ್ಯ ಪಾತ್ರ ವಹಿಸುತ್ತವೆ. ಸೊಳ್ಳೆ ಬಾರದಿರಲಿ ಎಂದು ಹಾಕುವ ಮೆಶ್‌ ಒಂದಷ್ಟು ಶಾಖವನ್ನು ಒಳಾಂಗಣದಲ್ಲಿ ಹಿಡಿದಿಡುತ್ತದೆ. ಹಾಗಾಗಿ, ನಿಮ್ಮ ಮನೆಯಲ್ಲಿ ಸೊಳ್ಳೆ ಹಾವಳಿಯೊಂದಿಗೆ ಹೆಚ್ಚು ತಂಡಿಯ ಅನುಭವ ಆದರೆ ಕಿಟಕಿಗಳಿಗೆ ಮೆಶ್‌ ಅಳವಡಿಸುವುದು ಲಾಭದಾಯಕ. ಮೆಶ್‌ -ಜರಡಿ ಅಳವಡಿಕೆಯಿಂದ ಶಾಖ ಒಳಾಂಗಣದಿಂದ ಹರಿದು ಹೋಗುವುದು ಕಡಿಮೆ ಆದರೂ ತಾಜಾ ಗಾಳಿ ಮನೆಯನ್ನು ಪ್ರವೇಶಿಸುವುದಕ್ಕೆ ಏನೂ ತೊಂದರೆ ಆಗುವುದಿಲ್ಲ. 

ಮಾಹಿತಿಗೆ  98441 32826


Trending videos

Back to Top