CONNECT WITH US  

ನಿಮ್ಮ ಮೊಬೈಲ್‌ ಸರಾಗವಾಗಿ ಕೆಲಸ ಮಾಡಲು ಹೀಗೆ ಮಾಡಿ

ನನ್ನದು ಹೊಸ ಫೋನ್‌. ದುಬಾರಿ ಫೋನ್‌ ಕೂಡಾ. ಸಮಸ್ಯೆ ಏನ್‌ ಗೊತ್ತ? ಇದರ ಬ್ಯಾಟರಿ ಒಂದೇ ದಿನಕ್ಕೆ ಮುಗಿದು ಹೋಗುತ್ತೆ. ಕಂಪನಿ ಹೇಳ್ಳೋದು -ಒಮ್ಮೆ ಪೂರ್ತಿ ಚಾರ್ಜ್‌ ಮಾಡಿದ್ರೆ 48 ಗಂಟೆ ಬರುತ್ತೆ ಅಂತ. ಆದರೆ ಇದು 24 ಗಂಟೆಯೂ ಬರ್ತಿಲ್ಲ. ಯಾಕೆ ಹೀಗೆ... ಇದು ಹಲವರು ಮಾತು. ಹೀಗೆಲ್ಲಾ ಆಗುವುದೇಕೆ ಎಂದು ತಿಳಿಯಲು ಈ ಲೇಖನ ಓದಿ...

ಇಂದು ಸ್ಮಾರ್ಟ್‌ ಫೋನ್‌ ಅನೇಕರ ಅಗತ್ಯದ ವಸ್ತುವಾಗಿದೆ. ಮೊದಲು ಎಲ್ಲರ ಬಳಿ ವಾಚ್‌ ಇದ್ದಂತೆ, ಇಂದು ಎಲ್ಲರ ಬಳಿ ಸ್ಮಾರ್ಟ್‌ಫೋನ್‌ ಇದೆ. ನನಗೆ ಇಂಥದೇ ಬ್ರಾಂಡ್‌ ಆಗಬೇಕು ಎಂದುಕೊಂಡು, ತಮಗೆ ಅವಶ್ಯವಿಲ್ಲದಿದ್ದರೂ ಹೆಚ್ಚಿನ ಹಣ ತೆತ್ತು ಮೊಬೈಲ್‌ ಫೋನ್‌ ಖರೀದಿಸುವ ಅನೇಕರಿದ್ದಾರೆ. ಹೀಗೆ ಮೊಬೈಲ್‌ ಕೊಂಡ ನಂತರ ಅದು ಚೆನ್ನಾಗಿ ಕಾರ್ಯಾಚರಣೆ ಮಾಡಲು ಏನು ಮಾಡಬೇಕು ಎಂದು ಶೇ. 75ರಷ್ಟು ಜನರು ತಲೆ ಕೆಡಿಸಿಕೊಳ್ಳುವುದಿಲ್ಲ. ಒಂದು ಮೊಬೈಲ್‌ ಫೋನ್‌ ವೇಗವಾಗಿ ಕೆಲಸ ಮಾಡಲು, ಅದರ ಬ್ಯಾಟರಿ ಹೆಚ್ಚು ಹೊತ್ತು ಬರಲು, ಮೊಬೈಲ್‌ ಫೋನ್‌ಗೆ ವೈರಸ್‌ ದಾಳಿ ಮಾಡದಿರಲು ಕೆಲವು ಸಣ್ಣ ಪುಟ್ಟ ನಿರ್ವಹಣೆ ಮಾಡುತ್ತಿರಬೇಕು. 

ನನ್ನ ಪರಿಚಯದವರೊಬ್ಬರು ಹೊಸ ಮೊಬೈಲ್‌ ಖರೀದಿಸಿದರು. ಮೂರು ದಿನಗಳ ನಂತರ ಕರೆ ಮಾಡಿದರು. "ನಾನೊಂದು ಮೊಬೈಲ್‌ ಕೊಂಡಿದ್ದೇನೆ. ಇದರಲ್ಲಿ ಎಲ್ಲ ಸರಿ, ಆದರೆ ಬ್ಯಾಟರಿ ಜಾಸ್ತಿ ಹೊತ್ತು ಬರುವುದಿಲ್ಲ. ಒಂದು ದಿನಕ್ಕೇ ಖಾಲಿಯಾಗಿ ಬಿಡುತ್ತದೆ' ಎಂದರು. 3750 ಎಂಎಎಚ್‌ ಬ್ಯಾಟರಿ ಇರುವ ಫೋನ್‌ ಅದು. ಹೆವಿ ಬಳಕೆಗೆ ಒಂದು ದಿನ ಪೂರ್ತಿ ಬ್ಯಾಟರಿ ಸಾಕಾಗಿ, ಇನ್ನೂ ಶೇ.30ರಷ್ಟು ಬ್ಯಾಟರಿ ಉಳಿಯುವಂಥದ್ದು. ಆಗ ಅವರಿಗೆ, ನೀವು ಮೊಬೈಲ್‌ ಬಳಸಿದ ನಂತರ, ಹಿನ್ನೆಲೆಯಲ್ಲಿ ಆ್ಯಪ್‌ಗ್ಳು ಕೆಲಸ ಮಾಡುತ್ತಿರುತ್ತವೆ. ಅದನ್ನು ಕ್ಲಿಯರ್‌ ಮಾಡುತ್ತೀರಾ?' ಎಂದೆ. ಅದು ಹೇಗೆ ಎಂದರು. ನಿಮ್ಮ ಫೋನಿನ  ಪರದೆಯ ಕೆಳಗೆ, ಒಂದು ಬಾಣದ ಗುರುತು, ಒಂದು ರೌಂಡ್‌ ಗುರುತು,  ಒಂದು ಚಚ್ಚೌಕದ ಗುರುತು ಇರುತ್ತದೆ. ಇದನ್ನು ನ್ಯಾವಿಗೇಷನ್‌ ಬಟನ್‌ ಎನ್ನುತ್ತಾರೆ. ಅದರಲ್ಲಿ ಚಚ್ಚೌಕದ ಗುರುತು ಒತ್ತಿದರೆ ನೀವು ನೋಡಿದ ಅಪ್ಲಿಕೇಷನ್‌ಗಳು ಹಿನ್ನೆಲೆಯಲ್ಲಿ ಕುಳಿತಿರುತ್ತವೆ. ಅವುಗಳು  ಕೆಳಗಿರುವ ಡಿಲೀಟ್‌ ಗುರುತು ಒತ್ತಿದರೆ ಕ್ಲಿಯರ್‌ ಆಗುತ್ತವೆ. ಕ್ಲಿಯರ್‌ ಆದ ಬಳಿಕ ಅವು ಹಿನ್ನೆಲೆಯಲ್ಲಿ ಇರದ ಕಾರಣ, ಬ್ಯಾಟರಿ ಉಳಿಯುತ್ತದೆ. ಅಲ್ಲದೇ ನಿಮ್ಮ ಮೊಬೈಲ್‌ನ ರ್ಯಾಮ್‌ ಕೂಡ ಫ್ರೀಯಾಗುತ್ತದೆ ಎಂದು ವಿವರಿಸಿದೆ. ಎರಡು ದಿನದ ನಂತರ ಕರೆ ಮಾಡಿದ ಅವರು " ನನ್ನ ಮೊಬೈಲ್‌ ಬ್ಯಾಟರಿ ಈಗ ಹೆಚ್ಚು ಸಮಯ ಬರುತ್ತಿದೆ' ಎಂದರು.ಹೀಗೆ ಇದೊಂದು ಉದಾಹರಣೆ ಮಾತ್ರ. ಇಂಥ ಸಣ್ಣಪುಟ್ಟ ಕ್ರಮಗಳನ್ನು ಅನುಸರಿಸಿದರೆ ನಿಮ್ಮ ಮೊಬೈಲ್‌ ಫೋನ್‌ ಸರಾಗವಾಗಿ ಕೆಲಸ ಮಾಡುತ್ತದೆ. ಬ್ಯಾಟರಿ ಹೆಚ್ಚು ಬಾಳಿಕೆ ಬರುತ್ತದೆ.

ಹೆಚ್ಚು ಆಂತರಿಕ ಸಂಗ್ರಹ, ಹೆಚ್ಚು ರ್ಯಾಮ್‌ ಇರುವ ಫೋನ್‌ ಬಳಸಿ: ಇನ್ನು ಹಲವರು ತಮ್ಮ ಫೋನ್‌ ಹ್ಯಾಂಗ್‌ ಆಗುತ್ತಿರುತ್ತದೆ ಎಂದು ಹೇಳುವುದು ಸಾಮಾನ್ಯ. ಇದಕ್ಕೆ ಅನೇಕ ಕಾರಣಗಳಿರುತ್ತವೆ. ಮೊದಲನೆಯದಾಗಿ, ಕಡಿಮೆ  ಆಂತರಿಕ ಸಂಗ್ರಹ, ಕಡಿಮೆ ರ್ಯಾಮ್‌ ಮತ್ತು ಕಡಿಮೆ ಸಾಮರ್ಥ್ಯದ ಫೋನ್‌ಗಳು. 16 ಜಿಬಿ ಆಂತರಿಕ ಸಂಗ್ರಹ, 2 ಜಿಬಿ ರ್ಯಾಮ್‌ ಇರುವ ಫೋನ್‌ಗಳಲ್ಲಿ ಸುಮಾರು 8 ಜಿಬಿ ಫೋನ್‌ ಜೊತೆ ಇರುವ ಆ್ಯಪ್‌ಗ್ಳಿಗೇ ಹೋಗುತ್ತದೆ. ಇನ್ನು 8 ಜಿಬಿಯಲ್ಲಿ ಉಳಿದ ಹೊಸ ಆ್ಯಪ್‌ಗ್ಳು, ಫೋಟೋಗಳು, ಹಾಡುಗಳು, ವಿಡಿಯೋಗಳನ್ನು ತುಂಬಿಕೊಂಡರೆ, ಅದೆಲ್ಲಿ ಸರಾಗವಾಗಿ ಕೆಲಸ ಮಾಡಲು ಸಾಧ್ಯ? ಅಂತಹ ಫೋನ್‌ಗಳು ವಾಟ್ಸಪ್‌ ಫೇಸ್‌ಬುಕ್‌ ಬಳಸಲು, ಕಾಲ್‌ ಮಾಡಲಷ್ಟೇ ಸೂಕ್ತ. ಆದ್ದರಿಂದ ಸಾಧಾರಣ ಬಳಕೆದಾರರಾದರೆ ಕನಿಷ್ಟ 32 ಜಿಬಿ ಆಂತರಿಕ ಸಂಗ್ರಹ, ಕನಿಷ್ಟ 3 ಜಿಬಿ ರ್ಯಾಮ್‌ ಸಾಮರ್ಥಯದ ಫೋನ್‌ ಕೊಳ್ಳಿ. 4 ಜಿಬಿ ರ್ಯಾಮ್‌ ಮತ್ತು 64 ಜಿಬಿ ರ್ಯಾಮ್‌ ಮಧ್ಯಮ ಬಳಕೆದಾರರಿಗೆ ಬೇಕಾದಷ್ಟು. ಕೆಲವು ಸಾಧಾರಣ ಬಳಕೆದಾರರು ಕೂಡ 6 ಜಿಬಿ ರ್ಯಾಮ್‌ ಬೇಡವೇ ಎನ್ನುತ್ತಾರೆ. ಸಾಧಾರಣ, ಮಧ್ಯಮ ಬಳಕೆದಾರರಿಗೆ 6 ಜಿಬಿ ರ್ಯಾಮ್‌ ಅವಶ್ಯವಿಲ್ಲ. ಉತ್ತಮ ಪ್ರೊಸೆಸರ್‌ ಇದ್ದರೆ 4 ಜಿಬಿ ರ್ಯಾಮ್‌ ಸಾಕೋ ಸಾಕು.
ಅಗತ್ಯದ ಆ್ಯಪ್‌ಗ್ಳನ್ನಷ್ಟೇ ಡೌನ್‌ಲೋಡ್‌ ಮಾಡಿಕೊಳ್ಳಿ: 64 ಜಿಬಿ ಆಂತರಿಕ ಸಂಗ್ರಹ, 4 ಜಿಬಿ ಅಥವಾ 6 ಜಿಬಿ ರ್ಯಾಮ್‌ ಹೊಂದಿರುವ ಮೊಬೈಲ್‌ ಇದ್ದವರೂ ಸಹ, ಕೊನೆಯ ಪಕ್ಷ 5 ಜಿಬಿ ಆಂತರಿಕ ಸಂಗ್ರಹ ಉಳಿಯುವಂತೆ ತಮ್ಮ ಮೊಬೈಲನ್ನು ಮ್ಯಾನೇಜ್‌ ಮಾಡಬೇಕು. ಅನಗತ್ಯವಾದ ಆ್ಯಪ್‌ಗ್ಳನ್ನು ಹಾಕಿಕೊಳ್ಳಬಾರದು. ಪ್ಲೇ ಸ್ಟೋರ್‌ನಲ್ಲಿರುವ ಆ್ಯಪ್‌ಗ್ಳನ್ನಷ್ಟೇ ಹಾಕಿಕೊಳ್ಳಬೇಕು. ಇಲ್ಲಿಯೂ ಕೆಟ್ಟ ಆ್ಯಪ್‌ಗ್ಳಿರುತ್ತವೆ ಅಂಥವನ್ನು ಬಳಸಬಾರದು. ಅಲ್ಲದೇ ಎಪಿಕೆ ಆ್ಯಪ್‌ಗ್ಳನ್ನಂತೂ ಇನ್ಸಾ$rಲ್‌ ಮಾಡಲೇಬಾರದು. ಪ್ಲೇ ಸ್ಟೋರ್‌ ಹೊರತುಪಡಿಸಿ, ಅನಧಿಕೃತ ಮೂಲಗಳಿಂದ ಡೌನ್‌ಲೋಡ್‌ ಮಾಡಿಕೊಳ್ಳುವ ಆ್ಯಪ್‌ಗ್ಳನ್ನು ಎಪಿಕೆ ಅಪ್ಲಿಕೇಷನ್‌ಗಳೆನ್ನುತ್ತಾರೆ. ಕೆಲವರು  ಬಳಸಲಿ ಬಿಡಲಿ, ಸಿಕ್ಕ ಸಿಕ್ಕ ಆ್ಯಪ್‌ಗ್ಳನ್ನು  ಇನ್‌ಸ್ಟಾಲ್‌ ಮಾಡಿಕೊಳ್ಳುತ್ತಾರೆ.  ಅವುಗಳಲ್ಲಿ ಯಾವ್ಯಾವುದೋ ಜಾಹೀರಾತುಗಳು ತುಂಬಿ ಆ್ಯಪ್‌ ಓಪನ್‌ ಮಾಡಿದಾಗ ಠಕ್ಕನೆ ತೆರೆದುಕೊಳ್ಳುತ್ತವೆ. ಫೋನ್‌ನ ಕಾರ್ಯಕ್ಷಮತೆಯನ್ನೇ ಹಾಳುಮಾಡುತ್ತವೆ. ಹಾಗಾಗಿ ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಆ್ಯಪ್‌ಗ್ಳನ್ನಷ್ಟೇ ಡೌನ್‌ಲೋಡ್‌ ಮಾಡಿಕೊಳ್ಳಿ.

ಆ್ಯಪ್‌ನ ಕ್ಯಾಶೆ (ಕ್ಯಾಶ್‌) ಕ್ಲಿಯರ್‌ ಮಾಡಿ: ನೀವು ಬಳಸುವ ಆ್ಯಪ್‌ಗ್ಳಲ್ಲಿ ಬಳಸಿದಷ್ಟೂ ಡಾಟಾ ವಿವರಗಳು ಶೇಖರವಾಗುತ್ತಾ ಹೋಗುತ್ತವೆ. ಇದೊಂಥರಾ ನಮ್ಮ ಟೇಬಲ್‌ ಮೇಲೆ ಪೇಪರ್‌, ಪೆನ್ನು, ಪುಸ್ತಕ, ಮೊಬೈಲು ಅಲ್ಲದೇ, ಬೇಡವಾದ ವಸ್ತುಗಳೆಲ್ಲಾ ಇಟ್ಟಿರುತ್ತೇವಲ್ಲಾ ಹಾಗೆ.   ಈ ಡಾಟಾ ಸಂಗ್ರಹ, ಆ್ಯಪ್‌ಗ್ಳ ಸ್ಟೋರೇಜ್‌ನಲ್ಲಿರುತ್ತದೆ. ಡಾಟಾ ಹೆಚ್ಚು ಸಂಗ್ರಹವಾದಂತೆಲ್ಲ ಆ ಆ್ಯಪ್‌ ಕೆಲಸ ಮಾಡುವುದು ನಿಧಾನವಾಗುತ್ತದೆ. ಗೂಗಲ್‌ ಪ್ಲೇ ಸ್ಟೋರ್‌ ಆ್ಯಪ್‌ ಒಮ್ಮೊಮ್ಮೆ ಹೊಸ ಆ್ಯಪ್‌ಗ್ಳನ್ನು ಡೌನೊÉàಡ್‌ ಮಾಡುವುದೇ ಇಲ್ಲದಂತಾಗುತ್ತದೆ. ಈ ಸಮಸ್ಯೆ ನಿವಾರಣೆಯಾಗಬೇಕಾದರೆ ಹೀಗೆ ಮಾಡಿ. ನಿಮ್ಮ ಫೋನ್‌ ಸೆಟ್ಟಿಂಗ್‌ಗೆ ಹೋಗಿ. ಅದರಲ್ಲಿ ಆ್ಯಪ್ಸ್‌  ಎಂಬಲ್ಲಿಗೆ ಬನ್ನಿ.ಅದನ್ನು ಒತ್ತಿ. ಆ್ಯಪ್‌ಗ್ಳ ವಿವರ ಬರುತ್ತದೆ. ನೀವು ಡಾಟಾ ಕ್ಲಿಯರ್‌ ಮಾಡಬೇಕೆಂದುಕೊಂಡಿರುವ ಆ್ಯಪ್‌ನ ಮೇಲೆ ಒತ್ತಿ. ಆಗ ಅದರಲ್ಲಿ ನೊಟಿಫಿಕೇಷನ್‌ ಮ್ಯಾನೇಜ್‌ಮೆಂಟ್‌, ಪರ್‌ಮಿಷನ್‌, ಡಾಟಾ ಯೂಸೇಜ್‌ ಸ್ಟೋರೇಜ್‌ ಅಂತೆಲ್ಲಾ ಇರುತ್ತದೆ. ಅದರಲ್ಲಿ ಸ್ಟೋರೇಜ್‌ ಆಯ್ಕೆ ಮಾಡಿ. ಅದರಲ್ಲಿ ಕ್ಲಿಯರ್‌ ಡಾಟಾ, ಕ್ಲಿಯರ್‌ ಕ್ಯಾಶೆ (ಅಥವಾ ಕ್ಯಾಶ್‌) ಎಂದಿರುತ್ತದೆ. ಅದನ್ನು ಕ್ಲಿಯರ್‌ ಮಾಡಿ. ಹೀಗೆ ಮಾಡಿದರೆ ಆ ಆ್ಯಪ್‌ ಹೊಸದರಂತಾಗುತ್ತದೆ. ನೆನಪಿಡಿ, ಕ್ಲಿಯರ್‌ ಡಾಟಾ ಒತ್ತಿದರೆ ಆ ಆ್ಯಪ್‌ನಲ್ಲಿದ್ದ ಪಾಸ್ವರ್ಡ್‌, ಸೇರಿದಂತೆ ಇನ್ನಿತರ ವಿವರಗಳೆಲ್ಲವೂ ಅಳಿಸಿಹೋಗುತ್ತವೆ. ಅವೆಲ್ಲವನ್ನೂ ನೆನಪಿನಲ್ಲಿಟ್ಟುಕೊಂಡು ಮತ್ತೆ ಹೊಂದಿಸಿಕೊಳ್ಳಿ. ಅನೇಕ ಫೋನ್‌ಗಳಲ್ಲಿ ಫೋನ್‌ ಮ್ಯಾನೇಜರ್‌ ಎಂಬ ಆ್ಯಪ್‌ ಇರುತ್ತದೆ.  ಇದನ್ನು ಬಳಸಿದರೆ ಒಂದಷ್ಟು ಅನುಕೂಲವಿದೆ.

ಆ್ಯಪ್‌ಗ್ಳನ್ನು ಅಪ್‌ಡೇಟ್‌ ಮಾಡಿಕೊಳ್ಳಿ: ಗೂಗಲ್‌ ಪ್ಲೇ ಸ್ಟೋರ್‌ ಆ್ಯಪ್‌ಗೆ ಹೋಗಿ. ಅದರಲ್ಲಿ, ಮೇಲೆ ಎಡಕ್ಕೆ ಮೂರು ವಿಭೂತಿ ಪಟ್ಟೆಯಂತಿರುವ ಗೆರೆಗಳಿವೆ, ಅದನ್ನು ಒತ್ತಿದರೆ ಮೊದಲನೆಯ ಆಯ್ಕೆ ಮೈ ಆ್ಯಪ್ಸ್‌ ಅಂಡ್‌ ಗೇಮ್ಸ್‌  ಅಂತ ಬರುತ್ತದೆ. ಅದನ್ನು ಒತ್ತಿದರೆ ಕೆಳಗೆ ನಿಮ್ಮ ಮೊಬೈಲ್‌ನಲ್ಲಿರುವ ಎಲ್ಲ ಆ್ಯಪ್‌ಗ್ಳ ವಿವರ ಇದೆ. ಮೇಲೆ ಅಪ್‌ಡೇಟ್‌ ಆಲ್‌ ಅಂತ ಇರುತ್ತದೆ. ಅದನ್ನು ಕ್ಲಿಕ್‌ ಮಾಡಿ, ನಿಮ್ಮ ಮೊಬೈಲ್‌ನಲ್ಲಿರುವ ಎಲ್ಲ ಆ್ಯಪ್‌ಗ್ಳೂ ಒಂದೊಂದಾಗಿ ಅಪ್‌ಡೇಟ್‌  ಆಗುತ್ತವೆ. ಇದಕ್ಕೆ 15 ನಿಮಿಷಗಳಿಗಿಂತಲೂ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ನಿಮ್ಮ ಮೊಬೈಲ್‌ ಡಾಟಾ ಆನ್‌ನಲ್ಲೇ ಬಿಟ್ಟು ಬೇರೆ ಕೆಲಸ ಮಾಡುತ್ತಿರಿ. 

ಮೆಮೊರಿ ಕಾರ್ಡ್‌ ಬಳಸಬೇಡಿ: ಸ್ಮಾರ್ಟ್‌ ಫೋನ್‌ಗಳಿಗೆ ಮೆಮೊರಿ ಕಾರ್ಡ್‌ (ಎಸ್‌ಡಿ ಕಾರ್ಡ್‌) ಬಳಸಬೇಡಿ ಎಂಬುದು ನನ್ನ ಅನುಭವದ ಆಧಾರದ ಮೇಲಿನ ಸಲಹೆ. ಮೊಬೈಲ್‌ ತಂತ್ರಜ್ಞರು, ಮೊಬೈಲ್‌ ಕಂಪೆನಿಗಳು ಸಹ ಮೆಮೊರಿ ಕಾರ್ಡ್‌ ಬಳಸದಂತೆ ತಮ್ಮ ಬ್ಲಾಗ್‌ಗಳಲ್ಲಿ ಸೂಚಿಸುತ್ತವೆ. ಮೆಮೊರಿ ಕಾರ್ಡ್‌ ಹಾಕಿದರೆ ಎರಡು ರೀತಿಯ ಸಮಸ್ಯೆ. ಮೊದಲನೆಯದು ನಿಮ್ಮ ಫೋಟೋ, ವಿಡಿಯೋ, ಹಾಡು ಮೆಮೊರಿ ಕಾರ್ಡ್‌ನಲ್ಲಿದ್ದರೆ ಅದರಲ್ಲಿರುವುದನ್ನು ಪ್ಲೇ ಮಾಡಬೇಕಾದರೆ, ನಿಮ್ಮ ಫೋನ್‌ನ ಕಾರ್ಯಾಚರಣೆ ವ್ಯವಸ್ಥೆ, ಫೋನ್‌ ನಿಂದ ಹೊರಗಿರುವ ಮೆಮೊರಿ ಕಾರ್ಡ್‌ ಜೊತೆ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಬೇಕು. ಆ ಮೆಮೊರಿ ಕಾರ್ಡ್‌ನಲ್ಲಿ ಸ್ಪೀಡ್‌ ಇಲ್ಲವಾದರೆ, ಅದು ಉತ್ತಮ ಮೆಮೊರಿ ಕಾರ್ಡ್‌ ಅಲ್ಲವಾದರೆ ನಿಮ್ಮ ಫೋನ್‌ ಈ ಎಲ್ಲ ಪ್ರಕ್ರಿಯೆ ಮಾಡಲು ತಡವಾಗುತ್ತದೆ. ಇನ್ನು ಮೆಮೊರಿ ಕಾರ್ಡ್‌ನಲ್ಲಿ ದೋಷ ಕಂಡು ಬಂದರೆ, ಅದಕ್ಕೆ ವೈರಸ್‌ ದಾಳಿ ಮಾಡಿದರೆ, ಅದೊಂದು ಮೆಮೊರಿ ಕಾರ್ಡು ನಿಮ್ಮ ಫೋನನ್ನೇ ಹಾಳು ಮಾಡಿಬಿಡುತ್ತದೆ. ಆದ್ದರಿಂದ ಎಸ್‌ಡಿ ಕಾರ್ಡ್‌ ಬಳಸದಿರುವುದು ಸೂಕ್ತ. ಒನ್‌ಪ್ಲಸ್‌ ಕಂಪೆನಿ ಅದಕ್ಕೆಂದೇ ತನ್ನ ಫೋನ್‌ಗಳಲ್ಲಿ ಮೆಮೊರಿ ಕಾರ್ಡ್‌ ಹಾಕಿಕೊಳ್ಳುವ ಸೌಲಭ್ಯವನ್ನೇ ನೀಡಿಲ್ಲ. ಅನೇಕ ಕಂಪೆನಿಗಳು ಈಗ ಅದನ್ನೇ ಅಳವಡಿಸಿಕೊಳ್ಳುತ್ತಿವೆ.  64 ಜಿಬಿ ಆಂತರಿಕ ಸಂಗ್ರಹ ಇರುವ ಫೋನ್‌ ಕೊಂಡರೆ ಮೆಮೊರಿ ಕಾರ್ಡ್‌ ಬಳಸುವ ಅಗತ್ಯವೇ ಬೀಳುವುದಿಲ್ಲ. ಆದ್ದರಿಂದ 64 ಜಿಬಿಗಿಂತ ಹೆಚ್ಚು ಆಂತರಿಕ ಸಂಗ್ರಹದ ಫೋನ್‌ ಕೊಳ್ಳಿ. ಹೆವಿ ಯೂಸೇಜ್‌ ಇಲ್ಲದಿದ್ದರೆ 32 ಜಿಬಿ ಸಂಗ್ರಹದ ಫೋನ್‌ ಕೂಡ ಸಾಕು.
ಬ್ಯಾಟರಿ ಹೆಚ್ಚು ಕಾಲ ಉಳಿಯಬೇಕೆಂದರೆ, ನಿಮ್ಮ ಮೊಬೈಲ್‌ಡಾಟಾ, ವೈಫೈ, ಹಾಟ್‌ಸ್ಪಾಟ್‌, ಲೊಕೇಷನ್‌ ಇತ್ಯಾದಿಗಳನ್ನು ಬಳಸದಿದ್ದಾಗ ಆಫ್ ಮಾಡಿ. ನೀವು ಮೊಬೈಲ್‌ ಬಳಸದಿರುವಾಗ ಇವೆಲ್ಲ ಆನ್‌ ನಲ್ಲಿದ್ದರೆ ಬ್ಯಾಟರಿ ತಿನ್ನುತ್ತವೆ.

- ಕೆ.ಎಸ್‌. ಬನಶಂಕರ ಆರಾಧ್ಯ


Trending videos

Back to Top