CONNECT WITH US  

ಕ್ಯಾಂಪಸ್ಸಿಗೆ ಬಂದಿದ್ದ ಕಿರಿಕ್‌ ಪಾರ್ಟಿ

ಕಾರಿಡಾರಿಗೆ ಕ್ಯಾಮೆರಾ ಬಂದಾಗ...

ಸಿನಿಮಾದ ಒಂದೆರಡು ದೃಶ್ಯಗಳಲ್ಲಿ ಪಾತ್ರಧಾರಿಗಳಾಗಿದ್ದ ಕೆಲ ವಿದ್ಯಾರ್ಥಿಗಳು ಚಿತ್ರದ ಟ್ರೇಲರ್‌ನಲ್ಲೂ ಇಣುಕಲಾರಂಭಿಸಿದ ಮೇಲೆ, ಅವರ ಗುರುತಿಸಿಕೊಳ್ಳುವಿಕೆಗೆ ಹೊಸ ಹೊಳಪು ದೊರೆಯಿತು. ಕೆಲವರಂತೂ, ನಿಮ್‌ ಫಿಲಂ ರಿಲೀಸ್‌ ಯಾವಾಗ ಆಗುತ್ರಪ್ಪ ಅಂತ ವಿಚಾರಿಸುವ ನೆವದಲ್ಲಿ ಅವರನ್ನು ರೇಗಿಸಲು ಶುರುವಿಟ್ಟುಕೊಂಡಿದ್ದರು. 

ಆರೇಳು ತಿಂಗಳ ಹಿಂದೆ "ರಕ್ಷಿತ್‌ ಶೆಟ್ಟಿ ನೆಕ್ಸ್ಟ್ ಫಿಲಂ ಶೂಟಿಂಗು ನಮ್‌ ಕಾಲೇಜಲ್ಲೇ ಆಗುತ್ತಂತೆ' ಎಂಬ ಅಂತೆ ಕಂತೆಗೆ, ಕಾಲೇಜು ಕ್ಯಾಂಪಸ್ಸಿಗೆ ಚಿತ್ರ ತಂಡ ಕ್ಯಾರವಾನು ಮತ್ತಿತರೆ ಸಲಕರಣೆಗಳೊಂದಿಗೆ ಬಂದು ಬೀಡು ಬಿಡುವುದರೊಂದಿಗೆ ತೆರೆ ಬಿದ್ದಿತ್ತು. ತೆರೆಯ ಮೇಲೆ ಸಿನಿಮಾ ನೋಡುವುದಕ್ಕಷ್ಟೆ ತಮ್ಮ ಸಿನಿ ವ್ಯಾಮೋಹವನ್ನು ಸೀಮಿತಗೊಳಿಸಿಕೊಂಡಿದ್ದವರಿಗೆಲ್ಲ, ಸಿನಿಮಾ ಕುರಿತ ತಮ್ಮ ಅರಿವನ್ನು ಮತ್ತಷ್ಟು ವಿಸ್ತರಿಸಿಕೊಳ್ಳುವ ಉಮೇದು ಜಾಗೃತಗೊಂಡಿತು. ಕಾಲೇಜಿನ ವಿದ್ಯಾರ್ಥಿಗಳು ಸಿಬ್ಬಂದಿಯನ್ನೊಳಗೊಂಡಂತೆ ಕ್ಯಾಂಪಸ್ಸಿನಲ್ಲಿ ಅಡ್ಡಾಡುವವರೆಲ್ಲರೂ ಸಿನಿಮಾ ಚಿತ್ರೀಕರಣ ಹೇಗೆ ಜರುಗುತ್ತದೆಂಬ ಕೌತುಕವನ್ನು ಕಣ್ಣಾರೆ ನೋಡುವ ಹುರುಪಿನೊಂದಿಗೆ ಶುರುವಿನಲ್ಲಿ ಸಿನಿಮಾ ಚಿತ್ರೀಕರಣ ನಡೆಯುವ ಸ್ಥಳದಲ್ಲೇ ಠಿಕಾಣಿ ಹೂಡುತ್ತಿದ್ದರು. 

ಹಲವರು ತಮ್ಮ ಬಿಡುವಿನ ವೇಳೆಯನ್ನು ಸಿನಿಮಾ ಚಿತ್ರೀಕರಣ ವೀಕ್ಷಣೆಗೆಂದೇ ಮುಡಿಪಾಗಿಡಲು ಶುರುವಿಟ್ಟುಕೊಂಡರು. ನೋಡನೋಡುತ್ತಲೆ ಕಾಲೇಜು ವಿದ್ಯಾರ್ಥಿಗಳ ಫೇಸ್‌ಬುಕ್ಕು, ವಾಟ್ಸಾಪಿನ ಪೊ›ಫೈಲ್‌ ಪಿಕ್ಚರ್‌ಗಳು ಬದಲಾಗತೊಡಗಿದವು. ಸಿನಿಮಾ ಹೀರೊ ರಕ್ಷಿತ್‌ ಶೆಟ್ಟಿಯೊಂದಿಗೆ ತಾವು ತೆಗೆದುಕೊಂಡ ಸೆಲ್ಫಿಯನ್ನು ತಮ್ಮ ಪರಿಚಿತ ವಲಯಕ್ಕೆ ಪಸರಿಸುವ ಮೂಲಕ ತಾರೆಯೊಂದನ್ನು ಅಂಗೈಯಲ್ಲಿಡಿದುಕೊಂಡಂತೆ ಸಂಭ್ರಮಿಸಿದರು.

ವಾರಗಳು ಉರುಳಿದವು. ಸಿನಿಮಾ ಚಿತ್ರೀಕರಣವೂ ಒಂದೊಂದೇ ಹಂತ ದಾಟಿಕೊಂಡು ಸಾಂಗವಾಗಿ ಸಾಗುತ್ತಿತ್ತು. ಮೊದಮೊದಲಿಗೆ ಅಪರಿಮಿತ ಉತ್ಸಾಹದೊಂದಿಗೆ ಸಿನಿಮಾ ಶೂಟಿಂಗ್‌ ನೋಡಲು ದಾಂಗುಡಿ ಇಡುತ್ತಿದ್ದವರಲ್ಲಿ ಹಲವರು, "ಅಯ್ಯೋ ಮಾಡಿದ್ದನ್ನೇ ದಿನಪೂರ್ತಿ ಮಾಡ್ತಿರ್ತಾರೆ. ಅದೆ°àನು ನೋಡೋದು?' ಅಂತ ಗೊಣಗುವ ಮಟ್ಟಿಗೆ ಆಸಕ್ತಿ ಕಳೆದುಕೊಂಡರು. ಕಡೆಗೆ ಸಿನಿಮಾ ಮಂದಿಯನ್ನು ಅವರ ಪಾಡಿಗೆ ಅವರು ಕೆಲಸ ಮಾಡಿಕೊಳ್ಳಲು ಬಿಟ್ಟು, ಇವರೂ ತಮ್ಮ ಪಾಲಿನ ಕೆಲಸದತ್ತ ಗಮನ ಹರಿಸಲಾರಂಭಿಸಿದರು.

"ಕಿರಿಕ್‌ ಪಾರ್ಟಿ' ಹೆಸರಿನ ಚಿತ್ರದ ಚಿತ್ರೀಕರಣ ಹಾಸನದ ಇಂಜಿನಿಯರಿಂಗ್‌ ಕಾಲೇಜಿನಲ್ಲೇ ಜರುಗುತ್ತಿದೆ ಎಂಬ ಸುದ್ದಿ ಹೊರ ಜಗತ್ತಿಗೂ ಹಬ್ಬಿದ್ದೇ ತಡ, ಮಲಾ°ಡು ಕಾಲೇಜಿನೊಂದಿಗೆ ನಂಟು ಹೊಂದಿದ್ದವರೆಲ್ಲರೂ, "ಓಹ್‌... ನಮ್‌ ಕಾಲೇಜಲ್ಲಿ ಶೂಟಿಂಗ್‌ ಮಾಡ್ತಾವ್ರ?!' ಅಂತ ಹುಬ್ಬೇರಿಸಿದರು.

ಸಿನಿಮಾ ಚಿತ್ರೀಕರಣವನ್ನು ಮೊದಲ ಬಾರಿಗೆ ನೋಡಿದ ಹಲವರಿಗೆ, ಸಿನಿಮಾವೆಂದರೆ ತಾವು ತೆರೆಯ ಮೇಲೆ ನೋಡುವುದಷ್ಟೇ ಅಲ್ಲ. ತೆರೆಯ ಹಿಂದಿನ ಕೆಲಸ ಕೆಲ ಸಿನಿಮಾಗಳಿಗಿಂತಲೂ ಪರಮ ಬೋರು ಹೊಡೆಸುವ ಸಂಗತಿ ಎಂಬ ಜಾnನೋದಯವೂ ಆಯಿತು. ಈ ನಡುವೆ ಕಾಲೇಜು ಕ್ಯಾಂಪಸ್ಸಿನಲ್ಲಿ ಅಡ್ಡಾಡಿಕೊಂಡಿದ್ದ ಕೆಲವು ಮುಖಗಳಿಗೆ ಒಂದೆರಡು ಸೀನುಗಳಲ್ಲಿ ಕಾಣಿಸಿಕೊಳ್ಳುವ ಸದಾವಕಾಶವೂ ಒಲಿಯಿತು. ಬಹುತೇಕ ಒಂದು ಸೆಮಿಸ್ಟರ್‌ ಪೂರ್ತಿ ಕಾಲೇಜು ಕ್ಯಾಂಪಸ್ಸನ್ನು ಆವರಿಸಿಕೊಂಡಿದ್ದ "ಕಿರಿಕ್‌ ಪಾರ್ಟಿ' ಅಮಲು, ಚಿತ್ರೀಕರಣ ಪೂರ್ಣಗೊಳ್ಳುವುದರೊಂದಿಗೆ ತಕ್ಕಮಟ್ಟಿಗೆ ಇಳಿದು ಹೋಯಿತು.

ಮತ್ತೆ ಚಿತ್ರದ ಟ್ರೇಲರ್‌ ಬಿಡುಗಡೆಯಾಗುವುದರೊಂದಿಗೆ ಇಳಿದಿದ್ದ ಅಮಲು ಏರಲಾರಂಭಿಸಿತು. ಸಿನಿಮಾದ ಒಂದೆರಡು ದೃಶ್ಯಗಳಲ್ಲಿ ಪಾತ್ರಧಾರಿಗಳಾಗಿದ್ದ ಕೆಲ ವಿದ್ಯಾರ್ಥಿಗಳು ಚಿತ್ರದ ಟ್ರೇಲರ್‌ನಲ್ಲೂ ಇಣುಕಲಾರಂಭಿಸಿದ ಮೇಲೆ, ಅವರ ಗುರುತಿಸಿಕೊಳ್ಳುವಿಕೆಗೆ ಹೊಸ ಹೊಳಪು ದೊರೆಯಿತು. ಕೆಲವರಂತೂ, ನಿಮ್‌ ಫಿಲಂ ರಿಲೀಸ್‌ ಯಾವಾಗ ಆಗುತ್ರಪ್ಪಅಂತ ವಿಚಾರಿಸುವ ನೆವದಲ್ಲಿ ಅವರನ್ನು ರೇಗಿಸಲು ಶುರುವಿಟ್ಟುಕೊಂಡಿದ್ದರು.

ದೂರದೂರಿನಲ್ಲಿರುವ ಸ್ನೇಹಿತ ಒಮ್ಮೆ, "ಕಿರಿಕ್‌ ಪಾರ್ಟಿ ಶೂಟಿಂಗು ನಿಮ್‌ ಕಾಲೇಜಲ್ಲೇ ಆಯ್ತಂತೆ. ಹೌದಾ?' ಅಂತ ವಿಚಾರಿಸಿದ. "ಹೌದು, ಇಲ್ಲೇ ಶೂಟಿಂಗ್‌ ಮಾಡ್ಕೊಂಡು ಹೋಗವೆÅ' ಅಂದೆ. "ಮತ್ತೆ ರಕ್ಷಿತ್‌ ಶೆಟ್ಟಿ ಜೊತೆ ಫೋಟೊ ತೆಗುಸ್ಕೊಂಡಾ?' ಅಂತ ಪ್ರಶ್ನಿಸಿದ. ಇಲ್ಲಪ್ಪ ಎಂದೆ. "ಅಯ್ಯೋ... ಎಂಥ ಒಳ್ಳೆ ಛಾನ್ಸ್‌ ಮಿಸ್‌ ಮಾಡ್ಕೊಂಡಿದೀಯಾ ನೋಡು ನೀನು. ನಾನಾಗಿದ್ರೆ ಫೋಟ ತೆಗುಸ್ಕೋತಿದ್ದೆ' ಅಂತನ್ನುವ ಮೂಲಕ ಸಿನಿಮಾ ನಟರ ಕುರಿತು ತನಗಿರುವ ಅಭಿಮಾನ ಅಥವಾ ಬೆರಗಿನ ಪರಿಚಯ ಮಾಡಿಕೊಟ್ಟ.

ಟ್ರೇಲರ್‌ ಮೂಲಕವೇ ಮತ್ತೆ ನಮ್ಮದಾಗುತ್ತಲೇ ಹೋದ ಸಿನಿಮಾ ಕೊನೆಗೂ ಬಿಡುಗಡೆಗೊಂಡಿತು. ಶೂಟಿಂಗ್‌ ಶುರುವಾದ ಸಂದರ್ಭದಲ್ಲಿ ಚಿತ್ರದ ನಾಯಕನೊಟ್ಟಿಗೆ ತಾವು ತೆಗೆದುಕೊಂಡಿದ್ದ ಫೋಟೊವನ್ನು ಮತ್ತೂಮ್ಮೆ ತಮ್ಮ ಫೇಸ್‌ಬುಕ್ಕು, ವಾಟ್ಸಾಪು ಪೊ›ಫೈಲಿಗೆ ಹಾಕಿಕೊಂಡ ಕೆಲವರು, "ಕಿರಿಕ್‌ ಪಾರ್ಟಿ' ನಮ್ಮ ಸಿನಿಮಾ ಕೂಡ ಹೌದು. ಹೋಗಿ ನೋಡ್ಕೊಂಡ್‌ ಬನ್ನಿ ಎನ್ನುವ ಸಂದೇಶ ರವಾನಿಸಿದರು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಲಾರಂಭಿಸಿದ ಮೇಲೆ, "ನಿಮ್‌ ಕಾಲೇಜಲ್ಲೇ ಶೂಟಿಂಗ್‌ ಆದ್ರೂ ಇನ್ನೂ ಫಿಲಂ ನೋಡಿಲ್ವಾ?' ಎನ್ನುವ ಅಪಸ್ವರ, ಮೊದಲ ದಿನವೇ ಸಿನಿಮಾ ನೋಡಬೇಕೆಂಬ ಉಮೇದು ಕಾಯ್ದುಕೊಳ್ಳದ ನನ್ನಂಥವರ ವಿರುದ್ಧ ಮೊಳಗಿತು.

ನಮ್ಮೂರಿನ ಥಿಯೇಟರ್‌ನಲ್ಲಿ ಬ್ಲ್ಯಾಕ್‌ ಟಿಕೆಟ್‌ ಓಡುವುದು ನಿಂತ ಮೇಲೆ ನಾವೂ ಪರೋಕ್ಷವಾಗಿ ನಮ್ಮದೇ ಆಗಿದ್ದ ಸಿನಿಮಾ ನೋಡಿಕೊಂಡು ಬಂದೆವು.

- ಎಚ್‌. ಕೆ. ಶರತ್‌, ಹಾಸನ

Trending videos

Back to Top