CONNECT WITH US  

ಎಲ್ಲೇ ಇರು, ಹೇಗೇ ಇರು ಎಂದೆಂದೂ ಮನದಲ್ಲಿ...

ಎರಡು ವರ್ಷ ಜೊತೆಗೂಡಿ ಕನಸಿನ ಮನೆ ಕಟ್ಟಿದ್ದ ನಾವು ಇಂದು ಎದುರಿಗೆ ಸಿಕ್ಕರೆ ಅಪರಿಚಿತರು. ಪ್ರೀತಿಯ ಹಕ್ಕಿ ಎದೆಯ ಗೂಡಲ್ಲಿ ಅವಿತಿದೆ. ಇಂದು ನಿನ್ನ ಕನಸುಗಳಲ್ಲಿ ನಾನಿರುವೆನೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಕನವರಿಕೆಯಲ್ಲಿ ನೀನಿರುವೆ ಗೆಳೆಯಾ... 

ಗೆಳೆಯಾ,
ನಿನ್ನೊಂದಿಗೆ ಕಳೆದ ಆ ಕ್ಷಣಗಳು ಇಂದಿಗೂ ಕಣ್ಣೆದುರಿಗೇ ಇವೆ. ನಾನು ಅತ್ತಾಗಲೆಲ್ಲಾ ಕಣ್ಣೀರೊರೆಸಿ ನೀನು ಧೈರ್ಯ ತುಂಬಿದ ಕ್ಷಣಗಳನ್ನು ಹೇಗೆ ಮರೆಯಲಿ ಹೇಳು? ಮರೆತು ಹೋಗುವಂಥ ನೆನಪುಗಳಲ್ಲ ನೀನು ನನಗೆ ಕೊಟ್ಟಿದ್ದು. ನೀನಾಡಿದ ಪ್ರೀತಿಯ ಮಾತು, ಬೈಗುಳ ಇದಾವುದನ್ನೂ ನಾನು ಮರೆತಿಲ್ಲ. ಮಗಾ... ಚಿನ್ನು.. ಪುಟ್ಟಾ... ಎಂಬ ಮಾತು ಇನ್ನೂ ಕಿವಿಯಲ್ಲಿ ಗುನುಗುತ್ತಿದೆ. ನಾವಿಬ್ಬರೂ ಪ್ರೀತಿಯಿಂದ ಮಾತಾಡಿ ಅದೆಷ್ಟೋ ದಿನಗಳೇ ಆಯಿತು. ಈ ಮೊದಲು, ಒಂದು ದಿನ ಕೂಡ ನಿನ್ನನ್ನು ಬಿಟ್ಟಿರಲು ಕಷ್ಟ ಎನ್ನುತ್ತಿದ್ದವನು, ಈಗ ತಿಂಗಳಾಗುತ್ತ ಬಂತು ನನ್ನ ಬಳಿ ಮಾತಾಡದೆ. ಈಗೀಗ ನನಗೂ ನೀನು ಮಾಡುವುದೇ ಸರಿ, ನಾನು ಮಾಡುವುದೆಲ್ಲ ತಪ್ಪು ಅನಿಸುತ್ತಿದೆ. ನಾನೇ ಸರಿ ಇಲ್ಲ ಎಂಬ ಭಾವನೆ ಚುಚ್ಚುತ್ತಿದೆ ನನ್ನನ್ನು.

ನನ್ನೆಲ್ಲ ನೋವುಗಳನ್ನು ನಿನ್ನೊಂದಿಗೆ ಹಂಚಿಕೊಳ್ಳುವ ಅವಕಾಶವಿತ್ತು. ಆದರೆ, ನೀನೇ ನೋವು ಕೊಟ್ಟಾಗ ಅದನ್ನು ಯಾರೊಂದಿಗೆ ಹಂಚಿಕೊಳ್ಳಲಿ? ಎರಡು ವರ್ಷ ಜೊತೆಗೂಡಿ ಕನಸಿನ ಮನೆ ಕಟ್ಟಿದ್ದ ನಾವು ಇಂದು ಎದುರಿಗೆ ಸಿಕ್ಕರೆ ಅಪರಿಚಿತರು! ಪ್ರೀತಿಯ ಹಕ್ಕಿ ಎದೆಯ ಗೂಡಲ್ಲಿ ಅವಿತಿದೆ. ಇಂದು ನಿನ್ನ ಕನಸುಗಳಲ್ಲಿ ನಾನಿರುವೆನೋ ಇಲ್ಲವೋ ಗೊತ್ತಿಲ್ಲ. ಆದರೆ, ನನ್ನ ಕನವರಿಕೆಯಲ್ಲಿ ನೀನಿರುವೆ ಗೆಳೆಯಾ. ಕಟ್ಟಿಕೊಂಡ ಕನಸುಗಳು ನಂಬಿಕೆ ಕಳೆದುಕೊಂಡು ಬೆತ್ತಲಾದರೂ ಜೀವನ ನಡೆಸಬೇಕಾದ ಅನಿವಾರ್ಯ ನನಗಿದೆ.

ನಿನಗೆ ನೆನಪಿರಬೇಕು, ನಿನ್ನ ಸಿಟ್ಟು ಒಂದಲ್ಲ ಒಂದು ದಿನ ನಮ್ಮಿಬ್ಬರನ್ನು ಬೇರೆ ಮಾಡುತ್ತದೆ ಎಂದು ನಾನು ಅಂದೊಮ್ಮೆ ಹೇಳಿದ್ದೆ. ಈಗ ಆಗಿರುವುದೂ ಅದೇ ಅಲ್ಲವೇ? ನಿನ್ನ ಜಾಗದಲ್ಲಿ ಬೇರೆ ಯಾರನ್ನೂ ಕಲ್ಪಿಸಿಕೊಳ್ಳಲು ಈ ಮನಸ್ಸು ಒಪ್ಪುವುದಿಲ್ಲ. ಮನೆಯವರ ಒತ್ತಾಯಕ್ಕೆ, ಬದುಕಿನ ಅನಿವಾರ್ಯತೆಯ ಕಾರಣದಿಂದ ಬೇರೆಯವರು ಬರಬಹುದೇ ವಿನಃ ನಾನಾಗಿಯೇ ಯಾರನ್ನೂ ಮನಸ್ಸಿಗೆ ತಂದುಕೊಳ್ಳುವುದಿಲ್ಲ.

ನಿನಗೆ ನನ್ನ ಮೇಲಿನ ಪ್ರೀತಿಗಿಂತ ಅನುಮಾನವೇ ಜಾಸ್ತಿ ಆಗಿತ್ತು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದಕ್ಕಿಂತ ಪರಸ್ಪರರನ್ನು ದೂರುವುದರಲ್ಲೇ ಹೆಚ್ಚು ಸಮಯ ಕಳೆದೆವು. ನಿನಗೆ ನನ್ನ ತಪ್ಪು ಹುಡುಕುವುದರಲ್ಲೇ ಆನಂದ ಸಿಗುತ್ತಿತ್ತೋ ಏನೋ! ಆಗ ನಿನ್ನ ಕಣ್ಣುಗಳನ್ನು ಕಂಡಾಗ ಭಯವಾಗುತ್ತಿತ್ತು.
ನಮ್ಮಿಬ್ಬರ ಜಗಳಗಳೂ ಮಿತಿ ಮೀರಿಬಿಟ್ಟವು. ಅರಳಬೇಕಿದ್ದ ಗುಲಾಬಿ, ಬಾಡಿ ಹೋಯಿತು!

ಹೋಗ್ಲಿ ಬಿಡು... ಆಗಿದ್ದೆಲ್ಲ ಆಯಿತು. ಮುಂದೆ ನಿನ್ನ ಜೀವನದಲ್ಲಿ ಬರುವವಳ ಮೇಲಾದರೂ ನಂಬಿಕೆ ಇಡು. ನೀ ಹೇಗಿದ್ದರೂ, ಯಾರ ಜೊತೆ ಇದ್ದರೂ ನಿನ್ನ ಖುಷಿಯನ್ನೇ ಬಯಸುವವಳು ನಾನು. ನೆನಪಿಡು, ನಂಬಿಕೆಯೇ ಜೀವನ... 

ನಿನ್ನಿಂದ ಎಷ್ಟೇ ಬೈಸಿಕೊಂಡರೂ ನಿನ್ನ ನೆನಪುಗಳು ನನ್ನ ಸುತ್ತ ಸುತ್ತುತ್ತಲೇ ಗಿರಕಿ ಹೊಡೆಯುತ್ತಿವೆ. ಕ್ಷಮಿಸು. ಒಂದು ಸಲ, ಒಂದೇ ಒಂದು ಸಲ ನಿನ್ನ ಧ್ವನಿ ಕೇಳಬೇಕೆಂದು ಅನ್ನಿಸುತ್ತಿದೆ. ಒಂದು ಸಲ ನಿನ್ನ ನಗು ನೋಡಬೇಕೆಂದು ಹೃದಯ ಹಂಬಲಿಸಿದೆ. ನನ್ನ ಮರೆತು ನೀನು ಖುಷಿಯಾಗಿದ್ದೀಯ? ಒಮ್ಮೆ ಕೇಳು, ನಿನ್ನ ಹೃದಯದಲ್ಲಿ ಯಾರ ಗುರುತಿದೆ ಎಂದು...

ಮಿಸ್‌ ಯು ಬಂಗಾರು...

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top