ಬಿಸಿ ತರುಣ ಬೋಸ್‌


Team Udayavani, Jan 23, 2018, 3:09 PM IST

23-32.jpg

ಸ್ವಾತಂತ್ರ್ಯ ಗಂಗೆಗೆ ಸೇರಿದ ಸಾವಿರಾರು ತೊರೆಗಳಲ್ಲಿ ಒಂದು ಕ್ರಾಂತಿಕಾರಕ ಪ್ರವಾಹವೂ ಇತ್ತು. ಆ ಪ್ರವಾಹಕ್ಕೆ ಬುಡ ಸಮೇತ ಕೊಚ್ಚಿ ಹೋಗುತ್ತೇವೆಂಬ ಭಯದಲ್ಲೇ ಬ್ರಿಟಿಷರು ಹಗಲುರಾತ್ರಿ ನೆಮ್ಮದಿಗೆಟ್ಟು, ದಂಗಾಗಿ ಕುಳಿತಿದ್ದೆಲ್ಲ ಚರಿತೆ. ಬಿಸಿ ನೆತ್ತರ ತರುಣ ಸುಭಾಶ್‌ ಚಂದ್ರ ಬೋಸ್‌, ಪರಂಗಿಗಳನ್ನು ಕಾಡಿದ್ದೇ ಹಾಗೆ. 121ನೇ ಜನುಮದಿನದ ನೆಪದಲ್ಲಿ ನೇತಾಜಿ, ದೇಶದ ಯುವಕರ ಕಂಗಳಲ್ಲಿ ಕೋಲ್ಮಿಂಚಿನಂತೆ ಮೂಡುತ್ತಿದ್ದಾರೆ. ಅವರ ಕ್ಷಿಪ್ರ ಬದುಕಿನ ಪ್ರತಿ ಪುಟಗಳಲ್ಲೂ ಆದರ್ಶವೊಂದು ಅಚ್ಚಾಗಿದೆ. ಆ ನೆನಪನ್ನೆಲ್ಲ ಒಮ್ಮೆಲೇ ಹೆಕ್ಕುವುದಾದರೆ…

ಇಪ್ಪತ್ತನೇ ಶತಮಾನದ ಪ್ರಾರಂಭಕ್ಕೆ ಮೂರು ವರ್ಷಗಳಿದ್ದಾಗ ಹುಟ್ಟಿದ ಸುಭಾಶ್‌ ಚಂದ್ರ ಬೋಸ್‌, “ತೀರಿಕೊಂಡರು’ ಎಂದು ಹೇಳುವವರೆಗೆ ನಮ್ಮ ಕಣ್ಮುಂದೆ ಇದ್ದದ್ದು 48 ವರ್ಷ ಮಾತ್ರ. ಆದರೆ, ಆ ಅರ್ಧಾಯುಷ್ಯದಲ್ಲೇ ಅವರ ಸಾಧನೆ, ಏರಿದ ಎತ್ತರ ಅಸದೃಶ. ಬ್ರಿಟಿಷ್‌ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನರಾಗಿದ್ದವರು ಗಾಂಧಿ, ನೆಹರೂ ಅಲ್ಲವೇ ಅಲ್ಲ, ಅದು ಬೋಸ್‌ ಒಬ್ಬರೇ. ಸ್ವಾತಂತ್ರ್ಯ ಹೋರಾಟಗಾರರ ಪೈಕಿ ಅತಿಹೆಚ್ಚು, ಅಂದರೆ ಹತ್ತು ವರ್ಷಗಳ ಕಾಲ ಜೈಲಲ್ಲಿ ಕೂಡಿಹಾಕಲ್ಪಟ್ಟವರು ಬೋಸ್‌ ಎಂಬುದನ್ನು ನೋಡಿದರೆ, ಅವರು ಬ್ರಿಟಿಷರಿಗೆ ಅದೆಂಥ ತಲೆನೋವಾಗಿದ್ದರು ಎಂದು ಊಹಿಸಬಹುದು.

   ಹುಟ್ಟಿದ್ದು, ಅವಿಭಕ್ತ ಕುಟುಂಬದಲ್ಲಿ. ಸೋದರ- ಸೋದರಿಯರೇ 13 ಮಂದಿ. ಜೊತೆಗೆ ಚಿಕ್ಕಪ್ಪ- ದೊಡ್ಡಪ್ಪಂದಿರ ಸಂಸಾರಗಳು ಬೇರೆ! ಈಗ ಸಿಟಿಯಲ್ಲಿ ಸತ್ಯನಾರಾಯಣ ಪೂಜೆಗೆ ಸೇರುವಷ್ಟು ಮಂದಿ ಅವರ ಮನೆಯಲ್ಲಿ ನಿತ್ಯ ಊಟಕ್ಕಿರುತ್ತಿದ್ದರು. ಅಂಥ ಪರಿಸರದಲ್ಲಿ ಬೆಳೆದ ಬೋಸ್‌ ಅಂತರ್ಮುಖೀಯಾಗತೊಡಗಿದರು. ಆಗ ಅವರ ಕೈಹಿಡಿದದ್ದು ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರ ವಿಚಾರಧಾರೆ. ರಾಮಕೃಷ್ಣರು ಬೋಧಿಸಿದ ಬ್ರಹ್ಮಚರ್ಯದ ಮಾತುಗಳನ್ನು ಮೆಚ್ಚಿಕೊಂಡ ಬೋಸ್‌, ಶಾಲೆಯಲ್ಲಿದ್ದಾಗಲೇ ಸಮಾನಮನಸ್ಕರ ಗುಂಪು ಕಟ್ಟಿಕೊಂಡರು. ಆರೇಳು ಮಂದಿಯಿದ್ದ ಈ ಗುಂಪು ಯೋಗ, ಬ್ರಹ್ಮಚರ್ಯದ ಅಭ್ಯಾಸ ಮಾಡತೊಡಗಿತು. ಜೀವನದಲ್ಲಿ ಎಂದೂ ಸಂಪತ್ತು ಕೂಡಿಡಬಾರದು, ಚಿನ್ನಕ್ಕೆ ಮೋಹಪಡಬಾರದು ಎಂದು ಅವರೆಲ್ಲ ಪ್ರತಿಜ್ಞೆ ಮಾಡಿದ್ದರಂತೆ!

ಶಾಲೆಯ ಓದು ಮುಗಿಸಿ, ಪ್ರಸಿಡೆನ್ಸಿ ಕಾಲೇಜು ಸೇರಿದಾಗ ಬೋಸ್‌ರ ಧಮನಿಗಳಲ್ಲಿ ಬಿಸಿನೆತ್ತರ ಬುಗ್ಗೆ. ಪ್ರೊ. ಓಟನ್‌ ಎಂಬ ಪರಂಗಿ ಪ್ರೊಫೆಸರು, ಭಾರತೀಯ ವಿದ್ಯಾರ್ಥಿಯೊಬ್ಬನ ಮೇಲೆ ಅನ್ಯಥಾ ಆರೋಪ ಹೊರಿಸಿದರೆಂದು ಬೋಸ್‌ ಮೊದಲ ಬಾರಿ ಗಟ್ಟಿಯಾಗಿ ದನಿ ಎತ್ತಿದರು. ಯಃಕಶ್ಚಿತ್‌ ವಿದ್ಯಾರ್ಥಿ, ಅದೂ ಕಂದು ತೊಗಲಿನವನೊಬ್ಬ ಬಿಳಿ ತೊಗಲ ಪ್ರಾಧ್ಯಾಪಕನಿಗೆ ಎದುರು ಮಾತಾಡುವುದೆಂದರೇನು? ಜಗಳ ಹತ್ತಿತು. ಬೋಸ್‌ ಬಿಟ್ಟಾರೇ? “ಸುಳ್ಳು ಆರೋಪ ವಾಪಸ್‌ ಪಡೆಯಿರಿ, ಇಲ್ಲಾ ಕಾಲೇಜನ್ನೇ ಬರಖಾಸ್ತುಗೊಳಿಸುತ್ತೇವೆ’ ಎಂದು ಹಾಕಿಬಿಟ್ಟರಲ್ಲ ಧಮಕಿ! ಸುದ್ದಿ ಮಿಂಚಿನಂತೆ ಹಬ್ಬಿ ಇಡೀ ಕಾಲೇಜು ಮೂರು ದಿನ ಮಸಣದಂತೆ ಭಣಗುಟ್ಟಿತು. ನಾಲ್ಕನೇ ದಿನ, ಈ ಯಶಸ್ವೀ ಮುಷ್ಕರವನ್ನು ಆಯೋಜಿಸಿದ್ದ ಬೋಸ್‌ರಿಗೆ ವಿದಾಯ ಚೀಟಿ ಕೊಟ್ಟು ಕಳಿಸಲಾಯ್ತು. “ಡಿಗ್ರಿ ಮುಗಿಯದಿದ್ದರೆ ಕತ್ತೇಬಾಲ’ ಎಂದರು ಬೋಸ್‌.

    ತಂದೆಗೆ ಚಿಂತೆ. ಹೋದಲ್ಲಿ ಬಂದಲ್ಲಿ ಬಂಡಾಯದ ಬಾವುಟ ಹಾರಿಸುತ್ತಿದ್ದರೆ ಈ ಹುಡುಗ ಬದುಕೋದು ಹ್ಯಾಗೆ? ಬೆದರಿಕೆ, ಬೇಡಿಕೆ ಎರಡನ್ನೂ ಹಾಕಿ ಹುಡುಗನನ್ನು ಲಂಡನ್ನಿಗೆ ಕಳಿಸಿದರು. ಅಲ್ಲಿ ಆತ ಐಸಿಎಸ್‌ (ಇಂದಿನ ಐಎಎಸ್‌ನಂತೆ) ಪರೀಕ್ಷೆಗೆ ತಯಾರಿ ನಡೆಸಿ, ಪರೀಕ್ಷೆ ಬರೆದು ಸರಕಾರಿ ನೌಕರಿ ಹಿಡಿಯಬೇಕೆಂಬುದು ತಂದೆಯ ಇಚ್ಛೆ. ಹುಡುಗ ವರ್ಷಗಳ ಓದನ್ನು ಎಂಟೇ ತಿಂಗಳಲ್ಲಿ ಮುಗಿಸಿ, ಪರೀಕ್ಷೆಯಲ್ಲಿ ಇಡೀ ದೇಶಕ್ಕೆ 4ನೇ ರ್‍ಯಾಂಕ್‌ ಹೊಡೆದ. ಅಪ್ಪನ ಆಸೆಯಂತೆ ಸರಕಾರಿ ನೌಕರಿಗೂ ಸೇರಿದ. ಆದರೆ, ಬಂಡಾಯದ ಪ್ರವೃತ್ತಿ ಮಾತ್ರ ತಗ್ಗಲಿಲ್ಲ. ತನಗೆ ಈ ಸಹಾಯಕ ಛತ್ರಿ ಹಿಡಿಯಲಿಲ್ಲವೆಂದು ಹಿರಿಯ ಅಧಿಕಾರಿಯೊಬ್ಬ ಆಕ್ಷೇಪಿಸಿದಾಗ, ಕೈಯಲ್ಲಿದ್ದ ಛತ್ರಿಯನ್ನು ಆಫೀಸರನ ಕೊರಳಿಗೇ ಒತ್ತಿ ಹಿಡಿದು “ಮೈಂಡ್‌ ಯುವರ್‌ ಬ್ಯುಸಿನೆಸ್‌’ ಎಂದ ಬೆಂಕಿ ಚೆಂಡು ಇದು! ಇದು ಸೆರಗಿನ ಕೆಂಡ ಎಂದು ಬ್ರಿಟಿಷರು ಆಗಲೇ ಅರ್ಥೈಸಿಕೊಂಡರು.

    ಆ ವೇಳೆಗೆ 1919ರ ಜಲಿಯನ್‌ವಾಲಾ ಬಾಗ್‌ ಹತ್ಯಾಕಾಂಡ ನಡೆದಿತ್ತು. ನೂರಾರು ಭಾರತೀಯರ ಮಾರಣಹೋಮದಿಂದ ಬೋಸ್‌ ಕುದ್ದು ಹೋದರು. ಜನರಲ್‌ ಡಯರ್‌ನ ಹಿಂಸಾಚಾರಕ್ಕೆ ಪ್ರತಿಭಟನೆ ಎನ್ನುವಂತೆ ಬೋಸ್‌ “ಈ ಪದವಿಯೂ ಬೇಡ, ಸಂಬಳವೂ ಬೇಡ’ ಎಂದು ರಾಜೀನಾಮೆ ಎಸೆದು ಭಾರತದ ದಾರಿ ಹಿಡಿದರು. “ಇನ್ನೆಂದೂ ಪರಂಗಿ ನಾಯಿಗಳ ಅಡಿಯಲ್ಲಿ ಕೂಲಿ ಮಾಡುವುದಿಲ್ಲ’ ಎಂದು ಅಪ್ಪನೆದುರು ಘೋಷಿಸಿಬಿಟ್ಟರು. ಅಲ್ಲಿಂದಲೇ ಅವರ ಬದುಕಿನ ಎರಡನೇ ಮಹತ್ವದ ಅಧ್ಯಾಯ ಶುರು.

  ಬಂಗಾಳದಲ್ಲಿ ಆಗ ಮಹಾಪ್ರವಾಹ. ಬೋಸ್‌ ಸಮಾಜಸೇವೆಗಿಳಿದರು. ಸಾವಿರಾರು ಜನರನ್ನು  ಸುರಕ್ಷಿತ ಸ್ಥಳಗಳಿಗೆ ಸಾಗಿಸುವ ಕೆಲಸ ಅಹೋರಾತ್ರಿ ನಡೆಯಿತು. ಅದಾಗಿ ಕೆಲತಿಂಗಳ ನಂತರ, ಪರಂಗಿಗಳ ದೌರ್ಜನ್ಯದ ವಿರುದ್ಧ ಹೋರಾಡಲು, ಕುರಿಗಳಂತಿದ್ದ ಭಾರತೀಯರನ್ನು ಎಚ್ಚರಿಸಲು “ಫಾರ್ವರ್ಡ್‌’ ಎಂಬ ಪತ್ರಿಕೆ ಪ್ರಾರಂಭಿಸಿದರು. “ಸ್ವರಾಜ್ಯ’ ಎಂಬ ಇನ್ನೊಂದು ಪತ್ರಿಕೆಯ ಜವಾಬ್ದಾರಿಯ ನೊಗ ಹೊತ್ತರು. ಆಲ್‌ ಇಂಡಿಯಾ ಯೂತ್‌ ಕಾಂಗ್ರೆಸ್‌ನ ಅಧ್ಯಕ್ಷರಾದರು. ಕಲಕತ್ತಾ ಮುನಿಸಿಪಲ್‌ ಕಾರ್ಪೊàರೇಶನ್‌ ಮುಖ್ಯಸ್ಥರಾದರು. ಕಲಕತ್ತೆಯ ಮೇಯರ್‌ ಆಗಿ 1924ರಲ್ಲಿ, ಕೇವಲ 27 ವರ್ಷದ ಬೋಸ್‌ ಆಯ್ಕೆಯಾದರು!

   ಬೆಂಕಿ ಬಿರುಗಾಳಿಯಂತೆ ತಿರುಗುತ್ತಿದ್ದ ಈ ಅಗ್ನಿಮುಖನನ್ನು ಹಿಡಿದಿಡಲು ಬ್ರಿಟಿಷರು ಎಲ್ಲ ಬಗೆಯ ತಂತ್ರಗಳನ್ನೂ ಹೆಣೆದರು. 1921ರಿಂದಲೇ ಬೋಸರ ತುರಂಗ ವಾಸಪರ್ವ ಪ್ರಾರಂಭವಾಯಿತು. ಹಲವು ವರ್ಷಗಳ ವ್ಯರ್ಥ ಹೋರಾಟದ ನಂತರ ಬೋಸರಿಗೆ ಅನ್ನಿಸಿತು: ಇಲ್ಲಿದ್ದು ಗುದ್ದಾಡುವುದಕ್ಕಿಂತ ಈ ಬ್ರಿಟಿಷರನ್ನು ಅವರ ನೆಲದಲ್ಲೇ ಹೋಗಿ ಹೊಡೆಯಬೇಕು! 1933ರಲ್ಲಿ ವಿದೇಶಕ್ಕೆ ಹಾರಿದರು. ಆಸ್ಟ್ರಿಯಾ, ಬರ್ಲಿನ್‌ ಎಲ್ಲವೂ ಆಯಿತು. ಶತ್ರುವಿನ ಶತ್ರುವನ್ನು ಮಿತ್ರನಾಗಿಸಿಕೊಳ್ಳಬೇಕು ಎಂಬುದು ಬೋಸ್‌ರ ಯೋಚನೆ. ಆದರೆ, ಅಂಥ ಪ್ರಯತ್ನಗಳು ಫ‌ಲ ಕಾಣುವ ಸೂಚನೆ ಸಿಗದಿದ್ದಾಗ, ಉದ್ವಿಗ್ನ ಮನಃಸ್ಥಿತಿಯ ಬೋಸ್‌, ಚಡಪಡಿಸುತ್ತ ಭಾರತಕ್ಕೆ ಮರಳಿದರು. ಬೋಸ್‌ ಬರುವುದನ್ನೇ ಕಾಯುತ್ತಿದ್ದ ಬ್ರಿಟಿಷರು ಮತ್ತೂಮ್ಮೆ ಅವರನ್ನು ಬಂಧಿಸಿ, ಜೈಲಿಗೆ ತಳ್ಳಿದರು. 1921ರಿಂದ 41ರವರೆಗಿನ 20 ವರ್ಷಗಳಲ್ಲಿ ಅವರು ಕಂಬಿಯೊಳಗೆ ಕಳೆದದ್ದು ಬರೋಬ್ಬರಿ 10 ವರ್ಷಗಳನ್ನು! ಅವು ಅವರ ಕಬ್ಬಿಣವನ್ನೂ ಕರಗಿಸಿ ಜೀರ್ಣಿಸಿಕೊಳ್ಳಬಲ್ಲ ಬಿಸಿತಾರುಣ್ಯದ ದಿನಗಳು.

    1941ರಲ್ಲಿ ಈ 44ರ ಯುವಕ ಮತ್ತೆ ತಪ್ಪಿಸಿಕೊಂಡ. ಪರಾರಿಯಾದ ಒಂದೇ ವಾರದಲ್ಲಿ ಕಲಕತ್ತೆ ಬಿಟ್ಟು ದೆಹಲಿ ಸೇರಿ ಅಲ್ಲಿಂದ ಪೇಷಾವರಕ್ಕೆ ಹೋಗಿ ಕಾಬೂಲ್‌ ಮೂಲಕ ರಷ್ಯಾದ ಮಾಸ್ಕೋ ನಗರ ಮುಟ್ಟಿದರು. ಸ್ಟಾಲಿನ್‌ ಸಹಾಯ ಕೇಳಿ ಹೋದರೆ, ಇದ್ಯಾರೋ ಬ್ರಿಟಿಷರ ಕಂದು ತೊಗಲಿನ ಗೂಢಚಾರ ಇರಬಹುದೆಂಬ ಸಂಶಯದಲ್ಲಿ ಸ್ಟಾಲಿನ್‌, ತನ್ನ ದೇಶದಿಂದ ಹೊರಡುವಂತೆ ಖಡಕ್‌ ಆದೇಶ ಕೊಟ್ಟುಬಿಟ್ಟ. ಅನಿವಾರ್ಯವಾಗಿ ಬರ್ಲಿನ್‌ ರೈಲು ಹತ್ತಿದ ಬೋಸ್‌ ಜರ್ಮನಿಗೆ ಹೋದರು. ನಾಝಿ ಸೇನೆಯ ಸಖ್ಯ ಬೆಳೆಸಿದರು. ಅಲ್ಲಿಂದಲೇ ರೇಡಿಯೋ ಮೂಲಕ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡತೊಡಗಿದರು. ಅವರ ಭಾಷಣದ ಮೊದಲ ಸಂಚಿಕೆ ಪ್ರಸಾರವಾದಾಗ ಭಾರತೀಯರಲ್ಲಿ ರೋಮಾಂಚನ; ಬ್ರಿಟಿಷರಲ್ಲಿ ದಿಗ್ಭ್ರಮೆ. 1941ರಲ್ಲಿ ಜರ್ಮನ್ನರು ಮತ್ತು ಬ್ರಿಟಿಷರು ಆಫ್ರಿಕದಲ್ಲಿ ಗುದ್ದಾಡಿದಾಗ ಬ್ರಿಟಿಷರು ಸೋತರು. ಅವರ ಕೈಯಲ್ಲಿದ್ದ 10,000 ಭಾರತೀಯ ಯೋಧರು ಜರ್ಮನ್ನರ ಯುದ್ಧಕೈದಿಗಳಾದರು. ಆ ಕೈದಿಗಳನ್ನೇ ಠೇವಣಿಯಾಗಿಟ್ಟು ಬೋಸರ ಭಾರತ ಸೇನೆ ಪ್ರಾರಂಭವಾಯಿತು! ಅಷ್ಟೂ ಜನಕ್ಕೆ ಬೋಸ್‌ ನೇತಾಜಿಯಾದರು!

    ಮುಂದೆ ನಡೆದ ಘಟನೆಗಳೆಲ್ಲವೂ ಸಿಹಿ-ಕಹಿಗಳ ಮಿಶ್ರಣ. ದುರಂತ, ಸಾಧನೆಗಳ ಚೌಚೌಬಾತ್‌. ಬ್ರಿಟಿಷರ ವಿರುದ್ಧ ಒಗ್ಗಟ್ಟಾಗಿ ಹೋರಾಡೋಣ ಎಂದು ಬೋಸ್‌ ಜರ್ಮನ್ನರಿಗೆ ಸಲಹೆಯಿತ್ತರೆ, ಹಿಟ್ಲರನಿಗೆ ಅದರಲ್ಲಿ ಆಸಕ್ತಿ ಇರಲಿಲ್ಲ. ಅವನ ಲಕ್ಷÂವೆಲ್ಲ ಇದ್ದದ್ದು ಆನೆಯಂತೆ ಮೈಚಾಚಿ ಮಲಗಿದ್ದ ರಷ್ಯಾವನ್ನು ಕಬಳಿಸುವುದರತ್ತ. ರಷ್ಯಾವನ್ನು ಸೋಲಿಸಿ ನಂತರ, ಭಾರತದತ್ತ ಬಂದು ಬ್ರಿಟಿಷರನ್ನು ಓಡಿಸುತ್ತೇನೆ ಎಂದ ಹಿಟ್ಲರ್‌, ರಷ್ಯಾದ ಮೇಲೆ ಏರಿಹೋಗಿ ಮಾಸ್ಕೋದಲ್ಲಿ ಸಿಕ್ಕಿಕೊಂಡ. ರಷ್ಯಾದ ಚಳಿಯಲ್ಲಿ ಜರ್ಮನ್‌ ಸೇನೆ ಹಣ್ಣುಗಾಯಿ ನೀರುಗಾಯಿ ಆದಾಗ ಹಿಟ್ಲರನ ರಷ್ಯಾ ದಿಗ್ವಿಜಯದ ಆಸೆ ಮಣ್ಣಾಯ್ತು. ಅವರನ್ನು ಕಾಯುವುದರಲ್ಲಿ ಅರ್ಥವಿಲ್ಲ ಎನ್ನಿಸಿ ಬೋಸ್‌, ಜಪಾನ್‌ ಕಡೆ ನೋಡಿದರು. ಅಲ್ಲಿ ಹೋಗಿ ಅವರ ವಿಶ್ವಾಸ ಗಳಿಸಿ, ಜಪಾನ್‌ ಸೆರೆಹಿಡಿದಿದ್ದ ಯುದ್ಧಕೈದಿಗಳಲ್ಲಿ ಭಾರತೀಯರನ್ನು ಹುಡುಕಿ ಆಜಾದ್‌ ಹಿಂದ್‌ ಫೌಜ್‌ ಕಟ್ಟಿದರು. ಆ ಸೇನೆ ಅಂಡಮಾನ್‌ ನಿಕೋಬಾರ್‌ ಮೇಲೆ ದಾಳಿ ನಡೆಸಿ ಬ್ರಿಟಿಷರನ್ನು ಓಡಿಸಿ, ಭಾರತದ ಮೊದಲ ಸ್ವಾತಂತ್ರ್ಯ ಧ್ವಜ ನೆಟ್ಟಿತು. ಇಂದಿಗೆ 75 ವರ್ಷಗಳ ಹಿಂದೆ, ಆ ದ್ವೀಪಗಳಿಗೆ ಬೋಸ್‌, ಶಹೀದ್‌ ಮತ್ತು ಸ್ವರಾಜ್‌ ಎಂಬ ಹೆಸರುಗಳನ್ನಿಟ್ಟರು. ಅಲ್ಲಿಂದ ಈಶಾನ್ಯ ಭಾರತಕ್ಕೆ ಬಂದು, ಅಲ್ಲಿನ ಗುಡ್ಡಗಾಡುಗಳ ಮೂಲಕ ಭಾರತದೊಳಕ್ಕೆ ನುಗ್ಗಿ ಬ್ರಿಟಿಷರನ್ನು ಹೊಡೆದು ಹಾಕುವುದು ಬೋಸ್‌ ಯೋಜನೆಯಾಗಿತ್ತು. 

   ಆದರೆ… ಆಗಬಾರದ್ದು ಆಗಿಹೋಯಿತು. ಜಪಾನಿನ ಮೇಲೆ ನ್ಯೂಕ್ಲಿಯರ್‌ ಬಾಂಬು ಬಿತ್ತು; ಹತಾಶವಾದ ಜಪಾನೀ ಸೇನೆ ಈಶಾನ್ಯ ಭಾರತದಿಂದ ಹಿಂದೆಗೆಯಿತು. ಛಲ ಬಿಡದ ಬೋಸ್‌ ನ್ಯೂಜಿಲೆಂಡ್‌ಗೆ ಹೋಗಿ, ಮತ್ತೆ ಭಾರತೀಯ ಸೇನೆಯನ್ನು ಹೊಸದಾಗಿ ಕಟ್ಟುವ ಸಂಕಲ್ಪ ತೊಟ್ಟಿದ್ದರಷ್ಟೇ. ಹೊರಟ ವಿಮಾನಕ್ಕೆ ಅದೃಷ್ಟವಿರಲಿಲ್ಲ. ಅದು ಅಪಘಾತದಲ್ಲಿ ಬೂದಿಯಾಯ್ತು ಅಥವಾ ಹಾಗೆಂದು ಬ್ರಿಟಿಷರು ಜಗತ್ತನ್ನು ನಂಬಿಸಿದರು. ಕಣ್ಮರೆಯಾದ ಬೋಸ್‌ ಮತ್ತೆಂದೂ ಸಿಕ್ಕಲೇ ಇಲ್ಲ. 

    ಭಾರತೀಯರು “ನೇತಾಜಿ’ ಎಂದು ಒಪ್ಪಿಕೊಂಡ ಏಕೈಕ ನಾಯಕ ಬೋಸ್‌. ಭಾರತೀಯರ ಒಕ್ಕೊರಲಿನ ಐಕ್ಯಘೋಷವಾದ “ಜೈ ಹಿಂದ್‌’ ಅನ್ನು ಕೊಟ್ಟವರು ಬೋಸ್‌. “ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ’ ಎಂಬ ಖಡ್ಗದಲುಗಿನ ಏಟಿನಂಥ ಮಾತುಗಳಿಂದ ಭಾರತೀಯರಲ್ಲಿ ಕಿಚ್ಚೆಬ್ಬಿಸಿದವರು ಬೋಸ್‌. ಸ್ವಾತಂತ್ರ್ಯಕ್ಕಾಗಿ ಉಗ್ರಹೋರಾಟ ನಡೆಸಿದ ತಪ್ಪಿಗೆ ಬ್ರಿಟಿಷರ ಕೈಯಲ್ಲಿ ದಾಖಲೆಯ 11 ಬಾರಿ ಸೆರೆಗೆ ತಳ್ಳಲ್ಪಟ್ಟವರು, 10 ವರ್ಷಗಳ ಸೆರೆ ಅನುಭವಿಸಿದವರು ಬೋಸ್‌. ಅವರು ಮತ್ತಷ್ಟು ಕಾಲ ಬದುಕಿದ್ದಿದ್ದರೆ ಏನಾಗುತ್ತಿತ್ತು? ಬಹುಶಃ ಭಾರತಕ್ಕೆ ಎರಡು ವರ್ಷಗಳ ಮುನ್ನವೇ ಸ್ವಾತಂತ್ರ್ಯ ದಕ್ಕುತ್ತಿತ್ತು. ಈಶಾನ್ಯ ಏಷ್ಯಾದ ಹಲವಾರು ಪ್ರಾಂತ್ಯಗಳು, ಸಿಂಗಾಪುರವನ್ನೂ ಒಳಗೊಂಡಂತೆ, ಭಾರತದ ಭಾಗವಾಗುತ್ತಿದ್ದವು. ಭಾರತದ ವಿಭಜನೆಯಾಗಲೀ, 1946ರ ಕಲಕತ್ತಾ ಹತ್ಯಾಕಾಂಡವಾಗಲೀ ಜರುಗುತ್ತಿರಲಿಲ್ಲ. ಗಡಿಯಾರದ ಕೀಲಿಯನ್ನು ಅಪ್ರದಕ್ಷಿಣ ತಿರುಗಿಸಿ ಸಮಯದ ಮುಳ್ಳನ್ನು ಹಿಂದಕ್ಕೆಳೆದಂತೆ ಇತಿಹಾಸವನ್ನೂ ಹಿಮ್ಮುಖ ಎಳೆಯಲು ಸಾಧ್ಯವಿದ್ದಿದ್ದರೆ?

ಅದು ನೀರಲ್ಲ, ಅಮೃತ!
ಬೋಸರು ಜರ್ಮನಿಯಲ್ಲಿದ್ದಾಗ ಅವರು ಹೋದಲ್ಲೆಲ್ಲ ಪತ್ರಕರ್ತರು ಮುತ್ತಿಕೊಳ್ಳುತ್ತಿದ್ದರು. ಅವರ ಚುಂಬಕದಂಥ ವ್ಯಕ್ತಿತ್ವವೇ ಹಾಗಿತ್ತೆನ್ನೋಣ! ಹಾಗೆ ಒಮ್ಮೆ ಒಬ್ಬ ಪತ್ರಕರ್ತ, “ನಿಮ್ಮ ಪ್ರೀತಿಯ ನೀರು ಯಾವ ನದಿಯದ್ದು?’ ಎಂದು ಕೇಳಿದ. ನಿಮಗಿಷ್ಟವಾದ ನದಿ ಯಾವುದು? ಎಂಬುದನ್ನೇ ಅಲಂಕಾರಿಕವಾಗಿ ಹಾಗೆ ಕೇಳಿದ್ದಿರಬೇಕು. ಬೋಸ್‌ ಥಟ್ಟನೆ “ನೈಲ್‌ ನದಿ’ ಎಂದುಬಿಟ್ಟರು. ಅಂಥ ಉತ್ತರವನ್ನು ಪತ್ರಕರ್ತರು ನಿರೀಕ್ಷಿಸಿರಲಿಲ್ಲವೇನೋ. “ಹಾಗಾದರೆ, ನಿಮ್ಮ ಗಂಗಾ ನದಿ?’ ಎಂದು ಕೇಳಿದಳೊಬ್ಬ ಪತ್ರಕರ್ತೆ. “ಓಹ್‌, ಗಂಗೆಯೋ? ಅದರದು ನೀರಲ್ಲ, ಅಮೃತ!’ ಎಂದರು ಬೋಸ್‌.

ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.