CONNECT WITH US  

ಕಣ್ತುಂಬಿಕೊಂಡು ನಿಂತವನ ಎದುರಿಗೆ ಮರಳಿನ ಗೂಡಿತ್ತು!

ಇನ್ನೇನು ಸಂಜೆ ಕೊನೆಯಾಗುವುದರಲ್ಲಿತ್ತು. ಕಡಲ ಕಿನಾರೆಯಲ್ಲಿ ಕುಳಿತ ಅವನು,ಕಣ್ಣ ತುಂಬಾ ವಿಷಾದ ಭಾವ ತೊಟ್ಟು ಸೂರ್ಯಾಸ್ತವನ್ನು ಒಂದೇ ಸಮನೆ ದಿಟ್ಟಿಸುತ್ತಿದ್ದ.ಕಡಲ ಅಲೆಗಳ ಸದ್ದು, ಅವನ ಮನದ ಮಾತು, ಅವನಿಗೇ ಕೇಳಿಸದಷ್ಟು ಜೋರಾಗಿತ್ತು. ಅವನ ಪಾಲಿಗೆ ಪ್ರೀತಿಯೆಂಬುದು ಮುಂಜಾನೆ ಉದಯಿಸಿ ಸಂಜೆ ವೇಳೆಗೆ ಅಸ್ತಂಗತವಾಗುವ ಸೂರ್ಯನಂತಾಗಿತ್ತು. ಮನದ ಬಾನಲಿ ಅವಳು ಉಳಿಸಿಹೋದ ನೆನಪುಗಳ ರಂಗು ವಾಸಿಯಾಗದ ಗಾಯದಂತೆ ಕಾಡುತ್ತಾ, ಎದೆಗೂಡಿನ ದೀಪವೇ ಆರಿಹೋಗಿ, ಬದುಕಲ್ಲಿ ಕಗ್ಗತ್ತಲು ಆವರಿಸಿಕೊಂಡಂಥ ದಿಗಿಲು. ಬೇಡ ಬೇಡ ಎಂದುಕೊಂಡರೂ ಕಳೆದುಹೋದ ದಿನಗಳೆಡೆಗೆ ಮತ್ತೆ ಮತ್ತೆ ಹೊರಳಿಕೊಳ್ಳಲು ಯತ್ನಿಸುತ್ತಿತ್ತು-ಅವನ ಮನಸ್ಸು.

ಅದೇ ಸಮುದ್ರ ತೀರದುದ್ದಕ್ಕೂ ಅವಳೊಂದಿಗೆ ಜೊತೆ ಜೊತೆಯಾಗಿ ನಡೆದದ್ದು, ಹೆಜ್ಜೆ ಗುರುತುಗಳ ಮೇಲೆ ಚಿತ್ತಾರ ಬರೆದದ್ದು, ಮರಳಿನ ಮೇಲೆ ಇಬ್ಬರ ಹೆಸರನ್ನೂ ಗೀಚಿ ಸಂಭ್ರಮಿಸಿದ್ದು, ತಂಗಾಳಿ ಸೋಕಿ ಕೆನ್ನೆಗಿಳಿದ ಅವಳ ಮುಂಗುರುಳನ್ನು ನಯವಾಗಿ ನೇವರಿಸಿದ್ದು, ಇವನ ಮೇಲೆ ನೀರನ್ನು ಎರಚಿ ಅವಳು ಕಿಚಾಯಿಸಿ ನಗೆ ಬೀರಿದ್ದು, ಒಟ್ಟಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡದ್ದು .. ಹೀಗೆ  ಪ್ರತಿಯೊಂದು ನೆನಪುಗಳು ಅವನೆದೆಯಲ್ಲಿ ಹಚ್ಚ ಹಸಿರಾಗಿದ್ದವು. ಕೊನೆಗೆ ಅವಳಿಗೆ, ಇವನ ಪ್ರೀತಿಗಿಂತ ಹೆತ್ತವರ ಪ್ರೀತಿಯೇ ಹೆಚ್ಚೆನಿಸಿ, ತಂದೆ ತಾಯಿಯರ ಪ್ರತಿಷ್ಠೆಗಾಗಿ ಇವನ ಪ್ರೀತಿಗೆ ಗೋರಿ ಕಟ್ಟಿ, ಆ ಗೋರಿಯನ್ನು ತನ್ನ ಮದುವೆಯ ಕರೆಯೋಲೆಗಳಿಂದ ಅಲಂಕರಿಸಿ ಹೋಗಿದ್ದಳು.ಇವನು, ಹೋಗಲೋ ಬೇಡವೋ ಎಂದು ಯೋಚಿಸುತ್ತಲೇ ಆ ಮದುವೆಗೆ ಹೋಗಿ, ಕೊನೆಯ ಸಾಲಿನಲ್ಲಿ ಕುಳಿತು, ಹೆಚ್ಚು ಹೊತ್ತು ಅಲ್ಲಿರಲಾಗದೆ ಅರ್ಧದಲ್ಲೇ ಎದ್ದು ಬಂದಿದ್ದ.

ಈ ಎಲ್ಲಾ ನೆನಪುಗಳಿಂದಾಚೆಗೆ ಬರುವ ಹೊತ್ತಿಗೆ ದೂರದಲ್ಲಿ ಅರ್ಧಂಬರ್ಧ ಕಾಣುತ್ತಿದ್ದ ಸೂರ್ಯ ಮುಳುಗುತ್ತಿದ್ದನೋ ಅಥವಾ ಮೂಡುತ್ತಿದ್ದನೋ? ಏನೊಂದೂ ತಿಳಿಯದ ಶೂನ್ಯತೆ ಅವನಲ್ಲಿ ತುಂಬಿತ್ತು. ಎಲ್ಲವೂ ಮುಗಿದು ಹೋಯಿತು ಎಂದುಕೊಂಡು ಅವನು ಅಲ್ಲಿಂದೆದ್ದು ಹೊರಡಲು ಅನುವಾದಾಗ, ಅಲ್ಲಿಗೆ ಈ ಮೊದಲೇ ಬಂದು ಹಾಜರಿ ಹಾಕಿ ಹೋಗಿದ್ದ ಪ್ರೇಮಿಗಳಿಬ್ಬರು ಕಟ್ಟಿ ಹೋದ ಮರಳಿನ ಗೂಡು ಅಲೆಗಳ ದಾಳಿಗೆ ತುತ್ತಾಗಿ ಇನ್ನೇನು ಕುಸಿದು ಬೀಳುವುದರಲ್ಲಿತ್ತು.

-ಷಣ್ಮುಖ ತಾಂಡೇಲ್‌, ಹೊನ್ನಾವರ

Trending videos

Back to Top