CONNECT WITH US  

ಕಣ್ಣೀರೂ ಒಂದು ಭಾಷೆ ಗೊತ್ತಿಲ್ವಾ ನಿನಗೆ?  

ದೇವರು ತುಂಬಾ ಆಟ ಆಡ್ತಾನೆ. ಹೆಚ್ಚಿನ ಸಂದರ್ಭದಲ್ಲಿ, ಒಬ್ಬರ ಪ್ರೀತಿ ಇನ್ನೊಬ್ಬರಿಗೆ ದಕ್ಕದ ಹಾಗೆ ಮಾಡಿಬಿಡ್ತಾನೆ. ಯಾರು ಯಾರಿಗೆ ಜೋಡಿ ಎಂದು ಹಣೆಬರಹ ಬರೆಯೋ ಆ ದೇವರು, ಅವರವರ ಜೊತೆಯಲ್ಲೇ ಪ್ರೀತಿ ಹುಟ್ಟುವ ಹಾಗೂ ಮಾಡಿಬಿಟ್ಟಿದ್ರೆ ಈ ಭೂಮಿ ಮೇಲೆ ಯಾರ ಪ್ರೀತಿಯೂ ಸೋಲ್ತಾ ಇರ್ಲಿಲ್ಲ, ಯಾವ ಪ್ರೇಮಿನೂ ಸಾಯ್ತಾ ಇರ್ಲಿಲ್ಲ, ಅಲ್ವಾ?  

ಕೆಲವೊಂದು ಭಾವನೆಗಳನ್ನ ಮಾತಿನಲ್ಲಿ ವ್ಯಕ್ತಪಡಿಸೋಕಾಗಲ್ಲ. ಮಾತಿಗೆ ಒಂದು ಅರ್ಥ ಇದ್ದರೆ ಮೌನಕ್ಕೆ ಸಾವಿರ ಅರ್ಥ ಇರುತ್ತೆ. ನಾವು ಯಾರನ್ನಾದರೂ ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕಾದರೆ ಮೊದಲು ಅವರ ಮೌನವನ್ನು ಅರ್ಥ ಮಾಡಿಕೊಳ್ಳಬೇಕು ಕಣೊ. ಹೀಗಂತ ಅಂದುಕೊಂಡೇ ಬದುಕಿದವಳು ನಾನು. ಅದೇ ಕಾರಣಕ್ಕೆ, ಅದೆಷ್ಟೋ ಮನದಾಳದ ಮಾತುಗಳನ್ನು ಮನಸ್ಸಿನ ಗರ್ಭದಲ್ಲಿಯೆ ಕರಗಿಸಿ ಮೌನದ ಮೊರೆ ಹೋದೆ. ಆದರೆ ಕೊನೆಗೂ ನನ್ನ ಮೌನವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ನೀ ಸೋತೆ. ನಿನೆY ಗೊತ್ತಾ? ಕಣ್ಣೀರು ಕೂಡ ಒಂದು ಭಾಷೆ. ಅತ್ತವರಿಗೆ ಮಾತ್ರ ಅದರ ಅರ್ಥ ತಿಳಿಯುತ್ತೆ.  

ಮೊನ್ನೆ ಜಾತ್ರೆಗೆಂದು ಹೋದಾಗ ನಿನಗಾಗಿ ಪುಟ್ಟದೊಂದು ಉಡುಗೊರೆ ತಂದಿ¨ªೆ. ತುಂಬಾ ಪ್ರೀತಿಯಿಂದ, ಮು¨ªಾದ ಮಾತುಗಳನ್ನಾಡುತ್ತಾ, ಅದನ್ನು ನಿನಗೆ ಉಡುಗೊರೆಯಾಗಿ ನೀಡಲು ಇಷ್ಟು ದಿನ ಆಸೆಯಿಂದ ಕಾದೆ. ಆದರೆ, ತಿಂಗಳುಗಳು ಕಳೆದರೂ ನೀನು ಬರಲೇ ಇಲ್ಲ. ಮುಂದೊಂದು ದಿನ ನೀನು ಬರಬಹುದು ಎನ್ನುವ ಭರವಸೆಯೂ ನನ್ನಲ್ಲಿ ಉಳಿದಿಲ್ಲ ಕಣೊ.  ನನ್ನೆಲ್ಲಾ ಆಸೆಗಳು,ಹೇಳದೇ ಉಳಿದ ಮಾತುಗಳು,ಕಣ್ಣೀರಿನಲ್ಲಿ ಕರಗಿ ಮೌನದ ಸಾಗರ ಸೇರಿವೆ. ಕೊರಗಿ ಕೊರಗಿ ಕಂಗಾಲಾಗಿ, ಅತ್ತು ಅತ್ತು, ಸುಸ್ತಾಗಿ ಯೋಚಿಸಿ ಯೋಚಿಸಿ ಕಲ್ಲಾಗಿ ಈ ನನ್ನ ಪುಟ್ಟ ಹೃದಯ ಮಂಜುಗಡ್ಡೆಯಂತೆ ಹೆಪ್ಪುಗಟ್ಟಿದೆ. ನನ್ನ ಕಣ್ಣೀರು ಬತ್ತಿ, ಮನದಲ್ಲಿ ಬರಗಾಲ ಮೂಡಿದೆ.  

ಇಷ್ಟೆಲ್ಲಾ ರಾಮಾಯಣವಾದ ನಂತರ ನನಗೆ ಅರ್ಥವಾದ ಸತ್ಯ ಏನು ಗೊತ್ತಾ? ನಿಜವಾದ ಪ್ರೀತಿಗೆ ಆ ದೇವರು ಕೊಡೊ ಉಡುಗೊರೆಯೆಂದರೆ ಈ ಕಣ್ಣೀರೇ  ಕಣೊ. ಪ್ರೇಮಿಗಳ ಮಧ್ಯ ಆ ದೇವರು ತುಂಬಾ ಆಟ ಆಡ್ತಾನೆ. ಹೆಚ್ಚಿನ ಸಂದರ್ಭದಲ್ಲಿ ಒಬ್ಬರ ಪ್ರೀತಿ ಇನ್ನೊಬ್ಬರಿಗೆ ದಕ್ಕದ ಹಾಗೆ ಮಾಡಿಬಿಡ್ತಾನೆ. ಯಾರು ಯಾರಿಗೆ ಜೋಡಿ ಎಂದು ಹಣೆಬರಹ ಬರೆಯೋ ಆ ದೇವರು ಅವರವರ ಜೊತೆಯಲ್ಲೇ ಪ್ರೀತಿ ಹುಟ್ಟುವ ಹಾಗೆ ಮಾಡಿಬಿಟ್ಟಿದ್ರೆ ಈ ಭೂಮಿ ಮೇಲೆ ಯಾರ ಪ್ರೀತೀನೂ ಸೋಲ್ತಾ ಇರ್ಲಿಲ್ಲ, ಯಾವ ಪ್ರೇಮಿನೂ ಸಾಯ್ತಾ ಇರ್ಲಿಲ್ಲ, ಅಲ್ವಾ? ಹೋಗ್ಲಿ ಬಿಡು.  

ಆ ದೇವರು ನಮ್ಮಿಬ್ಬರ ಪ್ರೇಮ ಜೀವನದಲ್ಲಿ ಟ್ವೆಂಟಿ-ಟ್ವೆಂಟಿ ಮ್ಯಾಚ್‌ ಆಡ್ತಿದಾನೆ. ಅವನು ನಮ್ಮಿಬ್ಬರ ಪ್ರೀತಿ ಗ್ರೌಂಡ್‌ನ‌ಲ್ಲಿ ಅದೆಷ್ಟೇ ಆಡಿದ್ರೂ ಗೆಲುವು ನಮ್ದೇ ಆಗುತ್ತೆ ಅಂತ ಈ ಕ್ಷಣಕ್ಕೂ ಅಂದುಕೊಂಡೇ ಬದುಕಿದ್ದೀನಿ. ಯಾಕಂದ್ರೆ, ಅವನು ನನ್ನ ಹಣೆಯಲಿ ಬರೆಯದ ನಿನ್ನ ಹೆಸರ, ಹೃದಯದೀ ನಾನೇ ಕೊರೆದಿರುವೆ... ಪ್ರಪಂಚವೆಂಬ ಊರಲ್ಲಿ ನೀನೊಂದು ಚಿಕ್ಕ ಜೀವ ಕಣೋ. ನಿನ್ನನ್ನು ಪ್ರೀತಿಸುವ ಈ ಜೀವಕ್ಕೆ ನೀನೆ ದೊಡ್ಡ ಪ್ರಪಂಚ. ವಿಳಾಸವಿಲ್ಲದ ಪಯಣವಿದು. ಆದರೂ, ನಿನ್ನನ್ನು ಕಾಣಬೇಕು ಎಂಬ ಒಂದೇ ಆಸೆಯಿಂದ ಪ್ರಯಾಣ ಆರಂಭಿಸಿಬಿಟ್ಟಿದ್ದೇನೆ. ನನಗೆ ಏನಾದರೂ ಆಗಿಬಿಡುವ ಮುನ್ನ ಸಿಕ್ತೀಯ ಅಲ್ವ?  

ನಿನ್ನ ನಿರೀಕ್ಷೆಯಲ್ಲಿರುವ ಶಬರಿ.
 ಉಮ್ಮೆ ಅಸ್ಮ ಕೆ. ಎಸ್‌.  


Trending videos

Back to Top