ನಾನೇಕೆ ಭಾರತಕ್ಕೆ ಓಡಿ ಬಂದೆ?


Team Udayavani, Aug 14, 2018, 12:02 AM IST

15.jpg

ಇದು ಬಂಧನ ಮತ್ತು ಸ್ವಾತಂತ್ರ್ಯದ ವ್ಯತ್ಯಾಸವನ್ನು ಮನದಟ್ಟು ಮಾಡುವ ನೈಜಕತೆ. ಇಂದು ಮಧ್ಯರಾತ್ರಿ 12 ದಾಟಿದರೆ, ಸ್ವಾತಂತ್ರ್ಯ ಸಂಭ್ರಮದ ಚಿಲುಮೆಯೊಂದು ಎಲ್ಲೆಡೆ ಉಕ್ಕುವ ಈ ಹೊತ್ತಿನಲ್ಲಿ ಕುಶಾಲನಗರ ಸಮೀಪದ ಬೈಲಕುಪ್ಪೆಯಲ್ಲಿ ನೆಲೆಸಿರುವ ಟಿಬೆಟ್‌ನ “ಗೆ ಡುಮ್‌ ಲಾಮಾ’ ಅವರು “ಜೋಶ್‌’ಗೆ ನೀಡಿದ ವಿಶೇಷ ಮಾತುಕತೆಯಲ್ಲಿ ಮನದಾಳ ಹಂಚಿಕೊಂಡಿದ್ದಾರೆ. ಹುಟ್ಟಿದ ನೆಲ ಬಿಟ್ಟು, ಜೀವವನ್ನು ಕೈಯಲ್ಲಿ ಹಿಡಿದು ಓಡಿಬಂದ ಅವರೊಳಗೆ ಭಾರತದ ಸ್ವಾತಂತ್ರ್ಯ ಹೇಗೆ ನೆಲೆಯಾಗಿದೆ?

ಕೆಲವು ವರುಷಗಳ ಕೆಳಗಿನ ಮಾತು. ನಾನು ಟಿಬೆಟ್‌ನಿಂದ ಕುಶಾಲನಗರದ ಬೈಲಕುಪ್ಪೆಗೆ ಬಂದಿ¨ªೆನಷ್ಟೇ. ಯಾವುದೋ ಒಂದು ಇಂಗ್ಲಿಷ್‌ ಮ್ಯಾಗಜಿನ್‌ನಲ್ಲಿ ಮೈನವಿರೇಳಿಸುವ ಚಾರಣ ಕಥನವೊಂದನ್ನು ಓದುತ್ತಿದ್ದೆ. ಸ್ವೇನ್‌ ಹೆಡಿನ್‌ ಎಂಬ ಸ್ವೀಡನ್‌ ಸಾಹಸಿಗ, ಟಿಬೆಟ್‌ನ ಎದೆನೆತ್ತಿಯನ್ನು ಹತ್ತಿ, ಏದುಸಿರು ಬಿಟ್ಟ ತನ್ನ ಅನುಭವವನ್ನು ಅದರೊಳಗೆ ಬಿತ್ತಿದ್ದ. ಟಿಬೆಟ್‌ನ ಚಾಂಗ್‌ತಾಂಗ್‌ ಪ್ರಸ್ಥಭೂಮಿಯ ಮೇಲೆ ಆತ 82 ದಿನ ನಡೆದಿದ್ದನಾದರೂ, ಯಾವೊಬ್ಬ ವ್ಯಕ್ತಿಯೂ ಕಣ್ಣಿಗೆ ಬಿದ್ದಿರಲಿಲ್ಲ! “ಅಷ್ಟು ಸುದೀರ್ಘ‌ ಹಾದಿಯಲ್ಲಿ ಹಿಮಕರಡಿ, ಚಮರೀಮೃಗ, ಕಿಯಾಂಗ್‌ನಂಥ ಪ್ರಾಣಿಗಳು ಕಂಡವೇ ವಿನಃ ನರಮಾನವನಾರೂ ಕಾಣಲಿಲ್ಲ’ ಎನ್ನುವ ಅವನ ಬೆರಗಿನಲ್ಲಿ ದಣಿವು, ಭಯಗಳೇ ದಟ್ಟೈಸಿದ್ದವು.

   ಹೆಡಿನ್‌ನ ಅನುಭವ ನೂರಕ್ಕೆ ನೂರು ನಿಜವೇ. ಆದರೆ, ಅದು ನನಗೆ ರೋಮಾಂಚನ ಹುಟ್ಟಿಸದೇ ಹೋಯಿತು. ನನ್ನಂಥ ಅದೆಷ್ಟೋ ಲಾಮಾಗಳು, ಬುದ್ಧನ ಆರಾಧಕರು ಟಿಬೆಟ್‌ನ ಅಂಥ ಹಲವು ಪ್ರಸ್ಥಭೂಮಿ, ರೌದ್ರ ಕಣಿವೆಗಳನ್ನು ದಾಟಿಯೇ ಭಾರತಕ್ಕೆ ಬಂದವರಾದ ಕಾರಣ, ಈತ ಸ್ಟೇರ್‌ಕೇಸ್‌ ಹತ್ತಿಳಿದ ಶಿಶುವೇನೋ ಎಂದು ಭಾವಿಸಿಬಿಟ್ಟೆ. ನಮ್ಮದು ಅವನು ಬಣ್ಣಿಸಿದ ಚಾರಣವಾಗಿರಲಿಲ್ಲ; ಅದೊಂಥರಾ ಸ್ವಾತಂತ್ರÂದ ಓಟ. ಫೋಟೋಗಳನ್ನು ತೆಗೆದು, ಚಹಾ ಕುಡಿದು ವಿರಮಿಸುವಂಥ ಪುರುಸೊತ್ತಿನ ಸಂಗತಿಗಳೆಲ್ಲ ನಮ್ಮ ಓಟದಲ್ಲಿರಲಿಲ್ಲ. ಎದ್ದೆವೋ, ಬಿದ್ದೆವೋ ಎನ್ನುವ ಅವಸರವದು. ಹಗಲನ್ನು ಎಣಿಸದೇ, ರಾತ್ರಿಯನ್ನು ಲೆಕ್ಕಿಸದೇ, ಗಂಟೆ ಮುಳ್ಳಿನ ಮೇಲೆ ಹತ್ತಿಕೂತಂತೆ ಕಣೆ°ಡದೆ, ಪ್ರಾಣ ಉಳಿಸುವ ಹೊಣೆಯನ್ನು ಬುದ್ಧನಿಗೆ ಬಿಟ್ಟುಬಿಟ್ಟು, ಉಟ್ಟಬಟ್ಟೆಯಲ್ಲೇ ಬುದ್ಧನ ಮೂರ್ತಿಯನ್ನು ಬಚ್ಚಿಟ್ಟುಕೊಂಡು, ಓಡೋಡಿ ಬರುವಾಗ ನಮ್ಮನ್ನು ನಗುತ್ತಾ ಬರಮಾಡಿಕೊಂಡವರು ಈ ಭಾರತೀಯರು. ಅಂಥ ನಗುಮೊಗ ಕಾಣದೇ ನಾನು ಎಷ್ಟೋ ವರ್ಷಗಳೇ ಆಗಿದ್ದವು.

  ಹುಟ್ಟಿದಾಗಿನಿಂದ ಸ್ವಾತಂತ್ರ್ಯ ಏನೆಂದೇ ಗೊತ್ತಿರದ ನಾನು, ಈ ಪುಣ್ಯಭೂಮಿಯ ಮೇಲೆ ಪಾದ ಇಟ್ಟಾಗ ಆದ ಖುಷಿಯನ್ನು ಇನ್ನೂ ಎದೆಯ ಕಪಾಟಿನಲ್ಲಿ ಬೆಚ್ಚಗಿಟ್ಟಿರುವೆ. ಅದು ನನ್ನೊಳಗೆ ಹಿಮನದಿ ಸೃಷ್ಟಿಸುವ ಸಾಲಿಗ್ರಾಮದಂತೆ ಹರಳುಗಟ್ಟಿದೆ. ನೀವೆಲ್ಲ ನಾಳೆ ದಿನ ಸ್ವಾತಂತ್ರ್ಯದ ಬಾವುಟ ಹಾರಿಸುತ್ತಿರುವಾಗ, ನನಗೆ ನನ್ನ ತಾಯ್ನೆಲದ ನೆನಪಿನ ಸಂಕೋಲೆ ಕಣ್ಣೆದುರು ಬರುತ್ತಿದೆ. ಚೀನೀಯರ ಕಪಿಮುಷ್ಟಿಯಲ್ಲಿರುವ ನನ್ನ ಟಿಬೆಟ್‌ನಿಂದ ನಾನೇಕೆ ಈ ಸ್ವತ್ಛ ಸ್ವತಂತ್ರ ದೇಶಕ್ಕೆ ಓಡಿಬಂದೆ ಎನ್ನುವ ಕತೆ ಬಹುಶಃ ಸ್ವಾತಂತ್ರ್ಯದ ಕನ್ನಡಿಯ ಮುಂದೆ ನಿಂತ ಪ್ರತಿಯೊಬ್ಬನನ್ನೂ ತಟ್ಟಬಹುದು.

  ನಾನು ಟಿಬೆಟ್‌ನ ಚಂದೋ ಜಿಲ್ಲೆಯ ಕಡಿದಾದ ತಪ್ಪಲಿನ ಪೋಂಡಾ ಎಂಬ ಹಳ್ಳಿಯವನು. ಅದು 1997ನೇ ಇಸವಿ. ನಾನಾಗ 16ರ ತರುಣ. ಟಿಬೆಟ್‌ ಅನ್ನು ಇಡಿಇಡಿಯಾಗಿ ನುಂಗಿದ್ದ ಚೀನಾ, ಬೌದ್ಧ ತತ್ವಗಳನ್ನು ದಯನೀಯವಾಗಿ ದಮನಿಸುವ ಕೆಲಸ ಶುರುಮಾಡಿತ್ತು. ಅವರ ಪ್ರಕಾರ, ಟಿಬೆಟಿಯನ್ನರು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನೇ ಇಟ್ಟುಕೊಳ್ಳುವಂತಿರಲಿಲ್ಲ. ಒಂದು ದಿನ ಮಿಲಿಟರಿಯವರು ನನ್ನ ಮನೆಗೆ ನುಗ್ಗಿ, ಜಪ್ತಿ ಮಾಡಿದರು. ಪೆಟ್ಟಿಗೆಯಲ್ಲಿ ರಾಷ್ಟ್ರಧ್ವಜದ ಪೇಂಟಿಂಗ್‌ ಮತ್ತು ಟಿಬೆಟ್‌ ಪರವಾದ ಕೆಲವು ಬರಹಗಳು ಸಿಕ್ಕ ಕಾರಣ, ಚೀನೀ ವಿರೋಧಿ ನಿಲುವು ಇಟ್ಟುಕೊಂಡಿದ್ದಾನೆಂಬ ಆರೋಪವೊಡ್ಡಿ, ನನ್ನನ್ನು 3 ವರ್ಷ ಜೈಲಿಗೆ ತಳ್ಳಿದರು.

  ಆ ಜೈಲೋ, ನರಕದ ನಕಲು. ದಿನಬೆಳಗಾದರೆ, ಎಲೆಕ್ಟ್ರಿಕ್‌ ಸ್ಟಿಕ್‌ನ ಏಟು. ಅದರ ನೋವಲ್ಲೇ ನಿದ್ದೆಗೆಡುವ ರಾತ್ರಿಗಳು. ಎಷ್ಟೋ ಸಲ, ಜೈಲಿನ ಕೋಣೆಯೊಳಗೆ ನೀರು ಬಿಟ್ಟು, ಕರೆಂಟು ಕೊಟ್ಟಾಗ, ನನ್ನ ಜೀವ ತೇಲಿದಂತಾಗುತ್ತಿತ್ತು. “ನೀನು ನಿದ್ದೆಯಲ್ಲಿದ್ದರೆ ಎದ್ದುಬಿಡು ಬುದ್ಧ’ ಎಂದು ಕಣ್ಣೀರಾಗುತ್ತಿದ್ದೆ. ದಿನಗಟ್ಟಲೆ ಮೂಛೆì ಬಿದ್ದಿರುತ್ತಿದ್ದೆ. ಆ ಪವರ್‌ ಶಾಕ್‌ನಿಂದ ಕೈಕಾಲುಗಳು ಸ್ವಾಧೀನ ಕಳಕೊಂಡಾಗ, ಅಮ್ಮಾ ಎನ್ನುತ್ತಿದ್ದೆ. ಕತ್ತಲು ತುಂಬಿದ ಒಂದು ಕೋಣೆಗೆ ತಳ್ಳಿ, ಅದರಲ್ಲಿ ಒಂದೇ ಒಂದು ರಂಧ್ರಬಿಟ್ಟು, ಇಲಿಗಳ ಪಿಕ್ಕೆ ಇರುವ,  ಗಬ್ಬುನಾರುವ ಅಕ್ಕಿಯನ್ನು ಬೇಯಿಸಿ, ಒಂದು ತಟ್ಟೆಯಲ್ಲಿ ಒಳಗೆ ತಳ್ಳುತ್ತಿದ್ದರು. ಅದನ್ನೂ ಹೆಚ್ಚು ಕೊಡುತ್ತಿರಲಿಲ್ಲ. ಒಬ್ಬ ಮನುಷ್ಯ ಸಾಯದೇ ಉಳಿಯಲು ಎಷ್ಟು ಆಹಾರ ಬೇಕೋ ಅಷ್ಟನ್ನು ಮಾತ್ರವೇ ಕೊಡುತ್ತಿದ್ದರು. ನಮ್ಮ ಹಿಂದೆ ಪತ್ತೇದಾರಿಕೆಗಾಗಿಯೇ ಒಬ್ಬ ಸೈನಿಕನನ್ನು ಬಿಟ್ಟಿರುತ್ತಿದ್ದರು.

  “ನಿನ್ನ ಮನೆಯಲ್ಲಿದ್ದ ಧ್ವಜದ ಚಿತ್ರ ಬಿಡಿಸಿದವರಾರು?’ ಅಂತ ಕೇಳುತ್ತಾ ಎಷ್ಟೇ ಹಿಂಸಿಸಿದರೂ, ಅದನ್ನು ನಾನೇ ಬಿಡಿಸಿದ್ದು ಎಂದು ಹೆಮ್ಮೆಯಿಂದ ಒಪ್ಪಿಕೊಂಡಿದ್ದೆ. ನಮ್ಮದೇ ಜೈಲಿನಲ್ಲಿದ್ದ ಕಳ್ಳಕಾಕರಿಗೆ, ಅತ್ಯಾಚಾರಿಗಳಿಗೆ ಹೊರಗೆ ಹೋಗಿ ದೌರ್ಜನ್ಯ ಎಸಗಿಬರಲು ಅವಕಾಶ ನೀಡಲಾಗುತ್ತಿತ್ತು. ಚೀನಾದ ಕಾನೂನಿನಂತೆ, 18 ವರ್ಷದ ಒಳಗಿರುವವರನ್ನು ಬಂಧಿಸಿಡುವುದು ಕಾನೂನುಬಾಹಿರ. ನನಗೆ 16 ವರ್ಷವಾಗಿದ್ದರೂ, ನನ್ನನ್ನು ಅವರು ಕಾನೂನು ಬಾಹಿರವಾಗಿಯೇ ಬಂಧಿಸಿಟ್ಟರು. ನನ್ನ ಮನೆಯವರಿಗೆ ವಕೀಲರನ್ನು ನೇಮಿಸಲೂ ಅವಕಾಶ ನೀಡಿರಲಿಲ್ಲ.

  ಆ ಮೂರು ವರ್ಷದ ಜೈಲು ವಾಸದಲ್ಲಿ ವಾರಕ್ಕೊಂದು ಪುಸ್ತಕವನ್ನು ನೀಡುತ್ತಿದ್ದರು. ಅದರಲ್ಲಿ ನಮ್ಮ ಗುರುಗಳಾದ ದಲೈಲಾಮಾ ಅವರನ್ನು ಪ್ರತ್ಯೇಕತಾವಾದಿ ಎಂದು ಉಲ್ಲೇಖೀಸಲಾಗಿರುತ್ತಿತ್ತು. ಟೆಬೆಟಿನ ಬೌದ್ಧರನ್ನು ಅವರು ಜೀವಂತವಾಗಿ ಬೆಂಕಿಯಲ್ಲಿ ಹಾಕುತ್ತಿದ್ದರು ಎಂದು ಸುಳ್ಳು ಸುಳ್ಳಾಗಿ ಪುಸ್ತಕ ಮುದ್ರಿಸಿ, ಓದಲು ಕೊಡುತ್ತಿದ್ದರು. ಬುದ್ಧನ ಮತ್ತು ನಮ್ಮ ಗುರುಗಳ ಫೋಟೋವನ್ನು ಪ್ರಾಣಿಗಳ ಮಲದ ಮೇಲೆ ಮತ್ತು ಗಲೀಜು ಸ್ಥಳಗಳಲ್ಲಿ ಹರಿದು ಬಿಸಾಡುತ್ತಿದ್ದರು. ಆಗ ನಾವೆಲ್ಲ ಅದನ್ನು ನೋಡಿ ಸಹಿಸಲಾರದೇ, ಆ ಫೋಟೋಗಳನ್ನು ನಮ್ಮ ನಮ್ಮ ಸೆಲ್‌ಗ‌ಳಲ್ಲಿ ತಂದಿರಿಸಿ, ಪೂಜಿಸುತ್ತಿದ್ದೆವು. ಹಾಗೆ ಪೂಜಿಸುವುದೂ ಒಮ್ಮೆ ಜೈಲಾಧಿಕಾರಿಯ ಕಣ್ಣಿಗೆ ಬಿತ್ತು. ಆ ತಪ್ಪಿಗೆ ಮತ್ತೆ ಶಿಕ್ಷೆ. ಶೌಚಾಲಯದ ವ್ಯವಸ್ಥೆಯೇ ಇಲ್ಲದ ಕತ್ತಲ ಕೋಣೆಗೆ ನನ್ನನ್ನು ತಳ್ಳಿಬಿಟ್ಟರು. ಕೆಟ್ಟ ಅಕ್ಕಿಯನ್ನು ಸೋಪಿನ ನೀರಿನಲ್ಲಿ ನೆನೆಸಿ, ತಿನ್ನಲು ಕೊಡುತ್ತಿದ್ದರು. ಮೂರು ವರ್ಷ ಇಂಥದ್ದೇ ದಿನಗಳಲ್ಲಿ ಕರಗಿದ ಜೀವಕ್ಕೆ, ಕೊನೆಗೂ ಒಂದು ದಿನ ಬಿಡುಗಡೆ ಸಿಕ್ಕಿತ್ತು.

  ಆದರೆ, ಜೈಲಿನಿಂದ ಹೊರಗೆ ಬಂದ ಮೇಲೂ ನಾನು ಸ್ವತಂತ್ರವಾಗಿ ಓಡಾಡುವಂತಿರಲಿಲ್ಲ. ಎಲ್ಲೇ ಹೋಗುವುದಿದ್ದರೂ ಚೀನೀ ಅಧಿಕಾರಿಗಳ ಅನುಮತಿಯನ್ನು ಬೇಡಬೇಕಿತ್ತು. ನಂತರ ನನಗೆ ಆ ಊರಿನಲ್ಲಿ ಇರಲು ಮನಸ್ಸಾಗದೇ, ಟಿಬೆಟ್‌ನ ರಾಜಧಾನಿ ಲ್ಹಾಸಾಗೆ ಬರುವ ಯೋಚನೆ ಮಾಡಿ, ಒಂದು ವರ್ಷದೊಳಗೆ ಅಲ್ಲಿಂದ ವಾಪಸಾಗುವುದಾಗಿ ಹೇಳಿ, ಚೀನಾ ಸರ್ಕಾರದಿಂದ ಒಪ್ಪಿಗೆ ಪಡೆದೆ. ಹಾಗೆ ನಾನು ಅನುಮತಿ ಪಡೆದಿದ್ದು, ಭಾರತಕ್ಕೆ ಬರುವುದಕ್ಕಾಗಿ. ಅದೇ ರೌದ್ರ ರಮಣೀಯ ಕಣಿವೆಗಳನ್ನು ಹಾದು, ಒಂದೇ ಉಸಿರಿನಲ್ಲಿ ಈ ನೆಲವನ್ನು ಅಪ್ಪಿಕೊಳ್ಳುವುದಕ್ಕಾಗಿ.

  ಆದರೆ, ಲ್ಹಾಸಾದಿಂದ ಭಾರತಕ್ಕೆ ಬರುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಏಜೆಂಟರ ಕಿಸೆ ತುಂಬಿಸಬೇಕಿತ್ತು. ನಮ್ಮ ಬಳಿ ಹಣ ಕಿತ್ತುಕೊಂಡು, ನೇಪಾಳದ ಗಡಿ ದಾಟಿಸುವ ಅಮಾನುಷ ಏಜೆಂಟರುಗಳು ಅವರು. ಅವರಲ್ಲಿ ಅನೇಕರು ನಂಬಿಕೆ ಅರ್ಹರೇ ಅಲ್ಲ. ಕೆಲವೊಬ್ಬರು ಹಣ ತೆಗೆದುಕೊಂಡು ನೇಪಾಳದ ಗಡಿ ದಾಟಿಸಲು ನೆರವಾದರೆ, ಮತ್ತೆ ಕೆಲವರು ಹಣ ಪಡೆದೂ, ಚೀನೀ ಸೈನಿಕರಿಗೆ ನಮ್ಮನ್ನು ಹಿಡಿದುಕೊಡುತ್ತಿದ್ದರು.

   ಬೌದ್ಧ ತತ್ವದ ಪ್ರಕಾರ, ಲಾಮಾಗಳು ಸುಳ್ಳು ಹೇಳುವಂತಿಲ್ಲ. ಸುಳ್ಳು ಎಂದರೆ ಸಣ್ಣಪುಟ್ಟ, ಜೀವಪರ ಸುಳ್ಳುಗಳಲ್ಲ, ದೊಡ್ಡ ಸುಳ್ಳು ಹೇಳಿ ಪ್ರಮಾದ ಎಸಗುವಂತಿಲ್ಲ ಎನ್ನುತ್ತದೆ ಬೌದ್ಧ ಧರ್ಮ. ಆದರೆ, ನಾನು ನನ್ನ ಜೀವ ಉಳಿಸಿಕೊಳ್ಳಲು ಮೊದಲ ಬಾರಿಗೆ ಸುಳ್ಳು ಹೇಳಿದ್ದೆ. ವ್ಯಾಪಾರಸ್ಥ ಎಂದು ಪರಿಚಯಿಸಿಕೊಳ್ಳುವಂತೆ ಹೇಳಿ, ಅಲ್ಲಿದ್ದ ಪರಿಚಯಸ್ಥರು ನನಗೆ ದಾಖಲೆಗಳನ್ನು ಮಾಡಿಸಿಕೊಟ್ಟರು. ಅದಕ್ಕಾಗಿ ಸಾಕಷ್ಟು ಸಲ ಓಡಾಡಿ, ಕೊನೆಗೆ 30 ಸಾವಿರ ರೂ. ಲಂಚ ಕೊಟ್ಟು, ಟಿಬೆಟ್‌ನ ಗಡಿ ದಾಟಿ, ನೇಪಾಳದ ಹಾದಿ ಹಿಡಿದೆ. ಅಲ್ಲಿ ಏಜೆಂಟರು ನನ್ನ ಉಡುಪನ್ನು ಬದಲಿಸಿ, ನೇಪಾಳಿ ಡ್ರೆಸ್‌ ಧರಿಸಲು ಕೊಟ್ಟರು. ಲೋಕಲ್‌ ಬಸ್‌ ಏರಿಕೊಂಡು ಹೊರಟೆ. ನಡುವೆ ಹತ್ತಾರು ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ನಮ್ಮಿಂದ ಲಂಚ ಕಿತ್ತುಕೊಳ್ಳುತ್ತಿದ್ದರು. ಕಠ್ಮಂಡುವಿನ ಟಿಬೆಟಿಯನ್‌ ನಿರಾಶ್ರಿತರ ಶಿಬಿರಕ್ಕೆ ಬಂದ ಮೇಲೆ ನಿಟ್ಟುಸಿರುಬಿಟ್ಟಿದ್ದೆ. ಅಲ್ಲಿಗೆ ಬಂದು ಯಾರಿಗೇ ಆದರೂ, ನಾವು ಸುರಕ್ಷಿತ ಎಂಬ ಫೀಲ್‌ ಹುಟ್ಟುತ್ತಿತ್ತು. ಅಲ್ಲಿಂದ ಯಾರನ್ನೂ ಟಿಬೆಟ್‌ಗೆ ವಾಪಸು ಕಳಿಸುತ್ತಿರಲಿಲ್ಲ.

   ಟಿಬೆಟ್‌ನಲ್ಲಿ ಈಗ ನನ್ನ ತಾಯಿ ಬದುಕಿದ್ದಾರೆ. ಅಣ್ಣ ಇದ್ದಾನೆ. ನಾನು ಭಾರತಕ್ಕೆ ಬಂದ ಮೇಲೆ ನಮ್ಮ ಮನೆಗೆ 7 ಬಾರಿ ಚೀನೀ ಸೈನಿಕರು ನುಗ್ಗಿ ಮನೆಜಪ್ತಿ ಮಾಡಿದ್ದಾರೆ. ಮನೆಯಲ್ಲಿ ಒಲೆ ಉರಿಸಲೂ ಬಿಡದೇ, ಉಪವಾಸವಿರುವಂತೆ ಸೂಚಿಸುತ್ತಿದ್ದರು.  ”ಎಲ್ಲಿ ಅವನು? ’ ಎಂದು ಹಿಂಸಿಸಿ ನನ್ನ ಬಗ್ಗೆ ಕೇಳಿದ್ದಾರೆ. ಕೊನೆಗೆ ನನ್ನ ಅಮ್ಮ, “ಅವನೆಲ್ಲಿದ್ದಾನೆಂದು ನಮಗೆ ತಿಳಿದಿಲ್ಲ. ದಯವಿಟ್ಟು, ನೀವೇ ಅವನನ್ನು ಹುಡುಕಿಕೊಡಿ ’ ಎಂದು ಒತ್ತಾಯಿಸಿದಾಗ, ಆ ಸೈನಿಕರು ಬರುವುದನ್ನು ನಿಲ್ಲಿಸಿದ್ದಾರೆ. ನಾನು ಇಲ್ಲಿರುವ ವಿಷಯ ನಮ್ಮ ಮನೆಯವರಿಗೆಲ್ಲ ತಿಳಿದಿದೆ. ಆದರೆ, ಫೋನು ಮಾಡಿ ಮಾತಾಡುವ ಸ್ವಾತಂತ್ರ್ಯ ಈಗಲೂ ಇಲ್ಲ. ಭಾರತದಿಂದ ಟಿಬೆಟ್‌ಗೆ ಹೋಗುವ ಪ್ರತಿ ಕರೆಯನ್ನೂ ಚೀನಾ ಕದ್ದಾಲಿಸುತ್ತದೆ. ಫೇಸ್‌ಬುಕ್‌, ವಾಟ್ಸಾಪ್‌ಗ್ಳು ಅಲ್ಲಿ ನಿಷಿದ್ಧ. ಚೀನಾವೇ ಸ್ವತಃ “ವಿ ಚಾಟ್‌’, “ವಿಬೋ’ ಎಂಬ ಸೋಷಿಯಲ್‌ ಮೀಡಿಯಾಗಳನ್ನು ಬಿಟ್ಟಿದ್ದು, ಅವುಗಳ ಮೂಲಕವಷ್ಟೇ ನಾವು ಅವರನ್ನು ಸಂಪರ್ಕಿಸಬೇಕು. ಅವೂ ಚೀನೀ ಸರ್ಕಾರದ ಅಧೀನದಲ್ಲಿರುವುದರಿಂದ, ಅವರ ವಿರುದ್ಧ ಏನೇ ಪೋಸ್ಟ್‌ ಮಾಡಿದರೂ, ಎರಡೇ ಸೆಕೆಂಡಿನಲ್ಲಿ ಅದು ಡಿಲೀಟ್‌ ಆಗುತ್ತದೆ. 

  ಆರು ವರ್ಷದ ಕೆಳಗೆ ನಮ್ಮ ಸಂಬಂಧಿಕರಿಗೆ ಟಿಬೆಟ್‌ನಲ್ಲಿ ಕೆಲಸ ಸಿಕ್ಕಿತು. ಕೆಲವೇ ದಿನಗಳಲ್ಲಿ ಚೀನೀ ಮಿಲಿಟರಿ ಒಂದು ಅನೌನ್ಸ್‌ಮೆಂಟ್‌ ಮಾಡಿತು: “ಯಾರು ಕೆಲಸದಲ್ಲಿದ್ದಾರೋ, ಅವರ ಸಂಬಂಧಿಕರು ಭಾರತದಲ್ಲಿದ್ದರೆ, ಕೆಲಸದಿಂದ ವಜಾ ಮಾಡಲಾಗುತ್ತದೆ  …’ ಹೀಗೆಲ್ಲಾ ಹೆದರಿಸಿದ್ದರು. ಈ ಆದೇಶ ಹೊರಬಿದ್ದ ಮೇಲೆ, ತಮ್ಮವರ ಪ್ರಾಣ ಉಳಿಸಲು ಇಲ್ಲಿಂದ ಎಷ್ಟೋ ಜನ, ಮತ್ತೆ ಟಿಬೆಟ್‌ಗೆ ಹೋಗಿದ್ದರು. ಆದರೆ, ಅವರನ್ನೆಲ್ಲ ನಿರ್ದಾಕ್ಷಿಣ್ಯವಾಗಿ ಹೊಸಕಿಹಾಕಿತು, ಚೀನಾ.

  ನನಗೆ ಭಾರತವೆಂದರೆ, ಪ್ರೀತಿ. ನಮ್ಮ ನೆಲವನ್ನು ಆಕ್ರಮಿಸಿ, ಸ್ವಾತಂತ್ರ್ಯವನ್ನು ಕಿತ್ತುಕೊಂಡ ಆ ಚೀನಾಕ್ಕೂ; ನೆಲೆ ನಿಲ್ಲಲು ಜಾಗ ಕೊಟ್ಟು, ಹೋದಲ್ಲೆಲ್ಲ ಮೊಗೆಮೊಗೆದು ಪ್ರೀತಿ ಕೊಟ್ಟು, ನೆಮ್ಮದಿಯಿಂದ ಬದುಕಲು ಬಿಡುತ್ತಿರುವ ಈ ಭಾರತಕ್ಕೂ ಇರುವ ವ್ಯತ್ಯಾಸ ಇಷ್ಟೇ. ಇದು ಬಂಧನಕ್ಕೂ, ಸ್ವಾತಂತ್ರ್ಯಕ್ಕೂ ಇರುವ ಸ್ಪಷ್ಟ ಹೋಲಿಕೆ. ವ್ಯಕ್ತಿಯನ್ನು ತನ್ನಪಾಡಿಗೆ ತಾನು ಉಸಿರಾಡಲು ಬಿಟ್ಟು, ಅವನ ಆಲೋಚನೆಗಳಿಗೆ ಅವಕಾಶ ಮಾಡಿಕೊಡುವ ಸ್ವಾತಂತ್ರ್ಯಕ್ಕೆ ಮೌಲ್ಯ ಹೆಚ್ಚು. ಅದು ಈ ನೆಲದಲ್ಲಿದೆ. ಅದಕ್ಕೇ ನಾನು ಭಾರತೀಯನಾಗಿರಲು ಹೆಮ್ಮೆಪಡುತ್ತೇನೆ. 

ನಿರೂಪಣೆ: ಕೀರ್ತಿ ಕೋಲ್ಗಾರ್‌

ಟಾಪ್ ನ್ಯೂಸ್

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.