CONNECT WITH US  

ಕುರಿಂಜಲ್‌! ಜೀವ ಝಲ್ಲೆಂದಿದೆ...

ಹೂವಿನ ಬೆಟ್ಟದಲ್ಲಿ ಬೀಸೋ ಗಾಳಿಗೆ ಎದೆಯೊಡ್ಡಿ...

ಈ ಬೆಟ್ಟ 10 ವರ್ಷಗಳಿಗೊಮ್ಮೆ ಸೌಂದರ್ಯ ತುಂಬಿಕೊಂಡರೂ, ಮಿಕ್ಕ ಟೈಮ್‌ನಲ್ಲೂ ಆಕರ್ಷಕವೇ. ನೀಲಿ ಕುರಿಂಜಿಗಳ ಈ ಬೆಟ್ಟದ ತುದಿ ತಲುಪುವುದೇ ಒಂದು ಸಾಹಸ. ಅಲ್ಲಲ್ಲಿ ಬಂಡೆಗಳು, ಕೆಳಗೆ ಪ್ರಪಾತ, ಹೆಜ್ಜೆಯುದ್ದಕ್ಕೂ ಎಲ್ಲೋ ಬಿಸಾಕಿ ಬಿಡುವಂಥ ರಭಸದ ಗಾಳಿ... ಒಟ್ಟಿನಲ್ಲಿ ಈ ಚಾರಣವೇ ಸಖತ್‌ ಚಾಲೆಂಜಿಂಗ್‌...

ಕುರಿಂಜಲ್‌ ಗುಡ್ಡ! ಹತ್ತು ವರ್ಷಕ್ಕೊಮ್ಮೆ ಬಿಡುವ ಕುರಿಂಜಲ್‌ ನೀಲಿ ಕುರಿಂಜಿ ಹೂಗಳಿಗೆ ಈ ಗುಡ್ಡ ಫೇಮಸ್ಸು. ಇದು ಕುದುರೆಮುಖದ ಸಮೀಪದಲ್ಲಿದೆ. ಹಿಂದಿನ ವರ್ಷ ಕರ್ನಾಟಕದ ಸಂಡೂರಿನಲ್ಲಿ ಈ ಹೂಗಳು ಬಿಟ್ಟಿದ್ದವು. ಈ ವರ್ಷ ಕೇರಳದ ಮುನ್ನಾರಿನ ಎರವಿಕುಲಂ ಎಂಬಲ್ಲಿ ಬಿಡುತ್ತಿವೆ. ಅದೇ ತರಹ ಬಿಳಿ ಕುರಿಂಜಿ ಹೂಗಳೂ ಇವೆ. 2022ರಲ್ಲಿ ಈ ಬೆಟ್ಟದ ತುಂಬೆಲ್ಲಾ ಬಿಳಿ ಕುರಿಂಜಿ ಹೂಗಳು ಬಿಡುತ್ತವಂತೆ. ಈ ಬೆಟ್ಟವನ್ನು ಒಮ್ಮೆ ಹತ್ತಿಳಿಯಲೆಂದೇ ನಾವು ಬೆಂಗಳೂರಿನಿಂದ ಹೊರಟಿದ್ದೆವು.

  ನಮ್ಮ ಚಾರಣ ತಂಡದಲ್ಲಿ ಶಾಂತಿ ಪ್ರಸಾದ್‌, ಸೌಮ್ಯ, ರೇಖಾ, ಸುರೇಶ್‌, ಶ್ರೀನಿಧಿ, ಪ್ರಭಾಕರ್‌, ರಾಜೇಶ್‌ , ನರಸಿಂಹ, ಶ್ರೀಹರ್ಷ, ಅಶೋಕ್‌ ಅವರೊಂದಿಗೆ ರಾಜಸ್ಥಾನದ ಶುಭಂ ಕೂಡ ಇದ್ದರು. ನಮಗೆ ಕುದುರೆಮುಖದಲ್ಲಿ ಜೊತೆಯಾದದ್ದು ಮುಂಬೈನಿಂದ ಬಂದಿದ್ದ ಬೆಂಗಾಲಿ ಟ್ರೆಕ್ಕರ್‌ ಅಮೃತಾ ಚಟರ್ಜಿ.

ಹೊರಟಿತು ಪಯಣ...
ಭಗವತಿಯಲ್ಲಿ ನಮ್ಮ ಟಿ.ಟಿ.ಯನ್ನು ನಿಲ್ಲಿಸಿದ ನಾವು, ಗೈಡ್‌ನೊಂದಿಗೆ ಕುರಿಂಜಲ್‌ ಗುಡ್ಡದತ್ತ ಸಾಗಿದೆವು. ಸಾಮಾನ್ಯ ಟಾರ್‌ ರಸ್ತೆಯಲ್ಲಿ ಸುಮಾರು 600 ಮೀಟರ್‌ ನಡೆದ ಬಳಿಗೆ ಎಡಕ್ಕೆ ಸಿಗೋ ಹಾದಿಯಲ್ಲಿ ಹೊರಳಿ ಕುರಿಂಜಲ್‌ ಗುಡ್ಡಕ್ಕೆ ಸಾಗಬೇಕು. ಅಲ್ಲಿರೋ ಫ‌ಲಕಗಳ ಪ್ರಕಾರ, ಗುಡ್ಡಕ್ಕೆ 5 ಕಿ.ಮೀ. ಅಂದರೆ, ಜೀಪಿನ ಹಾದಿಯಲ್ಲಿ 5 ಕಿ.ಮೀ. ಶಾರ್ಟ್‌ ಕಟ್‌ಗಳನ್ನು ಬಳಸಿದ್ರೆ 4 ಕಿ.ಮೀ. ಅಗುತ್ತೆ. ದಾರಿಯಲ್ಲಿ ಎಲ್ಲಿ ನೋಡಿದರೂ ಉಂಬಳಗಳು. ನಾವು ಹೋದಾಗ ಭಯಾನಕ ಮಳೆಯಾಗಿ, ರಸ್ತೆಯುದ್ದಕ್ಕೂ ಪಾದ ಮುಳುಗುವಷ್ಟು ನೀರು ಹರಿಯುತ್ತಿತ್ತು. ಮಧ್ಯ ಮಧ್ಯ ಸಿಗೋ ಮಳೆಗಾಲದ ಜಲಪಾತಗಳು, ಆಗಾಗ ಕಾಣೋ ಸಣ್ಣ ನದಿ, ತೊರೆಗಳು, ದೂರದಲ್ಲೆಲ್ಲೋ ಕಾಣೋ ಕಣಿವೆಗಳು ಕಣ್ಣಿಗೆ ರೋಮಾಂಚನ ಹುಟ್ಟಿಸುತ್ತಿದ್ದವು. ಮಂಜು ಹೊದ್ದ ಬೆಟ್ಟಗಳ ಸಾಲು, ತೋಳು ಚಾಚಿ ನಮ್ಮನ್ನು ಬರಸೆಳೆಯುವಂತಿದ್ದ ಹಸಿರ ಬೆಟ್ಟದ ಕಾನನಗಳು, "ಉಧೋ' ಎಂದು ಸುರಿಯೋ ಜಡಿಮಳೆ ತಮ್ಮದೇ ಒಂದು ಮಾಯಾಲೋಕವನ್ನು ಸೃಷ್ಟಿಸಿದ್ದವು.

ಹಸಿರ ಕಣಿವೆ, ಕಿತ್ತೆಸೆಯೋ ಗಾಳಿ... 
ಇಲ್ಲಿಗೆ ಗೈಡ್‌ನೊಂದಿಗೆ ಬರೋದು ಯಾಕೆ ಮುಖ್ಯ ಅಂತ ನಮಗೆ ಅರ್ಥವಾಗಿದ್ದು ಅಲ್ಲಿನ ಶಿಖರದ ಹತ್ತಿರತ್ತಿರ ತಲುಪೋ ಹೊತ್ತಿಗೆ. ಇಲ್ಲಿನ ಬೆಟ್ಟಕ್ಕೆ ಎರಡು ಹಾದಿಗಳಲ್ಲಿ ತಲುಪಬಹುದು. ಒಂದು ಕಾಡಿನ ನಡುವೆ ಬರೋ ಕಾಲು ಹಾದಿ. ಇಲ್ಲಿ ಕಾಡಿನ ನಡುವೆ ಬರೋದು ಇದ್ರೂ ಇಲ್ಲಿ ಜಾರುವಿಕೆಯಾಗಲಿ, ಬಂಡೆಗಳಾಗಲಿ, ಬೀಸು ಗಾಳಿಯಾಗಲೀ ಇಲ್ಲ. ಮತ್ತೂಂದು ಅಂದರೆ ನಾವು ಬಂದ ಹಾದಿಯಲ್ಲಿ ಬಂದರೆ ಜೀಪು ಹಾದಿ ಕೊನೆಯಾಗೋ ಹೊತ್ತಿಗೆ ಹುಲ್ಲುಗಾವಲೊಂದು ಶುರುವಾಗುತ್ತೆ. ಅದರಲ್ಲಿ ಸ್ವಲ್ಪ ಹೊತ್ತು ಸಾಗುವ ಹೊತ್ತಿಗೆ ಬೆಟ್ಟದ ಅಂಚು ಬರುತ್ತೆ. ಆ ಅಂಚಲ್ಲೇ ನಾವು ನಡೆದು ಕುರಿಂಚಲ್‌ ಶಿಖರದತ್ತ ಸಾಗಬೇಕು. ಆ ಅಂಚಿನಲ್ಲಿ ಕೆಳಗಿನಿಂದ ಬೀಸುವ ಗಾಳಿ ಮತ್ತು ಮಳೆ ಇದೆಯಲ್ಲ, ಅಬ್ಟಾ..! ಪ್ರತೀ ಹೆಜ್ಜೆಯೂ ಸವಾಲೇ. ಆ ಗಾಳಿ, ಮಳೆಗೆ ಛತ್ರಿಗಿತ್ರಿಯೆಲ್ಲಾ ತಡೆಯೋದೇ ಇಲ್ಲ. ಪಾಂಚೋವೇ ಸರಿ ಇಲ್ಲಿಗೆ. ಪಾಂಚೋ ಅಂದ್ರೆ, ರೈನ್‌ಕೋಟಿನ ಥರದ್ದೇ ಒಂದು ಮಳೆ ತಡೆಯೋ ಉಡುಪು. ಆದರೆ, ರೈನುಕೋಟಿನಂತೆ ಕೈ, ಕಾಲುಗಳಿರೋಲ್ಲ.

ಪ್ರಕೃತಿಯ ಮಗುವಾಗಿ...
ಹೂ ಬಿಡದ ಕುರಿಂಜಲ್‌ ಗಿಡಗಳನ್ನ ಮತ್ತು ಹೆಸರರಿಯದ ಹಲವು ಮಲೆನಾಡ ಹೂಗಳ ಸೌಂದರ್ಯವನ್ನು ಆಸ್ವಾದಿಸುತ್ತಾ, ಜಾರಬಹುದಾದ ಬಂಡೆಗಳ ಮೇಲೆ ನಿಧಾನವಾಗಿ ಕಾಲಿಡುತ್ತಾ ಗುಡ್ಡದ ತುದಿಯನ್ನು ತಲುಪೋ ಹೊತ್ತಿಗೆ ಹನ್ನೊಂದು ಮುಕ್ಕಾಲು. ಆ ಗಾಳಿಗೆ, ಮಂಜು ಸರಿಯೋ ಆ ಕೆಲವೇ ಕೆಲವು ಕ್ಷಣಗಳಿಗೆ ಕಾಯೋದೇ ಒಂದು ಮಜಾ. ಕೆಲವೊಮ್ಮೆ ನಿಮಿಷಗಟ್ಟಲೇ ಕಾದರೂ ಏನೂ ಇಲ್ಲ. ಅದೇ ಗಾಂಭೀರ್ಯ. ಅದೇ ಬಿಳಿ. ಅದೇ ನಿಶ್ಯಬ್ದ ಎಲ್ಲೆಡೆ. ದಿನದ ಜಂಜಾಟಗಳಿಂದ ಹೊರಬಂದ ನಾನು ಎಲ್ಲೋ ಕಳೆದುಹೋದಂತೆ, ಪ್ರಕೃತಿಯ ಮಡಿಲಲ್ಲಿ ಮಗುವಾದಂತೆ ಅನ್ನಿಸುತ್ತಿತ್ತು.

ಅಲ್ಲಿ ಫೋಟೋ ತೆಗೆಯೋಕೆ ಹೋದ್ರೆ ಜೀವ ಹೋಗುತ್ತೆ!
ಬಂಡೆಗಳ ನಂತರ ಮತ್ತೆ ಬೆಟ್ಟದ ಹಾದಿ, ಬೀಸೋ ಗಾಳಿ ಮಳೆ, ಮತ್ತೆ ಬಂಡೆಗಳು... ಇದು ಇಲ್ಲಿನ ಚಾರಣ ಹಾದಿ. ಮಂಜು ಮುಸುಕಿದ ಗುಡ್ಡದ ಭಯಾನಕ ಆಕಾರವನ್ನು ನೋಡಿ, ಅಲ್ಲಿಯವರೆಗೂ ಹತ್ತಬೇಕಾ ಅಂತನಿಸಿಬಿಡುತ್ತೆ ಒಂದೊಂದು ಸಲ. "ಸುಮಾರು ಜನ ಅಲ್ಲಿಯವರೆಗೆ ಹತ್ತೋಕಾಗಲ್ಲಪ್ಪ ಅಂತ ವಾಪಸಾಗೋದೂ ಇದೆ' ಅಂತ ನಮ್ಮ ಗೈಡ್‌ ದಿನೇಶ್‌ ಹೇಳ್ತಾ ಇದ್ರು. ಇಲ್ಲೇ ಇನ್ನೊಂದು ದೊಡ್ಡ ಬಂಡೆ ಸಿಗುತ್ತೆ. ಅದರ ಪಕ್ಕದಲ್ಲಿರೋ ಹಾದಿಯಲ್ಲಿ ನೇರವಾಗಿ ಹತ್ತಿ ತಮ್ಮ ಗಮ್ಯವನ್ನು ತಲುಪೋ ಬದಲು ಪಕ್ಕದಲ್ಲಿ ಕಾಣೋ ಬಂಡೆಗಳ ಮೇಲೆ ಹತ್ತಿ ಫೋಟೋ ತೆಗೆಯೋ ಹುಚ್ಚು ಹಲವರಿಗೆ. ಅಲ್ಲಿಗೆ ತಲುಪೋ ಮೊದಲೇ ನಮ್ಮ ಗೈಡ್‌ ಹೇಳಿದ್ದ. "ಮುಂದೊಂದು ದೊಡ್ಡ ಬಂಡೆ ಸಿಗುತ್ತೆ. ಅಲ್ಲಿ ಸಖತ್‌ ಜಾರುತ್ತೆ. ಅದರ ಮೇಲೆಲ್ಲಾ ಹತ್ತಿ ಫೋಟೋ ಗೀಟೋ ತೆಗೆಯೋಕೆ ಹೋಗಬೇಡಿ. ಮೇಲೆ ಹೋದಾಗ ಫೋಟೋ ತೆಗೆಯಬಹುದು' ಅಂತ. ಆ ಬಂಡೆಯ ಪಕ್ಕ ನಿಂತು ನೋಡಿದಾಗ ಆತ ಹೇಳಿದ ಮಾತು ಅರ್ಥವಾಯ್ತು. ಬಯಲಲ್ಲೇ ಎಳೆಯುತ್ತಿದ್ದ ಗಾಳಿ ಆ ಬಂಡೆಯ ಮೇಲೆ ಇನ್ನೆಷ್ಟು ನೂಕಬಹುದು! ಮಳೆಗಾಲದಲ್ಲಿ ಪಾಚಿಗಟ್ಟಿದ ಬಂಡೆಗಳು ಇನ್ನೆಷ್ಟು ಜಾರಬಹುದು! ಜಾರಿದರೆ ಹಿಡಿದುಕೊಳ್ಳಲು ಮರ ಹೋಗಲಿ ಒಂದು ಹುಲ್ಲುಕಡ್ಡಿಯೂ ಇಲ್ಲದ ಬಂಡೆ ಮತ್ತು ಅದರಾಚೆಯ ಪ್ರಪಾತವನ್ನು ನೋಡಿ ಒಮ್ಮೆ ಎದೆ ಝಲ್ಲಂತು. ಸೆಲ್ಫಿ ಹುಚ್ಚು ಇಲ್ಲಿ ಹಲವು ಚಾರಣಿಗರ ಬಲಿ ತೆಗೆದುಕೊಂಡಿದೆಯಂತೆ.

ಡೆಡ್ಲಿ ಚಾರಣ, ಬೇಡ ಕಾರಣ
ಎಲ್ಲ ಬೆಟ್ಟಗಳಂತೆ ಮಾಮೂಲಿಯಾಗಿ ಇದನ್ನು ಹತ್ತಲಾಗದು. ದೈಹಿಕವಾಗಿ ಫಿಟ್‌ ಇದ್ದರಷ್ಟೇ ಈ ಚಾರಣಕ್ಕೆ ತಯಾರುಗೊಳ್ಳಿ. ಮಳೆಗಾಲದಲ್ಲಿ ಹೋಗುವವರು ಇಲ್ಲಿನ ನಾನಾ ಸವಾಲುಗನ್ನು ಎದುರಿಸಲು ತಯಾರಾಗಿಯೇ ಹೋಗಬೇಕು. ಕೇವಲ ಉಂಬಳ ಮಾತ್ರವಲ್ಲ, ಇಲ್ಲಿ ತುಸುವೇ ಕಾಲು ಜಾರಿದರೂ ಪ್ರಪಾತಕ್ಕೆ ಆಹಾರವಾಗೋದು ನಿಶ್ಚಿತ. 

ಪ್ರಶಸ್ತಿ ಪಿ.

Trending videos

Back to Top