CONNECT WITH US  

ಒಬ್ಬನೇ ಅವನಲ್ಲಿ ತಬ್ಬಿಬ್ಬುಗೊಂಡಿಹನು...

ಮೂರೇ ನಿಮಿಷದ ಮನುಷ್ಯ

ಏಷ್ಯಾದಲ್ಲೇ ಅತಿದೊಡ್ಡ ಏಕಶಿಲಾ ಪರ್ವತ ಸಾವನದುರ್ಗ. ಬೆಂಗಳೂರಿನಿಂದ 70 ಕಿ.ಮೀ. ದೂರದಲ್ಲಿದೆ. ನಾವೊಂದಷ್ಟು ಮಂದಿ ಗೆಳೆಯರು ಅಲ್ಲಿಗೆ ಚಾರಣಕ್ಕೆಂದು ತೆರಳಿದ್ದೆವು. ಕಡಿದಾದ ಮಾರ್ಗದಲ್ಲಿ ಏದುಸಿರು ಬಿಡುತ್ತಾ, ಪ್ರತಿ ಐದು ಹತ್ತು ನಿಮಿಷಗಳಿಗೊಮ್ಮೆ ವಿರಾಮ ತೆಗೆದುಕೊಳ್ಳುತ್ತಾ ಸಾಗುತ್ತಿದ್ದೆವು. ನಮ್ಮ ತಂಡದಲ್ಲಿ ಒಬ್ಬ ಉತ್ತರಭಾರತೀಯ ಗೆಳೆಯನಿದ್ದ. ಅವನು ಯುರೋಪಿನ ಕೆಲವು ದೇಶಗಳಲ್ಲಿ ಟ್ರೆಕ್ಕಿಂಗ್‌ ಮಾಡಿದವ. ಹಿಮಾಲಯದ ಆಸುಪಾಸಿನ ಶಿಖರವನ್ನೂ ಏರಿದ್ದ ಅನುಭವ ಆತನಿಗಿತ್ತು. 

  ಅದ್ಯಾವುದೋ ಕೆಟ್ಟ ಕ್ಷಣ, ಒಂದು ಕಡೆ ಸೂಚನಾಫ‌ಲಕವನ್ನು ನಿರ್ಲಕ್ಷಿಸಿ ಶಾರ್ಟ್‌ ಕಟ್‌ನಲ್ಲಿ ಬೆಟ್ಟವೇರತೊಡಗಿದ. ಅದು ನಮಗೆ ಗೊತ್ತೇ ಇರಲಿಲ್ಲ. ನಾವೆಲ್ಲರೂ ಸೂಚನಾಫ‌ಲಕವನ್ನು ಪಾಲಿಸುತ್ತಾ ಗುರುತು ಮಾಡಿದ್ದ ಕಡೆಯೇ ಸಾಗಿದೆವು. ಸ್ವಲ್ಪ ಹೊತ್ತಿನ ನಂತರ ಆ ಗೆಳೆಯನ ಸುಳಿವು ಇಲ್ಲದಿರುವುದು ನಮ್ಮ ಗಮನಕ್ಕೆ ಬಂತು. ನೆಟ್‌ವರ್ಕ್‌ ಬೇರೆ ಸರಿಯಾಗಿ ಸಿಗುತ್ತಿರಲಿಲ್ಲ. ಮೊಬೈಲ್‌ ಚೆಕ್‌ ಮಾಡಿದರೆ, ಆ ಗೆಳೆಯ ತಾನು ಒಂದು ಕಡೆ ಸಿಲುಕಿಕೊಂಡಿರುವುದಾಗಿ ಹೇಳಿ ನೆರವಾಗುವಂತೆ ಮೆಸೇಜ್‌ ಕಳಿಸಿದ್ದ. ಫೋನ್‌ ಮಾಡುವಷ್ಟರಲ್ಲಿ ನೆಟ್‌ವರ್ಕ್‌ ಹೋಗಿತ್ತು. ಕಡೆಗೂ ಅವನಿರುವ ಜಾಗವನ್ನು ಪತ್ತೆ ಮಾಡಿದ್ದೆವು. 

  ಅಲ್ಲಿ ನೋಡಿದರೆ, ಅವನು ಮುಂದಕ್ಕೆ ಮತ್ತು ಹಿಂದಕ್ಕೆ ಒಂದು ಹೆಜ್ಜೆ ಇಡಲೂ ಆಗದಂಥ ಜಾಗದಲ್ಲಿ ಸಿಕ್ಕಿಕೊಂಡುಬಿಟ್ಟಿದ್ದ. ಏನು ಮಾಡೋಣವೆಂದು ನಮಗೆ ತೋಚಲಿಲ್ಲ. ಅಷ್ಟರಲ್ಲಿ ನಮ್ಮಿಂದ ಸ್ವಲ್ಪ ದೂರದಲ್ಲಿ ಜ್ಯೂಸು ಮಾರಿಕೊಂಡು ನಿಂತಿದ್ದವ ಕಣ್ಣಿಗೆ ಬಿದ್ದ. ಅವನಿಗೆ ಪರಿಸ್ಥಿತಿ ವಿವರಿಸಿದೆವು. ಅವನು ಆ ಗೆಳೆಯನ ತಿಳಿಗೇಡಿತನವನ್ನು ಬೈದುಕೊಳ್ಳುತ್ತಾ ಅವನಿದ್ದಲ್ಲಿಗೆ ತಲುಪಿ ಅವನನ್ನು ಸುರಕ್ಷಿತವಾಗಿ ಕೆಳಕ್ಕೆ ಕರೆ ತಂದ. ಜೀವಂತ ಹಿಂತಿರುಗುವ ಆಸೆಯನ್ನೇ ಕೈಚೆಲ್ಲಿದ್ದ ಆ ಗೆಳೆಯ ಮಹಾಶಯ ಅಷ್ಟರಲ್ಲಾಗಲೇ ಅಪ್ಪ ಅಮ್ಮನಿಗೆ "ಐ ಲವ್‌ ಯೂ' ಎಂದು ಕೊನೆಯ ಮೆಸೇಜು ಎಂಬಂತೆ ಕಳಿಸಿಬಿಟ್ಟಿದ್ದ. ಅಲ್ಲಿಯ ತನಕ ಆತಂಕದಿಂದ ಕುದ್ದು ಹೋಗಿದ್ದ ನಮ್ಮೆಲ್ಲರ ಮನಸ್ಸು, ಜ್ಯೂಸ್‌ ಮಾರುವವನ ಉಪಕಾರದಿಂದ ತಂಪಾಯಿತು.

ಸುಹಾಸ್‌ ರೈ, ಬೆಂಗಳೂರು

Trending videos

Back to Top