CONNECT WITH US  

ಅಭಿವೃದ್ಧಿ ರಾಜಕೀಯ ಹೆಚ್ಚುಗಾರಿಕೆಯೇ ತಂತ್ರ

ಹಾಲಿ ಶಾಸಕರಿಗೆ ಟಿಕೆಟ್‌ ಖಾತ್ರಿ; ಸೋತವರಿಗೆ ಅನಿಶ್ಚಿತತೆ

ಕೃಷ್ಣನ ನೆಲೆವೀಡು ಉಡುಪಿ ಜಿಲ್ಲೆ ಅಭಿವೃದ್ಧಿ ರಾಜಕಾರಣದತ್ತ ಮುಖಮಾಡಿರುವುದು ಧನಾತ್ಮಕ ಬೆಳವಣಿಗೆ.  ಹಳ್ಳಿ ಹಳ್ಳಿಗಳಲ್ಲಿ ನೀರು-ರಸ್ತೆ ಎಂದು ಅಭಿವೃದ್ಧಿ ಮಂತ್ರವನ್ನು ಬಿಜೆಪಿ ಮತ್ತು ಕಾಂಗ್ರೆಸ್‌ ಶಾಸಕರು ಪಠಿಸುತ್ತಿರುವುದು ಮತ್ತು ಆ ನಿಟ್ಟಿನಲ್ಲಿ ಒಬ್ಬರಿಗೊಬ್ಬರು ಸ್ಪರ್ಧೆ ನಡೆಸುತ್ತಿರುವುದು ಇಲ್ಲಿನ ಪ್ರಮುಖಾಂಶ.

ಸಚಿವ ಪ್ರಮೋದ್‌ ಮಧ್ವರಾಜ್‌ ಅವರಾಗಲಿ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುನಿಲ್‌ ಕುಮಾರ್‌, ವಿನಯ ಕುಮಾರ  ಸೊರಕೆಯವರಾಗಲಿ, ಪಕ್ಷ ರಾಜಕೀಯದ ನಡುವೆಯೂ ಜನರ ಮೂಲಸೌಕರ್ಯಕ್ಕೆ ಹೆಚ್ಚು ಮುತುವರ್ಜಿ ತೋರಿಸುತ್ತಿರುವುದು ಕಂಡುಬಂದಿದೆ.

ರಾಜ್ಯದ ಇತರೆಡೆ ಸದ್ದು ಮಾಡಿರುವ  ವಿವಾದಗಳು ಮತ್ತು ಎತ್ತಿನಹೊಳೆ ಯೋಜನೆ ಇಲ್ಲಿನ ಮತದಾರರ ಮೇಲೆ  ಅಷ್ಟು ಪರಿಣಾಮ ಬೀರದು. ದ.ಕ. ಜಿಲ್ಲೆಯಲ್ಲಿ ಭುಗಿಲೆದ್ದ ಕೋಮು ಸಂಘರ್ಷ ಉಡುಪಿ ಜಿಲ್ಲೆಗೆ ತನ್ನದೇ ರೀತಿಯ ಪ್ರಭಾವಳಿ ಹೊಂದಿದೆಯಾದರೂ, ಅಭಿವೃದ್ಧಿ ಪರ "ಹೆಚ್ಚುಗಾರಿಕೆ' ರಾಜಕೀಯ, ಅವರವರ ಚುನಾವಣಾ ಭವಿಷ್ಯ ರೂಪಿಸಲಿದೆ.

ಈ ನಡುವೆ, ಸೊರಕೆ, ಹಾಲಾಡಿ, ಪ್ರಮೋದ್‌ ಮಧ್ವರಾಜ್‌, ಜಯಪ್ರಕಾಶ ಹೆಗ್ಡೆಯವರಂತಹ ಘಟಾನುಘಟಿಗಳು ತಮ್ಮದೇ ತಂತ್ರಗಾರಿಕೆಯಲ್ಲಿ ಚುನಾವಣೆಯ ರಂಗನ್ನು ಹೆಚ್ಚಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಪುತ್ರ ಹರ್ಷ ಮೊಯ್ಲಿ ಕಾರ್ಕಳಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯಾದರೆ, ಕಣ ಕುತೂಹಲ ಹೆಚ್ಚಲಿದೆ. ಕಾಂಗ್ರೆಸ್‌ ಇರಲಿ, ಬಿಜೆಪಿ ಇರಲಿ; ಹಾಲಿ ಶಾಸಕರಿಗೆ ಟಿಕೆಟ್‌ ಖಾತ್ರಿ.  ಆದರೆ, ಅಲ್ಲಿರುವ ಎದುರಾಳಿ ಪಕ್ಷಗಳ ಟಿಕೆಟ್‌ ಯಾರಿಗೆ ಎಂಬ ಸಮಸ್ಯೆ ಎದುರಾಗಲಿದೆ.  

ಪ್ರಮುಖ ಸಮುದಾಯಗಳು: ಉಡುಪಿ ಜಿಲ್ಲೆಯಲ್ಲಿ ಬಂಟರು, ಬಿಲ್ಲವರು, ಮೊಗವೀರ ಸಮುದಾಯದವರು ಪ್ರಬಲರು. ಹೀಗಾಗಿ, ಅಭ್ಯರ್ಥಿಗಳು ಈ ಸಮುದಾಯದವರೇ ಆಗಿರುವ ಸಾಧ್ಯತೆ ಹೆಚ್ಚು. ಐದು ಕ್ಷೇತ್ರಗಳಲ್ಲಿ ಮೂರ್‍ನಾಲ್ಕು ಕ್ಷೇತ್ರಗಳು ಇವರಿಗೆ ಹಂಚಿಕೆಯಾಗಿ ಉಳಿದ ಒಂದೆರಡು ಸ್ಥಾನ ಅನ್ಯರಿಗೆ ಸಿಗಬಹುದು.

ಉಡುಪಿ: ಸಚಿವ ಪ್ರಮೋದ್‌ ಮಧ್ವರಾಜ್‌, ಕಾಂಗ್ರೆಸ್‌ನ ಹಾಲಿ ಶಾಸಕರು. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಸುಧಾಕರ ಶೆಟ್ಟಿಯವರ ವಿರುದ್ಧ 39,524 ಮತಗಳ ಅಂತರದಿಂದ ಗೆದ್ದಿದ್ದಾರೆ. ಪ್ರಥಮ ಬಾರಿ ಶಾಸಕರಾಗಿದ್ದರೂ ಈ ಅವಧಿಯಲ್ಲಿ ಅವರು ಸಂಸದೀಯ ಸಮಿತಿ ಕಾರ್ಯದರ್ಶಿಯಾಗಿ, ಸಹಾಯಕ ಸಚಿವರಾಗಿ, ಬಳಿಕ ಸಂಪುಟ ದರ್ಜೆಯ ಸಚಿವರಾಗಿದ್ದಾರೆ.   ಬಿಜೆಪಿಯಿಂದ ಯಾರ ಹೆಸರೂ ಅಂತಿಮವಾಗಿಲ್ಲ.

ಕಾಪು: ವಿನಯಕುಮಾರ ಸೊರಕೆ, ಕಾಂಗ್ರೆಸ್‌ನ ಹಾಲಿ ಶಾಸಕರು. ಸುಮಾರು ಎರಡು ವರ್ಷ ನಗರಾಭಿವೃದ್ಧಿ ಸಚಿವರಾಗಿದ್ದವರು. ಕಳೆದ ಬಾರಿ 1,855 ಮತಗಳ ಅಂತರದಿಂದ ಬಿಜೆಪಿಯ ಲಾಲಾಜಿ ಮೆಂಡನ್‌ ಎದುರು ಗೆಲುವು ಸಾಧಿಸಿದ್ದಾರೆ. ಪುತ್ತೂರಿನಿಂದ ಎರಡು ಬಾರಿ ಶಾಸಕರಾಗಿ, ಉಡುಪಿ ಲೋಕಸಭಾ ಕ್ಷೇತ್ರದಿಂದ ಒಂದು ಬಾರಿ ಸಂಸದರಾಗಿದ್ದ ಸೊರಕೆಯವರು, ಕಾಪುವಿನಿಂದ ಪ್ರಥಮ ಬಾರಿ ಆಯ್ಕೆಯಾದವರು. ಈಗ ಮತ್ತೆ ಹುರಿಯಾಳಾಗುವುದು ಖಚಿತ. ಬಿಜೆಪಿಯಲ್ಲಿ ಇಬ್ಬರು, ಮೂವರು ಆಕಾಂಕ್ಷಿಗಳಿದ್ದಾರೆ.

ಬೈಂದೂರು: ನಾಲ್ಕನೆಯ ಬಾರಿಗೆ ಗೆಲುವು ಸಾಧಿಸಿದ ಕಾಂಗ್ರೆಸ್‌ ಶಾಸಕ ಗೋಪಾಲ ಪೂಜಾರಿಯವರು ಪ್ರಸ್ತುತ ಕೆಎಸ್ಸಾರ್ಟಿಸಿ ಅಧ್ಯಕ್ಷರು. ಕಳೆದ ಬಾರಿ ಇವರು, ಬಿಜೆಪಿಯ ಬಿ.ಎಂ.ಸುಕುಮಾರ ಶೆಟ್ಟಿಯವರ ಎದುರು 31,149 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಚುನಾವಣಾ ಕಣದಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಇಲ್ಲಿದ್ದರು. ಬಿಜೆಪಿಯಿಂದ ಇಬ್ಬರು-ಮೂವರ ಹೆಸರು ಕೇಳಿ ಬರುತ್ತಿದೆ.

ಕುಂದಾಪುರ: ಕಳೆದ ಬಾರಿ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕಾಂಗ್ರೆಸ್‌ ಅಭ್ಯರ್ಥಿ ಮಲ್ಯಾಡಿ ಶಿವರಾಮ ಶೆಟ್ಟಿಯವರನ್ನು 40,611 ಮತಗಳ ಅಂತರದಲ್ಲಿ ಸೋಲಿಸಿದ್ದರು. ಈ ಅಂತರ ಜಿಲ್ಲೆಯ ಮಟ್ಟಿಗೆ ಒಂದು ದಾಖಲೆ. ಹಾಲಾಡಿಯವರು ನಿರಂತರವಾಗಿ ನಾಲ್ಕು ಬಾರಿ ಗೆದ್ದಿದ್ದಾರೆ. ಮೊದಲ ಮೂರು ಬಾರಿ ಬಿಜೆಪಿ ಟಿಕೆಟ್‌ನಿಂದ ಗೆದ್ದಿದ್ದರು. ಹಾಲಾಡಿಯವರು ಮತ್ತೆ ಬಿಜೆಪಿ ಸೇರಿದ್ದು, ಬಿಜೆಪಿ ಹೆಚ್ಚು ಬಲಯುತಗೊಂಡಿದೆ. ಇವರಿಗೆ ಮತ್ತೂಮ್ಮೆ ಬಿಜೆಪಿ ಟಿಕೆಟ್‌ ಸಿಗುವ ಸಾಧ್ಯತೆ ಹೆಚ್ಚಿದೆ. ಈ ಬಾರಿ ಕಾಂಗ್ರೆಸ್‌ನಲ್ಲಿ ಹೊಸ ಮುಖದ ಪ್ರಸ್ತಾವ ಕೂಡ ಕೇಳಿ ಬರುತ್ತಿದೆ. 

ಕಾರ್ಕಳ: ಬಿಜೆಪಿಯ ಸುನಿಲ್‌ಕುಮಾರ್‌ ಅವರು ಕಾಂಗ್ರೆಸ್‌ನ ಗೋಪಾಲ ಭಂಡಾರಿಯವರ ಎದುರು 4,254 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಸುನಿಲ್‌ಕುಮಾರ್‌ ಹಿಂದೆಯೂ ಶಾಸಕರಾಗಿದ್ದವರು. ಈ ಬಾರಿಯೂ ಅವರಿಗೆ ಟಿಕೆಟ್‌ ಖಚಿತ. ಕಾಂಗ್ರೆಸ್‌ನಲ್ಲಿ ಹರ್ಷ ಮೊಯ್ಲಿ ಸೇರಿದಂತೆ ಮೂವರು ಆಕಾಂಕ್ಷಿಗಳಿದ್ದಾರೆ. 

ಅಭ್ಯರ್ಥಿಗಳ ಆಯ್ಕೆಗೆ ನಡೆದಿದೆ ಸಮೀಕ್ಷೆ: ಅಭ್ಯರ್ಥಿಗಳ ಆಯ್ಕೆ ಸಂಬಂಧ ಬಿಜೆಪಿ ಎರಡು ಸುತ್ತಿನ ಸಮೀಕ್ಷೆ ನಡೆಸಿದ್ದು, ಇನ್ನೊಂದು ಸುತ್ತಿನಲ್ಲಿ ನೇರವಾಗಿ ಕಾರ್ಯಕರ್ತರ ಅಭಿಪ್ರಾಯವನ್ನು ಸಮೀಕ್ಷಾ ತಂಡಗಳು ಆಲಿಸಲಿವೆ. ಕಾರ್ಯಕರ್ತರು ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಹೇಳದಿದ್ದರೆ ಅಭ್ಯರ್ಥಿಗಳ ಬಗ್ಗೆ ಖಾಸಗಿಯಾಗಿಯೂ ಮಾಹಿತಿ ಸಂಗ್ರಹಿಸಬಹುದು.

ಇದೇ ವೇಳೆ, ಕಾಂಗ್ರೆಸ್‌ನಲ್ಲಿ ಸಂಭಾವ್ಯ ಅಭ್ಯರ್ಥಿಗಳ ಯಾದಿಯನ್ನು ತಯಾರಿಸಲು ಕೆಪಿಸಿಸಿ ಮುಂದಾಗಿದೆ. ಅದರಂತೆ ಜಿಲ್ಲೆಗೆ ನೇಮಕವಾಗಿರುವ ವೀಕ್ಷಕರು ಜಿಲ್ಲೆಯಲ್ಲಿ ಸಂಚರಿಸಿ ಆಯಾ ಕ್ಷೇತ್ರಕ್ಕೆ ಸೂಕ್ತವಾದ ಇಬ್ಬರು-ಮೂವರು ಅಭ್ಯರ್ಥಿಗಳ ಪಟ್ಟಿಯನ್ನು ಕೆಪಿಸಿಸಿಗೆ ನೀಡಲಿದ್ದಾರೆ. ಹೈಕಮಾಂಡ್‌ ಅದನ್ನು ಪರಿಶೀಲಿಸಲಿದೆ ಎಂದು ತಿಳಿದು ಬಂದಿದೆ.

* ಮಟಪಾಡಿ ಕುಮಾರಸ್ವಾಮಿ

Trending videos

Back to Top