CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

e - ಎಲೆಕ್ಷನ್‌ ನಿರ್ವಹಣೆ ಸಮಾಧಾನ-ಸುವಿಧ-ಸುಗಮ

ಪಕ್ಷಗಳು ಅನುಮತಿ ಪಡೆಯೋದು ಆನ್‌ಲೈನ್‌ನಲ್ಲಿ, ಸಾರ್ವಜನಿಕರು ದೂರು ಸಲ್ಲಿಸೋದು ಆ್ಯಪ್‌ನಲ್ಲಿ

ಬೆಂಗಳೂರು: ಬಟನ್‌ ಒತ್ತಿ ಓಟ್‌ ಮಾಡುವ ಕಾಲವಿದು. ಎಷ್ಟೇ ಅಪಸ್ವರ, ಅಪನಂಬಿಕೆ ವ್ಯಕ್ತವಾ ದರೂ ಮುಂದಿನ ವಿಧಾನಸಭೆ ಚುನಾವಣೆಗೆ ಇವಿಎಂ ಬಳಸುವುದು ದಿಟ ಎಂದಿರುವ ಚುನಾ ವಣಾ ಆಯೋಗ, ಜೊತೆಗೆ ಇಡೀ ಚುನಾವಣಾ ಪ್ರಕ್ರಿಯೆಯನ್ನು ಮಾಹಿತಿ ತಂತ್ರಜ್ಞಾನ ಕೇಂದ್ರಿತವನ್ನಾಗಿ ಮಾಡುತ್ತಿದೆ. ಹಾಗಾಗಿ, ಈ ಬಾರಿಯದ್ದು "ಇ-ಎಲೆಕ್ಷನ್‌' ಇದ್ದಂತೆ. 

"ಸಮಾಧಾನ-ಸುವಿಧ-ಸುಗಮ' ಎಂಬ ಹೆಸರಲ್ಲಿ ಮಾಹಿತಿ ತಂತ್ರಜ್ಞಾನದ "ಅಪ್ಲಿಕೇಷನ್‌' ಚುನಾವಣಾ ಆಯೋಗ ಸಿದ್ಧಪಡಿಸಿದ್ದು, ಸಾರ್ವಜನಿಕ ಕುಂದುಕೊರತೆ ಹಾಗೂ ಚುನಾವಣಾ ನಿರ್ವಹಣೆ, ಚುನಾವಣಾ ರ್ಯಾಲಿ, ಸಭೆ, ಸಮಾರಂಭಗಳ ಪರವಾನಿಗೆ ಮತ್ತು ಚುನಾವಣೆಗೆ ಬಳಸಲಾಗುವ ವಾಹನಗಳಿಗೆ ಅನುಮತಿ ಪತ್ರ ಪಡೆಯುವುದು ಎಲ್ಲವೂ ಆನ್‌ಲೈನ್‌ ಮೂಲಕ ನಡೆಯಲಿದೆ. 

ಜೊತೆಗೆ ರಾಜ್ಯದ ಆಯ್ದ 60 ವಿಧಾನಸಭಾ ಕ್ಷೇತ್ರಗಳ "ಇ-ಅಟ್ಲಾಸ್‌'ನ್ನು (ಜಿಐಎಸ್‌ ಮ್ಯಾಪ್ಸ್‌) ಚುನಾವಣಾ ಆಯೋಗ ತಯಾರಿಸುತ್ತಿದ್ದು, ಲೋಕಸಭಾ ಕ್ಷೇತ್ರ, ವಿಧಾನಸಭಾ ಕ್ಷೇತ್ರ, ಮತಗಟ್ಟೆ ವ್ಯಾಪ್ತಿ ಸೇರಿದಂತೆ ಜಿಲ್ಲಾ ಚುನಾವಣಾಧಿಕಾರಿ, ಚುನಾವಣಾ ಅಧಿಕಾರಿ, ಮತಗಟ್ಟೆ ಅಧಿಕಾರಿ, ಮತಗಟ್ಟೆಗಳಲ್ಲಿರುವ ಕನಿಷ್ಠ ಮೂಲಭೂತ ಸೌಲಭ್ಯಗಳು, ಸೂಕ್ಷ್ಮ ಮತಗಟ್ಟೆಗಳ ಬಗ್ಗೆ ಈ "ಇ-ಅಟ್ಲಾಸ್‌'ಗಳಲ್ಲಿ ಸಂಪೂರ್ಣ ಮಾಹಿತಿ ಇರುತ್ತದೆ.

ಮುಕ್ತ ಮತ್ತು ನ್ಯಾಯಸಮತ್ತ ಚುನಾವಣೆ ಖಾತರಿಗೊಳಿಸಲು ಇಂಟರ್‌ನೆಟ್‌ ಸೌಲಭ್ಯವಿರುವ ಕಡೆ ಮತಗಟ್ಟೆ, ಮತ ಎಣಿಕೆ ಕೇಂದ್ರ, ಪೊಲೀಸ್‌ ಚೆಕ್‌ಪೋಸ್ಟ್‌ಗಳಲ್ಲಿ "ವೆಬ್‌ ಕಾಸ್ಟಿಂಗ್‌' ಮಾಡಲಾಗುತ್ತದೆ. ಉಳಿದ ಕಡೆ ಫಿಕ್ಸ್‌ ಕ್ಯಾಮರಾಗಳ ಮೂಲಕ ವಿಡಿಯೋಗ್ರಾಫಿ ಮಾಡಲಾಗುತ್ತದೆ.

ಸಾರ್ವಜನಿಕರ ಕುಂದುಕೊರತೆ ನಿವಾರಣೆ ಮತ್ತು ನಿರ್ವಹಣಾ ವ್ಯವಸ್ಥೆಗೆ "ಸಮಾಧಾನ' ಎಂಬ ಹೆಸರಲ್ಲಿ ಚುನಾವಣಾ ಆಯೋಗ ಐಟಿ ಅಪ್ಲಿಕೇಷನ್‌ ತಯಾರಿಸಿದ್ದು, ಇದರಲ್ಲಿ ಸಾರ್ವ ಜನಿಕರು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಅಭ್ಯರ್ಥಿಗಳು, ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಅಧಿಕಾರಿಗಳು, ವ್ಯಕ್ತಿಗಳು ಚುನಾವಣಾ ಸಂಬಂಧಿ ದೂರುಗಳನ್ನು "ಸಮಾಧಾನ' ಅಪ್ಲಿಕೇಷನ್‌ನಲ್ಲಿ ಇ-ಮೇಲ್‌, ಲೆಟರ್‌, ಫ್ಯಾಕ್ಸ್‌, ಎಸ್‌ಎಂಎಸ್‌, 1950 ಕಾಲ್‌ಸೆಂಟರ್‌ ಸಂಖ್ಯೆ ಮೂಲಕ ಸಲ್ಲಿಸಬಹುದು.

ಅಲ್ಲದೇ ಸಾರ್ವಜನಿಕರಿಗಾಗಿ ಮೊಬೈಲ್‌ ಆ್ಯಪ್‌ ಸಹ ಅಭಿವೃದ್ದಿ ಪಡಿಸ ಲಾ ಗಿದ್ದು, ಇದರಲ್ಲಿ ಫೋಟೋ ಮತ್ತು ವಿಡಿಯೋಗಳ ಜೊತೆಗೆ ದೂರುಗಳನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಚುನಾವಣಾ ಸಭೆಗಳು, ರ್ಯಾಲಿ, ವಾಹನಗಳು, ತಾತ್ಕಾಲಿಕ ಚುನಾವಣಾ ಕಚೇರಿ, ಧ್ವನಿವರ್ಧಕಗಳ ಪರವಾನಿಗೆಗೆ ಅರ್ಜಿ ಸಲ್ಲಿಸಿ, ದಿನಗಟ್ಟಲೇ ಒಂದು ಇಲಾಖೆಯಿಂದ ಮತ್ತೂಂದು ಇಲಾಖೆಗೆ ಅಲೆಯಬೇಕಾಗಿಲ್ಲ.

ಇವುಗಳಿಗೆ 24 ಗಂಟೆಗಳಲ್ಲಿ ಒಂದೇ ಸ್ಥಳದಲ್ಲಿ ಪರವಾನಿಗೆ ದೊರಕುವಂತಾಗಲು  ಏಕಗವಾಕ್ಷಿ ಪರವಾನಿಗೆ ವ್ಯವಸ್ಥೆ "ಸುವಿಧ' ವನ್ನು ಆಯೋಗ ರೂಪಿಸಿದೆ. ವಿವಿಧ ಇಲಾಖೆಗಳ ಸಂಯೋಜಿತ ವ್ಯವಸ್ಥೆ ಹೊಂದಿರುವ ಸುವಿಧ ವ್ಯವಸ್ಥೆಯನ್ನು ಪ್ರತಿ ಉಪವಿಭಾಗದ ಚುನಾ ವಣಾ ಅಧಿಕಾರಿ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗುತ್ತದೆ. ಆದರೆ, ಹೆಲಿಕಾಪ್ಟರ್‌ ಮತ್ತು ಹೆಲಿಪ್ಯಾಡ್‌ ಬಳಕೆಗೆ ಅನುಮತಿ ಬೇಕಾದರೆ ಕನಿಷ್ಟ 36 ಗಂಟೆ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. 

ಚುನಾವಣಾ ಕಾರ್ಯಕ್ಕೆ ವಿವಿಧ ಇಲಾಖೆಗಳ ವಾಹನಗಳ ಜೊತೆಗೆ ಖಾಸಗಿ ವಾಹನಗಳನ್ನೂ ಬಳಸಬೇಕಾಗುತ್ತದೆ. ಅದಕ್ಕೆ  ಕೋರಿಕೆ ಅರ್ಜಿ ಸಲ್ಲಿಸಲು, ವಾಹನದ ವಿವರಗಳನ್ನು ಸಂಗ್ರಹಿಸಲು, ಮಾಲೀಕ ಮತ್ತು ಚಾಲಕನ ಹೆಸರು, ಮೊಬೈಲ್‌ ಸಂಖ್ಯೆ, ಬ್ಯಾಂಕ್‌ ಖಾತೆ ಕುರಿತ ಮಾಹಿತಿ, ವಾಹನ ವನ್ನು ಒಂದು ಜಿಲ್ಲೆಯಿಂದ ಮತ್ತೂಂದು ಜಿಲ್ಲೆಗೆ ವರ್ಗಾವಣೆ ಮಾಡಲು "ಸುಗಮ' ಹೆಸರಲ್ಲಿ ವಾಹನ ನಿರ್ವಹಣಾ ವ್ಯವಸ್ಥೆ ಸಿದ್ಧಪಡಿಸಲಾಗಿದೆ. 

ಐಟಿ ಬಳಕೆ ಇಂದಿನ ಅಗತ್ಯತೆ ಮತ್ತು ಅನಿವಾರ್ಯತೆಯಾಗಿದೆ. ಚುನಾವಣೆಯನ್ನು ಜನಸ್ನೇಹಿ, ಮತದಾರಸ್ನೇಹಿ, ರಾಜಕೀಯಪಕ್ಷಗಳು ಮತ್ತು ಅಭ್ಯರ್ಥಿ ಸ್ನೇಹಿಯನ್ನಾಗಿ ಮಾಡಲು ಮಾಹಿತಿ ತಂತ್ರಜ್ಞಾನದ ಬಳಕೆಗೆ ವಿಶೇಷ ಒತ್ತು ನೀಡಲಾಗಿದೆ.
-ಸಂಜೀವಕುಮಾರ್‌, ರಾಜ್ಯ ಮುಖ್ಯ ಚುನಾವಣಾಧಿಕಾರಿ. 

* ರಫೀಕ್‌ ಅಹ್ಮದ್‌

Back to Top