CONNECT WITH US  

ಬೆಳಗಾವಿಯಲ್ಲಿ ನಡೆದಿದೆ ಹಿಂದುತ್ವ-ಮರಾಠಿ ಜಾಲತಾಣ ವಾರ್‌

ಶಿವಾಜಿ ಮಹಾರಾಜರನ್ನು ಮುಂದಿಟ್ಟುಕೊಂಡು ಹಿಂದೂ ಸಂಘಟನೆಗಳು-ಎಂಇಎಸ್‌ ಮಧ್ಯೆ ಅಕ್ಷರ ಜಗಳ

ಕುಂದಾನಗರಿ ಬೆಳಗಾವಿಯಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಹಿಂದುತ್ವ ಹಾಗೂ ಮರಾಠಿ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಸಮರ ಶುರುವಾಗಿದ್ದು, ಛತ್ರಪತಿ ಶಿವಾಜಿ ಮಹಾರಾಜ ರನ್ನು ಮುಂದಿಟ್ಟು ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಮರಾಠಿಗರ ಮತ ಪಡೆಯಲು ನಾವು ಮರಾಠಿಗರು, ನಾವು ಹಿಂದೂಗಳು ಎಂಬ ಘೋಷ ವಾಕ್ಯದಡಿ ಕಾದಾಟ ಶುರುವಾಗಿದೆ.

ಫೇಸ್‌ಬುಕ್‌ನಲ್ಲಿ ಮರಾಠಿ ಪ್ರೇಮ ತೋರಿಸುವವರು ಗಡಿ ವಿವಾದವನ್ನು ಕೆದಕಿ ತೆಗೆದು ಮರಾಠಿಗರೆಲ್ಲ ಒಂದಾಗಿ ಎಂದು ಪೋಸ್ಟ್‌ಗಳನ್ನು ಅಪ್‌ಲೋಡ್‌ ಮಾಡುತ್ತಿದ್ದಾರೆ. ಅದರಂತೆ ಬೆಳಗಾವಿ ಹಿಂದೂ ನಗರವಾಗಲು ಹಿಂದೂಗಳೆಲ್ಲ ಒಂದಾಗಿ ಎಂಬ ಹ್ಯಾಷ್‌ ಟ್ಯಾಗ್‌ಗಳನ್ನು ಸೃಷ್ಟಿಸುತ್ತಿದ್ದಾರೆ.

ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರು ಒಂದು ಕ್ಷೇತ್ರದಲ್ಲಿ ಒಬ್ಬನೇ ಅಭ್ಯರ್ಥಿ ಎಂಬ ಪ್ರಚಾರ ಆರಂಭಿಸಿದ್ದಾರೆ. ಈ ಪೋಸ್ಟ್‌ಗಳಿಂದಾಗಿ ರಾಷ್ಟ್ರೀಯ ಪಕ್ಷಗಳ ನಿದ್ದೆಗೆಡಿಸಿದೆ. ಮರಾಠಿ ಭಾಷಿಕರ ಮತಗಳು ಒಂದೆಡೆಯಾದರೆ ಗೆಲುವು ಸಾಧಿಸುವುದು ಅಸಾಧ್ಯದ ಮಾತು ಎಂದು ಮನಗಂಡು ಹಿಂದುತ್ವ ಸಿದ್ಧಾಂತದ ಅಡಿ ಚುನಾವಣೆ ಎದುರಿಸಲು ಪ್ರತಿ ತಂತ್ರ ನಡೆಸಿವೆ.

ಹೀಗಾಗಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕೂಡ ಎಂಇಎಸ್‌ ವಿರುದ್ಧ ಪೋಸ್ಟ್‌ ಹಾಕಿ ಹಿಂದೂ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ. ಬೆಳಗಾವಿ ಶಾಂತವಾಗಿರಬೇಕಾದರೆ ಹಿಂದೂ, ಹಿಂದುತ್ವದ ಕಿಚ್ಚು ಹೊಂದಿರುವ ಅಭ್ಯರ್ಥಿಯನ್ನೇ ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಸೋಷಿಯಲ್‌ ಮೀಡಿಯಾಗಳಲ್ಲಿ ಪ್ರಚಾರ ನಡೆಯುತ್ತಿದೆ.

ಎಂಇಎಸ್‌ ಬೆಂಬಲಿತರ ಆಕೌಂಟ್‌ಗಳಿಗೆ ಈ ಸಂದೇಶವನ್ನು ಟ್ಯಾಗ್‌ ಮಾಡಿ ವ್ಯಾಪಕ ಪ್ರಚಾರ ನಡೆಸುತ್ತಿದ್ದಾರೆ. ಇದರಿಂದಾಗಿ ಎಂಇಎಸ್‌ನವರು ಹೆದರಿದ್ದು, ಹಿಂದೂ ಕಾರ್ಯಕರ್ತರ ವಿರುದ್ಧ ಆರೋಪ ಮಾಡುತ್ತಿರುವುದರಿಂದ ಸೋಷಿಯಲ್‌ ವಾರ್‌ ಈಗ ಹೆಚ್ಚಿನ ಚರ್ಚೆಯಲ್ಲಿ ತೊಡಗಿದೆ. ಉತ್ತರ ಕ್ಷೇತ್ರದಲ್ಲಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಮಾಕಾಂತ ಕೊಂಡೂಸ್ಕರ ಪರ ಕಾರ್ಯಕರ್ತರು ಹಿಂದೂ ಹುಲಿ,

ಹಿಂದೂ ಹೃದಯ ಸಾಮ್ರಾಟ ಎಂಬ ಬಿರುದು ಕೊಟ್ಟು ಫೇಸ್‌ಬುಕ್‌ಗಳಲ್ಲಿ ಪ್ರಚಾರ ಮಾಡಿ ಬಿಜೆಪಿ ಟಿಕೆಟ್‌ಗಾಗಿ ಆಗ್ರಹಿಸುತ್ತಿರುವ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಅದರಂತೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲೂ ಎಂಇಎಸ್‌ ಹಾಗೂ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಗೆಲ್ಲಬೇಕಾದರೆ ಹಿಂದುತ್ವದ ಹುರಿಯಾಳುಗಳಿಗೇ ಟಿಕೆಟ್‌ ನೀಡುವಂತೆ ಕಸರತ್ತು ನಡೆದಿದೆ.

ಗ್ರಾಮೀಣದಲ್ಲಿ ಪ್ರಖರ ಹಿಂದುತ್ವವಾದಿ ಧನಂಜಯ ಜಾಧವಗೆ ಟಿಕೆಟ್‌ ಕೊಡುವಂತೆ ಹಿಂದೂ ಸಂಘಟನೆ ಕಾರ್ಯಕರ್ತರು ಫೇಸ್‌ಬುಕ್‌, ವಾಟ್ಸಾಪ್‌ಗ್ಳಲ್ಲಿ ಪೋಸ್ಟ್‌ ಹಾಕಿ ಪ್ರಚಾರ ನಡೆಸಿದ್ದಾರೆ. ಅತ್ತ ಮಾಜಿ ಶಾಸಕ ಮನೋಹರ ಕಿಣೇಕರ ಪರ ಎಂಇಎಸ್‌ ಬ್ಯಾಟಿಂಗ್‌ ಶುರು ಮಾಡಿದೆ. ಎಂಇಎಸ್‌ ಯಾವಾಗಲೂ ಪಕ್ಷೇತರ: ತಮ್ಮ ನೆಚ್ಚಿನ ನಾಯಕನಿಗೆ ರಾಷ್ಟ್ರೀಯ ಪಕ್ಷಗಳ ಟಿಕೆಟ್‌ ಸಿಗಲಿ ಎಂಬ ಕಾದಾಟ ಶುರುವಾಗುವುದು ಸಹಜ.

ಆದರೆ ಎಂಇಎಸ್‌ನ ಬೆಂಬಲಿತ ಅಭ್ಯರ್ಥಿ ಆಗುವ ಮೂಲಕ ಪಕ್ಷೇತರನಾಗಿ ಅಖಾಡಕ್ಕೆ ಇಳಿಯಬೇಕೆಂಬ ಹಲವಾರು ಜನ ಕನಸು ಕಾಣುತ್ತಿದ್ದಾರೆ. ಎಂಇಎಸ್‌ನಿಂದ ನಿಂತರೂ ಪಕ್ಷೇತರ ಎಂದೇ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆದರೂ ಇಲ್ಲಿ ಟಿಕೆಟ್‌ಗಾಗಿ ಕಸರತ್ತು ಆರಂಭಗೊಂಡಿದೆ. ಬೆಳಗಾವಿಯ 18 ಕ್ಷೇತ್ರಗಳಲ್ಲಿ 5 -6ರಲ್ಲಿ ಮಾತ್ರ ಎಂಇಎಸ್‌ ಆಕಾಂಕ್ಷಿಗಳು ಸಿದ್ಧ ಮಾಡಿಕೊಳ್ಳುತ್ತಿದ್ದಾರೆ.

ಬೆಳಗಾವಿಯ ಉತ್ತರ ಮತ ಕ್ಷೇತ್ರ ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಈಗಾಗಲೇ ಎರಡು ಬಾರಿ ಕಾಂಗ್ರೆಸ್‌ನಿಂದ ನಿಂತು ಶಾಸಕರಾಗಿರುವ ಫಿರೋಜ್‌ ಅವರನ್ನು ಸೋಲಿಸಲು ತಂತ್ರ ಹೆಣೆಯಲಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಿಗೆ ಈ ಕ್ಷೇತ್ರದ ಉಸ್ತುವಾರಿ ನೀಡಲಾಗಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಚುನಾವಣೆ ಕಾವು ಹೆಚ್ಚಾಗಿದ್ದು, ಹಿಂದುತ್ವ ಹಾಗೂ ಮುಸ್ಲಿಂ ಸಿದ್ಧಾಂತದ ಅಡಿ ಚುನಾವಣೆ ನಡೆಯುವ ಲಕ್ಷಣಗಳು ಕಂಡು ಬರುತ್ತಿವೆ.

ವಿಧಾನಸಭೆ ಕದನಕ್ಕೆ ಬೆಂಬಲಿಸಲಿ: ಎಂಇಎಸ್‌
ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿಯನ್ನು ಮರಾಠಿ ಭಾಷಿಕರು ಗೆಲ್ಲಿಸುತ್ತಾರೆ. ಉತ್ತರ ಮತ ಕ್ಷೇತ್ರದಲ್ಲಿ ಮರಾಠಿ ಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಎಂಇಎಸ್‌ ಬೆಂಬಲಿತ ಅಭ್ಯರ್ಥಿಯನ್ನು ಬಿಜೆಪಿಯವರು ಏಕೆ ಬೆಂಬಲಿಸುವುದಿಲ್ಲ. ಮತ ವಿಭಜನೆ ಆಗಬಾರದು ಎಂಬ ಕಾರಣಕ್ಕೆ ಲೋಕಸಭೆಯಲ್ಲಿ ಎಂಇಎಸ್‌ ನಿಲ್ಲದೇ ಬಿಜೆಪಿ ಬೆಂಬಲಿಸುತ್ತದೆ. ಆದರೆ ಬಿಜೆಪಿಯವರು ಖಾನಾಪುರ, ಉತ್ತರ, ದಕ್ಷಿಣ ಹಾಗೂ ಗ್ರಾಮೀಣದಲ್ಲಿ ಎಂಇಎಸ್‌ಗೆ ಬಿಟ್ಟು ಕೊಡಬಹುದಲ್ವಾ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹರಿದಾಡುತ್ತಿದೆ.

* ಭೈರೋಬಾ ಕಾಂಬಳೆ

Trending videos

Back to Top