CONNECT WITH US  

ಕಡಲತಡಿಯಲ್ಲೂ ನೀರಿಗೆ ಬರ

"ಧರ್ಮಯುದ್ಧ'ದಲ್ಲಿ ಬಸವಳಿದ ನಾಗರಿಕರು - ಅಡಿಕೆ ಮೇಲಿದೆ ನಿಷೇಧದ ತೂಗುಗತ್ತಿ

ಕಡಲತಡಿಯ ಜಿಲ್ಲೆ ದಕ್ಷಿಣ ಕನ್ನಡದಲ್ಲಿ  ಮಳೆಗಾಲದಲ್ಲಿ  ಊರೆಲ್ಲಾ ನೀರು. ಬೇಸಿಗೆಪೂರ್ತಿ ನೀರಿಗಾಗಿ ಗೋಳು. ವಾರ್ಷಿಕ 4000 ಮಿ.ಮಿ. ಮಳೆಯಾಗುತ್ತಿದ್ದರೂ  ಕುಡಿಯುವ ನೀರಿಗೆ ತತ್ವಾರ. ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಆನೇಕ ಕಡೆ  ರಸ್ತೆ, ಸೇತುವೆ ಆಗಿಲ್ಲ. ಆನೇಕ ಗ್ರಾಮಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ.  ಅನೇಕ ಕುಟುಂಬಗಳಿಗೆ ಇನ್ನೂ ಹಕ್ಕುಪತ್ರ ಪಡೆಯಲು ಸಾಧ್ಯವಾಗಿಲ್ಲ.

ಭತ್ತದ ಬೆಳೆ ಬತ್ತಿಹೋಗುತ್ತಿದ್ದರೆ ಅಡಿಕೆ ಆರೋಗ್ಯಕ್ಕೆ ಹಾನಿಕರ ಎಂಬುದಾಗಿ  ಎಬ್ಬಿಸಿರುವ ಗುಲ್ಲು  ಅಡಿಕೆ ಬೆಳೆಗಾರರ ಬದುಕನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ. ಸರಕಾರದ ಪ್ರೋತ್ಸಾಹ ನಿರೀಕ್ಷಿಸುತ್ತಾ  ರಬ್ಬರ್‌ ಬೆಳೆಗಾರ ಬಸವಳಿದಿದ್ದಾನೆ. ಇದೆಲ್ಲದರ ನಡುವೆ ರಾಜಕಾರಣಿಗಳ ಹಳ್ಳಿಪಯಣ, ಮತದಾರರ ಮನೆಬಾಗಿಲಿಗೆ ದೌಡು ಆರಂಭವಾಗಿದೆ. 

ಮುಂದುವರಿದ ಜಿಲ್ಲೆ  ಎಂದು ಕರೆಯಿಸಿಕೊಂಡಿರುವ, ಹಾಗೆಂದು ಕರೆದೂ ಸುಮ್ಮನಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಚುನಾವಣೆ ಹೊತ್ತಲ್ಲಿ ರಾಜಕೀಯ ಪಕ್ಷಗಳಿಂದ ಭರವಸೆಗಳ ಮಹಾಪೂರವೇ ಹರಿದು ಬಂದಿವೆ. ಬಂದರು, ವಿಮಾನ ನಿಲ್ದಾಣ, ರೈಲು, 3 ರಾಷ್ಟಿಯ ಹೆದ್ದಾರಿಗಳು ಹೊಂದಿರುವ ದ.ಕ. ಜಿಲ್ಲೆಯಲ್ಲಿ ಅಭಿವೃದ್ಧಿ ಅವಕಾಶಗಳು ಸಮರ್ಪಕವಾಗಿ ಬಳಕೆಯಾಗಿಲ್ಲ. ಚುನಾವಣೆಯ ಭರವಸೆಗಳನ್ನು ಅಧಿಕಾರಕ್ಕೆ ಬಂದವರು  ಎಷ್ಟು  ಈಡೇರಿಸಿದ್ದಾರೆ  ಎಂಬುದರ ಸ್ಪಷ್ಟ  ಮಾಹಿತಿ ಸಿಗುವುದೇ ಇಲ್ಲ.   

ಮಳೆಗಾಲದಲ್ಲಿ ಯಥೇಚ್ಚವಾಗಿ ಮಳೆಬೀಳುವ ದಕ್ಷಿಣ ಕನ್ನಡ ಜಿಲ್ಲೆ  ಕುಡಿಯುವ ನೀರಿನ ಬರ ಎದುರಿಸುತ್ತಿರುವುದು ವಿಪರ್ಯಾಸ. ಬೇಸಿಗೆ ಕಾಲದಲ್ಲಿ  ಇಲ್ಲಿನ ನಗರ ಪ್ರದೇಶಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ  ದಿನದಲ್ಲಿ ಒಂದು ತಾಸು  ಕುಡಿಯುವ ನೀರು ಸರಬರಾಜು ದುಸ್ತರ ಎನ್ನುವ ಸ್ಥಿತಿ ಇದೆ. ವರ್ಷದ 4 ತಿಂಗಳು ತುಂಬಿ ಹರಿಯುವ ಇಲ್ಲಿನ  ನದಿ ತೊರೆಗಳ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ದೂರದರ್ಶಿತ್ವದ ಯೋಜನೆಗಳು ರೂಪುಗೊಳ್ಳದಿರು ವುದೇ ಕುಡಿಯುವ ನೀರಿನ ಸಮಸ್ಯೆಗೆ ಮೂಲ ಕಾರಣ.

ನೀರಾವರಿ ಯೋಜನೆಗಳಲ್ಲಿ ರಾಜ್ಯದ ನಕಾಶೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ  ಕೊನೆಯ ಸ್ಥಾನದಲ್ಲಿದೆ. ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪಾಲಿಗೆ ಎತ್ತಿನಹೊಳೆ ಯೋಜನೆ ಆತಂಕ  ಸೃಷ್ಟಿಸಿದೆ.  ಎತ್ತಿನಹೊಳೆಯ  ನೀರನ್ನು ಕೋಲಾರ,ಚಿಕ್ಕಬಳ್ಳಾಪುರಕ್ಕೆ ಒಯ್ಯುವ ಈ  ಯೋಜನೆಯ ಸಫಲ ತೆಯ ಬಗ್ಗೆ  ಸಂದೇಹದ ಜತೆಗೆ ದಕ್ಷಿಣ ಕನ್ನಡ ಮುಂದಿನ ದಿನಗಳಲ್ಲಿ  ಜಲಕ್ಷಾಮಕ್ಕೆ ತುತ್ತಾಗಲಿದೆ ಎಂಬ ಆತಂಕ ಇಲ್ಲಿನ ಜನರಿಗಿದೆ.

ಒಂದೂವರೆ ದಶಕಗಳಷ್ಟು  ಹಳೆಯದಾಗಿರುವ  ಪಶ್ಚಿಮವಾಹಿನಿ ಯೋಜನೆಗೆ ಸರಕಾರ ಅನುಮೋದನೆ ಸಿಕ್ಕಿದರೂ  ಸಾವಿರಾರು ಕೋ.ರೂ. ವೆಚ್ಚದ ಈ ಯೋಜನೆಗೆ ಮೀಸಲಿಟ್ಟಿರುವ ಅನುದಾನ ಅತ್ಯಲ್ಪ. ಕುಡಿಯುವ ನೀರಿನ ಮೂಲ ಉದ್ದೇಶವಿರಿಸಿಕೊಂಡು 20ರಷ್ಟು  ಬಹುಗ್ರಾಮ ಯೋಜನೆ ಸಿದ್ಧಪಡಿಸಲಾಗಿದ್ದರೂ ಕೇವಲ 3  ಅನುಷ್ಠಾನ ಆಗಿವೆ. 4 ಯೋಜನೆಗಳು ಅನುಷ್ಠಾನ ಹಂತದಲ್ಲಿವೆ.

ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಆನೇಕ ಪ್ರದೇಶಗಳಿಗೆ ಸಂಪರ್ಕ ರಸ್ತೆಗಳ  ಕೊರತೆ ಇದೆ. ಕೆಲವು ಕಡೆ ಕಚ್ಚಾ ರಸ್ತೆ ನಿರ್ಮಾಣವಾಗಿ ವರ್ಷಗಳು ಹಲವು ಕಳೆದರೂ  ಡಾಮರು ಕಾಣುವ ಭಾಗ್ಯ ಪಡೆದಿಲ್ಲ. ಕೆಲವು ಕಡೆ ಸೇತುವೆಗಳೇ ನಿರ್ಮಾಣವಾಗಿಲ್ಲ. ರಬ್ಬರು ಬೆಳೆಗಾರರಿಗೆ ನೆರೆಯ ಕೇರಳದಲ್ಲಿ ಕೆ.ಜಿ.80 ರೂ.ನಷ್ಟು ಪ್ರೋತ್ಸಾಹಧನ ನೀಡಲಾಗುತ್ತಿದ್ದರೂ ಇಲ್ಲಿ ಕಾರ್ಯಗತಗೊಂಡಿಲ್ಲ .

ಈ ಬಾರಿಯ ಪ್ರಮುಖ ಬೇಡಿಕೆಗಳು
-ಕುಡಿಯುವ ನೀರು ಪೂರೈಕೆಗೆ ಸಮಗ್ರ ಯೋಜನೆಗಳು
-ಜಿಲ್ಲೆಗೆ ಹೆಚ್ಚಿನ ನೀರಾವರಿ ಯೋಜನೆಗಳು
-ಗ್ರಾಮೀಣ ಪ್ರದೇಶಗಳಿಗೆ ರಸ್ತೆ, ಸೇತುವೆಗಳು
-ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಮಗ್ರ ನೀತಿ
-ಜಿಲ್ಲೆಯನ್ನು ರಾಜ್ಯದ ಎರಡನೇ ಐಟಿಬಿಟಿ ಕೇಂದ್ರವಾಗಿ ಅಭಿವೃದ್ಧಿಪಡಿಸುವುದು
-ಹೂಡಿಕೆಗಳಿಗೆ ಉತ್ತೇಜನ, ಉದ್ಯೋಗಾವಕಾಶಗಳ ಸೃಷ್ಟಿ
-ಎತ್ತಿನಹೊಳೆ, ನದಿ ತಿರುವು ಯೋಜನೆಯ ಸಫಲತೆಯ ಬಗ್ಗೆ ಸ್ಪಷ್ಟಪಡಿಸಬೇಕು
-ಕಡಲ್ಕೊರೆತ ಸಮಸ್ಯೆ ಪರಿಹಾರಕ್ಕೆ ಶಾಶ್ವತ ತಡೆಗೋಡೆ ನಿರ್ಮಾಣಬೇಕೆಂಬ ದಶಕಗಳ ಬೇಡಿಕೆ

ಈಡೇರಿದ ಬೇಡಿಕೆಗಳು 
1.ದಶಕದಷ್ಟು ಹಳೆಯ ಬೇಡಿಕೆ ಪಶ್ಚಿಮವಾಹಿನಿ ಯೋಜನೆಗೆ ಅನುಮತಿ
2.ಪುತ್ತೂರು ತಾಲೂಕಿನ  ಕೊಯಿಲಾದಲ್ಲಿ ಪಶುವೈದ್ಯ ಕಾಲೇಜು ಸ್ಥಾಪನೆ 
3.ಪಿಲಿಕುಳದಲ್ಲಿ  ತ್ರಿಡಿ ತಾರಾಲಯ ಕಾರ್ಯಾರಂಭ
4.ವೆನಾಕ್‌ ಆಸ್ಪತ್ರೆಯಲ್ಲಿ  ಸೂಪರ್‌ಸ್ಪೆಷಾಲಿಟಿ ವೈದ್ಯಕೀಯ ವಿಭಾಗ
5.ಬಹುದಿನಗಳ ಬೇಡಿಕೆಯಾಗಿದ್ದ ಅಜಿಲಮೊಗರು-ಕಡೇಶಿವಾಲಯ ಸೇತುವೆ
6.ಮೂಡಬಿದಿರೆ, ಕಡಬ ತಾಲೂಕುಗಳ ರಚನೆ ಪ್ರಕ್ರಿಯೆಗೆ ಚುರುಕು
7.9/11 ಪಹಣಿ ಸಮಸ್ಯೆ ಪರಿಹಾರ

ಈಡೇರದ ಆಶ್ವಾಸನೆಗಳು
1.ರಾಜ್ಯದ ಎರಡನೇ ಐಟಿಬಿಟಿ ನಗರವಾಗಿ ಮಂಗಳೂರು ಅಭಿವೃದ್ಧಿ
2.ಮಂಗಳೂರಿನಲ್ಲಿ  ಸುಸಜ್ಜಿತ ಬಸ್‌ನಿಲ್ದಾಣ ನಿರ್ಮಾಣ, ರಂಗಮಂದಿರ
3.ಸರಕಾರಿ ವೈದ್ಯಕೀಯ ಕಾಲೇಜು, ಸರಕಾರಿ ಎಂಜಿನಿಯರಿಂಗ್‌ ಕಾಲೇಜು ಸ್ಥಾಪನೆ
4.ಬಂಟ್ವಾಳ-ಕಡೂರು ರಾಜ್ಯ ಹೆದ್ದಾರಿ ದ್ವಿಪಥವಾಗಿ ಉನ್ನತೀಕರಣ
5.ಮಂಗಳೂರು ಅಂತಾರಾಷ್ಟಿಯ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ
6.ಜಿಲ್ಲೆಯ ಎಲ್ಲಾ ನಗರಗಳಲ್ಲಿ ಸಮಗ್ರ ಕುಡಿಯುವ ನೀರು ಯೋಜನೆ, ಒಳಚರಂಡಿ, ತ್ಯಾಜ್ಯ ಸಂಸ್ಕರಣೆ ಘಟಕಗಳು
7.ಭತ್ತದ ಬೆಳೆಗೆ ಕೇರಳ ಮಾದರಿ ಪ್ಯಾಕೇಜ್‌

ಜಿಲ್ಲೆಯ ಸಚಿವರು 
-ರಮಾನಾಥ ರೈ (ಉಸ್ತುವಾರಿ ಸಚಿವ) 
-ಯು.ಟಿ.ಖಾದರ್‌

ಪೈಪೋಟಿ ಹೇಗಿದೆ?
ಎಲ್ಲಾ 8 ಕ್ಷೇತ್ರಗಳಲ್ಲಿ ಬಿಜೆಪಿ- ಕಾಂಗ್ರೆಸ್‌ ಮಧ್ಯೆ ನೇರ ಹಣಾಹಣಿ

ಕುತೂಹಲದ ಕ್ಷೇತ್ರ 
ಜಿಲ್ಲಾ ಉಸ್ತುವಾರಿ ಸಚಿವ ರೈ ಸ್ಪರ್ಧಿಸಲಿರುವ ಬಂಟ್ವಾಳ

ನಾಲ್ಕೂವರೆ ವರ್ಷಗಳಲ್ಲಿ  ಜಿಲ್ಲೆಯ ಅಭಿವೃದ್ಧಿಯಲ್ಲಿ ಮಹತ್ತರ ಪ್ರಗತಿ ಸಾಧಿಸಲಾಗಿದೆ. ಮೂಲಸೌಕರ್ಯ  ಒದಗಿಸಲು  ಒತ್ತು ನೀಡಲಾಗಿದೆ. ಸ್ಥಳೀಯ ಸಂಸ್ಥೆಗಳಿಗೆ  ಹೆಚ್ಚಿನ ಅನುದಾನ ಕೊಡಲಾಗಿದೆ.
-ಬಿ.ರಮಾನಾಥ ರೈ, ಜಿಲ್ಲಾ ಉಸ್ತುವಾರಿ ಸಚಿವ 

ಬಿಜೆಪಿ ಸರಕಾರದ ಅವಧಿಯಲ್ಲಿ  ಮಂಜೂರಾಗಿ ಅನುಷ್ಠಾನದಲ್ಲಿದ್ದ  ಕಾಮಗಾರಿ  ಉದ್ಘಾಟಿಸಿ ತೆಂಗಿನ ಕಾಯಿ ಒಡೆದಿರುವುದೇ ಕಾಂಗ್ರೆಸ್‌ ಸಾಧನೆ.  ಹೊಸ ಯೋಜನೆಗಳು ಅನುಷ್ಠಾನ ಆಗಿಯೇ ಇಲ್ಲ. 
-ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಅಧ್ಯಕ್ಷ

ಅಭಿವೃದ್ದಿ ಬದಲಿಗೆ ಜಿಲ್ಲೆಯಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದೇ ಕಾಂಗ್ರೆಸ್‌ ಸರ್ಕಾರದ  ಸಾಧನೆ. ರಬ್ಬರು, ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ  ಪರಿಹಾರ ದೊರಕಿಲ್ಲ. ಕುಡಿಯುವ ನೀರಿನ ಸಮಸ್ಯೆ  ಪರಿಹಾರವಾಗಿಲ್ಲ.  
-ಮಹಮ್ಮದ್‌ ಕುಂಞಿ,  ಜೆಡಿಎಸ್‌ ಜಿಲ್ಲಾ ಅಧ್ಯಕ್ಷ 

ನೈಸ್‌ ಹಗರಣದಲ್ಲಿರುವ ಅಶೋಕ ಖೇಣಿ ಅವರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡಿದ್ದು ನಮಗೆ ಮುಜುಗರದ ಸಂಗತಿ. ಪಕ್ಷದ ಈ ತೀರ್ಮಾನ ಸರಿಯೋ, ತಪ್ಪೋ ಗೊತ್ತಿಲ್ಲ. ಇದಕ್ಕೆ ನಾನು ಏನೆಂದು ಪ್ರತಿಕ್ರಿಯೆ ನೀಡಲಿ? 
-ಬಸವರಾಜ ರಾಯರಡ್ಡಿ, ಉನ್ನತ ಶಿಕ್ಷಣ ಸಚಿವ  

ಖೇಣಿ ಅವರನ್ನು ಕಾಂಗ್ರೆಸ್‌ಗೆ ಸೇರಿಸಿದ್ದನ್ನು ಖರ್ಗೆಯವರೇ ಪ್ರಶ್ನಿಸಿದ್ದಾರೆ. ಇದರಿಂದ ಪಕ್ಷದ ಅಭಿಪ್ರಾಯ ಪಡೆಯದೆ ಅವರನ್ನು ಕಾಂಗ್ರೆಸ್‌ಗೆ ಸೇರಿಸಿರುವುದು ಸ್ಪಷ್ಟವಾಗಿದ್ದು, ಮುಖ್ಯಮಂತ್ರಿ ಮತ್ತು ಅವರ ಕಂಪನಿ ಖೇಣಿಯಿಂದ ಲಂಚ ಪಡೆದು ಈ ಕೆಲಸ ಮಾಡಿದೆ.
-ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ 

* ಕೇಶವ ಕುಂದರ್‌

Trending videos

Back to Top