CONNECT WITH US  

ಕೋಲಾರ ಜಿಲ್ಲೆಗೆ ರೈಲ್ವೆ ಕೋಚ್‌ ಫ್ಯಾಕ್ಟರಿ ಪ್ರಕಟಿಸಿದ್ದೊಂದೇ ಭಾಗ್ಯ

ಭೂ ಸ್ವಾಧೀನಕ್ಕೂ ಮುನ್ನ ಚುನಾವಣೆ ಹೊತ್ತಲ್ಲಿ ನಡೆದಿತ್ತು ಭೂಮಿಪೂಜೆ

ಕೋಲಾರ: ಚುನಾವಣೆಯ ಹೊಸ್ತಿಲಲ್ಲಿ ಬೇಕಾಬಿಟ್ಟಿ  ಭರವಸೆ ನೀಡುವುದು ರಾಜಕಾರಣಿಗಳ ಹವ್ಯಾಸ, ತಾವು ನೀಡಿರುವ ಚುನಾವಣಾ ಭರವಸೆಗಳನ್ನು ನೆನಪಿನಲ್ಲಿಟ್ಟುಕೊಂಡು ಈಡೇರಿಸುವಲ್ಲಿ ಬಹುತೇಕ ಸರಕಾರಗಳು ವಿಫ‌ಲವಾಗುತ್ತವೆ. ಕೋಲಾರದ ರೈಲ್ವೆ ಕೋಚ್‌ ಫ್ಯಾಕ್ಟರಿ ವಿಚಾರದಲ್ಲಿ ರಾಜ್ಯ ಸರಕಾರ ನುಡಿದಂತೆ ನಡೆದಿಲ್ಲವೆನ್ನುವುದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ತರಾತುರಿಯಲ್ಲಿ ಭೂಮಿಪೂಜೆ: 2014 ಮಾ. 5 ರಂದು ಲೋಕಸಭಾ ಚುನಾವಣೆ ವೇಳಾಪಟ್ಟಿ ಘೋಷಣೆಗೆ ಕೆಲವೇ ಕ್ಷಣಗಳು ಬಾಕಿ ಉಳಿದಿತ್ತು. ಹೆಲಿಕಾಪ್ಟರ್‌ನಲ್ಲಿ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ತರಾತುರಿಯಲ್ಲಿ ವೇಳಾಪಟ್ಟಿ ಪ್ರಕಟವಾಗುವ ಮುನ್ನ ರೈಲ್ವೆ ಕೋಚ್‌ ಫ್ಯಾಕ್ಟರಿ ಯೋಜನೆಗೆ ಭೂಮಿ ಪೂಜೆ ನೆರವೇರಿಸಿಬಿಟ್ಟಿದ್ದರು.

ಮುಂದಿನ ನಾಲ್ಕು ವರ್ಷದೊಳಗೆ ರೈಲ್ವೆ ಕೋಚ್‌ ಫ್ಯಾಕ್ಟರಿ ಆರಂಭ ಆಗಿಬಿಡುತ್ತದೆ, ಐದಾರು ಸಾವಿರ ಮಂದಿಗೆ ಕೆಲಸ ಸಿಗುತ್ತದೆ, ಶ್ರೀನಿವಾಸಪುರ ಕೋಲಾರ ಭಾಗವು ರೈಲ್ವೆ ಕೋಚ್‌ ಫ್ಯಾಕ್ಟರಿಯಿಂದಲೇ ದೇಶದ  ರೈಲ್ವೆ ಭೂಪಟದಲ್ಲಿ ಸ್ಥಾನ ಪಡೆದುಕೊಳ್ಳುತ್ತದೆ. ಕೋಲಾರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರೈಲ್ವೆ ಕೋಚ್‌ ಫ್ಯಾಕ್ಟರಿ ನೆಪವಾಗುತ್ತದೆ ಎಂಬಿತ್ಯಾದಿ ಕನಸನ್ನು ಸರಕಾರಗಳು ಬಿತ್ತಿದ್ದವು.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮತ್ತು ಕೋಲಾರ ತಾಲೂಕುಗಳ ಗಡಿ ಭಾಗದ 1118 ಎಕರೆ ಪ್ರದೇಶದಲ್ಲಿ 1460 ಕೋಟಿ ರೂ.ವೆಚ್ಚದಲ್ಲಿ  ಸ್ಥಾಪಿಸಲು ಉದ್ದೇಶಿಸಿದ್ದೇ ರೈಲ್ವೆ ಕೋಚ್‌ ಫ್ಯಾಕ್ಟರಿ. ಕೋಲಾರ ತಾಲೂಕಿನ ಹೋಳೂರು ಹೋಬಳಿಯ ಜಡೇರಿ, ಶ್ರೀನಿವಾಸಪುರ ತಾಲೂಕಿನ ಯಲ್ದೂರು, ದಾದಿರೆಡ್ಡಿಹಳ್ಳಿ, ಎದರೂರು, ಎಚ್‌.ಜಿ.ಹೊಸೂರು ಗ್ರಾಪಂ ವ್ಯಾಪ್ತಿಯಲ್ಲಿ ನಿರ್ಮಾಣಕ್ಕೆ ಸ್ಥಳವನ್ನು ಗುರುತಿಸಲಾಗಿತ್ತು.

ರೈಲ್ವೆ ಕೋಚ್‌ ಫ್ಯಾಕ್ಟರಿಗೆ  ಅಗತ್ಯವಿರುವ ಒಟ್ಟು 1118 ಎಕರೆ ಪ್ರದೇಶದ ಪೈಕಿ ರಾಜ್ಯ ಸರಕಾರವು ತನ್ನ ಒಡೆತನದಲ್ಲಿರುವ 568 ಎಕರೆ ಭೂಮಿಯನ್ನು ಉಚಿತವಾಗಿ ನೀಡಲು ಮುಂದಾಗಿತ್ತು. ಉಳಿದ 550 ಖಾಸಗಿ ಭೂಮಿ  ಸ್ವಾಧೀನಪಡಿಸಿಕೊಂಡು ರೈಲ್ವೆ ಫ್ಯಾಕ್ಟರಿ ಯೋಜನೆಗೆ ಜೋಡಿಸುವುದು ಉದ್ದೇಶವಾಗಿತ್ತು. 

ಇಡೀ ಯೋಜನೆ ನನೆಗುದಿಗೆ: ಆದರೆ ರೈಲ್ವೆ ಕೋಚ್‌ ಫ್ಯಾಕ್ಟರಿಗೆ ಗುದ್ದಲಿ ಪೂಜೆ ನೆರವೇರಿಸಿದ ಕೆಲವೇ ಕ್ಷಣಗಳಲ್ಲಿ ಲೋಕಸಭಾ ಚುನಾವಣೆ ಪ್ರಕಟವಾಗಿತ್ತು. ಅದೇ ಚುನಾವಣೆಯಲ್ಲಿ ಕೋಲಾರ ಸಂಸದರಾಗಿ ಸತತ ಏಳನೆ ಗೆಲುವನ್ನು ಕೆ.ಎಚ್‌.ಮುನಿಯಪ್ಪ  ಸಂಪಾದಿಸಿದ್ದರು. ಕೇಂದ್ರದಲ್ಲಿ ಯುಪಿಎ  ಎರಡನೇ ಅವಧಿಯ ಸರಕಾರ ಕೊನೆಗೊಂಡು ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿತು.

ಯುಪಿಎ ಸರಕಾರ ಘೋಷಿಸಿದ್ದ ಕೋಲಾರ ರೈಲ್ವೆ ಕೋಚ್‌ ಫ್ಯಾಕ್ಟರಿಗೆ ಕೇಂದ್ರ ಸರಕಾರವು ಪ್ರಕಟಿಸಿದ್ದ ಬಜೆಟ್‌ನಲ್ಲಿ ಸ್ಥಾನ  ಇಲ್ಲದಂತಾಯಿತು. ರೈಲ್ವೆ ಕೋಚ್‌ ಫ್ಯಾಕ್ಟರಿಯಿಂದ ಕೋಲಾರ ಜಿಲ್ಲೆಯ ಭಾಗ್ಯದ ಬಾಗಿಲು ತೆರೆಯುತ್ತದೆ ಎಂದು ಬಿಂಬಿಸಿದ್ದ ಅದೇ ಕೆ.ಎಚ್‌.ಮುನಿಯಪ್ಪ, ಶ್ರೀನಿವಾಸಪುರದ ಶಾಸಕ ರಮೇಶ್‌ಕುಮಾರ್‌ ಜಿಲ್ಲಾ ಉಸ್ತುವಾರಿ ಸಚಿವರಾಗಿ ತಮ್ಮ ಹತ್ತನೇ ಚುನಾವಣೆ ಎದುರಿಸಲು ಸಜಾjಗುತ್ತಿದ್ದಾರೆ.

ಕೋಲಾರ ರೈಲ್ವೆ ಕೋಚ್‌ ಫ್ಯಾಕ್ಟರಿ  ಯೋಜನೆ ಭೂಮಿಪೂಜೆ ಸ್ಥಿತಿಯಲ್ಲಿ ಹೇಗಿತ್ತೋ ಹಾಗೆಯೇ ನಿಂತಿದೆ. ಹೇಳಿದೆಂತೆ ಆಗಿದ್ದರೆ, 4 ವರ್ಷಗಳಲ್ಲಿ ಕಾಮಗಾರಿ ಮುಗಿದು ಪ್ರತಿ ವರ್ಷ 500 ರೈಲ್ವೆ ಬೋಗಿಗಳನ್ನು ತಯಾರಿಸಬೇಕಿತ್ತು. ಕ್ರಮೇಣವಾಗಿ ಇದನ್ನು ಒಂದು ಸಾವಿರಕ್ಕೇರಿಸುವ ಉದ್ದೇಶವೂ ಇದೆಯೆಂದು ರೈಲ್ವೆ ಅಧಿಕಾರಿಗಳು ಘೋಷಿಸಿದ್ದರು. ಈ ಫ್ಯಾಕ್ಟರಿಯಿಂದ 5 ರಿಂದ 10 ಸಾವಿರ ಮಂದಿಗೆ  ಉದ್ಯೋಗ ಅವಕಾಶ ಕಲ್ಪಿಸುವ ನಿರೀಕ್ಷೆ ಇತ್ತು.

ಸಮಸ್ಯೆ ಉಂಟಾಗಿದ್ದೆಲ್ಲಿ?: ಎನ್‌ಡಿಎ ಸರಕಾರದ ಬಜೆಟ್‌ಗಳಲ್ಲಿ ಕೋಲಾರ ರೈಲ್ವೆ ಕೋಚ್‌ ಫ್ಯಾಕ್ಟರಿ ಕುರಿತು ಚಕಾರವೆತ್ತಲಿಲ್ಲ. ಕಾರಣ, ರಾಜ್ಯ ಸರಕಾರ ತಾನು ಮಾಡಿದ್ದ ಒಪ್ಪಂದ ಅನುಷ್ಠಾನಗೊಳಿಸಲಿಲ್ಲ.  ಅಂದರೆ ಖಾಸಗಿ ಭೂಮಿ ಸ್ವಾಧೀನಪಡಿಸಿ ರೈಲ್ವೆ ಇಲಾಖೆಗೆ ಹಸ್ತಾಂತರಿಸಲೇ ಇಲ್ಲ. ಶ್ರೀನಿವಾಸಪುರದ ಶಾಸಕ ರಮೇಶ್‌ಕುಮಾರ್‌ ಉಸ್ತುವಾರಿ ಸಚಿವರಾದರೂ ರೈಲ್ವೆ ಕೋಚ್‌ ಫ್ಯಾಕ್ಟರಿಗೆ ಖಾಸಗಿ ಭೂ ಸ್ವಾಧೀನ ಮಾಡಿಕೊಳ್ಳಲಾ ಗುತ್ತಿದೆಯೆಂಬ ಹೇಳಿಕೆಗೆ ಸೀಮಿತವಾಗಿಬಿಟ್ಟರು. ಪರಿಣಾಮ ರೈಲ್ವೆ ಕೋಚ್‌ ಫ್ಯಾಕ್ಟರಿ ಕನಸು ನನಸಾಗಲೇ ಇಲ್ಲ.

ಕೋಚ್‌ ಫ್ಯಾಕ್ಟರಿ ಮಂಜೂರು ಮಾಡಿಸಿರುವು ದಾಗಿ ಹೇಳಿಕೊಂಡು ಓಡಾಡುತ್ತಿರುವವರಿಗೆ ನಾಚಿಕೆ  ಇಲ್ಲದಂತಾಗಿದೆ. ಜನರಿಂದ ಓಟು ಪಡೆದವರಿಗೆ ಬದ್ಧತೆ ಇಲ್ಲ. ಲೋಕಸಭೆ ಚುನಾವಣೆ ವೇಳೆ ಚಾಲನೆ ನೀಡಿ ಹೋದವರು ನಾಪತ್ತೆ ಆಗಿದ್ದಾರೆ.
ಎಂ.ಜಿ.ಪ್ರಭಾಕರ,ಕೋಲಾರ ಜಿಲ್ಲೆ ರೈಲ್ವೆ ಹೋರಾಟ ಸಮಿತಿ

* ಕೆ.ಎಸ್‌.ಗಣೇಶ್‌

Trending videos

Back to Top