CONNECT WITH US  

ಇನ್ನು ಕಣಕ್ಕೆ ಧುಮುಕುವ ಕಾಲ

ಬೆಂಗಳೂರು: ರಾಜ್ಯ ವಿಧಾನಸಭೆಗೆ ಮೇ 12ರಂದು ನಡೆಯಲಿರುವ ಚುನಾವಣೆಗೆ ಮಂಗಳವಾರ ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಲಿದೆ. ಇದರೊಂದಿಗೆ ರಾಜಕೀಯ ಚಟುವಟಿಕೆಗಳೂ ತೀವ್ರಗೊಳ್ಳಲಿದೆ.

ಮಂಗಳವಾರ ಬೆಳಗ್ಗೆ ಆಯಾ ಜಿಲ್ಲಾ ಚುನಾವಣಾಧಿಕಾರಿಗಳು ಅಧಿಸೂಚನೆ ಪ್ರಕಟಿಸಲಿದ್ದು, ನಾಮಪತ್ರ ಸಲ್ಲಿಕೆಗೆ ಚಾಲನೆ ಸಿಗಲಿದೆ. ಏ.24 ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದ್ದು, ಏ. 25 ನಾಮಪತ್ರಗಳ ಪರಿಶೀಲನೆ ನಡೆಯಲಿದೆ.

ನಾಮಪತ್ರ ಹಿಂತೆಗೆದುಕೊಳ್ಳಲು ಏ. 27 ಅಂತಿಮ ದಿನವಾಗಿದ್ದು, ಇದರೊಂದಿಗೆ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಸಿಗಲಿದೆ. ಮೇ 12ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಎಲ್ಲ 224 ಕ್ಷೇತ್ರಗಳಲ್ಲಿ ಏಕಕಾಲದಲ್ಲಿ ಮತದಾನ ನಡೆಯಲಿದ್ದು, ಮೇ 18ರಂದು ಫ‌ಲಿತಾಂಶ ಹೊರಬೀಳಲಿದೆ.

ಈ ಬಾರಿ ಚುನಾವಣೆ ತೀವ್ರ ಪೈಪೋಟಿ ಇದ್ದು, ಆಡಳಿತಾ ರೂಢ ಕಾಂಗ್ರೆಸ್‌ ವಿರುದ್ಧ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ತೊಡೆತಟ್ಟಿವೆ. ಕಾಂಗ್ರೆಸ್‌ ಈಗಾಗಲೇ 218 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದು, ಬಿಜೆಪಿ ಎರಡು ಹಂತ ಗಳಲ್ಲಿ 154 ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.

ಕಳೆದ ಫೆಬ್ರವರಿಯಲ್ಲೇ 125 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದ ಜೆಡಿಎಸ್‌, ಎರಡನೇ ಪಟ್ಟಿಯನ್ನು ಇನ್ನೂ ಅಂತಿಮಗೊಳಿಸಿಲ್ಲ. ಈ ಮಧ್ಯೆ ಜೆಡಿಎಸ್‌ ಮತ್ತು ಬಿಎಸ್‌ಪಿ ಚುನಾವಣಾ ಹೊಂದಾಣಿಕೆ ಮಾಡಿಕೊಂಡಿದ್ದು, 20 ಕ್ಷೇತ್ರಗಳನ್ನು ಬಿಎಸ್‌ಪಿಗೆ ಬಿಟ್ಟುಕೊಡಲಾಗಿದೆ.

ನಾಮಪತ್ರ ಸಲ್ಲಿಕೆ ಆರಂಭ ಹಿನ್ನೆಲೆಯಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಬಿ ಫಾರಂ ಹಂಚಿಕೆ ಪ್ರಕ್ರಿಯೆ ಪ್ರಾರಂಭಿಸಿದ್ದು, ಬೆಂಗಳೂರು ವಿಭಾಗದ ಬಿ ಫಾರಂ ಬೆಂಗಳೂರಿನಲ್ಲೇ ವಿತರಿಸಲಾಗುತ್ತಿದೆ. ಮೈಸೂರು, ಬೆಳಗಾವಿ, ಕಲಬುರಗಿ ವಿಭಾಗದ ಬಿ ಫಾರಂ ಆಯಾ ಭಾಗದ ನಾಯಕರ ಮೂಲಕ ತಲುಪಿಸಲಾಗುತ್ತಿದೆ ಎಂದು ಹೇಳಲಾಗಿದೆ. ಕಾಂಗ್ರೆಸ್‌ ಪಕ್ಷವು ನಗರದ ಹೊರವಲಯದ ರೆಸಾರ್ಟ್‌ನಲ್ಲಿ ಮಂಗಳವಾರದಿಂದ ಬಿ ಫಾರಂ ವಿತರಿಸಲಿದೆ ಎಂದು ಹೇಳಲಾಗಿದೆ. 

ಬಡವರ ಏಳ್ಗೆಗೆ ನಿರಂತರ ಶ್ರಮಿಸಿರುವ ಸಿದ್ದರಾಮಯ್ಯ ನೇತೃತ್ವದ ಸರಕಾರ ಉತ್ತಮ ಆಡಳಿತ ನೀಡಿದೆ. ರೈತರಿಗೆ ಒತ್ತುವರಿ ಸಮಸ್ಯೆ ಕಗ್ಗಂಟಾಗಿದ್ದು, ಇದನ್ನು ಪರಿಹರಿಸುವಲ್ಲಿ ಕಾಂಗ್ರೆಸ್‌ ಸರಕಾರ ಶ್ರಮಿಸಿದೆ. ಹೀಗಾಗಿ, ರಾಜ್ಯದ ಜನತೆ ಈ ಬಾರಿಯೂ ಕಾಂಗ್ರೆಸ್‌ಗೆ ಅಶೀರ್ವಾದ ಮಾಡಲಿದ್ದಾರೆ.
-ಮೋಟಮ್ಮ, ವಿಧಾನಪರಿಷತ್‌ ಮಾಜಿ ಸದಸ್ಯೆ

ಬಿಜೆಪಿಯಿಂದ ಸ್ಪರ್ಧಿಸಲು ಅಭ್ಯರ್ಥಿಗಳನ್ನು ಹುಡುಕಬೇಕಿದ್ದ ಕಾಲವೊಂದಿತ್ತು. ಆದರೀಗ ಅಭ್ಯರ್ಥಿಗಳ ದಂಡೇ ಬರುತ್ತಿದೆ. ಅಭ್ಯರ್ಥಿ ಕೊರತೆ ಈಗ ಕಾಂಗ್ರೆಸ್‌ಗೆ ಎದುರಾಗಿದೆ. ಕಾಂಗ್ರೆಸ್‌ ನೈತಿಕತೆ ಕಳೆದುಕೊಂಡಿದೆ. ಹಾಗಾಗಿ, ಅದು ಎಲ್ಲಿಯೂ ಗೆಲ್ಲುತ್ತಿಲ್ಲ.
-ಅನಂತಕುಮಾರ ಹೆಗಡೆ, ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ

Trending videos

Back to Top