CONNECT WITH US  

ಮಗನ ಫೇಸ್‌ಬುಕ್‌ ಪೋಸ್ಟ್‌ಗೆ ಸಿಎಂ ಅಡ್ಡಿ!

ಬಾದಾಮಿಯಲ್ಲಿ ಅಪ್ಪ ಸ್ಪರ್ಧೆ: ಯತೀಂದ್ರ ಖಾತ್ರಿ

ಬಾದಾಮಿ ವಿಧಾನಸಭೆ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆ ಮಾಡುವ ಕುರಿತು ಇನ್ನೂ ಗೊಂದಲ ಮುಂದುವರಿದಿದೆ. ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧೆ ಮಾಡುತ್ತಾರೆ. ಎಪ್ರಿಲ್‌ 23 ರಂದು ಬಾದಾಮಿಯಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ನಾಮಪತ್ರ ಸಲ್ಲಿಸುತ್ತಾರೆ, ಮತ್ತೂಮ್ಮೆ ಸಿದ್ದರಾಮಯ್ಯ ಎಂದು ಅವರ ಪುತ್ರ ಡಾ. ಯತೀಂದ್ರ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಬರೆದು ಪೋಸ್ಟ್‌ ಮಾಡಿದ್ದರು.

ಈ ಸುದ್ದಿ ಎಲ್ಲೆಡೆ ವೈರಲ್‌ ಆಗುತ್ತಿದ್ದಂತೆ ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗಿದೆ. ಬಾದಾಮಿಯಿಂದ ಸ್ಪರ್ಧಿಸುವ ಕುರಿತು ಇನ್ನೂ ಸ್ಪಷ್ಟ ನಿರ್ಧಾರವಾಗದ ಹಿನ್ನೆಲೆಯಲ್ಲಿ ಈ ರೀತಿಯ ಪೋಸ್ಟ್‌ ಮಾಡಿರುವುದು ಸರಿಯಲ್ಲ ಎಂದು ಸಿದ್ದರಾಮಯ್ಯ  ಪುತ್ರನಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಿದ್ದರಾಮಯ್ಯ ಸ್ಪರ್ಧೆ ಕುರಿತು ತಮ್ಮ ಅಭಿಪ್ರಾಯ ಪೋಸ್ಟ್‌ ಮಾಡಿದ್ದ ಅವರ ಪುತ್ರ ಡಾ. ಯತೀಂದ್ರ ತಮ್ಮ ಪೋಸ್ಟ್‌ ಡಿಲೀಟ್‌ ಮಾಡಿದ್ದಾರೆ.
 
ಈ ಮಧ್ಯೆ, ಬಾದಾಮಿ ಕ್ಷೇತ್ರದ ಆಕಾಂಕ್ಷಿಗಳು ಅಲ್ಲಿಯೇ ಬಂದು ಸ್ಪರ್ಧೆ ಮಾಡುವಂತೆ ಮುಖ್ಯಮಂತ್ರಿ ಮೇಲೆ ಒತ್ತಡ ಹೇರುತ್ತಿದ್ದಾರೆ.  ಆದರೆ, ಹೈ ಕಮಾಂಡ್‌ ಈ ಬಗ್ಗೆ ಈಗಾಗಲೇ ತನ್ನ ಅಭಿಪ್ರಾಯ ತಿಳಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರದ ಜನತೆಯ ಬೇಡಿಕೆ ಹೆಚ್ಚಿದೆ ಎಂಬ ಅಭಿಪ್ರಾಯವನ್ನು ಮತ್ತೆ ಹೈ ಕಮಾಂಡ್‌ ಅಂಗಳಕ್ಕೆ ಕಳುಹಿಸಿದ್ದು, ಈ ಕುರಿತು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯೊಂದಿಗೆ ಈ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶನಿವಾರ ಹೈ ಕಮಾಂಡ್‌ನಿಂದ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸಿಎಂ ಸಿದ್ಧತೆ: ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧೆಗೆ ಒಲವು ಹೊಂದಿದ್ದು, ಬಾದಾಮಿ ಯಲ್ಲಿಯೂ ಸ್ಪರ್ಧಿಸುವ ಬಗ್ಗೆ ಈಗಾಗಲೇ ಆಪ್ತರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಏಪ್ರಿಲ್‌ 23 ರಂದು ನಾಮ ಪತ್ರ ಸಲ್ಲಿಸುವ ಸಿದ್ದತೆಯನ್ನೂ ಮುಖ್ಯಮಂತ್ರಿ ಮಾಡಿ ಕೊಂಡಿದ್ದಾರೆ ಎನ್ನಲಾಗಿದೆ. 


Trending videos

Back to Top