CONNECT WITH US  

ಬಾದಾಮಿಯಲ್ಲಿ ಜಾತಿ ಸಮೀಕರಣ ನಡೆಯಲ್ಲ

ಬಾದಾಮಿ: ಬಾದಾಮಿ ಕ್ಷೇತ್ರದಲ್ಲಿ ಜಾತಿ ಸಮೀಕರಣ ಲೆಕ್ಕಾಚಾರ ನಡೆಯುವುದಿಲ್ಲ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀರಾಮುಲು ವಾಲ್ಮೀಕಿ ಸಮುದಾಯದವರು, ಸಿದ್ದರಾಮಯ್ಯ ಕುರುಬ ಸಮುದಾಯದವರು ಅಂತ ಚುನಾವಣೆ ಮಾಡೋಕಾಗಲ್ಲ. ಬಿಜೆಪಿ, ಕಾಂಗ್ರೆಸ್‌ ಅಂತ ಮಾತ್ರ ನೋಡಬೇಕಾಗುತ್ತದೆ. ಯಾವ ಜಾತಿಯವರು ಚುನಾವಣೆಗೆ ನಿಂತಿದ್ದಾರೆ ಎನ್ನುವುದು ಮುಖ್ಯವಲ್ಲ. ಜಾತಿ ಸಮೀಕರಣ ನಡೆಯುವುದಿಲ್ಲ. ಗೆಲುವು ಒಂದೇ ಮುಖ್ಯ ಎಂದರು.

ಸಿಎಂ ಸೂಚನೆಯಂತೆ ಎಲ್ಲ ಮುಖಂಡರ ಸಭೆ ಆಯೋಜಿಸಿದ್ದು, ಚರ್ಚಿಸಿ ಅಭಿಪ್ರಾಯ ಪಡೆದು ಚುನಾವಣೆಗೆ ಬೇಕಾದ ಕಾರ್ಯತಂತ್ರ ರೂಪಿಸಲಾಗುವುದು. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಇಲ್ಲಿನ ಕಾಂಗ್ರೆಸ್‌ನಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿವೆ. ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು ಎಲ್ಲವನ್ನೂ ಮರೆತು ಸಿಎಂ ಗೆಲುವಿಗೆ ಶ್ರಮಿಸಬೇಕು.

ಎರಡು-ಮೂರು ದಿನಗಳಿಗೊಮ್ಮೆ ಬಾದಾಮಿಗೆ ಬಂದು ಹೋಗುತ್ತೇನೆ. ಇಲ್ಲಿನ ಸ್ಥಿತಿಗತಿಗಳ ಬಗ್ಗೆ ಅವಲೋಕನ ಮಾಡುತ್ತೇನೆ. ಸಿಎಂ ಸಿದ್ದರಾಮಯ್ಯ ಗೆಲುವು ಖಚಿತ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪುರ, ಡಾ.ದೇವರಾಜ ಪಾಟೀಲ ಮುಂತಾದವರು ಹಾಜರಿದ್ದರು.

ಮುಖಂಡರ ಜತೆ ಗೌಪ್ಯ ಸಭೆ 
ಮಾಜಿ ಸಚಿವ ಸತೀಶ ಜಾರಕಿಹೊಳಿ ಪಟ್ಟಣದ ಹೊರವಲಯದ ತೋಟದಲ್ಲಿ ವಾಲ್ಮೀಕಿ ಸಮಾಜದ ಮುಖಂಡರೊಂದಿಗೆ ಪ್ರತ್ಯೇಕ ಗೌಪ್ಯ ಸಭೆ ನಡೆಸಿದರು. ಕ್ಷೇತ್ರದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಾಲ್ಮೀಕಿ ಸಮಾಜದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರನ್ನು ಹಣಿಯಲು,ಸಿಎಂ ಗೆಲ್ಲಿಸಲು ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ಸಭೆಯಲ್ಲಿ ರಣತಂತ್ರ ರೂಪಿಸಲಾಯಿತು.

ಸಿಎಂ ಸೋಲಿಸಲು ನಿರ್ಣಯ
ಬಾದಾಮಿ:
ಸಿದ್ದರಾಮಯ್ಯ 5 ವರ್ಷ ಅ ಧಿಕಾರದಲ್ಲಿದ್ದಾಗ ಸದಾಶಿವ ಆಯೋಗದ ವರದಿ ಜಾರಿಗೊಳಿಸಲಿಲ್ಲ. ಇದರಿಂದ ನೊಂದಿರುವ ಮಾದಿಗ ಸಮಾಜ ಮುಖಂಡರು ಅವರನ್ನು ಸೋಲಿಸಲು ನಿರ್ಣಯ ತೆಗೆದುಕೊಂಡಿದ್ದಾರೆ. ಪಟ್ಟಣದಲ್ಲಿ ಗುರುವಾರ ನಡೆದ ಮಾದಿಗ ಸಮಾಜ ಮುಖಂಡರ ಸಭೆಯಲ್ಲಿ ಸಮುದಾಯದ ಮುಖಂಡ ಮುತ್ತಣ್ಣ ಬೆಣ್ಣೂರ ಮಾತನಾಡಿ, ಯಾರು ನಮ್ಮನ್ನು ಗೌರವ, ಪ್ರೀತಿಯಿಂದ ನೋಡುತ್ತಾರೆ ಅಂತಹವರಿಗೆ ಮಾತ್ರ ನಮ್ಮ ಮತ ನೀಡುತ್ತೇವೆ ಎಂದು ಘೋಷಿಸಿದರು.

Trending videos

Back to Top