CONNECT WITH US  

ಸಿಎಂ ಜತೆ ಮುನಿಸಿದೆ, ಆದರೆ ಗೆಲ್ಲಿಸುವ ಹೊಣೆ ನನ್ನದು

ವಾಲ್ಮೀಕಿ ಸಮಾಜದಲ್ಲಿ ಅಗ್ರಗಣ್ಯ ನಾಯಕ ಎಂದೇ ಗುರುತಿಸಿಕೊಂಡಿರುವ ಸತೀಶ ಜಾರಕಿಹೊಳಿ ಈಗ ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರ ಪ್ರಚಾರದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. "ಮುಂದಿನ 10 ವರ್ಷಗಳ ನಂತರ ನಾನೂ ಮುಖ್ಯಮಂತ್ರಿ ಅಭ್ಯರ್ಥಿ' ಎಂದು ಈಗಾಗಲೇ ಬಹಿರಂಗವಾಗಿ ಹೇಳಿರುವ ಸತೀಶ ಜಾರಕಿಹೊಳಿ ಅವರಿಗೆ ಕಾಂಗ್ರೆಸ್‌ ವರಿಷ್ಠರು ಮುಖ್ಯಮಂತ್ರಿಗಳ ಪ್ರಚಾರದ ಜವಾಬ್ದಾರಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ಬಾದಾಮಿಗೆ ತೆರಳುವ ಮುನ್ನ ಸತೀಶ ಜಾರಕಿಹೊಳಿ "ಉದಯವಾಣಿ' ಜತೆ ಬೆಳಗಾವಿಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸಿದ್ದರಾಮಯ್ಯ ಅವರ ಪರ ಪ್ರಚಾರ ಮಾಡುವುದು ಯಾರ ನಿರ್ಧಾರ?
      ವರಿಷ್ಠರು ನನಗೆ ಈ ಜವಾಬ್ದಾರಿ ನೀಡಿದ್ದಾರೆ. ಬಾದಾಮಿ ಭಾಗದಲ್ಲಿ ನಮ್ಮ ಸಮಾಜದ ಜನರು ಬಹಳ ಸಂಖ್ಯೆಯಲ್ಲಿ ಇರುವು ದರಿಂದ ನಾನೂ ಪ್ರಚಾರ ಮಾಡಬೇಕೆಂದು ನಿರ್ಧಾರ ಮಾಡಿದ್ದೆ. 

ನಿಮ್ಮ ಹಾಗೂ ಸಿದ್ದರಾಮಯ್ಯ ಮಧ್ಯೆ ರಾಜಕೀಯ ಭಿನ್ನಮತ ಇದೆ. ಇದು ಪ್ರಚಾರದ ಮೇಲೆ ಪರಿಣಾಮ ಬೀರುವುದಿಲ್ಲವೇ ?
      ಭಿನ್ನಮತ ಇರಬಹುದು, ಆದರೆ ಇದು ಪಕ್ಷದ ಕೆಲಸ. ಅಭ್ಯರ್ಥಿಯನ್ನು ಗೆಲ್ಲಿಸಲು ಎಲ್ಲ ಮನಸ್ತಾಪ ಹಾಗೂ ಭಿನ್ನಮತ ಬದಿಗಿಡಲೇಬೇಕು. ಸರಕಾರದ ಸಾಧನೆ ಹಾಗೂ ಯೋಜನೆಗಳ ಅನುಷ್ಠಾನದ ವಿಷಯದ ಮೇಲೆ ಮತ ಕೇಳುತ್ತಿದ್ದೇವೆ.

ನೀವು ವಾಲ್ಮೀಕಿ ಸಮಾಜದ ಮುಖಂಡರು. ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಸಹ ಅದೇ ಸಮಾಜದವರು. ಹೀಗಾಗಿ ಪೈಪೋಟಿ ಯಾವ ರೀತಿಯ ದಾಗಿರುತ್ತದೆ ?
       ಇಬ್ಬರೂ ಒಂದೇ ಜಾತಿಯವರು ಇರಬಹುದು. ಆದರೆ ಇಲ್ಲಿ ಪಕ್ಷ ಮುಖ್ಯ. ಸಮಾಜದ ಜನ ಹೆಚ್ಚಾಗಿ ನಮ್ಮ ಕಡೆ ಇದ್ದಾರೆ ಎಂದರೂ ಶೇ. 100ರಷ್ಟು ಮತಗಳು ನಮಗೇ ಬೀಳುವುದಿಲ್ಲ. ಜಾತಿಯನ್ನು ಒಂದು ಹಂತಕ್ಕೆ ಮಾತ್ರ ಸೀಮಿತಗೊಳಿಸಬೇಕು.ಬಿಜೆಪಿ ಪ್ರಚಾರಕ್ಕೆ ನಾವು ಸಮರ್ಥ ತಿರುಮಂತ್ರ ನೀಡುತ್ತೇವೆ.

ಬಾದಾಮಿ ವಾತಾವರಣ ಮುಖ್ಯಮಂತ್ರಿಗೆ ಎಷ್ಟು ಅನುಕೂಲಕರ? 
     ವಾತಾವರಣ ನಮ್ಮ ಪರವಾಗಿದೆ. ಮುಖ್ಯಮಂತ್ರಿ ಇಲ್ಲಿನ ಅಭ್ಯರ್ಥಿ ಎಂದ ಮೇಲೆ ಎಲ್ಲರಿಗೂ ಅವರನ್ನೇ ಆರಿಸಿ ಕಳಿಸಬೇಕೆಂಬ ಆಸೆ ಇರುತ್ತದೆ. ಮೇಲಾಗಿ ಕಾಂಗ್ರೆಸ್‌ನ ಎಲ್ಲ ಪ್ರಮುಖ ನಾಯಕರು ಈ ಕ್ಷೇತ್ರಕ್ಕೆ ಬರಲಿದ್ದಾರೆ. ಹೀಗಾಗಿ ನಾವು ಗೆಲ್ಲುತ್ತೇವೆ.

ಬಾದಾಮಿಯಲ್ಲಿ ನಿಮ್ಮ ಪ್ರಚಾರ ಪರಿಣಾಮ ಬೀರಬಹುದೇ?
     ಖಂಡಿತ ವಿಶ್ವಾಸವಿದೆ. ಅಲ್ಲಿಗೆ ಹೋದ ಮೇಲೆ ಎಲ್ಲವನ್ನೂ ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕಿದೆ. ಈಗಾಗಲೇ ಕ್ಷೇತ್ರದೊಂದಿಗೆ ನಿಕಟ ಸಂಪರ್ಕ ಹೊಂದಿದ್ದೇನೆ. ನನ್ನದೇ ಆದ ತಂಡಗಳು ಇಲ್ಲಿ ಯಾವಾಗಲೂ ಕಾರ್ಯ ಮಾಡುತ್ತಲೇ ಇವೆ. ಸ್ಥಳೀಯ ಹಾಗೂ ಜನರ ವೈಯಕ್ತಿಕ ಸಮಸ್ಯೆಗಳನ್ನು ತಿಳಿದುಕೊಂಡು ನಂತರ ಪ್ರಚಾರದ ಶೈಲಿ ರೂಪಿಸುತ್ತೇವೆ.

ಬಿಜೆಪಿ ವಿರುದ್ಧ ನಿಮ್ಮ ಪ್ರಚಾರದ ಅಸ್ತ್ರ ಏನು?
      ಕೇಂದ್ರ ಸರಕಾರದ ವೈಫಲ್ಯ. ಕಳೆದ 4 ವರ್ಷಗಳಲ್ಲಿ ಪ್ರಧಾನಿ ಮೋದಿ ಬರೀ ಭಾಷಣ ಮಾಡುತ್ತ ಬಂದರು. ಜನರಿಗೆ
ಅನುಕೂಲವಾಗುವ ಒಂದೂ ಯೋಜನೆ ಬರಲಿಲ್ಲ. ತೊಂದರೆಗಳೇ ಹೆಚ್ಚಾದವು.ಇದು ಚುನಾವಣೆಯ ಮುಖ್ಯ ವಿಷಯ. 

- ಕೇಶವ ಆದಿ

Trending videos

Back to Top