CONNECT WITH US  

ದಲಿತ ಸಿಎಂ ವಿಚಾರ: ಖರ್ಗೆ ಸಭೆ ಅರ್ಧಕ್ಕೆ ಮೊಟಕು​​​​​​​

ಮಲ್ಲಿಕಾರ್ಜುನ ಖರ್ಗೆ ಅವರಿಂದ ಸ್ಪಷ್ಟ ಉತ್ತರ ಸಿಗದಿದ್ದಾಗ ಸಾರ್ವಜನಿಕರಿಂದ ಭಾಷಣಕ್ಕೆ ಅಡ್ಡಿ

ಪ್ರಚಾರ ವೇಳೆ ದಲಿತ ಸಿಎಂ ಸಂಬಂಧ ಉತ್ತರಿಸುವಂತೆ ಪಟ್ಟು ಹಿಡಿದ ಪ್ರತಿಭಟನಾಕಾರರು.

ಮೈಸೂರು: ದಲಿತ ಮುಖ್ಯಮಂತ್ರಿ ವಿಚಾರವಾಗಿ ಆಕ್ರೋಶ ವ್ಯಕ್ತವಾದ ಪರಿಣಾಮ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರಕ್ಕಾಗಮಿಸಿದ್ದ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಚಾರ ಅರ್ಧಕ್ಕೆ ಮೊಟಕುಗೊಳಿಸಿದ ಪ್ರಸಂಗ ನಗರದ ಅಶೋಕಪುರಂನಲ್ಲಿ ನಡೆಯಿತು.

ಪ್ರಚಾರಕ್ಕೆಂದು ನಗರಕ್ಕಾಗಮಿಸಿದ್ದ ಖರ್ಗೆ ರೋಡ್‌ ಶೋ ಆರಂಭಿಸುವ ವೇಳೆ ಸ್ಥಳದಲ್ಲಿದ್ದ ಹಲವರು ಮುಂದಿನ ಸಿಎಂ ಖರ್ಗೆ ಎಂದು ಘೋಷಣೆ ಕೂಗಲಾರಂಭಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಖರ್ಗೆ, ಘೋಷಣೆ ಕೂಗುವ ಸಂದರ್ಭ ಕೂಗಬೇಕಾಗಿತ್ತು. ಈಗ ಕೂಗಿ ಏನು ಪ್ರಯೋಜನ ಎಂದು ಹೇಳಿದರು.

ನಿಲ್ಲದ ದಲಿತ ಸಿಎಂ ಕೂಗು: ಅಶೋಕಪುರಂನಲ್ಲಿ ರೋಡ್‌ ಶೋ ನಡೆಸುತ್ತಿದ್ದಾಗ ಎದುರಾದ ಯುವಕರ ಗುಂಪೊಂದು ಈ ಬಾರಿ ದಲಿತರಿಗೆ ಸಿಎಂ ಸ್ಥಾನ ದೊರೆಯುತ್ತದೆಯೇ? ಶ್ರೀನಿವಾಸ ಪ್ರಸಾದ್‌ ಅವರನ್ನು ಸಂಪುಟದಿಂದ ಕೈ ಬಿಟ್ಟಿದ್ದು ಸರಿಯೇ ಎಂಬ ಪ್ರಶ್ನೆಗಳನ್ನು ಮುಂದಿಟ್ಟರು.

ಆದರೆ ಯುವಕರ ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡದ ಖರ್ಗೆ ರೋಡ್‌ ಶೋ ಮುಂದುವರಿಸಿದರು. ಬಳಿಕ ಸಿಲ್ಕ್ ಫ್ಯಾಕ್ಟರಿ ವೃತ್ತದಲ್ಲಿ ರೋಡ್‌ ಶೋ ಮುಕ್ತಾಯಗೊಂಡ ಸಂದರ್ಭ ಸಾರ್ವಜನಿಕ ಭಾಷಣ ನಡೆಸಲು ಖರ್ಗೆ ಮುಂದಾದ ವೇಳೆ ಕೆಲವರು ಅವರ ಮಾತಿಗೆ ಅಡ್ಡಿಪಡಿಸಿದರು. ಅಲ್ಲದೆ ಈ ಬಾರಿ ದಲಿತರು ಮುಖ್ಯಮಂತ್ರಿ ಆಗುತ್ತಾರಾ?ನೀವು ಸಿಎಂ ಆಗುತ್ತೀರಾ ಎಂಬುದನ್ನು ಮೊದಲು ಸ್ಪಷ್ಟಪಡಿಸಿ? ಶ್ರೀನಿವಾಸ ಪ್ರಸಾದ್‌ರನ್ನು ಸಂಪುಟದಿಂದ ವಜಾ ಮಾಡಿದ್ದು ಸರಿಯೇ?, ಕಳೆದ ಬಾರಿ ಪರಮೇಶ್ವರ್‌ ಅವರನ್ನು ಸೋಲಿಸಲಾಯಿತು. ಇಲ್ಲಿ ನಾವು ಕುರುಬ ಸಮುದಾಯದವರನ್ನು ಗೆಲ್ಲಿಸಬೇಕೇ ಎಂಬ ಪ್ರಶ್ನೆಗಳನ್ನು ಮುಂದಿಟ್ಟರು.

ಈ ವೇಳೆ ಮಾತನಾಡಿದ ಖರ್ಗೆ, ದಲಿತ ಸಿಎಂ ವಿಚಾರವಾಗಿ ಹೈಕಮಾಂಡ್‌ ತೀರ್ಮಾನಿಸಲಿದೆ.ಆದರೆ ದಲಿತರ ಅಭಿವೃದಿಟಛಿಗೆ ಕಾಂಗ್ರೆಸ್‌ ನೀಡಿರುವ ಯೋಜನೆ, ಕೊಡುಗೆಗಳನ್ನು ಮರೆಯಬಾರದು ಎಂದರು.

ಈ ಸಂದರ್ಭದಲ್ಲೂ ದಲಿತ ಸಿಎಂ ವಿಚಾರವಾಗಿ ಖರ್ಗೆ ಅವರಿಂದ ಸ್ಪಷ್ಟ ಉತ್ತರ ಸಿಗದಿದ್ದಾಗ, ನೀವು ಉತ್ತರಿಸದಿದ್ದಲ್ಲಿ, ಬೇರೆ ಪಕ್ಷಕ್ಕೆ ಮತ ನೀಡುವುದಾಗಿ ಎಚ್ಚರಿಸಿದರು.

ಯಾರಿಗಾದರೂ ಹಾಕಿ: ಚುನಾವಣೆಯಲ್ಲಿ ನೀವು ಯಾರಿಗೆ ಬೇಕಾದರೂ ಮತ ಹಾಕಬಹುದಾಗಿದ್ದು,ಅಂಬೇಡ್ಕರ್‌ ನಿಮಗೆ ಅಂತಹ ಅಧಿಕಾರ ನೀಡಿದ್ದಾರೆ. ಆದರೆ ದೇಶದಲ್ಲಿಂದು ಕೋಮುವಾದ ಮತ್ತು ಜಾತ್ಯತೀತವಾದದ ಆಧಾರದಲ್ಲಿ ಚುನಾವಣೆ ನಡೆಯುತ್ತಿದೆ. ಯೋಚಿಸಿ ಮತ ಚಲಾಯಿಸದಿದ್ದರೆ ಮುಂದೆ ನಿಮಗೆ ನಷ್ಟವಾಗಲಿದೆ ಎಂದು ಖರ್ಗೆ ಹೇಳಿದರು. ಇದರಿಂದ ಸಮಾಧಾನ ಗೊಳ್ಳದ ಜನರು, ಮತ್ತೂಮ್ಮೆ ದಲಿತ ಸಿಎಂ ವಿಚಾರ ಪ್ರಸ್ತಾಪಿಸಿದರು.

ಇದರಿಂದ ಅಸಮಾಧಾನಗೊಂಡ ಖರ್ಗೆ, ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ತೆರಳಿದರು. ಈ ಹಂತದಲ್ಲೂ ಖರ್ಗೆ ಅವರನ್ನು ಅಡ್ಡಗಟ್ಟಿದ ಸ್ಥಳೀಯರು, ದಲಿತ ಸಿಎಂ ವಿಚಾರವಾಗಿ ಸರಿಯಾದ ಉತ್ತರ ನೀಡಬೇಕಿದ್ದು, ಇಲ್ಲದಿದ್ದರೆ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುತ್ತೇವೆಂದು ಎಚ್ಚರಿಸಿದರು.


Trending videos

Back to Top