CONNECT WITH US  

ಗೊಂದಲಗಳ ನಡುವೆ ಮಿತ ಮತದಾನ

ಒಂದೇ ಮನೆಯಲ್ಲಿದ್ದರೂ ಒಬ್ಬೊಬ್ಬರ ವೋಟು ಮಾತ್ರ ಬೇರೆ ಬೇರೆ ಮತಗಟ್ಟೆಗಳಲ್ಲಿ. ನೋಂದಣಿ ಮಾಡಿಸದಿದ್ದರೂ ಮತದಾರರ ಪಟ್ಟಿ ಸೇರಿದ ಹೆಸರು. ಮತದಾನದ ಸ್ಲಿಪ್‌, ಗುರುತಿನ ಚೀಟಿ ಇದ್ದರೂ ಪಟ್ಟಿಯಲ್ಲಿ ಮಿಸ್ಸಾದ ಹೆಸರು ಸೇರಿ ಹಲವಾರು ಗೊಂದಲಗಳ ನಡುವೆ ನಗರದಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಇದೇ ವೇಳೆ "ಸಖೀ ಪಿಂಕ್‌' ಮತಗಟ್ಟೆಗಳಿಗೆ ನಗರದ ಮತದಾರರಿಂಧ ಉತ್ತಮ ಸ್ಪಂದನೆ ದೊರೆತಿದೆ. ಹಾಗೇ ಯಥಾಪ್ರಕಾರ ನಗರದ ಯುವ ಜನತೆ ಮತದಾನದಿಂದ ದೂರ ಉಳಿದಿದ್ದು, ಹಿರಿಯರು ಉತ್ಸಾಹದಿಂದ ಮತ ಚಲಾಯಿಸಿದ್ದಾರೆ.

ಬೆಂಗಳೂರು: ಒಂದೇ ಕುಟುಂಬದ ಸದಸ್ಯರು. ಆದರೆ, ಅವರು ಮತ ಹಾಕುವ ಮತಗಟ್ಟೆಗಳು ಬೇರೆ ಬೇರೆ. ನೋಂದಣಿ ಮಾಡಿಲ್ಲದಿದ್ದರೂ ಮತದಾನ ಭಾಗ್ಯ, ವೋಟರ್‌ ಸ್ಲಿಪ್‌ ಇದ್ದರೂ ಪಟ್ಟಿಯಲ್ಲಿ ಹೆಸರಿಲ್ಲ. ಮತದಾನದಕ್ಕೆ ಹಿರಿಯರಲ್ಲಿ ಕಂಡುಬಂದ ಉತ್ಸಾಹ ಯುವಕರಲ್ಲಿ ಕಾಣಲಿಲ್ಲ, ಅಲ್ಲಲ್ಲಿ ಕೈಕೊಟ್ಟ ವಿದ್ಯುನ್ಮಾನ ಮತಯಂತ್ರಗಳು...

ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಶನಿವಾರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಂಡುಬಂದ ದೃಶ್ಯಗಳಿವು. ಬನ್ನೇರುಘಟ್ಟ ರಸ್ತೆಯ ನಿವಾಸಿಗಳಾಗಿರುವ ದಂಪತಿ ಮತ್ತು ತಾಯಿ ಒಂದೇ ಮನೆಯಲ್ಲಿದ್ದಾರೆ. ಅವರು ಹಕ್ಕು ಚಲಾಯಿಸಬೇಕಿದ್ದ ಮತಗಟ್ಟೆಗಳು ಮಾತ್ರ ಬೇರೆ ಬೇರೆ (ವಾರ್ಡ್‌ ಸಂಖ್ಯೆ 323, 320, 325).

ಅದೇ ರೀತಿ, ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆಯ ಪತಿ, ಪತ್ನಿ ಒಂದೇ ಮನೆಯಲ್ಲಿದ್ದರೂ ಮತಗಟ್ಟೆಗಳು ಬೇರೆಯಾಗಿದ್ದವು. ಮತದಾನದ ದಿನವಾದ ಶನಿವಾರ ಇಂತಹ ಹತ್ತಾರು ನಿದರ್ಶನಗಳು ಕಂಡುಬಂದವು. ಇದರಿಂದ ಮತದಾರರಿಗೆ ಕಿರಿಕಿರಿ ಆಯಿತು. ಇದರಿಂದ ಮತದಾರರ ಉತ್ಸಾಹಕ್ಕೆ ತಣ್ಣೀರೆರಚಿದಂತಾಗಿದ್ದು, ಇದೇ ಕಾರಣಕ್ಕೆ ಬಹುತೇಕರು ಮತದಾನದಿಂದ ದೂರ ಉಳಿದರು.

ಬಯಸದೆ ಬಂದ ಭಾಗ್ಯ!: ಇನ್ನು ಬಸವನಗುಡಿಯಲ್ಲಿ ಮಹಾವೀರ್‌ ದಂಪತಿ ಮತದಾರರ ಪಟ್ಟಿಗೆ ನೋಂದಣಿ ಮಾಡಿಸಿರಲಿಲ್ಲ. ಆದರೂ, ಅವರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿತ್ತು. ಜತೆಗೆ ಮತದಾರರ ಗುರುತಿನ ಚೀಟಿ ಮನೆಗೆ ಬಂದಿತ್ತು. ಇದು ಸ್ವತಃ ಮಹಾವೀರ್‌ ದಂಪತಿಗೆ ಅಚ್ಚರಿ ಮೂಡಿಸಿತು. ಮತ್ತೂಂದೆಡೆ ನಂದಿನಿ ಲೇಔಟ್‌ನಲ್ಲಿ ಬಾಣಂತಿ ಮಮತಾ ಬಳಿ ವೋಟರ್‌ ಸ್ಲಿಪ್‌, ಮತದಾರರ ಗುರುತಿನ ಚೀಟಿ ಕೂಡ ಇತ್ತು. ಆದರೆ, ಮತದಾರರ ಪಟ್ಟಿಯಲ್ಲಿ ಅವರ ಹೆಸರೇ ಇರಲಿಲ್ಲ! 

ಈ ಬಗ್ಗೆ ಮಮತಾ ಅವರು ಮತಗಟ್ಟೆ ಅಧಿಕಾರಿಗಳನ್ನು ಕೇಳಿದರೆ, "ನಮಗೆ ಗೊತ್ತಿಲ್ಲ ಮೇಡಂ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲ. ಹಾಗಾಗಿ, ನೀವು ಮತದಾನ ಮಾಡಲು ಅವಕಾಶವಿಲ್ಲ' ಎಂದರು. "ಒಂದೆಡೆ ತಪ್ಪದೆ ಮತ ಹಾಕಿ ಎಂದು ಜಾಗೃತಿ ಅಭಿಯಾನ ಮಾಡುತ್ತಾರೆ. ಆದರೆ, ಮತ ಚಲಾಯಿಸಲು ಹೋದವರಿಗೆ ಅವಕಾಶ ನೀಡುವುದಿಲ್ಲ' ಎಂದು ಮಮತಾ ಬೇಸರ ವ್ಯಕ್ತಪಡಿಸಿದರು. 

ಪಟ್ಟಿಯಲ್ಲಿ ಹೆಸರೇ ಇಲ್ಲ: ಕೆ.ಆರ್‌.ಪುರಂ ಕ್ಷೇತ್ರದ ಬಸವನಪುರದಲ್ಲಿ 400ಕ್ಕೂ ಹೆಚ್ಚು ಮತದಾರರ ಬಳಿ ಗುರುತಿನ ಚೀಟಿ ಇದ್ದರೂ ಮತದಾರರ ಪಟ್ಟಿಯಲ್ಲಿ ಹೆಸರು ಇರಲಿಲ್ಲ. ಮತದಾನ ಮಾಡಲು ಬಂದವರು ವಾಪಸ್‌ ಹೋಗುವಂತಾಯಿತು. ಇದರಿಂದ ಅಸಮಾಧಾನಗೊಂಡ ಮತದಾರರು ಚುನಾವಣಾ ಆಯೋಗ ಹಾಗೂ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಗೊಂದಲಗಳ ನಡುವೆಯೂ ಸಖೀ ಪಿಂಕ್‌, ವಿಶೇಷ ಮತಗಟ್ಟೆಗಳು ಸೇರಿದಂತೆ ಬೆಳಗ್ಗೆಯೇ ಬಹುತೇಕ ಮತಗಟ್ಟೆಗಳ ಮುಂದೆ ಮತದಾರರು ಸರದಿಯಲ್ಲಿ ನಿಂತು ಹಕ್ಕು ಚಲಾಯಿಸಿದರು. ಆದರೆ, ಈ ಸಾಲಿನಲ್ಲಿ ಹಿರಿಯ ಮುಖಗಳು ಹೆಚ್ಚಾಗಿದ್ದವು. ಏರುತ್ತಿರುವ ಬಿಸಿಲಿನ ನಡುವೆಯೂ ಮತದಾರರು ಆಟೋ, ಕಾರುಗಳಲ್ಲಿ, ಕೆಲವರು ವ್ಹೀಲ್‌ ಚೇರ್‌ನಲ್ಲಿ ಬಂದು ಮತ ಚಲಾಯಿಸುತ್ತಿರುವುದು ಕಂಡುಬಂತು.

ಕಳೆದ ಬಾರಿಗೆ ಹೋಲಿಸಿದರೆ  ಈ ಬಾರಿ ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ ಪ್ರಕರಣಗಳು ಕಡಿಮೆ ವರದಿಯಾಗಿವೆ. ಮತದಾನದ ಹಿಂದಿನ ದಿನ ಸುರಿದ ಮಳೆಯಿಂದ ಬಿಸಿಲಿನ ಧಗೆ ಅಷ್ಟಾಗಿ ಕಾಡದಿದ್ದರೂ, ಮಳೆ ಮುನ್ಸೂಚನೆ ಇತ್ತು. ಆದ್ದರಿಂದ ಹಿರಿಯನಾಗರಿಕರು, ಮಹಿಳೆಯರು ತಂಡೋಪತಂಡವಾಗಿ ಮತಗಟ್ಟೆಗಳತ್ತ ಹೆಜ್ಜೆ ಹಾಕಿದರು.

ಮಧ್ಯಾಹ್ನ 1 ಗಂಟೆ ಹೊತ್ತಿಗೆ ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಸರಾಸರಿ ಶೇ.28ರಷ್ಟು ಮತದಾನ ಆಗಿತ್ತು. ಈ ಮಧ್ಯೆ ಆಟೋ, ದ್ವಿಚಕ್ರ ವಾಹನಗಳಲ್ಲಿ ಮತದಾರರನ್ನು ವಿವಿಧ ಪಕ್ಷಗಳ ಪ್ರತಿನಿಧಿಗಳು ಮತಗಟ್ಟೆವರೆಗೆ ತಂದುಬಿಡುವ ಮೂಲಕ ಕೊನೆ ಹಂತದವರೆಗೆ ಮತದಾರರ ಮನವೊಲಿಕೆ ಕಸರತ್ತು ನಡೆಸಿದರು. ಕೆಲ ಮತಟ್ಟೆಗಳ ಹೊರ ಆವರಣದಲ್ಲಿ ಕಾರ್ಯಕರ್ತರ ಹೆಸರಿನಲ್ಲಿ ಮತದಾರರಿಗೂ ಚಹಾ-ಬಿಸ್ಕತ್ತು ವ್ಯವಸ್ಥೆ ಮಾಡಲಾಗಿತ್ತು.

Trending videos

Back to Top