CONNECT WITH US  

ಒತ್ತಡ ಇಳಿದು ಅಭ್ಯರ್ಥಿಗಳು ನಿರಾಳ

ಮೊದಿನ್‌ ಬಾವಾ ರವಿವಾರ ಈಜುಕೊಳದಲ್ಲಿ ಈಜಾಡಿ ರಿಲ್ಯಾಕ್ಸ್‌ ಆದರು. ಈ ಫೂಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವುದು ಕಂಡು ಬಂತು.

ಮತದಾನ ಪ್ರಕ್ರಿಯೆ ಮುಗಿದ ಬಳಿಕ ಅಭ್ಯರ್ಥಿಗಳು ಒಂದಷ್ಟು ನಿರಾಳರಾಗಿದ್ದಾರೆ. ಪ್ರಚಾರದ ತಲೆಬಿಸಿ ಇಲ್ಲ. ಗೆಲುವಿನ ವಿಮರ್ಶೆ, ಲೆಕ್ಕಾಚಾರ ಮಾತ್ರ. ಕಳೆದೊಂದು ತಿಂಗಳಿಂದ ಪ್ರಚಾರದಲ್ಲಿ ನಿರತರಾಗಿದ್ದ ಅವರು ರವಿವಾರ ಮಕ್ಕಳು, ಕುಟುಂಬಿಕರೊಡನೆ ಕಾಲ ಕಳೆದರು. ವಿವಾಹ ಇತ್ಯಾದಿ ಸಮಾರಂಭಗಳಲ್ಲಿ ಪಾಲ್ಗೊಂಡರು. ಇನ್ನು ಕೆಲವರು ಈಜು, ಕ್ರೀಡೆ, ಓದು ಇತ್ಯಾದಿಗಳಲ್ಲಿ ನಿರತರಾಗಿದ್ದರು.

ಬೆಳ್ತಂಗಡಿ
ಕೆ. ವಸಂತ ಬಂಗೇರ

ಕಾಂಗ್ರೆಸ್‌ನ ಕೆ. ವಸಂತ ಬಂಗೇರ ಬೆಳಗ್ಗೆ ಎದ್ದು ನಿತ್ಯಕರ್ಮ ಪೂರೈಸಿ, ದಿನಪತ್ರಿಕೆಗಳನ್ನು ಓದಿದರು. ಮನೆಯವರ ಜತೆ ಬೆಳಗ್ಗಿನ ಉಪಾಹಾರ ಸೇವಿಸಿದರು. ಬಳಿಕ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಜತೆ ಮಾತುಕತೆ ನಡೆಸಿ ಬೆಳಗ್ಗೆ 10 ಗಂಟೆ ಶಾಸಕರ ಕಚೇರಿಗೆ ಭೇಟಿ ನೀಡಿದರು. ಬಳಿಕ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಅಪರಾಹ್ನ 2 ಗಂಟೆಗೆ ಮನೆಗೆ ತೆರಳಿ ಊಟ. 3 ಗಂಟೆಗೆ ಮತ್ತೆ ಶಾಸಕರ ಕಚೇರಿಗೆ. ಸಂಜೆ ಮನೆಗೆ ವಾಪಸ್‌.

ಹರೀಶ್‌ ಪೂಂಜಾ

ಬೆಳಗ್ಗೆ 6 ಗಂಟೆಗೆ ಎದ್ದು, ನಿತ್ಯಕರ್ಮ ಮುಗಿಸಿ ಯೋಗ, ಜಪ. 7.30ರಿಂದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದರು. 11.30ಕ್ಕೆ ಮನೆಗೆ ವಾಪಸ್‌ ಬಂದರು. ಬಳಿಕ 24ಕ್ಕೂ ಹೆಚ್ಚು ಮದುವೆ, ಗೃಹಪ್ರವೇಶ ಮೊದಲಾದ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಮಧ್ಯಾಹ್ನ ಲಾೖಲ ಬಳಿ ಕಾರ್ಯಕರ್ತರ ಜತೆ ಮಾತುಕತೆ, ರಾತ್ರಿ ಕೋಲ, ನೇಮೋತ್ಸವಗಳಲ್ಲಿ ಭಾಗಿ, ವೇಣೂರಿನಲ್ಲಿ ಕಾರ್ಯಕರ್ತರ ಬೈಠಕ್‌ ನಡೆಸಿದರು. ರಾತ್ರಿ 11 ಗಂಟೆ ಸುಮಾರಿಗೆ ಮನೆಗೆ ವಾಪಸಾದರು.

ಮಂಗಳೂರು
ಯು.ಟಿ. ಖಾದರ್‌

ಯು.ಟಿ. ಖಾದರ್‌ ರವಿವಾರ ಬೆಳಗ್ಗೆ  5 ಗಂಟೆಗೆ ಎದ್ದು ಪ್ರಾರ್ಥನೆ ಸಲ್ಲಿಸಿದ ಬಳಿಕ ಮತ್ತೆ ನಿದ್ದೆ ಮಾಡಿದರು. ಬಳಿಕ ಸುಮಾರು 2 ಗಂಟೆ ಮನೆಯವರೊಡನೆ ಕಾಲ ಕಳೆದರು. ನಂತರ ಕಾರ್ಯಕ್ರಮಗಳಲ್ಲಿ  ಭಾಗವಹಿಸಲು ತೆರಳಿದರು. ಸಂಜೆಯವರೆಗೂ ಕಾರ್ಯಕರ್ತರೊಡನೆ ಕಾಲ ಕಳೆದರು. ಕೆಲವೆಡೆ ಸಿಹಿ ಹಂಚಿದರು. ನನ್ನ ರಾಜಕೀಯ ಭವಿಷ್ಯ ಮತಪೆಟ್ಟಿಗೆಯೊಳಗೆ ಭದ್ರವಾಗಿದೆ, ಯಾವುದೇ ಆತಂಕವಿಲ್ಲ ಎನ್ನುತ್ತಾ ಇಡೀ ದಿನ ನಿರುಮ್ಮಳವಾಗಿದ್ದರು.

ಸಂತೋಷ್‌ ಕುಮಾರ್‌ ರೈ
ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌ ಅವರು ಹಲವು ದಿನಗಳ ಬಳಿಕ ಬೆಳಗ್ಗೆ ಯೋಗ ಮಾಡಲೂ ಸಮಯ ಸಿಕ್ಕಿದ ಕಾರಣ ಯೋಗಾಭ್ಯಾಸ ನಡೆಸಿದರು. ಅರ್ಧ ಗಂಟೆ ಯೋಗ ಮಾಡಿ ರಿಲ್ಯಾಕ್ಸ್‌ ಆದರು. ಚುನಾವಣ ಪ್ರಚಾರ ಇಲ್ಲದಿದ್ದರೂ ಅವರಿಗೆ ಹೆಚ್ಚು ಹೊತ್ತು ಮನೆಯವರ ಜತೆ ಕಾಲ ಕಳೆಯಲು ಅವಕಾಶ ಸಿಕ್ಕಿಲ್ಲ. ಬೆಳಗ್ಗೆ ಕುರ್ನಾಡು ಸೋಮನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಅನಂತರ ಕೆಲವಾರು ಖಾಸಗಿ ಸಮಾರಂಭಗಳಲ್ಲಿ ಪಾಲ್ಗೊಂಡರು.

ವೇದವ್ಯಾಸ ಕಾಮತ್‌
ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್‌ ಶನಿವಾರ ಮತಪೆಟ್ಟಿಗೆಗಳು ನಿಗದಿತ ಸ್ಥಳಕ್ಕೆ ತಲುಪುವ ಪ್ರಕ್ರಿಯೆಯನ್ನು ತಡರಾತ್ರಿ ವರೆಗೂ ಗಮನಿಸಿದ ಪರಿಣಾಮ ರಾತ್ರಿ ನಿದ್ರೆಯೇ ಮಾಡಿರಲಿಲ್ಲ. ರವಿವಾರ ಬೆಳಗ್ಗೆ 7 ಗಂಟೆಗೆ ರಾಮಕೃಷ್ಣ ಆಶ್ರಮದ ವತಿಯಿಂದ ಲಾಲ್‌ ಬಾಗ್‌ ನಲ್ಲಿ ನಡೆದ ಸ್ವತ್ಛ ಭಾರತ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಫಲಿತಾಂಶ ಘೋಷಣೆವರೆಗೆ ಕಾರ್ಯಕರ್ತರು, ಕುಟುಂಬಿಕರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ.

ಕಾಪು
ವಿನಯ ಕುಮಾರ್‌ ಸೊರಕೆ

ವಿನಯ ಕುಮಾರ್‌ ಸೊರಕೆ ರವಿವಾರ ನೆಮ್ಮದಿಯಿಂದ ಕುಟುಂಬಿಕರೊಂದಿಗೆ ಕಾಲ ಕಳೆದರು. ಉಡುಪಿಯ ಮನೆಯಲ್ಲಿದ್ದ ಅವರು ಬೆಳಗ್ಗೆ ಯೋಗ, ನಡಿಗೆ ಮಾಡಿ ಪತ್ರಿಕೆಗಳನ್ನು ಆಮೂಲಾಗ್ರ ಓದಿದರು. ಮನೆಗೆ ಬರುತ್ತಿದ್ದ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು. ಮಧ್ಯಾಹ್ನ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ಅವರು ಕೆಲ ದೇವಸ್ಥಾನಗಳಿಗೂ ಹೋಗಿ ದೇವರ ದರ್ಶನಗೈದರು. ಸಂಜೆಯ ಅನಂತರವೂ ಮನೆಯವರೊಂದಿಗೆ ಇದ್ದರು.

ಲಾಲಾಜಿ ಆರ್‌. ಮೆಂಡನ್‌

ಲಾಲಾಜಿ ಆರ್‌. ಮೆಂಡನ್‌ ಕಾರ್ಯಕರ್ತರ ಜತೆಗೆ ಕಾಲ ಕಳೆದರು. ಡಿಸಿ ಕಚೇರಿಯಲ್ಲಿ ಸಭೆಯಲ್ಲಿ ಪಾಲ್ಗೊಂಡರು. ಮದುವೆ, ಉಪನಯನದಲ್ಲಿ ಭಾಗಿಯಾದರು. ಮನೆಯವರೊಂದಿಗೆ ಮನೆಯಲ್ಲಿ ಕಳೆದರು. ಪಕ್ಷದ ಪ್ರಮುಖರು, ಬೂತ್‌ ಮಟ್ಟದ ಪದಾಧಿಕಾರಿಗಳಿಗೆ ಕರೆ ಮಾಡಿ ಕೃತಜ್ಞತೆ ಸಲ್ಲಿಸುತ್ತಿರುವುದೂ ಕಂಡುಬಂತು. ರಾತ್ರಿ ಮತ್ತೆ ಮನೆಯಲ್ಲಿ ಕಾಲ ಕಳೆದರು.

ಮಂಗಳೂರು ದಕ್ಷಿಣ
ಜೆ.ಆರ್‌. ಲೋಬೋ

ಜೆ. ಆರ್‌. ಲೋಬೋ ಬೆಳಗ್ಗೆ 5 ಗಂಟೆಗೇ ಏಳುವವರು ಇಂದು 7ರ ತನಕ ಮಲಗಿದ್ದರು. ತುಂಬಾ ದಿನಗಳ ಬಳಿಕ ಕುಟುಂಬಿಕರೊಡನೆ ಮಾತನಾಡಲು, ಹರಟೆ ಹೊಡೆಯಲು, ಕುಶಲ ವಿಚಾರಿಸಲು ಅವರಿಗೆ ಸಾಧ್ಯವಾಯಿತು. ತಮ್ಮ ಪ್ರೀತಿಯ ಶ್ವಾನದ ಜತೆಗೂ ಕಾಲ ಕಳೆಯಲು ಮರೆಯಲಿಲ್ಲ. ಓದಿನ ಬಗ್ಗೆ ಆಸಕ್ತಿ ಹೊಂದಿರುವ ಅವರು ಬೆಳಗ್ಗೆ ಎದ್ದ ಕೂಡಲೇ ಕಾದಂಬರಿಯೊಂದನ್ನು ಓದಲು ಪ್ರಾರಂಭಿಸಿದರು.

ಮಂಗಳೂರು ಉತ್ತರ
ಮೊದಿನ್‌ ಬಾವಾ

ಮೊದಿನ್‌ ಬಾವಾ ಅವರು ಬಹುದಿನಗಳ ಕಾಲ ಪ್ರಚಾರ ಕಾರ್ಯಕ್ರಮಗಳಲ್ಲಿ ವ್ಯಸ್ತರಾಗಿದ್ದು, ಚುನಾವಣೆ ಮುಗಿದ ನೆಮ್ಮದಿಯಲ್ಲಿ ರವಿವಾರ ಈಜುಕೊಳದಲ್ಲಿ ಈಜಾಡಿ ರಿಲ್ಯಾಕ್ಸ್‌ ಆದರು. ಈ ಫೂಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವುದು ಕಂಡು ಬಂತು. ಆದರೆ ಬಾವಾ ಮಾಧ್ಯಮಗಳ ಜತೆಗೆ ಮಾತಿಗೆ ಸಿಗಲಿಲ್ಲ.

ಭರತ್‌ ಶೆಟ್ಟಿ

ಡಾ| ಭರತ್‌ ಶೆಟ್ಟಿ ತನ್ನ ಎರಡೂವರೆ ವರ್ಷದ ಮಗ ಕನಿಷ್ಕ್  ಜತೆ ಆಟ ಆಡಿ ದಿನ ಕಳೆದರು.  ಬಹುತೇಕ ಇಡೀ ದಿನ ಅವರು ಮನೆಯಲ್ಲಿಯೇ ಕಾಲ ಕಳೆದರು. ಅವರ ಪತ್ನಿ ಅಸಾವರಿ ಶೆಟ್ಟಿ  'ಉದಯವಾಣಿ'ಯೊಂದಿಗೆ ಮಾತನಾಡಿ, ತುಂಬಾ ದಿನಗಳಿಂದ ಚುನಾವಣ ತುರ್ತಿನಲ್ಲಿರುತ್ತಿದ್ದ ಭರತ್‌ ಇವತ್ತು ತುಂಬಾ ಹೊತ್ತು ಮಗನೊಡನೆ ಆಡ್ತಾ ಇದ್ರು. ಹಾಗಾಗಿ ಇವತ್ತು ಅಪ್ಪ -ಮಗ ಇಬ್ರೂ ಖುಷಿಯಲ್ಲೇ ಇದ್ದಾರೆ ಎಂದರು.

ಕಾರ್ಕಳ
ಸುನಿಲ್‌ ಕುಮಾರ್‌

ಬಿಜೆಪಿ ಅಭ್ಯರ್ಥಿ ವಿ. ಸುನಿಲ್‌ ಕುಮಾರ್‌ ರವಿವಾರ ಬೆಳಗ್ಗೆ 9 ಗಂಟೆಗೆ ವಿಕಾಸ ಸೌಧದ ತನ್ನ ಕಚೇರಿಗೆ ಆಗಮಿಸಿದರು. ಅಲ್ಲಿ ಸ್ವಲ್ಪ ಸಮಯ ಸಾರ್ವಜನಿಕರು, ಕಾರ್ಯಕರ್ತರ ಭೇಟಿ, ಸಮಾಲೋಚನೆ ನಡೆಸಿದರು. ಬಳಿಕ ತಾಲೂಕಿನಾದ್ಯಂತ ಸುಮಾರು ಮದುವೆ ಹಾಗೂ ಕೆಲವು ಗೃಹ ಪ್ರವೇಶ ಸಹಿತ ಸುಮಾರು 28 ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಸಂಜೆ ಮತ್ತೆ ಕಚೇರಿಗೆ ಭೇಟಿ ನೀಡಿ ಪಕ್ಷದ ಹಿತೈಷಿಗಳ ಜತೆಗೆ ಮಾತುಕತೆ ನಡೆಸಿ, ಮನೆಗೆ ತೆರಳಿದರು.

ಎಚ್‌. ಗೋಪಾಲ ಭಂಡಾರಿ
ಕಾಂಗ್ರೆಸ್‌ ಅಭ್ಯರ್ಥಿ ಎಚ್‌. ಗೋಪಾಲ ಭಂಡಾರಿ ಬೆಳಗ್ಗೆ ಎದ್ದು ನಿತ್ಯ ಕರ್ಮಗಳನ್ನು ಪೂರೈಸಿ ಸುಮಾರು 10 ಗಂಟೆಗೆ ಹೆಬ್ರಿಯ ಮನೆಯಿಂದ ಕಾರ್ಕಳದ ಕಚೇರಿಗೆ ಆಗಮಿಸಿದರು. ಕಚೇರಿ ಮತ್ತು  ಇತರ ಕೆಲವೆಡೆ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರ ಭೇಟಿ ನಡೆಸಿದರು. ಬಳಿಕ ತಾಲೂಕಿನ ವಿವಿಧ ಭಾಗಗಳಲ್ಲಿ ನಡೆದ ಆತ್ಮೀಯರ ಮದುವೆ ಹಾಗೂ ಇತರ ಕಾರ್ಯಕ್ರಮಗಳಿಗೆ ಭೇಟಿ ನೀಡಿದರು. ಸಂಜೆ ಮತ್ತೆ ಕಾರ್ಯಕರ್ತರ ಭೇಟಿ ನಡೆಸಿ, ಮನೆಗೆ ತೆರಳಿದರು.

ಪುತ್ತೂರು
ಶಕುಂತಳಾ ಶೆಟ್ಟಿ

ಶಕುಂತಳಾ ಶೆಟ್ಟಿ ಅವರು ರವಿವಾರ ಮಂಗಳೂರು, ಶಿರೂರು, ಪುತ್ತೂರು, ಬಂಟ್ವಾಳದ ಬಿರುವ ಸೆಂಟರ್‌, ಬಿ.ಸಿ.ರೋಡ್‌ಗಳಲ್ಲಿಲ್ಲಿ ನಡೆದ ವಿವಿಧ ಮದುವೆ ಸಮಾರಂಭಗಳಲ್ಲಿ ಪಾಲ್ಗೊಂಡರು. ಬಳಿಕ ಮಂಗಳೂರಿನ ಮನೆಗೆ ಹಿಂದಿರುಗಿ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರ ಜತೆ ವಿರಾಮವಾಗಿ ಕಾಲ ಕಳೆದರು. ಬೆಂಬಲಿಸಿದ ಕಾರ್ಯಕರ್ತರು, ಮುಖಂಡರಿಗೆ ಫೋನ್‌ ಮೂಲಕ ಕೃತಜ್ಞತೆ ಸಲ್ಲಿಸಿದರು. 

ಸಂಜೀವ ಮಠಂದೂರು
ಸಂಜೀವ ಮಠಂದೂರು ಅವರು ಉಪ್ಪಿನಂಗಡಿ, ಪುತ್ತೂರಿನ ಮದುವೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಉಪ್ಪಿನಂಗಡಿಯ ಸತ್ಯನಾರಾಯಣ ಪೂಜೆಯಲ್ಲೂ ಭಾಗವಹಿಸಿದರು. ಶನಿವಾರ ಮತದಾನ ಮಾಡಿದ ಬಳಿಕ ನಿಧನ ಹೊಂದಿದ್ದ  ಹಿರಿಯ ವ್ಯಕ್ತಿ ಸಣ್ಣಂಗಳ ಲಿಂಗಪ್ಪ ರೈ ಅವರ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು. ಸಂಜೆ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಸಭೆಯಲ್ಲಿ ಪಾಲ್ಗೊಂಡರು.

ಉಡುಪಿ
ರಘುಪತಿ ಭಟ್‌

ಕೆ. ರಘುಪತಿ ಭಟ್‌ ಮತದಾನ ಮುಗಿದ ಕೂಡಲೇ ತಡರಾತ್ರಿವರೆಗೂ ಕಾಯಕರ್ತರ ಜತೆಗೆ ಮಾತುಕತೆ ನಡೆಸಿದರು. ಬೆಳಗ್ಗೆಯೂ ಮನೆಯಲ್ಲಿ ಕಾರ್ಯಕರ್ತರ ಜತೆ ಸಮಾಲೋಚನೆ ನಡೆಸಿದರು. ಸ್ವಲ್ಪ ಕಾಲ  ಮನೆಮಂದಿ ಜತೆ ಕಳೆದು ಮದುವೆ, ಗೃಹಪ್ರವೇಶ ಸಹಿತ 15 ಸಮಾರಂಭಗಳಲ್ಲಿ ಪಾಲ್ಗೊಂಡರು. ಸಂಜೆ ಮನೆಗೆ ಆಗಮಿಸಿ ವಿಶ್ರಾಂತಿ; ಮತ್ತೆ ಕೆಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಕಾರ್ಯಕರ್ತರ ಜತೆಗೂ ಸಮಾಲೋಚನೆ ಮಾಡಿದರು.

ಪ್ರಮೋದ್‌ ಮಧ್ವರಾಜ್‌

ಪ್ರಮೋದ್‌ ಮಧ್ವರಾಜ್‌ ಮತದಾನ ಮುಗಿದ ಅನಂತರ ಮಂಗಳೂರಿಗೆ ತೆರಳಿ ಆಸ್ಕರ್‌ ಫೆರ್ನಾಂಡಿಸ್‌ ಆರೋಗ್ಯ ವಿಚಾರಿಸಿ ವಾಪಸಾದರು. ರಾತ್ರಿ 11ರವರೆಗೂ ಕಾರ್ಯಕರ್ತರ ಜತೆಗೆ ಸಮಾಲೋಚನೆ ನಡೆಸಿದರು. ರವಿವಾರ ಬೆಳಗ್ಗೆ ಮನೆಯಲ್ಲಿ ಕಾಲ ಕಳೆದು ಮಧ್ಯಾಹ್ನ 12ರ ಅನಂತರ ಸಂಜೆ 4 ಗಂಟೆಯವರೆಗೂ ಕುಂದಾಪುರ, ಸಾಸ್ತಾನ, ಬಾರಕೂರು, ಉಡುಪಿ ಸಹಿತ 15ರಷ್ಟು ಮದುವೆಗಳಲ್ಲಿ ಪಾಲ್ಗೊಂಡರು. ಸಂಜೆ ಮನೆಗೆ ಆಗಮಿಸಿ ವಿಶ್ರಾಂತಿ ಪಡೆದರು.

ಕುಂದಾಪುರ
ರಾಕೇಶ್‌ ಮಲ್ಲಿ

ರಾಕೇಶ್‌ ಮಲ್ಲಿ ಪಡುಬಿದ್ರಿ ಮಹಾಲಿಂಗೇಶ್ವರ ದೇಗುಲಕ್ಕೆ ತೆರಳಿ ದೇವರ ದರ್ಶನದ ಬಳಿಕ ಮನೆಯಲ್ಲಿ ವಿಶ್ರಾಂತಿ ಪಡೆದರು. ಜತೆಗೆ ಕಾರ್ಯಕರ್ತರು, ನಾಯಕರೊಂದಿಗೆ ಚುನಾವಣಾ ಲೆಕ್ಕಾಚಾರದಲ್ಲಿ ನಿರತರಾಗಿದ್ದರು. ಕಳೆದ ಆರು ತಿಂಗಳಿನಿಂದ ಕುಂದಾಪುರ ಕ್ಷೇತ್ರದಲ್ಲಿ ನಿರಂತರ ಓಡಾಟದಲ್ಲಿ ಇದ್ದವರು ಮಲ್ಲಿ. ಈ ಕ್ಷೇತ್ರಕ್ಕೆ ಹೊಸಬನಾಗಿದ್ದರೂ ತನ್ನ ಪರವಾಗಿ ಕೆಲಸ ಮಾಡಿದ ನಾಯಕರು, ಕಾರ್ಯಕರ್ತರನ್ನು ಸಂಪರ್ಕಿಸಿ ಧನ್ಯವಾದ ಹೇಳುತ್ತಿದ್ದರು.

ಹಾಲಾಡಿ ಶ್ರೀನಿವಾಸ ಶೆಟ್ಟಿ
ಹಾಲಾಡಿ ಶ್ರೀನಿವಾಸ ಶೆಟ್ಟಿ ರವಿವಾರ ಎಂದಿನಂತೆಯೇ ಮನೆಗೆ ಆಗಮಿಸಿದ ಜನರನ್ನು ಮಾತನಾಡಿಸಿ ಅನಂತರ ಮದುವೆ ಇತ್ಯಾದಿ ಶುಭ ಕಾರ್ಯಗಳಿಗೆ ಭೇಟಿ ಕೊಟ್ಟರು. ಕಾರ್ಯಕರ್ತರ ಜತೆಗೆ  ಮತಗಳಿಕೆ ಲೆಕ್ಕಾಚಾರವೂ ನಡೆಸಿದರು. ಪೂರಕವಾಗಿ ಅವರ ಜತೆಗೂ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಯಾವ ಮತಗಟ್ಟೆಯಲ್ಲಿ ಹೇಗೆ ಮತದಾನ ಸಾಗಿದೆ, ಎಷ್ಟು ಪ್ರಮಾಣದಲ್ಲಿ ಆಗಿದೆ, ಈ ಪೈಕಿ ಎಷ್ಟು ಮತಗಳು ಬಿಜೆಪಿಯದ್ದು ಎಂದು ಲೆಕ್ಕ ಹಾಕಿದರು.

ಸುಳ್ಯ
ಡಾ| ರಘು

ಡಾ| ರಘು ಅವರ ಬೆಳಗ್ಗಿನ ದಿನಚರಿ ಎಂದಿನಂತೆಯೇ ಇತ್ತು. ಅನಂತರ ಕಡಬ ಮೊದಲಾದ ಭಾಗಗಳಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಿ ಚರ್ಚಿಸಿದರು. ಅಲ್ಲಿಂದ ಮನೆಗೆ ಬಂದು, ಕುಟುಂಬದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡರು. ಮಧ್ಯಾಹ್ನ ಉಪ್ಪಿನಂಗಡಿಯ ತನ್ನ ಕ್ಲಿನಿಕ್‌ ಗೆ ತೆರಳಿದರು. ಒಂದು ತಿಂಗಳಿನಿಂದ ಚುನಾವಣಾ ಕಾರಣದಿಂದ ಕ್ಲಿನಿಕ್‌ ಗೆ ಹೋಗಿರಲಿಲ್ಲ. ಅಲ್ಲಿ ಕೆಲ ಹೊತ್ತು ಇದ್ದು, ಬಳಿಕ ಪುತ್ತೂರಿಗೆ ಬಂದು ಸಂಜೆ ಮನೆಯಲ್ಲೇ ಕಾಲ ಕಳೆದರು.

ಎಸ್‌. ಅಂಗಾರ
ಎಸ್‌. ಅಂಗಾರ ಎಂದಿನಂತೆ ದಿನಚರಿ ಆರಂಭಿಸಿ ಮಧ್ಯಾಹ್ನದ ತನಕ ಮನೆಯಲ್ಲೇ ಇದ್ದು ಕೃಷಿ, ಇನ್ನಿತರ ಕೆಲಸಗಳಲ್ಲಿ ನಿರತರಾಗಿದ್ದರು. ಮಧ್ಯಾಹ್ನ ಪುತ್ತೂರಿನಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡರು. ಸಂಜೆ ಬಿಜೆಪಿ ಕಚೇರಿಯಲ್ಲಿ ಪಕ್ಷದ ಸಭೆಯಲ್ಲಿ ಪಾಲ್ಗೊಂಡರು. ಸಭೆ ಮುಗಿದ ಅನಂತರ ಕೆಲವು ಭಾಗಗಳಲ್ಲಿ ಕಾರ್ಯಕರ್ತರ ಜತೆ ಕುಶಲೋಪರಿ ನಡೆಸಿ, ಬಳಿಕ ಕುಂಟಿಕಾನದ ಮನೆಗೆ ತೆರಳಿದರು.

ಬಂಟ್ವಾಳ
ರಮಾನಾಥ ರೈ

ಶನಿವಾರದ ತನಕ ಚುನಾವಣೆ ಸಂಬಂಧಿಸಿ ಬಿಡುವಿಲ್ಲದ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದ  ಬಿ. ರಮಾನಾಥ ರೈ ಅವರು ಬೆಳಗ್ಗೆ ಎಂದಿನಂತೆ ಸಾರ್ವಜನಿಕ ಭೇಟಿ, ಅಹವಾಲು ಸ್ವೀಕಾರ ಮಾಡಿದರು. 10.30ರ ಬಳಿಕ ಉಪ್ಪಿನಂಗಡಿಯಲ್ಲಿ  ತನ್ನ ಸಹೋದರನ ಉತ್ತರ ಕ್ರಿಯೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಧ್ಯಾಹ್ನದ ಅನಂತರ ಮನೆಗೆ ವಾಪಸಾದರು. ಪ್ರಮುಖರ ಜತೆ ಸಮಾಲೋಚನೆ ನಡೆಸಿದರು.

ರಾಜೇಶ್‌ ನಾೖಕ್‌

ರಾಜೇಶ್‌ ನಾೖಕ್‌ ಉಳಿಪ್ಪಾಡಿ ರವಿವಾರ ಕ್ಷೇತ್ರ ವ್ಯಾಪ್ತಿಯ ನಾಲ್ಕು ಗೃಹ ಪ್ರವೇಶ, ಎಂಟು ವೈವಾಹಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಎರಡು ಸತ್ಯನಾರಾಯಣ ಪೂಜೆಗಳಲ್ಲಿ ಭಾಗವಹಿಸಿದ್ದಲ್ಲದೆ, ಕಕ್ಕೆಪದವು ದೇವಸ್ಥಾನಕ್ಕೆ ಭೇಟಿ ನೀಡಿದರು. ರಾತ್ರಿ ಕೆಲವು ಕೋಲ, ನೇಮ, ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿದರು.

ಮೂಡಬಿದಿರೆ
ಅಭಯಚಂದ್ರ

ಕೆ. ಅಭಯಚಂದ್ರ ಅವರ ರವಿವಾರದ ಚಟುವಟಿಕೆ ಎಂದಿನಂತೆಯೇ ಇತ್ತು. ಬೆಳಗ್ಗೆ 7.30ರಿಂದಲೇ ಭೇಟಿಗೆ ಆಗಮಿಸಿದ್ದ ಜನರೊಂದಿಗೆ ಮಾತುಕತೆ ನಡೆಸಿದರು. ಲೆಪ್ಪದ ಬಸದಿಯಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಬಳಿಕ  ಉಪ್ಪಿನಂಗಡಿಯಲ್ಲಿ ಸಚಿವ ರಮಾನಾಥ ರೈ ಅವರ ಅಣ್ಣ ಬೆಳ್ಳಿಪ್ಪಾಡಿ ಸತೀಶ್‌ ರೈ ಅವರ ಉತ್ತರಕ್ರಿಯೆ ಮತ್ತು ಹಲವು ವಿವಾಹ, ಗೃಹಪ್ರವೇಶಾದಿ ಕಾರ್ಯ ಕ್ರಮಗಳಲ್ಲಿ ಪಾಲ್ಗೊಂಡರು.

ಉಮಾನಾಥ ಕೋಟ್ಯಾನ್‌
ಉಮಾನಾಥ ಕೋಟ್ಯಾನ್‌ ರವಿವಾರವೂ ಬಿಡುವಿಲ್ಲದ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ಬೆಳಗ್ಗೆ ಮಾರೂರು ನೆತ್ತೋಡಿಯಲ್ಲಿ ಪಕ್ಷದ ಕಾರ್ಯಕರ್ತರೋರ್ವರ ತಂದೆ ತಾಯಂದಿರ ವೈವಾಹಿಕ ಸುವರ್ಣ ಮಹೋತ್ಸವ ಕಾರ್ಯಕ್ರಮ, ಬಳಿಕ 7 ವಿವಾಹ, 3 ಗೃಹಪ್ರವೇಶ ಭಾಗವಹಿಸಿದರು. ಕ್ರಿಕೆಟ್‌ ಪಂದ್ಯದಲ್ಲಿ ಪಾಲ್ಗೊಂಡರು. ಈ ನಡುವೆ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿಯವರ ದರ್ಶನ ಮಾಡಿ ಫಲಮಂತ್ರಾಕ್ಷತೆ ಸ್ವೀಕರಿಸಿದರು.

ಬೈಂದೂರು
ಸುಕುಮಾರ ಶೆಟ್ಟಿ

ಬಿ.ಎಂ. ಸುಕುಮಾರ ಶೆಟ್ಟಿ ಮುಂಜಾನೆ ಆನೆಗುಡ್ಡೆ ದೇವಸ್ಥಾನಕ್ಕೆ ತೆರಳಿ ಪ್ರಾರ್ಥಿಸಿದರು. ಬಳಿಕ ಅಂಪಾರಿನಲ್ಲಿ ಮದುವೆಯಲ್ಲಿ ಭಾಗವಹಿಸಿದರು. ಶಂಕರನಾರಾಯಣ, ಸಿದ್ದಾಪುರ, ತ್ರಾಸಿ, ಆಜ್ರಿ, ಉಪ್ಪುಂದ, ನಾಡ ಮೊದಲಾದ ಕಡೆ ತೆರಳಿ ಕಾರ್ಯಕರ್ತರ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದರು. ಕಮಲಶಿಲೆಯಲ್ಲಿ ಉಪನಯನ, ಹೆಮ್ಮಾಡಿಯಲ್ಲಿ ಮದುವೆಯಲ್ಲಿ ಭಾಗವಹಿಸಿದರು. ಮನೆಯಲ್ಲಿ ಹೆಚ್ಚು ಕಾಲ ಕಳೆದರು. 

ಗೋಪಾಲ ಪೂಜಾರಿ
ಗೋಪಾಲ ಪೂಜಾರಿ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಾಯಕರು ಹಾಗೂ ಕಾರ್ಯಕರ್ತರ ಜತೆ ಮತಗಳಿಕೆ ಲೆಕ್ಕಾಚಾರದಲ್ಲಿದ್ದರು. ಮನೆಗೆ ಎಂದಿನಂತೆಯೇ ಕಾರ್ಯಕರ್ತರು, ಪಕ್ಷದ ನಾಯಕರು ಆಗಮಿಸುತ್ತಿದ್ದರು. ಮನೆಯಲ್ಲಿಯೇ ಹೆಚ್ಚು ಕಾಲ ಕಳೆದು ಯಾವ ರೀತಿಯಲ್ಲಿ ಮತದಾನ ನಡೆದಿದೆ, ಎಲ್ಲಿ ಎಷ್ಟು  ಪ್ರಮಾಣದಲ್ಲಿ ನಡೆದಿದೆ ಎಂಬಿತ್ಯಾದಿ ಲೆಕ್ಕಾಚಾರಗಳನ್ನು ಕಾರ್ಯಕರ್ತರು ಹಿತೈಷಿಗಳ ಜತೆಗೆ ನಡೆಸಿದರು.

Trending videos

Back to Top