CONNECT WITH US  

ಕಾನೂನು ಹಕ್ಕಿನಿಂದ ವಂಚಿತರಾಗಬಾರದು

ಹೊನ್ನಾವರ: ಪ್ರಜೆಗಳಿಗಿರುವ ಕಾನೂನು ಬದ್ಧ ಹಕ್ಕಿನಿಂದ ಯಾರೂ ವಂಚಿತರಾಗಬಾರದು ಎಂದು ಸರ್ಕಾರ ಕಾನೂನು ಸೇವಾ ಕಾರ್ಯಕ್ರಮ ನಡೆಸುತ್ತಿದೆ. ವಿದ್ಯಾರ್ಥಿಗಳು, ಬಡವರು, ಅವಿದ್ಯಾವಂತರು ಹೀಗೆ ಎಲ್ಲ ವರ್ಗಗಳಿಗೆ ಕಾನೂನುಬದ್ಧ ಹಕ್ಕಿದೆ. ಅದನ್ನು ಅವರು ಇದ್ದಲ್ಲಿ ಹೋಗಿ ತಿಳಿಸಿಕೊಡುವ ಉದ್ದೇಶದಿಂದ ವಿವಿಧ ಸಂಸ್ಥೆಗಳ ಸಹಕಾರದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ಎಂದು ಹಿರಿಯ ಸಿವಿಲ್‌ ನ್ಯಾ| ಎಂ.ವಿ. ಚೆನ್ನಕೇಶವ ರೆಡ್ಡಿ ಹೇಳಿದರು.

ಅವರು ನ್ಯಾಯಾಲಯದ ಆವಾರದಲ್ಲಿ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿದರು. ಎಲ್ಲ ಸೇವೆಗಳಂತೆ ಕಾನೂನು ಸೇವೆಯು ದುಬಾರಿಯಾಗುತ್ತಿದ್ದು ಬಡವರಿಗೆ ಉಚಿತ ಸೇವೆ ಒದಗಿಸಲು ಸರ್ಕಾರದಿಂದ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು. ವಕೀಲರ ಸಂಘದ ಅಧ್ಯಕ್ಷ ಕೆ.ವಿ. ನಾಯ್ಕ ಮಾತನಾಡಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ವಕೀಲ ಸಂಘದ ಸಹಕಾರವಿದೆ, ಸೇವೆಗಾಗಿ ಸಂಪರ್ಕಿಸಿ ಎಂದು ಹೇಳಿದರು.

ಬಿಇಒ ಗಿರೀಶ ಪದಕಿ ಮಾತನಾಡಿ ಮಕ್ಕಳಿಗಾಗಿ 250ಕ್ಕೂ ಹೆಚ್ಚು ಕಾನೂನಿದೆ ಎಂದರು. ತಹಶೀಲ್ದಾರ ವಿ.ಆರ್‌. ಗೌಡ ಮಾತನಾಡಿ ಎಲ್ಲರಿಗೂ ಕಾನೂನಿನ ಅರಿವು ಮೂಡಿದರೆ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದರು. ತಾಪಂ ಇಒ ಎಂ.ವಿ. ಹೆಗಡೆ ದೆಹಲಿಯಲ್ಲಿ ಪರೀಕ್ಷೆ ಮುಂದೂಡಲಿ ಎಂದು ಪಿಯುಸಿ ವಿದ್ಯಾರ್ಥಿ 5ನೇ ವರ್ಗದ ವಿದ್ಯಾರ್ಥಿಯನ್ನು ಕೊಲೆ ಮಾಡಿದ ಪ್ರಕರಣವನ್ನು ಉದಾಹರಿಸಿ, ಮಕ್ಕಳಿಗೂ ಕಾನೂನಿನ ಅರಿವು ಬೇಕು ಎಂದರು.

ಪ್ರಧಾನ ಸಿವಿಲ್‌ ನ್ಯಾಯಾಧೀಶ ಮಧುಕರ ಭಾಗವತ, ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶೆ ಸನ್ಮತಿ, ಸರ್ಕಾರಿ ವಕೀಲ ಬದರಿನಾಥ ನಾಯರಿ, ಸಹಾಯಕ ನ್ಯಾಯವಾದಿ ಪ್ರಮೋದ ಭಟ್‌ ಉಪಸ್ಥಿತರಿದ್ದರು. ವಕೀಲ ಸಂಘದ ಕಾರ್ಯದರ್ಶಿ ಸೂರಜ್‌ ನಾಯ್ಕ ಸ್ವಾಗತಿಸಿದರು. ನ್ಯಾಯವಾದಿ ಉಮಾ ನಾಯ್ಕ ವಂದಿಸಿದರು. ನಂತರ ನ್ಯೂ ಇಂಗ್ಲಿಷ್‌ ಶಾಲೆಯ ವಿದ್ಯಾರ್ಥಿಗಳು, ಸ್ವಸಹಾಯ ಸಂಘದ ಸದಸ್ಯರು ನಗರದಲ್ಲಿ ಜಾಥಾ ನಡೆಸಿದರು.

ಪಠ್ಯದಲ್ಲಿ ಕಾನೂನು ಅಳವಡಿಕೆ ಅಗತ್ಯ: ನ್ಯಾ.ಧಾರವಾಡಕರ್‌ 
ಕಾರವಾರ: ವಿದ್ಯಾರ್ಥಿ ಜೀವನದಿಂದಲೇ ಕಾನೂನಿನ ಅರಿವು  ಮೂಡಿಸುವ ದೃಷ್ಟಿಯಿಂದ ಪ್ರೌಢಶಾಲಾ ಪಠ್ಯಪುಸ್ತಕದಲ್ಲಿ ಕಾನೂನು ಪಾಠಗಳನ್ನು ಅಳವಡಿಸುವ ಅಗತ್ಯವಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿ.ಎಸ್‌ .ಧಾರವಾಡಕರ್‌ ಹೇಳಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ  ನ್ಯಾಯವಾದಿಗಳ ಸಂಘ ಹಾಗೂ ವಿವಿಧ ಸಂಘ-ಸಂಸೆಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನದ ಪ್ರಯುಕ್ತ ಕಾರವಾರದ ಸೇಂಟ್‌ ಮೈಕೆಲ್‌ ಕಾನ್ವೆಂಟ್‌ ಪ್ರೌಢಶಾಲೆಯಲ್ಲಿ ನಡೆದ ದಶದಿನಗಳ ಕಾನೂನು ಸೇವೆಗಳ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. 

ಕಿರಿಯ ವಯಸ್ಸಿನಿಂದಲೇ ಕಾನೂನಿನ ಅರಿವು ಇದ್ದರೆ ಕಾನೂನು ಬಾಹಿರ ಚಟುವಟಿಕೆಗಳು ಕಡಿಮೆಯಾಗುತ್ತವೆ. ಈ ಹಿನ್ನೆಲೆಯಲ್ಲಿ ಪ್ರೌಢಶಾಲಾ ಹಂತದ ಪಠ್ಯದಲ್ಲಿ ಕಾನೂನುಗಳ ಪಾಠಗಳನ್ನುಅಳವಡಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. ಸಾರ್ವಜನಿಕರು ಯಾವುದೇ ರೀತಿಯ ಕಾನೂನು ಸಲಹೆಗಳಿಗೆ ಅಥವಾ ಪರಿಹಾರಕ್ಕಾಗಿ ನ್ಯಾಯಾಲಯದ ಆವರಣದಲ್ಲಿರುವ
ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಬಹುದು. ಕೆಲವು ಪ್ರಕರಣಗಳಿಗೆ ಇಲ್ಲಿ ಉಚಿತವಾಗಿ ವಕೀಲರನ್ನು ನೇಮಿಸಿ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಸಹಕರಿಸಲಾಗುತ್ತದೆ. ಇದರ ಸದುಪಯೋಗ ಪಡೆಯುವಂತಾಗಬೇಕು ಎಂದರು. ಹಿರಿಯ ಸಿವಿಲ್‌
ನ್ಯಾಯಾಧೀಶ ಟಿ.ಗೋವಿಂದಯ್ಯ ಕಾನೂನು ಸೇವೆಗಳ ದಿನಾಚರಣೆಯ ಮಹತ್ವ ಮತ್ತು ಸೇವೆಗಳ ಪ್ರಾಧಿಕಾರದ ಧ್ಯೇಯೋದ್ದೇಶಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉದಯ ನಾಯ್ಕ, ಸೇಂಟ್‌ ಮೈಕೆಲ್‌ ಕಾನ್ವೆಂಟ್‌ ಪ್ರೌಢಶಾಲೆಯ ಮುಖ್ಯೊಪಾಧ್ಯಾಪಕಿ ಸಿಸ್ಟರ್‌ ಮರ್ಸಿ ಜಾರ್ಜ್‌, ವಕೀಲೆ ಸಂಧ್ಯಾ ತಳೇಕರ್‌ ಮತ್ತಿತರರು ಉಪಸ್ಥಿತರಿದ್ದರು.

Trending videos

Back to Top