CONNECT WITH US  

ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಎನ್‌.ಎಸ್‌. ಹೆಗಡೆ ಆಯ್ಕೆ

ಹೊನ್ನಾವರ: ತಾಲೂಕು ಕಸಾಪ ಹಾಗೂ ಸಾಹಿತ್ಯಾಭಿಮಾನಿಗಳು ತಾಲೂಕಿನ ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕವಿ, ವಿಜ್ಞಾನ ಶಿಕ್ಷಕ ಎನ್‌.ಎಸ್‌. ಹೆಗಡೆ ಕೆರೆಕೋಣ ಅವರನ್ನು ಆಯ್ಕೆ ಮಾಡಿದ್ದಾರೆ. ಎ.11 ರಂದು ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಕಸಾಪ ಪದಾಧಿಕಾರಿಗಳು, ಕಾರ್ಯಕಾರಿ ಮಂಡಳಿ, ಆಜೀವ ಸದಸ್ಯರು ಹಾಗೂ ಕನ್ನಡಾಭಿಮಾನಿಗಳು ಸೇರಿದ ಈ ಸಭೆಯ
ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಅರವಿಂದ ಕರ್ಕಿಕೋಡಿ ವಹಿಸಿದ್ದರು. ಜಾನಪದ ವಿದ್ವಾಂಸ ಡಾ| ಎನ್‌.ಆರ್‌. ನಾಯಕ, ಬಿಇಒ ಗಿರೀಶ ಪದಕಿ, ತಾಲೂಕು ಕಸಾಪ ಅಧ್ಯಕ್ಷ ನಾಗರಾಜ ಹೆಗಡೆ ಅಪಗಾಲ ಉಪಸ್ಥಿತರಿದ್ದರು. 

ಸಮ್ಮೇಳನಾಧ್ಯಕ್ಷರ ಕಿರು ಪರಿಚಯ ಕೆರೆಕೋಣದಲ್ಲಿ ಜನಿಸಿದ ಎನ್‌.ಎಸ್‌. ಹೆಗಡೆ ಅರೇಅಂಗಡಿ ಎಸ್‌ಕೆಪಿ ವಿದ್ಯಾಲಯದಲ್ಲಿ ಓದಿ, ಕರ್ನಾಟಕ ವಿವಿ ವಿಜ್ಞಾನ ಪದವೀಧರರಾಗಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದು ಹೊನ್ನಾವರದ ಹೋಲಿರೋಸರಿ ಕಾನ್ವೆಂಟ್‌  ಶಾಲೆಯ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಟ್ರಾನ್ಸಿಸ್ಟರ್‌ ರೇಡಿಯೋ ದುರಸ್ತಿ ಇವರ ಹವ್ಯಾಸವಾಗಿತ್ತು. ಈ ಕುರಿತು ಪುಸ್ತಕವನ್ನೇ ಬರೆದಿದ್ದಾರೆ. ಇಂತಹ ವೈಜ್ಞಾನಿಕ ಕೃತಿಗಳಿಂದ ಹಿಡಿದು ಕಾವ್ಯ, ವೈಚಾರಿಕ, ಗದ್ಯ, ಸ್ಪರ್ಧಾತ್ಮಕ ಪರೀಕ್ಷೆಯ ಕೈಪಿಡಿಯವರೆಗೆ ಹನ್ನೊಂದಕ್ಕಿಂತ ಹೆಚ್ಚು ಕೃತಿಯನ್ನು ರಚಿಸಿದ ಅವರು ವಿಜ್ಞಾನ ಶಿಕ್ಷಕರಾಗಿ ರಾಜ್ಯ-ರಾಷ್ಟ್ರಮಟ್ಟದ ಸ್ಪರ್ಧೆ ವಿಜೇತರಿವರು. ವಿಜ್ಞಾನ ಹಾಗೂ ಸಾಹಿತ್ಯದಲ್ಲಿ ಸಮಾನ ಆಸಕ್ತಿ ಹೊಂದಿರುವ ಎನ್‌.ಎಸ್‌. ಹೆಗಡೆಯವರ ಮಕ್ಕಳು ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಪತ್ನಿಯೊಂದಿಗೆ ವಿಶ್ರಾಂತ ಜೀವನ ನಡೆಸುತ್ತಿರುವ ಇವರು ಯಾವುದೇ ಗೊಂದಲ,
ಗದ್ದಲ, ವಿವಾದಗಳಿಲ್ಲದೆ ಪ್ರಚಾರ ಪ್ರಸಿದ್ಧಿಗಳಿಗೆ ಆಸೆ ಪಡದೆ ಸಾಹಿತ್ಯ, ವಿಜ್ಞಾನದ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದಾರೆ.
ಸಾಹಿತ್ಯಕ್ಕೆ ಕೊಡುಗೆ ನೀಡಿದ ತಾಲೂಕಿನ ಹಲವರಲ್ಲಿ ಹಿರಿಯರಾದ ಇವರನ್ನು ಸಮ್ಮೇಳನಾಧ್ಯಕ್ಷತೆಗೆ ಆಯ್ಕೆಮಾಡಲಾಗಿದೆ.

Trending videos

Back to Top