CONNECT WITH US  

ಶಾಶ್ವತದೆಡೆ ತುಡಿಯುವವರು ಸನ್ಯಾಸಿಗಳು: ರಾಘವೇಶ್ವರ ಶ್ರೀ

ಸಿದ್ದಾಪುರ: ಸೀಮಿತದಿಂದ ಅಸೀಮತೆಯೆಡೆಗೆ ಸಾಗಲು ಸನ್ಯಾಸ ಮಾರ್ಗ ಕಲ್ಪಿಸುತ್ತದೆ. ಜೀವನವನ್ನು, ಸ್ವಂತವನ್ನು ಪಕ್ಕಕ್ಕಿಟ್ಟು ಸಂತನಾಗಬೇಕಾಗುತ್ತದೆ. ಸನ್ಯಾಸವು ತ್ಯಾಗದ ಅಡಿಪಾಯದ ಮೇಲೆ ಮೈದಳೆಯುತ್ತದೆ. ಅಶಾಶ್ವತವಾದುದನ್ನೆಲ್ಲಾ ಬಿಟ್ಟು ಶಾಶ್ವತದೆಡೆಗೆ ತುಡಿಯುವವರು ಸನ್ಯಾಸಿಗಳಾಗುತ್ತಾರೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಶ್ರೀಗಳು
ಹೇಳಿದರು.

ಪಟ್ಟಣದ ಗೌತಮದಲ್ಲಿ ತಮ್ಮ ಸನ್ಯಾಸಗ್ರಹಣದ 25ನೇ ವರ್ಷದ ಪಾದಾರ್ಪಣೆ ದಿನದಂದು ದುರ್ಬಲ ಕುಟುಂಬವೊಂದನ್ನು ದತ್ತು ಪಡೆದು ಆ ಕುಟುಂಬವನ್ನು ಜೀವದಾನದ ಮೂಲಕ ಪೋಷಿಸುವ ವಾತ್ಸಲ್ಯ ದಿನವನ್ನಾಗಿ ಸನ್ಯಾಸಗ್ರಹಣ ದಿನಾಚರಣೆ ನಡೆಸಿದ ಶ್ರೀಗಳು ಮಠದ ಜೀವನದಾನ ಟ್ರಸ್ಟ್‌ ಮೂಲಕ ಉಪ್ಪಿನಂಗಡಿ ವಲಯ ಕಾಸರಗೋಡ ಮುಳಿಯಾಲದ ಧರ್ಮಸ್ಥಳ ನಿವಾಸಿಯಾಗಿದ್ದು ಕಿಡ್ನಿ ವೈಫಲ್ಯದಿಂದ ಕಳೆದ ಆರು ವರ್ಷಗಳಿಂದ ಬಳಲುತ್ತಿರುವ ಗೋಪಾಲಕೃಷ್ಣ ಭಟ್‌ ರಿಗೆ ಜೀವನದಾನವನ್ನು ಅನುಗ್ರಹಿಸಿ
ಆಶೀರ್ವಚನ ನೀಡುತ್ತಿದ್ದರು.

ಸನ್ಯಾಸ ಹುಲಿಯ ಸವಾರಿಯಂತೆ ಅದನ್ನು ನಡೆಸಲು ಸಾಕಷ್ಟು ಶಕ್ತಿಬೇಕು, ಪತನವಾದರೆ ಹುಲಿಯೇ ತಿನ್ನಬಹುದು ಎಂದು ನಮಗೆ ಸನ್ಯಾಸದೀಕ್ಷೆ ನೀಡಿದ ಹಿರಿಯ ಶ್ರೀಗಳು ಹೇಳುತ್ತಿದ್ದರು. ಪೂರ್ವಾಶ್ರಮದಲ್ಲಿರುವಾಗ ಸನ್ಯಾಸ ಮುಳ್ಳಿನ ಕಿರೀಟವೆಂದೂ ಅನೇಕರು
ಎಚ್ಚರಿಸಿದ್ದರು. ಆದರೆ ನಾವು ಯಾವುದೇ ಅಡೆತಡೆಯನ್ನೂ ಮೀರಿ ಇಷ್ಟು ದೂರ ಬರಲು ಸಾಧ್ಯವಾಯಿತು. ನಮಗೆ ಸನ್ಯಾಸವೇನೂ ಮುಳ್ಳಿನ ಕಿರೀಟವೆನಿಸಲಿಲ್ಲ. ನಾವು ಅನೇಕ ವಿಧಾಯಕ ಕಾರ್ಯಕ್ರಮಗಳ ಮೂಲಕ ಅರ್ಧಮಂಡಲ (24 ವರ್ಷ) ಪೂರೈಸಿದ್ದೇವೆ ಎಂದು ಶ್ರೀಗಳು ತಿಳಿಸಿದರು.

ಜೀವನದಾನ ಟ್ರಸ್ಟಿನ ಅಧ್ಯಕ್ಷ, ಶ್ರೀಮಠದ ಕಾರ್ಯನಿರ್ವಹಣಾ ಅಧಿಕಾರಿ ಕೆ.ಜಿ.ಭಟ್ಟ ಮಾತನಾಡಿದರು. ಸಿಗಂದೂರು ಕ್ಷೇತ್ರದ ಧರ್ಮಾಧಿಕಾರಿ ರಾಮಪ್ಪ ಹಾಗೂ ಪ್ರಧಾನ ಅರ್ಚಕ ವೇ.ಶೇಷಗಿರಿ ಭಟ್ಟ ಉಪಸ್ಥಿತರಿದ್ದರು. ಜೀವನದಾನ ಅನುಗ್ರಹ ಪಡೆದ
ಗೋಪಾಲಕೃಷ್ಣ ಭಟ್ಟರ ಧರ್ಮಪತ್ನಿ ಮೀನಾಕ್ಷಿ, ಮಕ್ಕಳಾದ ಅನುರಾಧಾ, ಚೈತ್ರಾ ಹಾಗೂ ಅಳಿಯ ಸುರೇಶ ಪಾಲ್ಗೊಂಡಿದ್ದರು. ಆರ್‌.ಎಸ್‌.ಹೆಗಡೆ ಹರಗಿ ಪ್ರಾಸ್ತಾವಿಕ ಮಾತನಾಡಿದರು. ಗುರುಭಿಕ್ಷಾ ಸೇವೆ ನಡೆಸಿದ ಅನಂತ ರಾಮಯ್ಯ ಹೆಗಡೆ, ಪಾರ್ವತಿ
ಹೆಗಡೆ ದಂಪತಿ ಸಭಾಪೂಜೆ ನೆರವೇರಿಸಿದರು.

Trending videos

Back to Top