CONNECT WITH US  

ಆಹಾರ ಪದ್ಧತಿ ಪೂರ್ವಜರ ದೀರ್ಘಾಯುಷ್ಯದ ಗುಟ್ಟು: ಶ್ಯಾಮ್‌ ಆಳ್ವ

ಬದಿಯಡ್ಕ: ಪ್ರಾಕೃತಿಕ ಸನ್ನಿವೇಶಗಳಿಗೆ ಅನುಗುಣವಾಗಿ ಬದುಕುವ ಕಲೆ ನಮ್ಮ ಪೂರ್ವಜರಿಗೆ ಅರಿವಿತ್ತು. ಈ ಕಾರಣಗಳಿಂದ ಋತುಗಳಿಗನುಗುಣವಾಗಿ ಆಹಾರ ಪದಾರ್ಥ, ಉಡುಗೆ ತೊಡುಗೆ, ಕಷಾಯ ಔಷಧಗಳನ್ನು ಸೇವಿಸಿ ಆರೋಗ್ಯವಂತರಾಗಿ ದೀರ್ಘಾಯುಷಿಗಳಾಗಿ ಬದುಕುತ್ತಿದ್ದರೆಂದು ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿ ಶ್ಯಾಮ್‌ ಆಳ್ವ ತಿಳಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬದಿಯಡ್ಕ ಹಾಗೂ ವಿದ್ಯಾಗಿರಿ ಒಕ್ಕೂಟಗಳ ಆಶ್ರಯದಲ್ಲಿ ಬದಿಯಡ್ಕದ ಸಂಸ್ಕೃತಿ ಭವನದಲ್ಲಿ ಆಯೋಜಿಸಿದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಘಟನೆ, ಸಮೂಹ ಗುಂಪುಗಳ ಮೂಲಕ ತುಳುನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯ ಪಾರಂಪರಿಕತೆಯ ಪರಿಚಯವನ್ನು ಮತ್ತೆ ನೆನಪಿಸುವಂತಾದುದು ಉತ್ತಮ ಬೆಳವಣಿಗೆ. ಈ ಮೂಲಕ ಹೊಸ ತಲೆಮಾರಿಗೆ ಅರಿವಿನ ಬೆಳಕಿಂಡಿ ತೆರೆದುಕೊಳ್ಳಲಿ ಎಂದು ಅವರು ತಿಳಿಸಿದರು.

ಬದಿಯಡ್ಕ ಒಕ್ಕೂಟದ ಅಧ್ಯಕ್ಷ ರಘುರಾಮ ನೆಕ್ರಾಜೆ ಅವರು ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಕುಲಾಲ್‌ ವಾಂತಿಚ್ಚಾಲ್‌ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಆಧುನಿಕತೆಯ ನಾಗಾಲೋಟದಲ್ಲಿ ತುಳುನಾಡಿನ ಪರಂಪರೆಯ ಅರಿವು ನಾಶವಾಗದಿಲಿ ಎಂದರು. ನಿವೃತ್ತ ಅಧ್ಯಾಪಕಿ ಸರಸ್ವತಿ ಟೀಚರ್‌, ಯೋಜನೆಯ ಪ್ರಗತಿಬಂಧು ಜಿಲ್ಲಾ ನಿರ್ದೇಶಕ ಚಂದ್ರಶೇಖರ್‌, ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ, ಗ್ರಾ.ಪಂ. ಸದಸ್ಯ ಬಾಲಕೃಷ್ಣ ಶೆಟ್ಟಿ, ವಿಶ್ವನಾಥ ಪ್ರಭು, ಲಕ್ಷ್ಮೀನಾರಾಯಣ ಪೈ, ವಿದ್ಯಾಗಿರಿ ಒಕ್ಕೂಟದ ಅಧ್ಯಕ್ಷೆ ಕಮಲಾಕ್ಷಿ ಶುಭಹಾರೈಸಿದರು. ಸೇವಾ ಪ್ರತಿನಿಧಿ ಜಲಜಾಕ್ಷಿ ಸ್ವಾಗತಿಸಿ, ಕುಸುಮಾ ವಂದಿಸಿದರು.ಬದಿಯಡ್ಕ ವಲಯ ಮೇಲ್ವಿಚಾರಕ ಧನಂಜಯ ಕಾರ್ಯಕ್ರಮ ನಿರೂಪಿಸಿದರು. ಆಟಿಯ ಪ್ರಾಚೀನ ಸಂಪ್ರದಾಯವನ್ನು ಪ್ರತಿಬಿಂಬಿಸುವ 52ಕ್ಕಿಂತಲೂ ಅಧಿಕ ಹಸುರೆಲೆಗಳ ವೈವಿಧ್ಯಮಯ ಆಹಾರ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

Trending videos

Back to Top