CONNECT WITH US  

ರಾಮಕೃಷ್ಣಾಶ್ರಮದಿಂದ ಪರಿಹಾರ ಕೇಂದ್ರಗಳಿಗೆ ಸಾಮಗ್ರಿ ವಿತರಣೆ

ಸೋಮವಾರಪೇಟೆ: ತಾಲೂಕಿನ ವಿವಿಧೆಡೆ ಸಂತ್ರಸ್ತರಿಗೆ ಆರಂಭಿಸಿರುವ ಪರಿಹಾರ ಕೇಂದ್ರಗಳಿಗೆ ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದಿಂದ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು. ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಸ್ವಾಮಿ ಬೋಧಸ್ವರೂಪನಂದ ಅವರ ನೇತೃತ್ವದಲ್ಲಿ ಒಂದು ಟ್ರಕ್‌ನಲ್ಲಿ ಅಕ್ಕಿ, ಸಕ್ಕರೆ ಸೇರಿದಂತೆ ಅಗತ್ಯ ವಸ್ತುಗಳನ್ನು ಮಾದಾಪುರ, ಕಿರಗಂದೂರು, ಕಾಜೂರು ಮತ್ತು ಸೋಮವಾರಪೇಟೆ ಸುತ್ತಮುತ್ತ ಆರಂಭಿಸಿರುವ ಕೇಂದ್ರಗಳಿಗೆ ವಿತರಿಸಿದರು.

ಅನಂತರ ಮಾತನಾಡಿದ ಅವರು, ರಾಮಕೃಷ್ಣ ಪರಮಹಂಸ ಹಾಗೂ ಸ್ವಾಮಿ ವಿವೇಕಾನಂದ ಅವರುಗಳ ಮಾರ್ಗದರ್ಶನದಲ್ಲಿ ಸೇವಾ ಕಾರ್ಯವನ್ನು ನಡೆಸುತ್ತಿದ್ದೇವೆ. ಇತಿಹಾಸ ಕಂಡರಿಯದ ಸಮಸ್ಯೆ ಕೊಡಗಿಗೆ ಎದುರಾಗಿರುವುದು ದುರಂತ. ಇಂತಹ ಸಂದರ್ಭದಲ್ಲಿ ರಾಜ್ಯದ ವಿವಿಧೆಡೆಗಳಿಂದ ನೆರವಿನ ಮಹಾಪೂರವೇ ಹರಿದುಬಂದಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು. ಸೋಮವಾರಪೇಟೆ ತಾಲೂಕಿನ ಕಿರಗಂದೂರು ಗ್ರಾಮಕ್ಕೆ ಸಂಪರ್ಕಿಸಲು ಕೇವಲ ಒಂದೇ ಮಾರ್ಗವಿದ್ದು, ಮುಂದೆ ಆ ಮಾರ್ಗವೂ ಮುಚ್ಚಿದಲ್ಲಿ ಕಿರಗಂದೂರು ಗ್ರಾ.ಪಂ. ವ್ಯಾಪ್ತಿಯ ಪ್ರದೇಶಗಳು ಮುಖ್ಯವಾಹಿನಿಯಿಂದ ಸಂಪರ್ಕ ಕಡಿದುಕೊಳ್ಳಲಿವೆ. ಈ ನಿಟ್ಟಿನಲ್ಲಿ ಜನರು ಮುಂಜಾಗ್ರತಾ‌ ಕ್ರಮವನ್ನು ಕೈಗೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭ ಕೊಡಗು ಲೇಖಕರ ಬಳಗದ ಅಧ್ಯಕ್ಷ ಕೇಶವ ಕಾಮತ್‌ ಮತ್ತಿತರರು ಉಪಸ್ಥಿತರಿದ್ದರು.

Trending videos

Back to Top