CONNECT WITH US  

ಇಂದು ಸಮಾನತೆಯ ಸಂದೇಶ ಸಾರುವ "ತಿರುವೋಣಂ'

ನೆರೆ ಹಾವಳಿಯಿಂದ ಮಂಕಾದ ಹಬ್ಬದ ಉತ್ಸಾಹ

ಕಾಸರಗೋಡು: ಸಮಾನತೆಯ ಸಾರವನ್ನು ಶಾಂತಿ ಸಾಮರಸ್ಯದ ಸಂದೇಶವನ್ನು ಸಾರುವ ಕೇರಳೀಯರ ನಾಡ ಹಬ್ಬ "ಓಣಂ'. ಜಾತಿ, ಮತ, ಧರ್ಮಗಳ ಎಲ್ಲೆ ಮೀರಿ ಯಾವುದೇ ತಾರತಮ್ಯವಿಲ್ಲದೆ ಆಚರಿಸುವ ಓಣಂ ಹಬ್ಬ ಭಾವೈಕ್ಯತೆಯನ್ನು ಬಿಂಬಿಸಿ ಮುಖ್ಯ ವಾಹಿನಿಯಲ್ಲಿ ಬೆರೆಯುವುದು ಒಂದು ರಸ ಕ್ಷಣ. ಪ್ರೀತಿ, ಐಶ್ವರ್ಯ ಹಾಗೂ ಸಮೃದ್ಧಿಯ ಸಂಕೇತವಾಗಿರುವ ಓಣಂ ಉತ್ಸವದ ತಿರುವೋಣಂ ಆ. 25ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು. ಓಣಂ ಹಬ್ಬದ ಕೇರಳೀಯರಿಗೆ ಸಂತೋಷದ ಹೊನಲಿನ ಉತ್ಸವ. ಆದರೆ ಈ ಬಾರಿ ಕೇರಳದಲ್ಲಿ ಹಿಂದೆಂದೂ ಕಾಣದ ನೆರೆಯ ಹಾವಳಿಯಿಂದಾಗಿ ಓಣಂ ಹಬ್ಬಕ್ಕೆ ಮಂಕು ಉಂಟಾಗಿದೆ. ಸರಕಾರಿ ಮಟ್ಟದ ಯಾವುದೇ ಕಾರ್ಯಕ್ರಮ ಈ ಬಾರಿ ಇಲ್ಲ.

ಹೂವಿನ ರಂಗೋಲಿ, ಮಕ್ಕಳಾಟ, ವಿವಿಧ ಸ್ಪರ್ಧೆಗಳು, ಕ್ಲಬ್‌ಗಳ ವತಿಯಿಂದ ನಡೆಯುವ ಓಣಂ ಆಚರಣೆಗಳು ಈ ಬಾರಿ ಮಂಕಾಗಿದ್ದರೂ ಸಾಂಕೇತಿಕವಾಗಿ ಓಣಂ ಹಬ್ಬವನ್ನು ಜಿಲ್ಲೆಯಾದ್ಯಂತ ಆಚರಿಸಲಾಗುತ್ತಿದೆ. ತಮ್ಮ ಮನೆಗಳಲ್ಲಿ ಮಾಡುವ ವಿಶೇಷ ಅಡುಗೆಗಳಿಗಾಗಿ ಬೇಕಾದ ಸಾಮಗ್ರಿ ಹೊಸಬಟ್ಟೆಗಳನ್ನು ಖರೀದಿಸಿ ಜನರು ಈಗಾಗಲೇ ಸಿದ್ಧರಾಗಿದ್ದಾರೆ.

ಸಂಪದ್ಭರಿತ, ಪ್ರಾಮಾಣಿಕ, ಅಸತ್ಯ ವಿಲ್ಲದ ಒಂದು ಉತ್ತಮ ಕಾಲದ ಸ್ಮರಣೆಯನ್ನು   ನವೀಕರಿಸುವ    ಹಬ್ಬವಾಗಿದೆ ಓಣಂ. ಇಲ್ಲಿ ಹಿಂದೆ ರಾಜ್ಯವನ್ನಾಳುತ್ತಿದ್ದ ಮಹಾಬಲಿಯ ಕಾಲವೆಂದರೆ ಅದು ಐಶ್ವರ್ಯ ಪೂರ್ಣ ಕಾಲ ಎಂದು ತಿಳಿಯಲಾಗಿದೆ. 

ಇದರ ಸ್ಮರಣೆಗಾಗಿ  ಮಹಾಬಲಿ ತನ್ನ ಪ್ರಜೆಗಳನ್ನು ನೋಡಲು ವರ್ಷಕ್ಕೊಮ್ಮೆ ಬರುತ್ತಾನೆ ಎಂಬ ನಂಬಿಕೆಯಲ್ಲಿ ಆತನನ್ನು ಸ್ವಾಗತಿಸಲು ಹೂವಿನ ರಂಗೋಲಿ "ಪೂಕಳಂ' ರಚಿಸಿ ಸಿದ್ಧರಾಗಿದ್ದಾರೆ. ಆದರೆ ಈ ಬಾರಿ ರಾಜ್ಯದಲ್ಲಿ ಉಂಟಾದ ನೆರೆಯಿಂದ ಲಕ್ಷಾಂತರ ಮಂದಿ ಸಂಕಷ್ಟ ಅನುಭವಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಓಣಂ ಹಬ್ಬಕ್ಕೆ ಸಂಬಂಧಿಸಿ ಯಾವುದೇ ಸದ್ದುಗದ್ದಲವಿಲ್ಲ.


Trending videos

Back to Top