CONNECT WITH US  

"ಎಲ್ಲ ಪ್ರದೇಶಗಳಿಗೂ ಅನ್ವಯವಾಗುವ ಚಿತ್ರ'

"ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡುಗೆ ರಾಮಣ್ಣ ರೈ' ಸಿನೆಮಾ ಮೋಡಿ

ಕಾಸರಗೋಡಿನಲ್ಲಿ ಕನ್ನಡ ಸಿನೆಮಾ ಚಿತ್ರೀಕರಣ ಆಗುವುದು ಇದು ಮೊದಲಲ್ಲ. ಕಾಸರಗೋಡಿನವರು ಕನ್ನಡ ಸಿನೆಮಾ ಪ್ರವೇಶಿಸಿದ್ದೂ ಇತ್ತೀಚೆಗಲ್ಲ. ಆದರೆ ಕಾಸರಗೋಡಿನ ಸಮಸ್ಯೆಯನ್ನೇ ವಸ್ತುವಾಗಿಟ್ಟುಕೊಂಡು, ಕಾಸರಗೋಡಿನ ಯುವ ತಲೆಮಾರಿನವರಿಗೆ ಪ್ರಾಧಾನ್ಯ ನೀಡಿ, ಕಾಸರಗೋಡಿನ ಮಣ್ಣಿನಲ್ಲೇ ಸಿನೆಮಾವೊಂದು ಮೂಡಿಬರುತ್ತಿರುವುದು ಇದು ಮೊದಲ ಬಾರಿ. ಇಲ್ಲಿ ನಟಿಸಿರುವ ಸ್ಥಳೀಯ ಪ್ರತಿಭೆಗಳಲ್ಲಿ ಹಲವರು ಮೊದಲ ಬಾರಿ ಅಭಿನಯಕ್ಕೆ ಕಾಲಿಟ್ಟವರೂ ಇದ್ದಾರೆ. ಇದು ನೈಜ ಕತೆಯಲ್ಲ. ಆದರೂ ವಾಸ್ತವಕ್ಕೆ ಹತ್ತಿರ. ಮಾತ್ರವಲ್ಲ, ಭಾಷೆಯೂ ಕಾಸರಗೋಡಿನದ್ದೇ. ಇಲ್ಲಿನ ಸಂಸ್ಕೃತಿ ಆಚಾರ ವಿಚಾರಗಳಿಗೂ ಮಹತ್ವ ನೀಡಲಾಗಿದೆ. ಹಾಗಾಗಿಯೇ ಇದು ನಮ್ಮದೇ ಕತೆ ಅಂತ ನಮಗನಿಸುತ್ತದೆ. ಆದರೆ ಗಡಿನಾಡಿನ ಕನ್ನಡ ಶಾಲೆಯ ಮಕ್ಕಳ ಕತೆಯನ್ನು ಹೇಳುವುದರೊಂದಿಗೇ ಒಟ್ಟು ಕನ್ನಡ ಶಾಲೆಯ ಕತೆಯನ್ನೂ ಹೇಳುವುದರಿಂದಾಗಿ ಸಿನೆಮಾ ಒಂದು ಪ್ರದೇಶಕ್ಕಷ್ಟೇ ಸೀಮಿತವಾಗಿ ಉಳಿಯದೆ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ.

ಸೃಜನಶೀಲತೆಯುಳ್ಳ ವ್ಯಕ್ತಿಯೊಬ್ಬನಿಗೆ ಮಾತ್ರ ಹೊಸ ಸಮಸ್ಯೆಗಳನ್ನ ಕಂಡಾಗ ಅದರ ಆಳದ ಅರಿವಾಗಲು ಸಾಧ್ಯ.  ಗಡಿನಾಡಿನ ಬಗೆಗೆ ಸಿನೆಮಾ ಮಾಡಬೇಕೆಂಬುದು ರಿಷಬ್‌ ಶೆಟ್ಟಿ ಅವರ ಬಹುಕಾಲದ ಕನಸಾಗಿತ್ತು. ಇಲ್ಲಿನ ಸಮಸ್ಯೆ ಬಗೆಗೆ ತಿಳಿದದ್ದೇ ಅದು ಕೇವಲ ನಿರ್ಲಕ್ಷಿಸುವ ವಿಷಯವಲ್ಲ ಎಂಬುದನ್ನು ಗ್ರಹಿಸಿಕೊಂಡದ್ದೇ ಕಥೆ ಬರೆಯಲು ಶುರು ಮಾಡಿದರು. ಬಿ.ಪುರುಷೋತ್ತಮ, ಡಾ| ರತ್ನಾಕರ ಮಲ್ಲಮೂಲೆ ಮುಂತಾದವರನ್ನು ಭೇಟಿ ಮಾಡಿ ಸಂಪೂರ್ಣ ಚಿತ್ರಣವನ್ನು ಮೂಡಿಸಿಕೊಂಡರು.

ನಿರ್ದೇಶಕ ರಿಷಾಬ್‌ ಶೆಟ್ಟಿ ಸಂದರ್ಶನವೊಂದರಲ್ಲಿ ಹೇಳಿರುವಂತೆ "ಸಿನೆಮಾದಲ್ಲಿ ಬರುವ ಎರಡು ಮುಖ್ಯ ಪಾತ್ರಗಳು ನನ್ನ ಅಣ್ಣ ಮತ್ತು ನನ್ನ ಬದುಕಿನಿಂದ ಪ್ರಭಾವಿತವಾದವುಗಳು. ಪ್ರವೀಣ ಪಾತ್ರ ನನ್ನ ಅಣ್ಣನದು. ಮಮ್ಮುಟ್ಟಿ ಪಾತ್ರ ನನ್ನದು. ನಾನು ಹೇಗೆ ಅಣ್ಣಾವ್ರ ಅಭಿಮಾನಿಯೋ ಹಾಗೆ ಮಮ್ಮುಟ್ಟಿ ಮೋಹನ್‌ಲಾಲ್‌ ಅಭಿಮಾನಿ'.

ಆದರೆ ಮಲಯಾಳಿ ಸಂಸ್ಕೃತಿಯ ಅನುಕರಣೆ ಮಾಡುವ ಕನ್ನಡಿಗ ಇದರಲ್ಲಿಲ್ಲ. ಹುಲಿ ವೇಷ, ಯಕ್ಷಗಾನ ಮುಂತಾದ ಕಲೆಗಳನ್ನು ಚಿತ್ರೀಕರಣದ ಸಂದರ್ಭದಲ್ಲಿ ಬಳಸಿಕೊಳ್ಳಲಾಗಿದೆ. ಇದರಲ್ಲಿ ನಟಿಸಿದವರನೇಕರು ಮೊದಲ ಬಾರಿ ಸಿನೆಮಾ ರಂಗವನ್ನು ಪ್ರವೇಶಿಸಿದವ ರಾದರೂ ಹಾಗೆಂದು ಯಾರೂ ಕೂಡ ಹೇಳಲಾರರು.
ಕಾಸರಗೋಡಿನ ಹೋರಾಟ ಪರಂ ಪರೆಯ ಪರಿಚಯವಿರುವವರು ಈ ಸಿನೆಮಾದ ಹಲವು ಪಾತ್ರಗಳನ್ನು ನಮ್ಮ ನಡುವೆಯೇ ಗುರುತಿಸಬಲ್ಲರು. ಎರಡು ವರ್ಷಗಳಿಗಿಂತಲೂ ಹೆಚ್ಚಿನ ಶ್ರಮ ಈ ಸಿನೆಮಾ ಕತೆಯ ರೂಪೀಕರಣದ ಹಿಂದಿದೆ. ಬಿ.ಪುರುಷೋತ್ತಮ, ಡಾ.ರತ್ನಾಕರ ಮಲ್ಲಮೂಲೆ ಮುಂತಾದವರ ಜತೆ ಚರ್ಚಿಸಿ ಕತೆಗೆ ಅಂತಿಮ ರೂಪ ನೀಡಲಾಗಿದೆ. 50 ಕ್ಕೂ ಹೆಚ್ಚು ಶಾಲೆಗಳನ್ನು ಹೊಕ್ಕು ಹೊರಟು ಕೊನೆಗೆ ಕೈರಂಗಳ ಶಾಲೆ ಮತ್ತು ಪರಿಸರವನ್ನು ಚಿತ್ರೀಕರಣಕ್ಕೆ ಬಳಸಿಕೊಳ್ಳಲಾಗಿದೆ.

ರಿಷಬ್‌ ಶೆಟ್ಟಿ ಫಿಲ್ಮ್ಸ್ ಈ ಚಿತ್ರ ನಿರ್ಮಾಣ ಮಾಡಿದೆ. ವೆಂಕಟೇಶ್‌ ಅಂಗುರಾಜ್‌  ಛಾಯಾಗ್ರಹಣ ಮಾಡಿದ್ದಾರೆ. ಒಟ್ಟು 9 ಹಾಡುಗಳಿವೆ. ಅನಂತನಾಗ್‌, ರಂಜನ್‌, ಸಂಪತ್ತ್, ಪ್ರಮೋದ್‌ ಶೆಟ್ಟಿ, ಸಪ್ತಾ ಪಾವೂರು, ಪ್ರಕಾಶ್‌ ತೂಮಿನಾಡ್‌ ಮುಂತಾದವರು ಇದರಲ್ಲಿದ್ದಾರೆ.

ಸಮಕಾಲೀನ ಸಂದರ್ಭದ ಕನ್ನಡ ಶಾಲೆಗೆ ಕನ್ನಡ ಬಾರದ ಗಣಿತ ಅಧ್ಯಾಪಕನ ನೇಮಕಾತಿ ಸಿನೆಮಾದೊಳಗೂ ಇದೆ. ಹೀಗಾಗಿ ನ್ಯಾಯಾಧೀಶರ ಮುಂದೆ ಈ ಸಿನೆಮಾವನ್ನು ಪ್ರದರ್ಶಿಸುವ ಬಗೆಗೆ ಯೋಚಿಸಲಾಗುತ್ತಿದೆ. ಮಾತೃಭಾಷೆಯಲ್ಲಿ ಶಿಕ್ಷಣ ದೊರಕಬೇಕಾದ ಅಗತ್ಯವನ್ನು ಸಮರ್ಥವಾಗಿ ಜನರಿಗೆ ತಲಪಿಸುವಲ್ಲಿ ಸಿನೆಮಾ ಯಶಸ್ವಿಯಾಗುತ್ತದೆ. ಹೀಗಾಗಿ ಈ ಸಿನೆಮಾ ಕಾಸರಗೋಡಿನಲ್ಲೊಂದು ಸಂಚಲನ ಮೂಡಿಸಲಿದೆ.
ಕಾಸರಗೋಡಿನಲ್ಲಿ ಕನ್ನಡ ಸಿನೆಮಾ ಪ್ರದರ್ಶನಗೊಳ್ಳುವುದು ಅತೀ ಕಡಿಮೆ. ಇದೀಗ ನಮ್ಮದೇ ಸಿನೆಮಾ ಒಂದು ನಮ್ಮೂರಲ್ಲಿ ತೆರೆ ಕಾಣುತ್ತಿರುವಾಗ ಅದನ್ನು ನೋಡಿ ಪ್ರೋತ್ಸಾಹಿಸಬೇಕಾದ ಅಗತ್ಯ ಖಂಡಿತವಾಗಿಯೂ ಇದೆ. ಪ್ರತಿಯೊಬ್ಬ ಕನ್ನಡಿಗನನ್ನೂ, ಕನ್ನಡ ಶಾಲೆಯನ್ನೂ ಈ ಸಿನೆಮಾ ತಲಪಬೇಕು. ಮೂವಿ ಮಾಕ್ಸ್‌ ಮತ್ತು ಕಾರಿ°ವಲ್‌ ಮೆಹಬೂಬ್‌ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆರಂಭಗೊಂಡಿದೆ.

- ಸೌಮ್ಯಾ ಪ್ರಸಾದ್‌

Trending videos

Back to Top