CONNECT WITH US  

ಕೇರಳ ಪ್ರವಾಹ: 65,000 ಮಂದಿಯನ್ನು ರಕ್ಷಿಸಿದ್ದ ಮೀನುಗಾರರು

ಸಾಂದರ್ಭಿಕ ಚಿತ್ರ.

ಕೊಚ್ಚಿ: ಕೇರಳದಲ್ಲಿ ಜಡಿ ಮಳೆ ಹಾಗೂ ಉಕ್ಕಿಹರಿದ ಪ್ರವಾಹಕ್ಕೆ ಎದೆಯೊಡ್ಡಿ ಮೀನುಗಾರರು ಜಲಾವೃತ ಪ್ರದೇಶಗಳಿಂದ 65,000 ಜನರನ್ನು ರಕ್ಷಿಸಿದ್ದರೆಂದು ಮೀನುಗಾರಿಕಾ ಸಚಿವೆ ಜೆ. ಮರ್ಸಿಕುಟ್ಟಿ ಅಮ್ಮ ತಿಳಿಸಿದ್ದಾರೆ.

ಅತಿಹೆಚ್ಚು ಹಾನಿಗೀಡಾದ ಪತ್ತನಂತಿಟ್ಟ ಜಿಲ್ಲೆಯೊಂದರಲ್ಲೇ ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಿಲುಕಿದ್ದ ಜನರ ಪೈಕಿ ಶೇ. 70 ಮಂದಿಯನ್ನು ಸ್ಥಳೀಯ ಮೀನುಗಾರರು ಅತ್ಯಂತ ಪ್ರತಿಕೂಲಕರ ಸನ್ನಿವೇಶಗಳನ್ನು ಲೆಕ್ಕಿಸದೆ ರಕ್ಷಿಸಿದರೆಂದು ಅವರು ತಿಳಿಸಿದರು.

"ಧಾರಾಕಾರ ಮಳೆ ಹಾಗೂ ಉಕ್ಕೇರಿದ ಪ್ರವಾಹದ ಮುಂದೆ ಅಸೀಮ ಧೈರ್ಯ ಪ್ರದರ್ಶಿಸಿ ಮೀನುಗಾರರು 669 ಯಾಂತ್ರೀಕೃತ ದೋಣಿಗಳ ನೆರವಿನಿಂದ ಸುಮಾರು 65,000 ಮಂದಿಯನ್ನು ರಕ್ಷಿಸಿದರು' ಎಂದವರು ಮೀನುಗಾರರನ್ನು ಗೌರವಿಸಲು ಇಲ್ಲಿ ಏರ್ಪಡಿಸಲಾಗಿದ್ದ ಸಮಾರಂಭವೊಂದರಲ್ಲಿ ಹೇಳಿದರು. 

ಸರಕಾರದ ಮನವಿಗೆ ಓಗೊಟ್ಟ ಮೀನುಗಾರರು ಎಲ್ಲ ಕಡೆಗಳಿಂದ ಧಾವಿಸಿ ಬಂದರು ಮತ್ತು ತಮ್ಮ ಯಾಂತ್ರೀಕೃತ ನಾಡ ದೋಣಿಗಳನ್ನು ಟ್ರಕ್‌ಗಳಲ್ಲಿ ಪ್ರವಾಹಪೀಡಿತ ಪ್ರದೇಶಗಳಿಗೆ ಒಯ್ದು ರಕ್ಷಣಾ ಕಾರ್ಯಾಚರಣೆಗಳಲ್ಲಿ ತೊಡಗಿದರೆಂದು ಸಚಿವೆ ಶ್ಲಾ ಸಿದರು. ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಅನೇಕ ಮೀನುಗಾರರನ್ನು ವಾಪಸ್‌ ಕರೆಸಿ ರಕ್ಷಣಾ ಕಾರ್ಯಾಚರಣೆಗಳಿಗೆ ಕಳುಹಿಸಲಾಯಿತು ಎಂದು ಕೂಡ ಅವರು ಹೇಳಿದರು.

"ಈ ಮೀನುಗಾರರಿಗೆ ಕೇರಳವು ಎಂದೆಂದಿಗೂ ಕೃತಜ್ಞವಾಗಿರುವುದು.  ನಾವು ಒಗ್ಗಟ್ಟಿನಿಂದ ಇದ್ದರೆ ಇಂಥ ಯಾವುದೇ ವಿಪತ್ತನ್ನು ಎದುರಿಸಬಲ್ಲೆವೆಂದು ನಾವು ಜಗತ್ತಿಗೆ ತೋರಿಸಿಕೊಟ್ಟಿದ್ದೇವೆ' ಎಂದು ಸಚಿವೆ ನುಡಿದರು. ಸಮಾಜದ ಎಲ್ಲ ವರ್ಗಗಳು ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ. ಮೀನುಗಾರರನ್ನು ಮುಖ್ಯ ವಾಹಿನಿಗೆ ತರುವುದಕ್ಕೆ ಸರಕಾರ ಬಯಸಿರು ವುದರಿಂದ ಅವರನ್ನು ಸಮ್ಮಾನಿಸಲಾಗುತ್ತಿದೆ ಎಂದವರು ಹೇಳಿದರು.

ಕರಾವಳಿ ಪ್ರದೇಶಗಳ ಮೀನುಗಾರರನ್ನು ರಕ್ಷಣಾ ಕಾರ್ಯಾ ಚರಣೆಗೆ ಬಳಸಿಕೊಳ್ಳುವ ವೇಳೆ ಸರಕಾರಕ್ಕೆ ಈ ಕುರಿತು ಸ್ಪಷ್ಟ  ಕಲ್ಪನೆಯಿತ್ತು. ರಾಜ್ಯದಲ್ಲಿ ಆ. 15ರಂದು ಅಸಾಮಾನ್ಯವಾಗಿ ಭಾರೀ ಮಳೆ ಸುರಿಯಲಾರಂಭಿಸಿ ಪ್ರವಾಹ ಉಂಟಾದಾಗ ಸರಕಾರ ರಕ್ಷಣಾ ಕಾರ್ಯಾಚರಣೆಗಳಿಗೆ ಮೀನುಗಾರರ ನೆರವು ಪಡೆಯಲು ನಿರ್ಧರಿಸಲಾಯಿತು. ಕೊಲ್ಲಂ ಕರಾವಳಿ ಸೇರಿದಂತೆ ಮೀನುಗಾರರ ಮನೆಗಳಿರುವ ಪ್ರದೇಶಗಳ ಸುತ್ತ ಧ್ವನಿವರ್ಧಕಗಳ ಮೂಲಕ ಪ್ರಕಟನೆಗಳನ್ನು ನೀಡಿ ಪ್ರವಾಹಪೀಡಿತ ಒಳನಾಡು ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಮೀನುಗಾರರನ್ನು ವಿನಂತಿಸಲಾಯಿತು. 
- ಮರ್ಸಿಕುಟ್ಟಿ ಅಮ್ಮ

Trending videos

Back to Top