CONNECT WITH US  

ತಂಡದಿಂದ ಸಮೀಕ್ಷೆ : ಹಾನಿ ಪ್ರದೇಶಗಳ ಮರು ನಿರ್ಮಾಣಕ್ಕೆ ಯೋಜನೆ

ಮಡಿಕೇರಿ: ಜಲಪ್ರಳಯದಿಂದ  ತತ್ತರಿಸಿರುವ ಕೊಡಗು ಜಿಲ್ಲೆಯನ್ನು ಪುನರ್‌ ನಿರ್ಮಾಣ ಸಂಬಂಧ ವಸ್ತುಸ್ಥಿತಿಯ ವರದಿಯನ್ನು ಮುಂದಿನ ಹತ್ತು ದಿನಗಳಲ್ಲಿ ಸರಕಾರಕ್ಕೆ ಸಲ್ಲಿಸುವುದಾಗಿ ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್‌.ವಿಶ್ವನಾಥ್‌ ನೇತೃತ್ವದಲ್ಲಿ ರೂಪುಗೊಂಡಿರುವ ನಿವೃತ್ತ ಇಂಜಿನಿಯರ್‌ ಗಳ  ಪರಿಣಿತರ  ತಂಡ ನಿರ್ಧರಿಸಿದೆ.

ವಿಶ್ವನಾಥ್‌ ಅವರ ನೇತೃತ್ವದ 12 ತಂತ್ರಜ್ಞರ ತಂಡ ಮಡಿಕೇರಿಗೆ ಭೇಟಿ ನೀಡಿ ಭೂಕುಸಿತದಿಂದ ನಲುಗಿ ನಾಶವಾಗಿರುವ ವಿವಿಧ ರಸ್ತೆಗಳನ್ನು ಪರಿಶೀಲಿಸಿತು. ಮಡಿಕೇರಿಯಿಂದ ಆರಂಭಿಸಿ ಮಳೆಯ ರುದ್ರನರ್ತನದಿಂದ ಕಂಗೆಟ್ಟ ಕೊಡಗು ಜಿಲ್ಲೆಯಲ್ಲಿ ಪುನರ್‌ ನಿರ್ಮಾಣ ಕಾರ್ಯ ಹೇಗೆ ನಡೆಯಬೇಕು, ಈಗಿನ ಪರಿಸ್ಥಿತಿಗೆ ಏನು ಕಾರಣ, ಮುಂದಿನ ದಿನಗಳಲ್ಲಿ ಇದು ಪುನರಾವರ್ತನೆಯಾಗದಂತೆ ಮಾಡಲು ಕೈಗೊಳ್ಳಬೇಕಾದ ಕ್ರಮವೇನು, ವಾಸ್ತವವಾಗಿ ಕೊಡಗಿನ ಪುನರ್‌ ನಿರ್ಮಾಣ ಕಾರ್ಯಕ್ಕೆ ಅಗುವ ವೆಚ್ಚವೆಷ್ಟು  ಎಂಬುದರ  ಕುರಿತು ಈ ತಂಡ ಸರ್ಕಾರಕ್ಕೆ ಕೂಲಂಕುಷ ವರದಿ ನೀಡಲಿದೆ.

ಮಳೆಯಿಂದ ತತ್ತರಿಸಿರುವ ಕೊರಗು ಜಿಲ್ಲೆಯಲ್ಲಿ ಮೊದಲು ಸಂಪರ್ಕ ವ್ಯವಸ್ಥೆಯನ್ನು ಸರಿಪಡಿಸಬೇಕಿದ್ದು ಇದಕ್ಕಾಗಿ ಕುಸಿದ ರಸ್ತೆ, ಸೇತುವೆಗಳನ್ನು ತ್ವರಿತವಾಗಿ ಸಜ್ಜುಗೊಳಿಸುವ ಕುರಿತೂ  ವಿಶ್ವನಾಥ್‌ ರಚಿಸಿರುವ ತಜ್ಞ ಇಂಜಿನಿಯರ್‌ಗಳ ತಂಡ ಸಮಗ್ರ ವರದಿ ನೀಡಲಿದೆ. ಕೊಡಗು ಜಿಲ್ಲೆಯ ಪುನರ್‌ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದಂತೆ ಊಹಾಪೋಹದ ವರದಿಗಳು ಪ್ರಕಟವಾಗುತ್ತಿದ್ದು ಇದಕ್ಕಾಗಿ ಎರಡು ಸಾವಿರ ಕೋಟಿ ರೂ ಬೇಕು,ಮೂರು ಸಾವಿರ ಕೋಟಿ ರೂ ಬೇಕು ಎಂಬಂತಹ ವರದಿಗಳು ಪ್ರಕಟವಾಗುತ್ತಿವೆ. ಆದರೆ ಈ ವಿಷಯದಲ್ಲಿ ವಾಸ್ತವವಾಗಿ ಆಗಬೇಕಿರುವ ವೆಚ್ಚ ಎಷ್ಟು  ಅನ್ನುವ ಕುರಿತು ತಜ್ಞರ ತಂಡ ತನ್ನ ವರದಿಯಲ್ಲಿ ದಾಖಲಿಸಲಿದ್ದು ಕೇವಲ ಸರಕಾರದ ಲೋಕೋಪಯೋಗಿ ಇಲಾಖೆ,
ಜಲಸಂಪನ್ಮೂಲ ಇಲಾಖೆ, ಜಿಲ್ಲಾ ಪಂಚಾಯ್ತಿಗಳನ್ನು ಮಾತ್ರ ಪುನರ್‌ ನಿರ್ಮಾಣ ಕಾರ್ಯಕ್ಕಾಗಿ ಅವಲಂಬಿಸಲು ಸಾಧ್ಯವಿಲ್ಲ ಎಂದು ಈ ತಂಡ  ಅಭಿಪ್ರಾಯಪಟ್ಟಿದೆ.

ಮೈಸೂರಿನ ಇನ್ಸ್‌ ಸ್ಟಿಟ್ಯೂಟ್‌ ಆಫ್‌ ಇಂಜಿನಿಯರಿಂಗ್‌ ಸಂಸ್ಥೆಯ 12   ಪರಿಣಿತ ಇಂಜಿನಿಯರ್‌ ಗಳ ತಂಡ ವಿಶ್ವನಾಥ್‌ ಅವರೊಂದಿಗೆ ಕೊಡಗು ಜಿಲ್ಲೆಗೆ  ಭೇಟಿ ನೀಡಿದ್ದು.  ಪುನರ್‌ ನಿರ್ಮಾಣ ಕಾರ್ಯಕ್ಕೆ ಚೆನ್ನೈಯ  ಮಿಲಿಟರಿ ಎಂಜಿನಿಯರಿಂಗ್‌ ಸರ್ವೀಸ್‌ ಸಂಸ್ಥೆಯ ಸೇವೆಯನ್ನೂ ಬಳಸಿಕೊಳ್ಳಬೇಕು ಎಂದು  ತಂಡದ ಪ್ರಮುಖ ಲಕ್ಷ್ಮಣ್‌ ಗೌಡ ಅವರು  ಹೇಳಿದರು. ಕೇವಲ ಸರಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಕೊಡಗು ಪುನರ್‌ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿದರೆ 60:40 ಅನುಪಾತದ ಆಧಾರದ ಮೇಲೆ ಕೆಲಸ ನಡೆಯುವುದರಿಂದ ವಾಸ್ತವವಾಗಿ ಕೊಡಗು ಪುನರ್‌ ನಿರ್ಮಾಣಕ್ಕೆ ಬೇಕಾಗುವ ನಿಜವಾದ ಮೊತ್ತಕ್ಕಿಂತ ಹೆಚ್ಚು ಹಣ ಪೋಲಾಗಲಿದೆ ಎಂದು  ಇಂಜಿನಿಯರ್‌ ಗಳ ಸಭೆಯಲ್ಲಿ ವಿಶ್ವನಾಥ್‌ ಅಭಿಪ್ರಾಯಪಟ್ಟರು.ಕೊಡಗಿನ ಪುನರ್‌ ನಿರ್ಮಾಣ ಕಾರ್ಯಕ್ಕೆ ಅಗತ್ಯವಾದ ಸೂತ್ರಗಳನ್ನು ಒಳಗೊಂಡ ವರದಿಯನ್ನು ಸರಕಾರಕ್ಕೆ ಸಲ್ಲಿಸಲಿದೆ ಎಂದೂ ವಿಶ್ವನಾಥ್‌ ಹೇಳಿದರು.

ಜಿಲ್ಲಾದಿಕಾರಿ ಶ್ರೀ ವಿದ್ಯಾ ಮಾತನಾಡಿ, ಕುಸಿದು ಬಿದ್ದಿರುವ ಮಡಿಕೇರಿ - ಸುಳ್ಯ ರಾಷ್ಟ್ರೀಯ ಹೆದ್ದಾರಿ ಮತ್ತು ಮಡಿಕೇರಿ - ಸೋಮವಾರಪೇಟೆ ರಸ್ತೆಯನ್ನು ಮೊದಲು ಸಂಪಕ9 ರಸ್ತೆಯನ್ನಾಗಿ ಮರುನಿರ್ಮಾಣ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ತಜ್ಞರ ತಂಡಕ್ಕೆ ದ್ರೋಣ್‌ ಕ್ಯಾಮರ, ತಾಂತ್ರಿಕ ನೆರವು ನೀಡಲು ಜಿಲ್ಲಾಡಳಿತ ಸಿದ್ದ ಎಂದು ಭರವಸೆ ನೀಡಿದರು.

ಮೈಸೂರಿನ ಇನ್ಸ್‌ ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ನ ಮಾಜಿ ಅಧ್ಯಕ್ಷ ಎಂ.ಲಕ್ಷ್ಮಣ್‌ ಗೌಡ,  ನಿವೃತ್ತ  ಎಂಜಿನಿಯರ್‌ ಗಳಾದ  ಕೃಷ್ಣಸ್ವಾಮಿ, ಎ.ಎ.ಸತೀಶ್‌, ರಾಜಶೇಖರ ಗೌಡ, ರವಿ, ನರಸಿಂಹಮೂರ್ತಿ, ಸುರೇಶ್‌ ಬಾಬು, ಕೃಷ್ಣ ರಾಜು, ನರಸಿಂಹಮೂರ್ತಿ, ಇಸ್ರೋ ವಿಜ್ಞಾನಿ  ಪ್ರೊ. ಜಗನ್ನಾಥ್‌, ವಿಶೇಷ ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್‌ ಕುಮಾರ್‌ ಸೇರಿದಂತೆ 12 ಇಂಜಿನಿಯರ್‌ ಗಳ ತಂಡಗಳ ಸದ ಸ್ಯರು  ಸಭೆಯಲ್ಲಿ ಪಾಲ್ಗೊಂಡಿದ್ದರು.  

ಕೊಡಗಿನ ಪ್ರವಾಸೋದ್ಯಮವೂ ನಲುಗಿ ಹೋಗಿದ್ದು ಕೊಡಗಿನ ಆರ್ಥಿಕ ಶಕ್ತಿಯನ್ನು ಮತ್ತೆ ಬಲಗೊಳಿಸಬೇಕಾಗಿದೆ ಎಂದು ಹೇಳಿದ ವಿಶ್ವನಾಥ್‌, ನೂರಾರು ವರ್ಷ ಈ ನೆಲದಲ್ಲಿ ಜೀವನ ಕಂಡು ಕೊಂಡವರಿಗೆ ಮತ್ತೆ ಅವರ ನೆಲವನ್ನು ಸದೃಢವಾಗಿ ನಿರ್ಮಿಸಿ ಕೊಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು

ಗುಣಮಟ್ಟದ ಕಾಮಗಾರಿ ಅಗತ್ಯ
ಮಡಿಕೇರಿ ಜಿಲಾಧಿಕಾರಿ ಕಚೇರಿಯಲ್ಲಿ ಇಂಜಿನಿಯರ್‌ ಗಳೊಂದಿಗೆ ಚರ್ಚಿಸಿದ ವಿಶ್ವನಾಥ್‌ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮಳೆಹಾನಿ ಪ್ರದೇಶವನ್ನು ಮರು ನಿರ್ಮಾಣ ಮಾಡುವ ಸಂದರ್ಭ ಶಾಶ್ವತವಾದ ಕೆಲವೊಂದು ತಾಂತ್ರಿಕ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ. ಗುಣಮಟ್ಟದ ಕಾಮಗಾರಿಯೊಂದಿಗೆ ಸುಂದರ ಕೊಡಗು ನಿರ್ಮಾಣ ಆಗಬೇಕಾಗಿದೆ.  ಇಂಜಿನಿಯರ್‌ ಗಳ ತಂಡವನ್ನು ಆಯ್ಕೆ ಮಾಡಿ ಅವರ ಸೇವೆಯನ್ನು ಕೊಡಗು ನಿರ್ಮಾಣದ ನಿಟ್ಟಿನಲ್ಲಿ ಉಚಿತವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದರು.

ಕೊಡಗು ಜಿಲ್ಲೆ ವಿಶ್ವದ ಸುಂದರ ತಾಣಗಳಲ್ಲಿ ಒಂದಾಗಿ ಖ್ಯಾತವಾಗಿದೆ.ಇಂಥ ಕೊಡಗಿನ ಸೌಂದರ್ಯವನ್ನು ಉಳಿಸಿಕೊಂಡು ಮತ್ತೆ ಕೊಡಗನ್ನು ಪುನರ್‌ ನಿರ್ಮಾಣ ಮಾಡುವ ಸಂಕಲ್ಪ ತೊಡಬೇಕಾಗಿದೆ. ಮನೆಗಳು, ತೋಟಗಳು ಪ್ರಕೃತಿ ವಿಕೋಪದಿಂದಾಗಿ ನಾಶವಾಗಿದೆ. ಇವತ್ತಿಗೇನು ಮುಖ್ಯ ಎಂಬುದನ್ನು ಪರಿಗಣಿಸಿ ಆದ್ಯತೆಯನ್ನು ಪರಿಗಣಿಸಿ ಅಂತೆಯೇ ಕಾರ್ಯನಿರ್ವಹಿಸಬೇಕಾಗಿದೆ ಎಂದರು.


Trending videos

Back to Top