CONNECT WITH US  

ಒಂದುತಿಂಗಳ ವೇತನ, ಚಿನ್ನದಸರ ನೆರೆ ಸಂತ್ರಸ್ತರಿಗೆ ನೀಡಿದ ಶಮೀಮಾ ಟೀಚರ್

ಕಾಸರಗೋಡು: ಕೇರಳದಲ್ಲಿ ಹಿಂದೆಂದೂ ಕಾಣದ ನೆರೆಯಿಂದ ತತ್ತರಿಸುವ ಸಂತ್ರಸ್ತರಿಗೆ ದೇಶದ ವಿವಿಧ ಭಾಗಗಳಿಂದ ನೆರವು ಹರಿದು ಬರುತ್ತಿದ್ದು, ಟೀಚರೊಬ್ಬರು ತನ್ನ ಒಂದು ತಿಂಗಳ ವೇತನ ಮತ್ತು ಚಿನ್ನದ ಸರವನ್ನು ನೀಡಿ ಮಾದರಿಯಾಗಿದ್ದಾರೆ. ಕಣ್ಣೂರು ತಲಶ್ಯೇರಿ ಇರುವಂಗಾಡ್‌ ಸರಕಾರಿ ಹೆಣ್ಮಕ್ಕಳ ಹೈಯರ್‌ ಸೆಕೆಂಡರಿ ಶಾಲೆಯ ಅಧ್ಯಾಪಿಕೆ ಶಮೀಮಾ ಟೀಚರ್‌ ತನ್ನ ಒಂದು ತಿಂಗಳ ವೇತನದ ಜತೆಗೆ ತನ್ನ ಕತ್ತಿನಲ್ಲಿದ್ದ 16.280 ಗ್ರಾಂ. ಚಿನ್ನದ ಸರವನ್ನು ದೇಣಿಗೆಯಾಗಿ ನೀಡಿದ್ದಾರೆ.

ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಯುತ್ತಿರುವ 'ಒನ್‌ ಮಂತ್‌ ಫಾರ್‌ ಕೇರಳ' ಅಭಿಯಾನದ ಅಂಗವಾಗಿ ಈ ಟೀಚರ್‌ ಒಂದು ತಿಂಗಳ ವೇತನ ಮತ್ತು ಚಿನ್ನದ ಸರವನ್ನು ಸಂತ್ರಸ್ತರ ನಿಧಿಗೆ ಹಸ್ತಾಂತರಿಸಿದರು. ಮಾಹೆ ಪಳ್ಳೂರು ನಿವಾಸಿಯಾದ ಶಮೀಮಾ ಟೀಚರ್‌ ಈ ಮೂಲಕ ಮಾದರಿಯನ್ನು ಸೃಷ್ಟಿಸಿದ್ದಾರೆ. ತನ್ನ ಕೈಯಲ್ಲಿ ಹಣವಾಗಿ ನೀಡಲು ತತ್ಕಾಲ ಇಲ್ಲದಿರುವುದರಿಂದ ಚಿನ್ನದ ಸರವನ್ನು ನೀಡಿದೆ ಎಂದು ವಿದ್ಯಾರ್ಥಿಗಳ ಪ್ರೀತಿಯ ಸುವೋಲಜಿ ಅಧ್ಯಾಪಿಕೆಯಾದ ಶಮೀಮಾ ಹೇಳಿದ್ದಾರೆ.


ಜಿಲ್ಲಾಧಿಕಾರಿ ಕಚೇರಿಗೆ ತಲುಪಿದ ಶಮೀಮಾ ಟೀಚರ್‌ ಡೆಪ್ಯೂಟಿ ಕಲೆಕ್ಟರ್‌ ಸಿ.ಎಂ.ಗೋಪಿನಾಥ್‌ ಅವರಿಗೆ ತನ್ನ ಕತ್ತಿನಲ್ಲಿದ್ದ ಚಿನ್ನದ ಸರವನ್ನು ತೆಗೆದು ಹಸ್ತಾಂತರಿಸಿದರು. ಹಲವು ವರ್ಷಗಳಿಂದ ಕತ್ತಿನಲ್ಲಿದ್ದ ಈ ಚಿನ್ನದ ಸರ ತೆಗೆದು ನೀಡಿದ ಬಗ್ಗೆ ಜಿಲ್ಲಾಧಿಕಾರಿ ಶ್ಲಾಘಿಸಿದ್ದಾರೆ. ಕೇರಳ  ಈ ಹಿಂದೆ ಎಂದೂ ಕಾಣದ ನೆರೆಯಿಂದ ಕೇರಳದ ಸ್ಥಿತಿ ದಯನೀಯವಾಗಿದೆ. ನೆರೆಯಿಂದ ತತ್ತರಿಸಿರುವ ಸಂತ್ರಸ್ತರಿಗೆ ಹರಿದು ಬರುತ್ತಿರುವ ನೆರವು ಈ ಹಿಂದೆ ಎಂದೆಂದೂ ಕಂಡಿರಲಿಲ್ಲ. ನೆರವಿನ ಮಹಾಪೂರವೇ ಹರಿದು ಬರುತ್ತಿದೆ ಎಂದು ಸಿ.ಎಂ.ಗೋಪಿನಾಥ್‌ ಅವರು ಹೇಳಿದರು. ಈ ಸಂದರ್ಭದಲ್ಲಿ ಫಿನಾನ್ಸ್‌ ಆಫೀಸರ್‌ ಕೆ.ಪಿ.ಮನೋಜ್‌ ಅವರು ಉಪಸ್ಥಿತರಿದ್ದರು.

ಕೇರಳದ ನೆರೆಯ ಅವಸ್ಥೆಯನ್ನು ಕಂಡಾಗ ಈ ಕೊಡುಗೆ ದೊಡ್ಡ ಸಾಧನೆಯಲ್ಲ. ತನ್ನಿಂದ ಸಾಧ್ಯವಾದ ನೆರವನ್ನು ಮಾತ್ರವೇ ನೀಡಿದ್ದೇನೆ. ಕೇರಳದ ಲಕ್ಷಾಂತರ ಮಂದಿ ನೆರೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಸಹೋದರ ಸಹೋದರಿಯರಿಗೆ, ಮಕ್ಕಳಿಗೆ ಈ ಕೊಡುಗೆ ಏನೇನು ಸಾಲದು. ಆದರೂ ತನ್ನಿಂದ ಸಣ್ಣ ನೆರವು ನೀಡಲು ಸಾಧ್ಯವಾಗಿದೆ.
- ಶಮೀಮಾ ಟೀಚರ್‌

Trending videos

Back to Top