CONNECT WITH US  

ಶವಗಳ ಹುಡುಕಾಟದಲ್ಲಿ ಕಣ್ಣೀರಾದ ಸುಬೇದಾರ್‌ ಮೇ| ಬೋಪಣ್ಣ​​​​​​​

ನಮ್ಮೂರು, ನಮ್ಮವರು ಎಂದು ನೊಂದವರಿಗೆ ಮಿಡಿದರು : ನಮ್ಮವರೇ ಕಳೆದು ಹೋದರೆಂದು ಕಣ್ಣೀರಿಟ್ಟರು 

ಮಡಿಕೇರಿ: ಕಾವೇರಿ ನದಿಯ ತವರೂರು ಕೊಡಗು ಇಂದು ಜಲಸ್ಫೋಟದಿಂದ ನಲುಗಿ ಹೋಗಿದೆ. ಪ್ರಶಾಂತವಾಗಿಯೇ ಹರಿಯುತ್ತಿದ್ದ ಕಾವೇರಿ ತನ್ನೂರಿನ ಜನರ ಮೇಲೆ ಅದೇಕೆ ಮುನಿದಳ್ಳೋ ತಿಳಿಯದು. 

ನದಿ ನೀರಿನಿಂದ ಗ್ರಾಮಸ್ಥರ ಬದುಕು ಅಷ್ಟೊಂದು ನರಕವಾಗದಿದ್ದರೂ ಕಾವೇರಿಗೆ ಅಲಂಕಾರದಂತಿದ್ದ ಬೆಟ್ಟಗುಡ್ಡ ಗಳಿಂದ ಎಂದೂ ಮರೆಯಲಾಗದ ಹಾನಿ ಯಾಗಿದೆ, ನೋವಾಗಿದೆ, ಸಾವಾಗಿದೆ. ನಮ್ಮೂರು, ನಮ್ಮವರು ಎಂದು ಎಲ್ಲ ರೊಂದಿಗೆ ನಮ್ಮವ ರೆಲ್ಲರೂ ಭಾಗಿಯಾಗಿ ಸಂಕಷ್ಟದ ಪರಿಸ್ಥಿತಿ ಯಲ್ಲಿ ಸಿಲುಕಿದವರನ್ನು ರಕ್ಷಿಸಿ, ಪೋಷಿಸುತ್ತಿರುವುದು ಸ್ವಾಭಿಮಾನಿ ಕೊಡಗಿನ ಗುಣಕ್ಕೆ ಸಾಕ್ಷಿಯಾಗಿದೆ. ಹೀಗೆ ನಮ್ಮವರೆಂದು ಕನಿಕರ ತೋರಿ ಮತ್ತು ಕರ್ತವ್ಯ ಪ್ರಜ್ಞೆ ಮೆರೆದು ಮೂರು ಮೃತದೇಹಗಳ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದವರು ಸುಬೇದಾರ್‌ ಮೇಜರ್‌ ಕುಟ್ಟಂಡ ಬೋಪಣ್ಣ.

ಕಾಫಿ ತೋಟಗಳಿಂದ ಕಂಗೊಳಿಸುತ್ತಿದ್ದ ಮೇಘತ್ತಾಳು ಗ್ರಾಮ ಕುಸಿದು ಕಣ್ಮರೆಯಾದ ಪ್ರದೇಶದಲ್ಲಿ ಇಂದು ಸ್ಮಶಾನ ಮೌನವಿದೆ. ಮನೆಯ ಮೇಲೆ ಬೆಟ್ಟ ಕುಸಿದ ಪರಿಣಾಮ ಇಲ್ಲಿನ ನಿವಾಸಿ ಚಂದ್ರಾವತಿ (58) ಹಾಗೂ ಅವರ ಪುತ್ರ ಉಮೇಶ್‌ (32) ಭೂಸಮಾಧಿಯಾಗಿದ್ದರು. ಮೇಘತ್ತಾಳು ಗ್ರಾಮವೇ ದುರ್ಗಮ ಕಣಿವೆಯಾಗಿ ಪರಿವರ್ತನೆಯಾಗಿತ್ತು. ಸಾವಿರಾರು ಅಡಿ ಪ್ರಪಾತ, ಕುತ್ತಿಗೆಯವರೆಗೆ ಹೂಳುವ ಕೆಸರು, ಅಲ್ಲಿ ಮನೆಗಳು ಇತ್ತು ಎಂಬ ಬಗ್ಗೆ ಸಣ್ಣ ಕುರುಹು ಕೂಡಾ ಸಿಗದ ರೀತಿಯಲ್ಲಿ ಚಂದ್ರಾವತಿಯವರ ಮನೆ ನಿರ್ನಾಮವಾಗಿತ್ತು. 

ಇಂತಹ ಅಪಾಯಕಾರಿ ಕಂದಕಕ್ಕೆ ಒಬ್ಬರಿಗೊಬ್ಬರು ಹಗ್ಗ ಕಟ್ಟಿಕೊಂಡು ಇಳಿದ ಡೋಗ್ರಾ ರೆಜಿಮೆಂಟ್‌ನ ಯೋಧರು ಹಾಗೂ ಸುಬೇದಾರ್‌ ಮೇಜರ್‌ ಕುಟ್ಟಂಡ ಬೋಪಣ್ಣ ಮನೆ ಇತ್ತು ಎಂದು ಹೇಳಲಾದ ಪ್ರದೇಶದಿಂದ ಅಂದಾಜು 500 ಅಡಿ ದೂರದ ವರೆಗೂ ಕೆಸರಿನಲ್ಲಿ ಮೃತದೇಹಕ್ಕಾಗಿ ಜೀವದ ಹಂಗು ತೊರೆದು ಹುಡುಕಾಡಿದರು. 3 ಅಡಿ ಕೆಸರಿನಲ್ಲಿ ಹೂತಿದ್ದ ಎರಡು ಮೃತದೇಹಗಳನ್ನು ಸುಬೇದಾರ್‌ ಮೇಜರ್‌ ಬೋಪಣ್ಣ ಪತ್ತೆ ಹಚ್ಚಿ ಉಳಿದ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಬಳಿಕ ಹಗ್ಗದ ಸಹಾಯದಿಂದ ತಾಯಿ, ಮಗನ ಮೃತದೇಹವನ್ನು ಅಂದಾಜು 2 ಸಾವಿರ ಅಡಿ ಪ್ರಪಾತದಿಂದ ಸೈನಿಕರು ಮತ್ತು ಸ್ಥಳೀಯರು ಹೊತ್ತು ತಂದರು.  ಉದಯಗಿರಿಯಲ್ಲಿ ಭೂ ಕುಸಿತದಿಂದ ಮೃತಪಟ್ಟ ಬಾಬು (58) ಅವರ ಮೃತದೇಹವನ್ನು ಕೂಡ ಸುಬೇದಾರ್‌ ಮೇಜರ್‌ ಬೋಪಣ್ಣ ಹೊರತೆಗೆದಿದ್ದಾರೆ. 1.05 ಕಿ.ಮೀ. ದೂರ ಕೊಚ್ಚಿಹೋಗಿದ್ದ 10 ಅಡಿ ಆಳದಲ್ಲಿ ಸಿಲುಕಿದ್ದ ಮೃತದೇಹವನ್ನು ಬೋಪಣ್ಣ ಹಾಗೂ ಸ್ಥಳೀಯ ಯುವಕರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.

ಹಿಂದೆಂದೂ ಕಂಡು ಕೇಳರಿಯದ ಮಹಾಮಳೆಯಿಂದ ಭೂ ಕುಸಿದು ಹಲವು ಮಂದಿ ಭೂ ಸಮಾಧಿಯಾಗಿದ್ದು, ನಾಪತ್ತೆಯಾದ ಮೃತದೇಹಗಳಿಗೆ ಶೋಧ ಕಾರ್ಯ ಮುಂದುವರಿದಿದೆ.

ಪ್ರಕೃತಿ ವಿಕೋಪದಿಂದ ಸೈನಿಕರ ನಾಡು, ಕಾವೇರಿ ತವರು ತತ್ತರಿಸಿದ ಸಂದರ್ಭ ರಕ್ಷಣಾ ಪಡೆಗಳು ಜಿಲ್ಲೆಯ ಜನರ ರಕ್ಷಣೆಗೆ ಧಾವಿಸಿ ಬಂದವು. ಬೆಟ್ಟಗುಡ್ಡಗಳಲ್ಲಿ ಸಿಲುಕಿದ್ದ ನೂರಾರು ಮಂದಿಯ ಜೀವವನ್ನು ರಕ್ಷಿಸಿದರು.

ಮಾದಾಪುರ ಸಮೀಪದ ಹಾಡಗೇರಿ ಗ್ರಾಮದ ಕುಟ್ಟಂಡ ಬೋಪಣ್ಣ 1990 ರಲ್ಲಿ ಮಂಗಳೂರಿನಲ್ಲಿ ಸೇನಾಭರ್ತಿಯ ರ್ಯಾಲಿಯ ಮೂಲಕ ಆರ್ಟಿಲರಿ ರೆಜಿಮೆಂಟ್‌ಗೆ ಸೇರ್ಪಡೆಯಾದರು. ಆ ಬಳಿಕ 80 ಫೀಲ್ಡ್‌ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿದರು. ತದನಂತರ 136 ರೆಜಿಮೆಂಟ್‌ನಲ್ಲಿ ಸೇವೆ ನಿಯುಕ್ತಿಯಾದರು. ಸಿಕ್ಕಿಂ, ಗುಜರಾತ್‌ ಭೂಕಂಪ, ಉತ್ತರಾಖಂಡ್‌, ರಾಜಾಸ್ಥಾನ ಭಾರೀ ಪ್ರವಾಹ, ಸಿಯಾಚಿನ್‌ ಗ್ಲೆàಷಿಯರ್‌ ಹಿಮಪಾತ, ಭೂ ಕುಸಿತ, ಜಮ್ಮುಕಾಶ್ಮೀರ ಪ್ರವಾಹ ಹೀಗೆ ತಮ್ಮ ಸರ್ವಿಸ್‌ನಲ್ಲಿ ಹಲವು ಕಡೆಗಳಲ್ಲಿ ಪ್ರಕೃತಿ ವಿಕೋಪದ ರಕ್ಷಣಾ ಕಾರ್ಯದಲ್ಲಿ ಹಗಲಿರುಳು ತೊಡಗಿಸಿಕೊಂಡಿದ್ದೆ ಎಂದು ತಮ್ಮ ಸೇನಾ ಅನುಭವ ಹಂಚಿಕೊಂಡರು.

ರಜೆಯಲ್ಲಿ ಬಂದರು
ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಅನಾಹುತದಿಂದ ಜನರನ್ನು ರಕ್ಷಿಸಲು ರಕ್ಷಣಾ ಪಡೆಗಳ ಯೋಧರು ಜಿಲ್ಲೆಗೆ ಕಾಲಿಟ್ಟರು. ತನ್ನ ಊರ ಜನರ ರಕ್ಷಣೆಗಾಗಿ ಕುಟ್ಟಂಡ ಬೋಪಣ್ಣ ಅವರು ಕೂಡ ರಜೆ ಹಾಕಿ ಹಟ್ಟಿಹೊಳೆಗೆ ಬಂದಿಳಿದರು. ಮಳೆಯ ತೀವ್ರತೆ ಇಳಿಮುಖವಾದ ನಂತರ ಮಣ್ಣಿನಡಿ ಸಿಲುಕಿದ್ದವರ ಮೃತದೇಹವನ್ನು ಹೊರತೆಗೆಯುವ ಕಾರ್ಯಾಚರಣೆಯಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿ ಕೊಂಡರು.

ಅನುಭವ ತಂದ ಸೇವೆ, ಮಾರ್ಗದರ್ಶನ
ಮೇಜರ್‌ ವಿಶ್ವಾಸ್‌ ನೇತೃತ್ವದಲ್ಲಿ 15ನೇ ಡೋಗ್ರಾ ರೆಜಿಮೆಂಟ್‌ನ ಯೋಧರ ಒಂದು ತಂಡ ಮೇಘತ್ತಾಳು, ಹೆಮ್ಮೆತ್ತಾಳು ಭಾಗದಲ್ಲಿ ಶೋಧ ಕಾರ್ಯ ಆರಂಭಿಸಿತು. ಕುಟ್ಟಂಡ ಬೋಪಣ್ಣ ಕೂಡ ಡೋಗ್ರಾ ರೆಜಿಮೆಂಟ್‌ನ ಯೋಧರೊಂದಿಗೆ ಮೃತದೇಹಗಳಿಗೆ ಹುಡುಕಾಟ ನಡೆಸಿದರು. ಪ್ರವಾಹ, ಭೂ ಕುಸಿತ, ಮೇಘ ಸ್ಫೋಟ ಸಂದರ್ಭ ಸೇನಾ ಅನುಭವವನ್ನು ಆಧರಿಸಿ ಡೋಗ್ರಾ ರೆಜಿಮೆಂಟ್‌ನ ಸೈನಿಕರಿಗೆ ಮಾರ್ಗದರ್ಶನ ನೀಡುವಲ್ಲಿಯೂ ಸುಬೇದಾರ್‌ ಮೇಜರ್‌ ಬೋಪಣ್ಣ  ಮಹತ್ವದ ಪಾತ್ರ ವಹಿಸಿದರು. ಇವರ ಸೇವೆ ಬಗ್ಗೆ ಗ್ರಾಮಸ್ಥರೂ ಮೆಚ್ಚುಗೆ ವ್ಯಕ್ತಪಡಿಸಿದರು. 

ನಮ್ಮೂರಿನವರಿಗಾಗಿ ನಾನು ಸಲ್ಲಿಸಿದ ಸೇವೆ ಬಗ್ಗೆ ನನಗೆ ತೃಪ್ತಿ ಇದೆ, ಆದರೆ ನಮ್ಮವರನ್ನು ಕಳೆದುಕೊಂಡ ದುಃಖ ನನ್ನನ್ನು ಕಾಡುತ್ತಿದೆ ಎಂದು ಬೋಪಣ್ಣ ಬೇಸರ ವ್ಯಕ್ತಪಡಿಸಿದ್ದಾರೆ. 

ಮೇಜರ್‌ ಕುಟ್ಟಂಡ ಬೋಪಣ್ಣ
ಜಿಲ್ಲೆಯ ಜನರ ರಕ್ಷಣೆಗೆ ಬಂದವರಲ್ಲಿ ಸುಬೇದಾರ್‌ ಮೇಜರ್‌ ಕುಟ್ಟಂಡ ಬೋಪಣ್ಣ ಕೂಡ ಒಬ್ಬರು. ಆ.24ಕ್ಕೆ ಭಾರತೀಯ ಸೇನೆಯಲ್ಲಿ ಅವರು ಸಲ್ಲಿಸುತ್ತಿರುವ ಸೇವೆಗೆ ಬರೋಬ್ಬರಿ 28 ವರ್ಷ ಸಲ್ಲುತ್ತದೆ. ತನ್ನ 28 ವರ್ಷ ಸರ್ವಿಸ್‌ನಲ್ಲಿ ಅದೆಷ್ಟೋ ಕಡೆಗಳಲ್ಲಿ ಪ್ರವಾಹ, ಭೂಕುಸಿತ ಸೇರಿದಂತೆ ಪ್ರಕೃತಿ ವಿಕೋಪದಲ್ಲಿ ಸಿಲುಕಿದ್ದವರ ರಕ್ಷಣೆ ಮಾಡಿದ್ದೆ. ಮಣ್ಣಿನಡಿ ಸಿಲುಕಿ ಮೃತಪಟ್ಟವರ ದೇಹಗಳನ್ನು ಹೊರತೆಗೆದಿದ್ದೇನೆ. ಆದರೆ ನನ್ನೂರಿಗೆ ಇಂತಹ ದುರ್ಗತಿ ಬರುತ್ತದೆ ಎಂದು ಕನಸ್ಸಲ್ಲೂ ಊಹಿಸಿರಲಿಲ್ಲ. ನನ್ನೂರ ಜನರ ಮೃತದೇಹಗಳನ್ನೇ ನನ್ನ ಕೈಯಾರೆ ಹೊರತೆಗೆಯುವಂತಾಯಿತು ಎಂದು ಕುಟ್ಟಂಡ ಬೋಪಣ್ಣ ಕಂಬನಿ ಮಿಡಿಯುತ್ತಾ ತಮ್ಮ ಕರಾಳ ಅನುಭವವನ್ನು ಹಂಚಿಕೊಂಡರು.


Trending videos

Back to Top