CONNECT WITH US  

ಕಾಸರಗೋಡು ಅಪರಾಧ ಸುದ್ದಿಗಳು 

ಕೊಲೆ ಪ್ರಕರಣ : ಆರೋಪಿಗಳ ಖುಲಾಸೆ
ಕಾಸರಗೋಡು:
ಉದುಮ ಬಾರಾ ಮಾಂಙಾಡ್‌ ಆರ್ಯನಡ್ಕ ಜಿ.ಡಬ್ಲ್ಯೂ.ಎಲ್‌.ಪಿ. ಶಾಲೆ ಪರಿಸರದಲ್ಲಿ ಗ್ರಾಮ ಕಚೇರಿ ರಸ್ತೆ ಬಳಿಯ ನಿವಾಸಿ ಬಂಬನ್‌ ಅವರ ಪುತ್ರ, ಸಿ.ಪಿ.ಎಂ. ಕಾರ್ಯಕರ್ತ ಬಾಲಕೃಷ್ಣನ್‌ ಎಂ.ಬಿ. (45) ಅವರನ್ನು ಸ್ಕೂಟರ್‌ ತಡೆದು ನಿಲ್ಲಿಸಿ ಇರಿದು ಬರ್ಬರವಾಗಿ ಕೊಲೆಗೈದ ಪ್ರಕರಣದ ಆರೋಪಿಗಳನ್ನು ಕಾಸರಗೋಡು ಜಿಲ್ಲಾ ಸೆಶನ್ಸ್‌ ನ್ಯಾಯಾಲಯ ಖುಲಾಸೆಗೊಳಿಸಿದೆ.

ಕಾಂಗ್ರೆಸ್‌ ಕಾರ್ಯಕರ್ತರಾದ ಬಾರಾ ಮಾಂಙಾಡ್‌ ಆರ್ಯನಡ್ಕ ಕಾಲನಿಯ ಪ್ರಜಿತ್‌ ಆಲಿಯಾಸ್‌ ಕುಟ್ಟಾಪಿ (23), ಆರ್ಯನಡ್ಕ ಕಾಲನಿ ನಿವಾಸಿಗಳಾದ ಶ್ಯಾಮ್‌ ಮೋಹನ್‌ ಆಲಿಯಾಸ್‌ ಶ್ಯಾಮ್‌ (24), ಸುರೇಶ್‌ ಎ. (24), ಉದುಮ ಪರಿಯಾರ ಕೆ.ವಿ.ಕೆ. ನಿವಾಸದ ಶ್ರೀಜಯನ್‌ ವಿ.(38), ಆರ್ಯನಡ್ಕ ಕಾಲನಿಯ ರಂಜಿತ್‌ ಎ.ಕೆ. (29) ಯನ್ನು ಖುಲಾಸೆಗೊಳಿಸಿದೆ. ಆರೋಪಿಗಳ ಪೈಕಿ ಒಂದನೇ ಆರೋಪಿ ಪ್ರಜಿತ್‌ ಆಲಿಯಾಸ್‌ ಕುಟ್ಟಾಪಿ ಇತ್ತೀಚೆಗೆ ಬಾವಿಗೆ ಬಿದ್ದ ಕೋಳಿಯನ್ನು ತೆಗೆಯಲೆಂದು ಇಳಿದ ವೇಳೆ ಜಾರಿ ಕೆಳಕ್ಕೆ ಬಿದ್ದು ಸಾವಿಗೀಡಾಗಿದ್ದರು.

ಒಳಸಂಚು ಹೂಡಿದ ಆರೋಪಿಗಳಾದ ಮಾಂಙಾಡ್‌ ನಿವಾಸಿಗಳಾದ ಶಿಬು ಕಡವಂಗಾನ ಮತ್ತು ಮಜೀದ್‌ನನ್ನು ಖುಲಾಸೆಗೊಳಿಸಿದೆ. 2013 ತಿರುವೋಣಂ ದಿನವಾದ ಸೆ.16 ರಂದು ರಾತ್ರಿ ಹತ್ಯೆ ಮಾಡಲಾಗಿತ್ತೆಂದು ಬೇಕಲ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.

ವಾರಂಟ್‌ ಆರೋಪಿ ಬಂಧನ
ಕುಂಬಳೆ:
ಹೊಡೆದಾಟ ಸಹಿತ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ನಾಯ್ಕಪಿನ ಮೊಹಮ್ಮದ್‌ ನೌಶಾದ್‌ (28)ನನ್ನು ಬಂಧನ ವಾರಂಟ್‌ನಂತೆ ಪೊಲೀಸರು ಬಂಧಿಸಿದ್ದಾರೆ. ಈತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿ ಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ವಾಹನ ಅಪಘಾತ : ಕೇಸು
ಕುಂಬಳೆ
: ದ್ವಿಚಕ್ರ ವಾಹನ ಢಿಕ್ಕಿ ಹೊಡೆದು ಪಾದಚಾರಿ ಗಾಯಗೊಂಡ ಘಟನೆಗೆ ಸಂಬಂಧಿಸಿ ನ್ಯಾಯಾಲಯದ ಆದೇಶದಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.ಕಳೆದ ಮೇ 24ರಂದು ಅಪಘಾತವುಂಟಾಗಿತ್ತು. ಈ ಬಗ್ಗೆ ಮೊಗ್ರಾಲ್‌ ಅಜಾದ್‌ನಗರ ನಿವಾಸಿ ಹಮೀದ್‌ ಅವರ ಪುತ್ರ ಮುಹಮ್ಮದ್‌ ನೌಫಲ್‌ (15) ನೀಡಿದ   ದೂರಿನಂತೆ   ಮೊಗ್ರಾಲ್‌ ರಹ್ಮತ್‌ ನಗರ ನಿವಾಸಿ ಅಬ್ದುಲ್‌ ಖಾದರ ಮುಹೀನ್‌ ವಿರುದ್ಧ ಕೇಸು ದಾಖಲಿಸಲಾಗಿದೆ.

ಹಲ್ಲೆ : ಗಾಯಾಳು ಆಸ್ಪತ್ರೆಗೆ
ಕುಂಬಳೆ:
ಹಲ್ಲೆಯ ಗಾಯಗಳೊಂದಿಗೆ ಪಚ್ಚಂಬಳ ಮೀಪ್ರಿ ನಿವಾಸಿ ರೊಮಾನಿಕ್‌ ಡಿ'ಸೋಜಾ (53) ಅವರು ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಚ್ಚಂಬಳ ಬಸ್‌ ಪ್ರಯಾಣಿಕರ ತಂಗುದಾಣ ಸಮೀಪ ಚಂದು ಮರದ ತುಂಡಿನಿಂದ ಹಲ್ಲೆ ಮಾಡಿದ್ದಾಗಿ ಗಾಯಾಳು ಆರೋಪಿಸಿದ್ದಾರೆ. ಈ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ.

ಗುಜರಿ ಸಾಮಗ್ರಿ ಬೆಂಕಿಗಾಹುತಿ
ಮಂಜೇಶ್ವರ:
ಹೊಸಂಗಡಿ ಬಳಿಯ ಅಂಗಡಿ ಪದವುನಲ್ಲಿ ಗುಜರಿ ಅಂಗಡಿಯ ಬಳಿ ರಾಶಿ ಹಾಕಿದ್ದ ಗುಜರಿ ಸಾಮಗ್ರಿಗಳು ಬೆಂಕಿಗಾಹುತಿಯಾಗಿವೆ. ತಲಪಾಡಿ ಕೆ.ಸಿ.ರೋಡ್‌ನ‌ ಸಲೀಂ ಮಾಲಕತ್ವದ ಗುಜರಿ ಸಾಮಾಗ್ರಿಗಳು ಬೆಂಕಿಗಾಹುತಿಯಾಗಿವೆ. ಉಪ್ಪಳದಿಂದ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಆರಿಸಿತು.

ಮಹಿಳೆ, ವಿದ್ಯಾರ್ಥಿನಿ ನಾಪತ್ತೆ
ಕಾಸರಗೋಡು:
ಇಬ್ಬರು ಮಕ್ಕಳ ತಾಯಿಯಾಗಿರುವ ಮಹಿಳೆ ಮತ್ತು ಕರ್ನಾಟಕ ನಿವಾಸಿಯಾದ ವಿದ್ಯಾರ್ಥಿನಿ ನಾಪತ್ತೆಯಾಗಿರುವ ಬಗ್ಗೆ ರಾಜಪುರಂ ಪೊಲೀಸರಿಗೆ ದೂರು ನೀಡಲಾಗಿದೆ.

ಸುಳ್ಯ ಕಾಜೂರು ನಿವಾಸಿ ಹಾಗೂ ಕೊಲ್ಲಿ ಉದ್ಯೋಗಿಯಾಗಿ ರುವ ಮೊಹಮ್ಮದ್‌ ಅವರ ಪತ್ನಿ ಮುನೀರಾ ತನ್ನ 6 ಮತ್ತು 8 ವರ್ಷದ ಮಕ್ಕಳು ಹಾಗೂ ಕಾಜೂರಿನ 20 ರ ಹರೆಯದ ವಿದ್ಯಾರ್ಥಿನಿ ಪಾಣತ್ತೂರಿನಲ್ಲಿರುವ ಮುನೀರಾ ತವರು ಮನೆಗೆ ಕೆಲವು ದಿನಗಳ ಹಿಂದೆ ಬಂದಿದ್ದರು. ಮಕ್ಕಳನ್ನು ಮನೆಯಲ್ಲಿ ಬಿಟ್ಟು ಮುನೀರಾ ಮತ್ತು ಆಕೆಯ ಜೊತೆಯಲ್ಲಿದ್ದ ವಿದ್ಯಾರ್ಥಿನಿ ನಾಪತ್ತೆಯಾಗಿದ್ದಾಗಿ ಮುನೀರಾ ಅವರ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

ಮೂವರಿಗೆ ಇಲಿ ಜ್ವರ
ಕಾಸರಗೋಡು
: ಅಡ್ಕತ್ತಬೈಲ್‌ನ 53 ರ ಹರೆಯದ ವ್ಯಕ್ತಿಗೆ ಹಾಗು ಮಧೂರಿನ 35 ರ ಹರೆಯದ ವ್ಯಕ್ತಿಗೆ ಇಲಿ ಜ್ವರ ಬಾಧಿಸಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇದೇ ವೇಳೆ ಕಾಂಞಂಗಾಡ್‌ ಜಿಲ್ಲಾಸ್ಪತ್ರೆಯಲ್ಲಿ ಕಳ್ಳಾರ್‌ ನಿವಾಸಿಯೊಬ್ಬರಿಗೆ ಇಲಿ ಜ್ವರ ಬಾಧಿಸಿದ್ದಾಗಿ ಪತ್ತೆಹಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಮುಂಜಾಗ್ರತೆ ವಹಿಸುವಂತೆ ಆರೋಗ್ಯ ಇಲಾಖೆ ಆದೇಶಿಸಿದೆ.


Trending videos

Back to Top