CONNECT WITH US  

ಫ‌ಲಕಗಳೆಲ್ಲ ಪೊದೆಗಳಿಂದಾವೃತ;ಸಂಪೂರ್ಣ ಹಾಳಾದ ರಸ್ತೆ

ಕಾಸರಗೋಡು-ಕಲ್ಲಡ್ಕ ರಾಜ್ಯ ಹೆದ್ದಾರಿ: ಯಮಲೋಕಕ್ಕೆ ರಹದಾರಿ

ಜೀವನ ಕೊನೆಗಾಣಿಸುವ ತಿರುವು, ಸಂಕಷ್ಟಕರ ಸಂಚಾರದ ರಸ್ತೆ.

ಇದೀಗ ಮಳೆಗಾಲವು ಕ್ರಮೇಣ ಸರಿಯುತ್ತಾ ಇದೆ. ಈಗಲೇ ರಸ್ತೆ ದುರಸ್ತಿ ಮಾಡಲು ಬೇಕಾದ ಅನುದಾನ, ಅಂಗೀಕಾರ, ಕರಾರು ವಹಿಸುವಿಕೆ ಮೊದಲಾದ ತಾಂತ್ರಿಕ ತಯಾರಿ ನಡೆದರೆ ಮುಂದಿನ ಮಳೆಗಾಲಕ್ಕಿಂತ ಮೊದಲು ರಸ್ತೆ ದುರಸ್ತಿಗೊಳ್ಳಬಹುದು. ಇಲ್ಲದಿದ್ದರೆ ಈ ರಸ್ತೆಯಲ್ಲಿ ಸಂಚರಿಸುವವರ ಗತಿ ಅಧೋಗತಿ. 

ಪೆರ್ಲ: ಕಾಸರಗೋಡು-ಕಲ್ಲಡ್ಕ ರಾಜ್ಯ ಹೆದ್ದಾರಿಯ ಗೋಳು ಕೇಳುವವರಿಲ್ಲದ ಪರಿಸ್ಥಿತಿ.ಒಂದು ಕಡೆ ರಸ್ತೆಯು ಹದಗೆಟ್ಟು ಸಂಚರಿಸಲಾಗದ ಪರಿಸ್ಥಿತಿ. ಇದೀಗ ರಸ್ತೆ ಸೂಚಕಗಳು, ಪ್ರತಿಫ‌ಲನಗಳು, ಸ್ಥಳ ನಾಮ ಫ‌ಲಕಗಳೆಲ್ಲವೂ ಕಾಡು ಪೊದೆಗಳ ಮಧ್ಯೆ ಮುಚ್ಚಿ ಹೋಗಿವೆ. ಕೆಲವು ಕಡೆ ಡಾಮರು ರಸ್ತೆಯ ಎರಡೂ ಬದಿಗಳಲ್ಲಿ ಒಂದಿಂಚೂ ಬಿಡದೆ ಕಾಡು ಆವರಿಸಿದೆ. ರಾತ್ರಿ ಸಮಯದಲ್ಲಿ ಸಂಚರಿಸುವ ವಾಹನಗಳ ಚಾಲಕರಿಗೆ ಸರಿಯಾಗಿ ಸೂಚಕಗಳೂ, ಪ್ರತಿಫ‌ಲಕಗಳು ಗೋಚರಿಸದೆ ಅಪಘಾತವಾಗುವ ಸಾಧ್ಯತೆ ಹೆಚ್ಚಾಗಿದೆ.ಕೆಲವು ಕಡೆ ರಸ್ತೆ ಅಪಘಾತಗಳು ಸಂಭವಿಸಿವೆ ಕೂಡ.

ಕೆಲವು ವರ್ಷಗಳ ಹಿಂದೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ರಸ್ತೆಯ ಎರಡೂ ಬದಿಗಳಲ್ಲಿರುವ ಕಾಡು ಕಡಿದು ಸಂಚಾರ ಯೋಗ್ಯ ಗೊಳಿಸುತ್ತಿದ್ದರು. ಮಾತ್ರವಲ್ಲದೆ ಚರಂಡಿಯ ಮಣ್ಣು ತೆಗೆದು ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುತ್ತಿದ್ದರು. ಆದರೆ ಕಳೆದ ಮೂರು ವರ್ಷಗಳಿಂದೀಚೆ ಉದ್ಯೋಗ ಖಾತ್ರಿ ಯೋಜನೆಯಡಿ ಕಾಡು ಕಡಿಯುವ ಯೋಜನೆಯನ್ನು ಸ್ಥಗಿತಗೊಳಿಸಿದ್ದಾರೆ. ಅವರು ಈಗ ಅಸೆಟ್‌ ಕ್ರಿಯೇಷನ್‌ ಕೆಲಸಗಳನ್ನು ಮಾತ್ರ ಮಾಡಲು ನಿರ್ದೇಶನವಿದೆ' ಎಂದು ಹೇಳುತ್ತಾರೆ.

ಹೆಚ್ಚಿನ ಕಡೆಗಳಲ್ಲಿ ಮಳೆಗಾಲದಲ್ಲಿ ನೀರು ರಸ್ತೆ ಮಧ್ಯದಲ್ಲಿಯೇ ಹರಿಯುತ್ತಿರುತ್ತದೆ. ಇದರಿಂದ ರಸ್ತೆ ಕೆಟ್ಟು ಹೊಂಡಗಳು ಉಂಟಾಗಲು ಪ್ರಧಾನ ಕಾರಣಗಳಾಗಿವೆ. ಆದರೆ ರಸ್ತೆಯ ಉಸ್ತುವಾರಿಯನ್ನು ನೋಡಿಕೊಳ್ಳುವ ಲೋಕೋಪ ಯೋಗಿ ಇಲಾಖೆಯು 'ಇದಕ್ಕೂ ನಮಗೂ ಸಂಬಂಧವೇ ಇಲ್ಲ' ಎಂಬ ರೀತಿಯಲ್ಲಿದ್ದಾರೆ.

ಕಳೆದ ವರ್ಷವೇ ಹಲವಾರು ಧರಣಿಗಳು, ರಸ್ತೆ ತಡೆಗಳೂ ನಡೆಸಿ, ಪತ್ರಿಕೆಯಲ್ಲಿ ಸರಣಿ ವರದಿ ಬಂದ ಅನಂತರ ಅಧಿಕೃತರು ಎಚ್ಚೆತ್ತು ಅಲ್ಲಲ್ಲಿ ತೇಪೆ ಹಾಕಿ ಸುಮ್ಮಗಾದರು. ಅದು ಈ ಮಳೆಗಾಲದಲ್ಲಿ ಎದ್ದು ಹೋಗಿ ಇನ್ನಷ್ಟು ಬೃಹತ್‌ ಗಾತ್ರದ ಹೊಂಡಗಳು ಉಂಟಾಗಿವೆ. ಕೆಲವು ಕಡೆ ಸೇತುವೆಗಳು, ಕಿರು ಸಂಕಗಳ (ಮೋರಿ ಸಂಕ) ದುರಸ್ತಿಯೂ ಆಗಬೇಕು. ಪಳ್ಳತಡ್ಕ ಸೇತುವೆಯ ಕೆಳಭಾಗದ ಕಾಂಕ್ರೀಟ್‌ ಕಳಚಿಕೊಳ್ಳಲು ತೊಡಗಿ ಕೆಲವು ವರ್ಷಗಳಾದವು. ಈಗ ಮೇಲ್ಭಾಗದ ಕಾಂಕ್ರೀಟ್‌ ಕೂಡ ಅಲ್ಲಲ್ಲಿ ಕಿತ್ತು ಹೋಗಿ ಹೊಂಡಗಳಾಗಿವೆ. ಇದರಲ್ಲಿ ಘನ ವಾಹನಗಳು ಸಂಚರಿಸುವುದು ಅಪಾಯ ಎಂದು ಫ‌ಲಕ ನೆಟ್ಟಿದ್ದಾರೆ. ಆದರೆ ಅದನ್ನು ಲೆಕ್ಕಿಸದೆ ಘನವಾಹನಗಳು ಸಂಚರಿಸುತ್ತಲೇ ಇವೆ. ಈ ಸೇತುವೆಯ ಪುನರ್ನಿರ್ಮಾಣವು ಕೂಡ ಆಗ ಬೇಕಾಗಿದೆ.
 
ಕೆಲವು ಸ್ಥಳಗಳಲ್ಲಿ ಮಾರ್ಗದ ಬದಿ ಜರಿದು ಹೊಂಡಗಳೆದ್ದಿವೆ. ಇದರಿಂದಾಗಿ "ವಾಹನಗಳ ಬಿಡಿಭಾಗಗಳು ಕೆಟ್ಟು ಆಗಾಗ ದುರಸ್ತಿ ಮಾಡಬೇಕಾಗುತ್ತದೆ' ಎಂದು ಕಳೆದ ಇಪ್ಪತ್ತು ವರುಷ ಗಳಿಂದ ವಾಹನದ ಚಾಲಕನಾಗಿ ದುಡಿಯುತ್ತಿರುವ ಹಸೈನಾರ್‌ ಬದಿಯಡ್ಕ ಹೇಳುತ್ತಾರೆ. "ಬಾಡಿಗೆ ಸಿಕ್ಕ ಅರ್ಧ ಹಣವನ್ನು ಸಂಜೆ ವಾಹನ ದುರಸ್ತಿ ಗೊಳಿಸಲು ಬೇಕಾಗಿದೆ' ಎಂದು ಆಟೊ ಚಾಲಕರಾದ ಸತೀಶ್‌ ತಮ್ಮಕಷ್ಟ ಹೇಳುತ್ತಾರೆ. 


Trending videos

Back to Top