CONNECT WITH US  

ಪ್ರಕೃತಿ ಪುತ್ರ ಗಣಪನಿಗೆ ಜನುಮದಿನದ ಸಂಭ್ರಮ

ನಾಡಿನಾದ್ಯಂತ‌ ವಿಘ್ನ ನಿವಾರಕನ ಸ್ವಾಗತಕ್ಕೆ ಸಡಗರದ ಸಿದ್ಧತೆ

ಆಷಾಡದ ಮೌನವನ್ನು ಮುರಿದು ಶ್ರಾವಣದ ನಾಗರ ಪಂಚಮಿ ಶ್ರೀಕೃಷ್ಣ ಅಷ್ಟಮಿಯನ್ನು ಕಣ್ತುಂಬಿ, ಬಾದ್ರಪದ ಮಾಸದ ಚೌತಿ ಹಬ್ಬವನ್ನು ನಾಡು ಸಡಗರದಿಂದ ಬರಮಾಡಿಕೊಳ್ಳುತ್ತಿದೆ. ಹೇಳಿ ಕೇಳಿ ಗಣಪ ಪ್ರಕೃತಿ ಪುತ್ರ. ಆತನ ಹುಟ್ಟು ಮಣ್ಣಿನಿಂದಲೇ ಆಯಿತು. ಅದರ ಸಂಕೇತವೋ ಎನ್ನುವಂತೆ ಮಣ್ಣಿನ ಗಣಪನ ಮೂರುತಿಯನ್ನೇ ಪೂಜಿಸಿ ವಿಸರ್ಜಿಸುತ್ತಾರೆ. ಪ್ರಕೃತಿಯಿಂದಲೇ ಮಣ್ಣನ್ನು ಸಂಗ್ರಹಿಸಿ ಮೂರ್ತಿ ರೂಪವನ್ನು ನೀಡಿ ಸ್ಥಾಪಿಸಿ ಪೂಜಿಸಿ ಕೊನೆಗೂ ಪ್ರಕೃತಿಗೇ ವಿಸರ್ಜಿಸುವುದು (ಬಿಟ್ಟು ಬಿಡುವುದು) ವಿಶ್ವ ವ್ಯಾಪಿ ಭಗವಂತನನ್ನು ಆರಾಧಿಸುವ ಸಂಕೇತ ವಿಶಿಷ್ಟವಾದದ್ದು, ಮಹತ್ವ‌ದ್ದು. ಗಣಪನ ಕಾಯ ಆಯ ಉಡುಗೆ ತೊಡುಗೆಗಳೂ ಪಕೃತಿಯಿಂದ ಪರಿಸರದಿಂದ ಆಯ್ದುಕೊಂಡದ್ದು ಎನ್ನುವುದೂ ಗಮನಾರ್ಹ. ಆನೆಯ ಮುಖ, ಡೊಳ್ಳು ಹೊಟ್ಟೆ, ಕೈಯಲ್ಲಿ ಪರಶು, ಸೊಂಟದಲ್ಲಿ ಹಾವು, ಚಲಿಸಲು ಇಲಿ , ಗರಿಕೆಯ ಮಾಲೆ, ಮೆಲ್ಲಲು ಕಬ್ಬು ಎಲ್ಲಾ ಎಲ್ಲಾ ವಿವರಿಸಿದಷ್ಟು ವಿಸ್ತರಿಸಿದಷ್ಟು ಅನಂತ.ಅನುಪಮ.

ಗಣಪತಿ ಯಾರು
ಗಣಪತಿ ಶಿವಪಾರ್ವತಿಯರ ಪುತ್ರಿ. ಸುಬ್ರಹ್ಮಣ್ಯ ಸೋದರ. ಪುರಾಣಕಾಲಗಳಲ್ಲಿ ಹೆಚ್ಚು ಹೆಚ್ಚು ಕಾಣಿಸಿಕೊಂಡವ. ಮಹಾಭಾರತದ ಲಿಪಿಕಾರ. ಶಿವನ ವರದಂತೆ ಮೊದಲ ಪೂಜೆಯನ್ನು ಕೊಂಬವ. ತ್ರಿಪುರ ಮಥನ ಕಾಲದಲ್ಲಿ ಗಣಪತಿಯನ್ನು ಮರೆತು ಸೋಲು ಸನ್ನಿಹಿತವಾದಾಗ ಶಿವ ಮತ್ತೆ ಗಣಪತಿಯನ್ನು ಪೂಜಿಸಿ ಜಯಸಂಪಾದಿಸಿದ ಎನ್ನುತ್ತದೆ ಪುರಾಣ. ರಾಮ ರಾವಣರ ಯುದ್ಧಕಾಲದಲ್ಲಿ ರಾಮನಿಂದ, ಕೌರವ ಪಾಂಡವರ ಕಾಲದಲ್ಲಿ ಪಾಂಡವರಿಂದಲೂ ಯುದ್ಧಾರಂಭದಲ್ಲಿ ನುತಿಸಲ್ಪಟ್ಟಿದ್ದ ಎಂಬುದು ಪ್ರತೀತಿ. ಸಿದ್ಧಿ ಬುದ್ಧಿಯರು ಆತನ ಮಡದಿಯರು.

ವಿಶಿಷ್ಟ ಕಾಯವನ್ನು ಹೊಂದಿರುವ ಗಣಪತಿ ದೇವರನ್ನು ಅವರ‌ ಅಂಗಾಂಗಗಳನ್ನು ಗುರುತಿಸಿ ಹೆಸರಿಸಿ ನಮಿಸಿದಾಗಲೇ ವರಿಗೆ ಎಲ್ಲಿಲ್ಲದ ಸಂತಸ. ಪೂರ್ಣ ತೃಪ್ತ. ಮಾತ್ರವಲ್ಲ ಒಲಿದು ವರವೀವ. ಗಜಮುಖ, ವಕ್ರತುಂಡ, ಏಕದಂತ,  ಕೃಷ್ಣ ಪಿಂಗಾಕ್ಷ, ಗಜವಕ್ತ್ರ, ಲಂಬೋಧರ, ವಿಕಟ, ವಿಘ್ನರಾಜ, ಧೂಮ್ರವರ್ಣ, ಬಾಲಚಂದ್ರ, ವಿನಾಯಕ, ಮೂಕ ವಾಹನ, ಮೋದಕ ಹಸ್ತ ಹೀಗೆ ಆತನ ಕಾಯ, ಗುಣ ಸ್ವಭಾವಗಳನ್ನು ಹೆಸರಿಸಿ ಸಾವಿರಾರು ಹೆಸರಿನಿಂದ ಭಕ್ತರು ಪ್ರಾರ್ಥಿಸುತ್ತಾರೆ. ಗಜವಕ್ತ್ರ, ಒಂದು ಸ್ವಸ್ತಿಕ ಹಿಟ್ಟು ಗಣಪತಿಯನ್ನು ಸಾಂಕೇತಿಕ ವಾಗಿ ಆರಾಧಿಸುವುದರಿಂದ ತೊಡಗಿ ಭಕ್ತಾದಿಗಳು ಹೊನ್ನಿನ ಮೂರ್ತಿಯಿಟ್ಟು ನಿತ್ಯ ಪೂಜಿಸುವವವರೆಗೆ ಆರಾಧನಾ ಪರಂಪರೆ ಬೆಳೆದು ಬಂದಿದೆ.

ಯಾವುದೇ ಕಾರ್ಯಕ್ಕೆ ತೊಡಗುವಾಗಲೂ ವಿಘ್ನ ನಿವಾರಕ ಗಣಪತಿ ಪ್ರಾರ್ಥನೆ ಹಿಂದುಗಳ ಎಲ್ಲ ವರ್ಗದ, ಎಲ್ಲ ವೃತ್ತಿಯ ವ್ಯಕ್ತಿಗಳಲ್ಲಿ ಸರ್ವೆ ಸಾಮಾನ್ಯ. ನಮ್ಮ ನಾಡಿನ ಹೆಮ್ಮೆಯ ಕಲೆ ಯಕ್ಷಗಾನದಲ್ಲೂ ಆರಂಭದ ಸ್ತುತಿ ಪದ್ಯ ಗಜಮುಖದವಗೆ ಗಣಪಗೆ, ಹಾಗೂ ವಾರಣಾ ವದನ ಎಂಬುದು ಉಲ್ಲೇಖಾರ್ಹ.  ಗಣಪತಿ ಹಾಗೂ ದುರ್ಗಾಮಾತೆ ಶೀಘ್ರ ವರಪ್ರದರು ಎಂದು ಪ್ರತೀತಿ. ಆದ್ದರಿಂದಲೇ ಇಂದಿಗೂ ಜ್ಯೋತಿಗಳು, ಮಂತ್ರವಾದಿಗಳು ಸಿದ್ಧಿಗಾಗಿ ಗಣಪತಿ ದುರ್ಗೇಯರನ್ನು ಹೆಚ್ಚಾಗಿ ಪೂಜಿಸುತ್ತಾರೆ. ಒಲಿಸಿಕೊಳ್ಳುತ್ತಾರೆ.

ಒಂದುದಳ ಗರಿಕೆ ಹುಲ್ಲನ್ನು ಸಮರ್ಪಿಸಿ ಸರಳವಾಗಿ ಪೂಜಿಸುವುದರಿಂದ ತೊಡಗಿ, ಗಣಪತಿ ಪೂಜೆ, ಸತ್ಯಗಣಪತಿ ಪೂಜೆ, ಗಣಪತಿ ಹವನ, ಸಹಸ್ರ ನಾರಿಕೇಳ ಗಣಪತಿ ಹವನದ ಮೂಲಕವೂ ಗಣಪತಿಯನ್ನು ಪೂಜಿಸುತ್ತಾರೆ. ನೈವೇದ್ಯವಾಗಿ ಹಣ್ಣುಕಾಯಿ, ಅಷ್ಟದ್ರವ್ಯ, ಪಂಚಕಜ್ಜಾಯ, ಮೋದಕ ಚಕ್ಕುಲಿ ಕಡುಬು ಹಣ್ಣು ಹಂಪಲುಗಳನ್ನು ಸಮರ್ಪಿಸುತ್ತಿದ್ದಾರೆ.

ಸಾರ್ವಜನಿಕ ಗಣೇಶೋತ್ಸವ
ಛತ್ರಪತಿ ಶಿವಾಜಿ ಕಾಲದಲ್ಲಿ ಹತ್ತುದಿನಗಳ ವಿನಾಯಕ  ಚತುರ್ಥಿಯನ್ನು ನಡೆಸಲಾ ಗುತಿತ್ತು ಎನ್ನುತ್ತಿವೆ ಮೂಲಗಳು. ಲೋಕಮಾನ್ಯ ಬಾಲಗಂಗಾಧರ ತಿಲಕರು 1893ರಲ್ಲಿ ಮತ್ತೆ ಸಾರ್ವಜನಿಕ ಗಣೇಶೋತ್ಸವವನ್ನು ನಡೆಸಿ ಆ ಮೂಲಕ ಎಲ್ಲ ಜಾತಿಯ ವರ್ಗದವರನ್ನೂ ಒಂದೆಡೆ ಬೆರೆಯುವಂತೆಮಾಡಿ ತನ್ನೂಲಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಭಾರತೀಯರನ್ನು ಹುರಿದುಂಬಿಸಲು ಮಾರ್ಗವನ್ನಾಗಿ ಬಳಸಿಕೊಂಡರು ಎನ್ನುತ್ತದೆ ಇತಿಹಾಸ. ಇಂದು ಹಳ್ಳಿಯಿಂದ ದಿಲ್ಲಿವರೆಗೆ ಗಣೇಶೋತ್ಸವಗಳೂ ನಡೆಯುತ್ತಿವೆ.

ವೈವಿಧ್ಯ ಆರಾಧನಾ ಪರಂಪರೆ
ಭಾದ್ರಪದ ಮಾಸ ಶುಕ್ಲ ಚೌತಿಯನ್ನು ದೇಶದಾದ್ಯಂತ ಸಿದ್ಧಿ ವಿನಾಯಕ ಚತುರ್ಥಿ ಯಾ ಚೌತಿ ಹಬ್ಬವಾಗಿ ನಾಡಿನಾದ್ಯಂತ ಆಚರಿಸಲಾಗುತ್ತಿದೆ. ಗೌರಿತದಿಗೆಗೆ ಮಾತೆ ಗೌರಿ ತವರು ಮನೆಗೆ ಬರುತ್ತಾಳೆ. ಪುತ್ರ ಗಣಪ ಚೌತಿಯಂದು ಮಾತೆಯನ್ನು ಕರೆದುಕೊಂಡು ಹೋಗಲು ಬರುತ್ತಾನೆ ಎಂಬ ನಾಣ್ಣುಡಿಯೂ ಜನಜನಿತ. ತುಳಸೀಕಟ್ಟೆಯ ಬಳಿ ಕಬ್ಬಿನ ಗಿಡದ ಅಲಂಕಾರ ಮಾಡಿ ವಿವಿದ ವಸ್ತುಗಳೊಂದಿಗೆ ಹೂ ಪತ್ರದೊಂದಿಗೆ ಆರಾಧಿಸುವುದರಿಂದ ತೊಡಗಿ ತಮ್ಮ ತಮ್ಮ ಮನೆಯ ಲ್ಲಿ ನಡೆದುಕೊಂಡು ಬಂದಿರುವ ಪೂರ್ವಪದ್ಧತಿಯಂತೆ ಭಾವಚಿತ್ರವನ್ನು ಪೂಜಿಸಿ, ಗಣಪತಿ ಹವನವನ್ನು ನಡೆಸುತ್ತಾರೆ., ಮೂರ್ತಿ ಸ್ಥಾಪಿಸಿ ಪೂಜಿಸಿ ವಿಸರ್ಜಿಸುವವರೆಗೆ ವೈವಿಧ್ಯ ಆರಾಧನಾ ಪರಂಪರೆ ಬೆಳೆದು ಬಂದಿದೆ. ತುಳುನಾಡಿನಾದ್ಯಂತ ದೈವಸ್ಥಾನಗಳಲ್ಲಿ ಚೌತಿ ಹಬ್ಬ ಆಚರಿಸಲಾಗುತ್ತಿದೆ. ಸಾಂಕೇತಿಕವಾಗಿ ಕಬ್ಬು ಗಿಡದ ಅಲಂಕಾರವನ್ನು ಮಾಡಿ ಹೆಸರು, ಹೊದಲು, ಬೆಲ್ಲ, ಕೊಳ್ಳು ಹೂಗಳನ್ನು ಸಮರ್ಪಿಸಿ ಪೂಜಿಸಲಾಗುತ್ತಿದೆ. ಅದಕ್ಕೆ ಚೌತಿ ಕರಿಪುನೆ ಯಾ ಚೌತಿ ಬರ್ಬ ಕರಿಪುನೆ ಎನ್ನುತ್ತಾರೆ ತುಳುವರು.

- ಯೋಗೀಶ ರಾವ್‌ ಚಿಗುರುಪಾದೆ

Trending videos

Back to Top