CONNECT WITH US  

ಮೋಹಿನಿ-ಭಸ್ಮಾಸುರ:

ಭಸ್ಮಾಸುರನೆಂಬ ಒಬ್ಬ ರಾಕ್ಷಸನಿದ್ದ. ಮಾಯವಿಯೂ ಸಾಹಸಿಯೂ ಆದ ಅವನು ಲೋಕಕ್ಕೆಲ್ಲ ಉಪದ್ರವ ಕೊಡುತ್ತಿದ್ದ. ತನಗೆ ಇನ್ನಷ್ಟು ಶಕ್ತಿ ಬಂದರೆ ತಾನು ತನ್ನ ಶತ್ರುಗಳನ್ನು ಇನ್ನಷ್ಟು ಸದೆಬಡೆದು ತಾನೇ ಮೂರು ಲೋಕಕ್ಕೂ ಒಡೆಯನಾಗಬೇಕೆಂದು ಬಯಸಿ  ಶಿವನನ್ನು ಕುರಿತು ಘೊರವಾದ ತಪ್ಪಸ್ಸು ಮಾಡಿದ. ತನ್ನ ಭಕ್ತರಿಗೆ ಬೇಗ ಒಲಿಯುವ ದೇವರು ಶಿವನೇ ಅಲ್ಲವೇ? ಶಿವನು ಪ್ರತ್ಯಕ್ಷನಾದ. ಭಸ್ಮಾಸುರನ ತಪಸ್ಸಿಗೆ ಮೆಚ್ಚಿ ತಾನು ಪ್ರತ್ಯಕ್ಷನಾಗಿರುವುದಾಗಿ ಹೇಳಿ ಬೇಕಾದ ವರವನ್ನು ಕೇಳಿಕೊಳ್ಳಲು ಹೇಳಿದ. ಭಸ್ಮಾಸುರನು  ತಾನು ಯಾರ ತಲೆ ಮೇಲೆ ಕೈಯಿಟ್ಟರೂ ಅವರು ಕ್ಷಣಾರ್ಧದಲ್ಲಿ ಭಸ್ಮವಾಗಿ ಬಿಡಬೇಕೆಂದು ಕೋರಿಕೊಂಡನು. ಶಿವನು ಹಿಂದೆಮುಂದೆ ಆಲೋಚಿಸದೆ "ತಥಾಸು'¤ ಎಂದುಬಿಟ್ಟ. ಖುಷಿಯಾದ ಭಸ್ಮಾಸುರ ಶಿವ ತನಗೆ ಕೊಟ್ಟ ವರವನ್ನು ಪರೀಕ್ಷಿಸಬೇಕೆಂದು ತನಗೆ ವರ ಕೊಟ್ಟ ಶಿವನ ತಲೆಯ ಮೇಲೆಯೇ ಕೈ ಇಡಲು ಹೋದ. ಶಿವನು ಗಾಬರಿಯಿಂದ ಓಡತೊಡಗಿದ. ಭಸ್ಮಾಸುರ ಶಿವನ ಬೆನ್ನಟ್ಟಿದ. 

ಇದೆಲ್ಲವನ್ನು ಮೇಲಿನಿಂದ ಗಮನಿಸುತ್ತಿದ್ದ ಪಾರ್ವತಿ ಭಯಭಿತಳಾಗಿ ವಿಷ್ಣುನ ಬಳಿ ಓಡಿ ಬಂದು ತನ್ನ ಗಂಡನನ್ನು ರಕ್ಷಿಸೆಂದು ಕೇಳಿಕೊಂಡಳು. ವಿಷ್ಣು ಮನಮೋಹಕ ರೂಪದ ಮೋಹಿನಿಯ ವೇಷದಲ್ಲಿ ಭಸ್ಮಾಸುರನ ಮುಂದೆ ಪ್ರತ್ಯಕ್ಷನಾದ. ಭಸ್ಮಾಸುರ ಈ ಸುಂದರಿಯನ್ನು ನೋಡಿ ಚಿಕಿತನಾದ. ಅವಳ ರೂಪರಾಶಿಯನ್ನೂ ನೋಡಿ ಮೈಮರೆತ. ಅವಳನ್ನು ಮದುವೆಯಾಗೆಂದು ಕೇಳಿಕೊಂಡ. ಮೋಹಿನಿ ಒಂದು ಷರತ್ತು ವಿಧಿಸಿದಳು. ತಾನು ಏನೇ ಮಾಡಿದರೂ ಅವನು ಅದನ್ನು ಪುನರಾವರ್ತನೆ ಮಾಡಬೇಕು. ಭಸ್ಮಾಸುರ ಒಪ್ಪಿಕೊಂಡ. ಮೋಹಿನಿ ಅವನ ಮುಂದೆ ನೃತ್ಯ ಮಾಡಲು ಆರಂಭಿಸಿದಳು. ಭಸ್ಮಾಸುರನೂ ಅವಳು ಮಾಡಿದಂತೆಯೇ ನೃತ್ಯ ಮಾಡಲು ಪ್ರಾರಂಭಿಸಿದ. ಮೋಹಿನಿ ಒಂದೊಂದೇ ನೃತ್ಯದ ಭಂಗಿಗಳನ್ನು ಪ್ರದರ್ಶಿಸುತ್ತ ಬಂದಳು.  ಇವನು ಅವಳಂತೆಯೇ ಭಂಗಿಗಳನ್ನು ಪುನರಾವರ್ತಿಸಿದ.

ಕೊನೆಗೆ ಅವಳು ಒಂದು ನೃತ್ಯದ ಭಂಗಿಯೆಂಬಂತೆ ತನ್ನ ತಲೆಯ ಮೇಲೆ ಕೈಯಿಟ್ಟುಕೊಂಡಳು. ಅವಳ ರೂಪಕ್ಕೆ ಕುರುಡನಾಗಿ ವಿವೇಚನೆಯನ್ನೇ ಕಳೆದುಕೊಂಡಿದ್ದ ಭಸ್ಮಾಸುರ ತಾನೂ ತನ್ನ ತಲೆಯಮೇಲೆ ಕೈಯಿಟ್ಟುಕೊಂಡ. ಅಷ್ಟೆ! ಭಸ್ಮಾಸುರ ಭಸ್ಮವಾಗಿಹೋದ!

ಇವೆಲ್ಲವನ್ನೂ ದೂರದಿಂದ àಕ್ಷಿಸುತ್ತಿದ್ದ ಶಿವ ಭಸ್ಮಾಸುರ ಹತನಾದ ಕೂಡಲೇ ಓಡಿ ಬಂದು ಮೋಹಿನಿಗೆ ಧನ್ಯವಾದಗಳನ್ನು ಹೇಳಿ ಅವಳಾರೆಂದು ಕೇಳಿದ. ಮೋಹಿನಿ ನಸುನಗುತ್ತ ತನ್ನ ನಿಜರೂಪವನ್ನು ಧರಿಸಿ ನಿಂತಳು. ಮೋಹಿನಿ ರೂಪದ ವಿಷ್ಣುವನ್ನು ನೋಡಿ ಶಿವ ಬೆರಗಾದ. ತನ್ನನ್ನು ರಕ್ಷಿಸಿದ್ದಕ್ಕಾಗಿ ವಿಷ್ಣುವನ್ನು ಕೊಂಡಾಡಿದ. ವಿವೇಚಿಸದೆ ಯಾರಿಗೂ ಕೇಳಿದ ವರವನ್ನು ಕೊಡಬಾರದೆಂದು ವಿಷ್ಣು ಶಿವನಿಗೆ ಬುದ್ದಿವಾದ ಹೇಳಿದ.

Trending videos

Back to Top