CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ರಾಜಮಯ ಈ ಲೋಕವೆಲ್ಲಾ...ರಾಜ್‌ ಬಗ್ಗೆ ಗೊತ್ತಿರಬೇಕಾದ 25 ವಿಷಯಗಳು

ವರ್ಷಕ್ಕೆ ಒಂದೋ ಎರಡೋ ಬಾರಿ ನೆನಪಿಸಿಕೊಳ್ಳುವಂತಹ ವ್ಯಕ್ತಿಯಲ್ಲ ಡಾ. ರಾಜಕುಮಾರ್‌. ಅವರು ಮಾಡಿದ ಚಿತ್ರಗಳು ಮತ್ತು ಪಾತ್ರಗಳು ಪದೇಪದೇ ನೆನಪಾಗುತ್ತಿರುತ್ತವೆ. ಅವರ ಸ್ವಭಾವ, ವ್ಯಕ್ತಿತ್ವ, ಗುಣವನ್ನು ಮಾತುಮಾತಿಗೂ ನೆನಪಿಸಿಕೊಳ್ಳುವವರು ಹಲವರು ಇದ್ದಾರೆ. ಅದೇ ಕಾರಣಕ್ಕೆ ಡಾ. ರಾಜಕುಮಾರ್‌ ಅವರು ಅಗಲಿ 11 ವರ್ಷಗಳಾದರೂ, ಅವರು ಇನ್ನೂ ನಮ್ಮೊಡನೆಯೇ ಇದ್ದಾರೆ ಎಂಬ ಭಾವನೆ ಕನ್ನಡಿಗರದ್ದು. ಹೀಗಿರುವಾಗಲೇ, ಡಾ. ರಾಜಕುಮಾರ್‌ ಅವರ ಇನ್ನೊಂದು ಹುಟ್ಟುಹಬ್ಬ ಬಂದಿದೆ. ಈ ಸಂದರ್ಭದಲ್ಲಿ "ಉದಯವಾಣಿ', ಡಾ. ರಾಜಕುಮಾರ್‌ ಅವರ ಸಾಧನೆಗಳನ್ನು ಇನ್ನೊಮ್ಮೆ ಮೆಲಕು ಹಾಕುತ್ತಿದೆ. ಡಾ. ರಾಜಕುಮಾರ್‌ ಅವರ ಈ ಸಾಧನೆಗಳು ಕನ್ನಡಿಗರಿಗೆ ತಿಳಿಯದ್ದೇನಲ್ಲ. ಆದರೂ ಮತ್ತೂಮ್ಮೆ ನೆನಪಿಸುವಂತಹ ಕೆಲಸವನ್ನು ಈ ಬಾರಿ "ಸುಚಿತ್ರಾ' ಮಾಡುತ್ತಿದೆ.

ರಾಜಕುಮಾರ್‌ ಅವರ ಕೊನೆಯ ಚಿತ್ರ "ಶಬ್ಧವೇಧಿ'ಯಾದರೂ ಅವರ ನಿಧನರಾದ ನಂತರವೂ ಅವರನ್ನು ಹಲವು ಚಿತ್ರಗಳಲ್ಲಿ ನೆನಪಿಸಿಕೊಳ್ಳಲಾಗಿದೆ. ಈ 11 ವರ್ಷಗಳಲ್ಲಿ ರಾಜಕುಮಾರ್‌ ಅವರನ್ನು ಅದೆಷ್ಟು ಚಿತ್ರಗಳಲ್ಲಿ ನೆನಪಿಸಿಕೊಳ್ಳಲಾಗಿದೆಯೋ  ಲೆಕ್ಕ ಇಟ್ಟವರಿಲ್ಲ. ರಾಜಕುಮಾರ್‌ ಅವರು ನಿಧನರಾದಂದಿನಿಂದ ಇತ್ತೀಚೆಗೆ ಬಿಡುಗಡೆಯಾಗಿರುವ "ರಾಜಕುಮಾರ' ಮತ್ತು ಬಿಡುಗಡೆಯಾಗಲಿಕ್ಕಿರುವ "ಬಂಗಾರ ಸನ್‌ ಆಫ್ ಬಂಗಾರದ ಮನುಷ್ಯ' ಚಿತ್ರಗಳವರೆಗೂ ರಾಜಕುಮಾರ್‌ ಅವರನ್ನು ನೆನಪಿಸಿಕೊಳ್ಳುವುದರ ಜೊತೆಗೆ, ಇನ್ನೂ ಹಲವು ಚಿತ್ರಗಳಲ್ಲಿ ರಾಜಕುಮಾರ್‌ ಅಭಿನಯದ ಒಂದಾದರೂ ದೃಶ್ಯ ನೋಡಲಿಕ್ಕೆ ಸಿಗುತ್ತಿದೆ. ಬಹುಶಃ ಭಾರತೀಯ ಚಿತ್ರರಂಗದಲ್ಲೇ ಯಾವೊಬ್ಬ ನಟರೂ ಸಹ ಅಷ್ಟೊಂದು ಚಿತ್ರಗಳಲ್ಲಿ ಬಂದು ಹೋದ ಉದಾಹರಣೆಗಳು ಸಿಗುವುದಿಲ್ಲ.

ರಾಜಕುಮಾರ್‌ ಅವರ ನಿಧನದ ನಂತರ ಅವರ ಎರಡು ಸೂಪರ್‌ ಹಿಟ್‌ ಚಿತ್ರಗಳು ಕಲರ್‌ನಲ್ಲಿ ಮರುಬಿಡುಗಡೆಯಾಯಿತು. "ಸತ್ಯ ಹರಿಶ್ಚಂದ್ರ' ಮತ್ತು "ಕಸ್ತೂರಿ ನಿವಾಸ' ಎರಡೂ ಚಿತ್ರಗಳನ್ನು ಕೆ.ಸಿ.ಎನ್‌ ಎಂಟರ್‌ಪ್ರೈಸಸ್‌ ಸಂಸ್ಥೆಯು ವರ್ಣದಲ್ಲಿ ಬಿಡುಗಡೆ ಮಾಡಿತು. ಇನ್ನು "ರಾಜ ನನ್ನ ರಾಜ', "ಮಯೂರ', "ಆಪರೇಷನ್‌ ಡೈಮಂಡ್‌ ರಾಕೆಟ್‌' ಚಿತ್ರಗಳನ್ನು 5.1 ಸೌಂಡ್‌ನ‌ಲ್ಲಿ ಬಿಡುಗಡೆ ಮಾಡಲಾಗಿದೆ.

ಸಿನಿಮಾದ ಇತಿಹಾಸದಲ್ಲೇ ಡಾ ರಾಜಕುಮಾರ್‌ ಅವರಷ್ಟು ಕಾದಂಬರಿ ಆಧಾರಿತ ಚಿತ್ರಗಳಲ್ಲಿ ಯಾವೊಬ್ಬ ನಟರೂ ನಟಿಸಿಲ್ಲ. ಕನ್ನಡ ಚಿತ್ರರಂಗದ ಮೊದಲ ಕಾದಂಬರಿ ಆಧಾರಿತ ಚಿತ್ರ "ಕರುಣೆಯೇ ಕುಟುಂಬದ ಕಣ್ಣು'ನಿಂದ ತಮ್ಮ ಕೊನೆಯ ಚಿತ್ರ "ಶಬ್ಧವೇಧಿ'ವರೆಗೂ ಡಾ. ರಾಜಕುಮಾರ್‌ ಅವರು 29 ಕಾದಂಬರಿ ಆಧಾರಿತ ಚಿತ್ರಗಳಲ್ಲಿ ನಟಿಸಿದ್ದಾರೆ. ಇದು ಸಾರ್ವಕಾಲಿಕ ದಾಖಲೆ.

ರಾಜಕುಮಾರ್‌ ಅವರು ರೀಮೇಕ್‌ ಚಿತ್ರಗಳಲ್ಲಿ ಅಭಿನಯಿಸಿದ್ದು ಬಹಳ ಕಡಿಮೆ. "ವಾತ್ಸಲ್ಯ', "ಅಪೂರ್ವ ಸಂಗಮ' ಮುಂತಾದ ಬೆರಳಣಿಕೆಯ ರೀಮೇಕ್‌ ಚಿತ್ರಗಳಲ್ಲಷ್ಟೇ ಅವರು ನಟಿಸಿದ್ದರು. ಆದರೆ, ಅವರ ಹಲವು ಚಿತ್ರಗಳು ಬೇರೆ ಭಾಷೆಗಳಿಗೆ ರೀಮೇಕ್‌ ಆಗಿವೆ. ಪ್ರಮುಖವಾಗಿ "ಕಸ್ತೂರಿ ನಿವಾಸ' ಚಿತ್ರವು ಶಿವಾಜಿ ಗಣೇಶನ್‌ ಅಭಿನಯದಲ್ಲಿ "ಅವನ್‌ದಾನ್‌ ಮನಿದನ್‌' ಹೆಸರಿನಲ್ಲಿ ರೀಮೇಕ್‌ ಆಗಿತ್ತು. ಇನ್ನು "ಶಂಕರ್‌ ಗುರು' ಹಿಂದಿಯಲ್ಲಿ ಅಮಿತಾಭ್‌ ಬಚ್ಚನ್‌ ಅಭಿನಯದ "ಮಹಾನ್‌' ಆಗಿ, "ಪ್ರೇಮದ ಕಾಣಿಕೆ' ಚಿತ್ರವು ತಮಿಳಿನಲ್ಲಿ ರಜನಿಕಾಂತ್‌ ಅಭಿನಯದ "ಪೊಲ್ಲಾದವನ್‌' ಆಗಿ, "ಭಕ್ತ ಕುಂಬಾರ' ಚಿತ್ರವು ತೆಲುಗಿನಲ್ಲಿ ಅಕ್ಕಿನೇನಿ ನಾಗೇಶ್ವರರಾವ್‌ ಅಭಿನಯದ "ಚಕ್ರಧಾರಿ'ಯಾಗಿ, "ನಾ ನಿನ್ನ ಮರೆಯಲಾರೆ' ಚಿತ್ರವು ತಮಿಳಿನಲ್ಲಿ ರಜನಿಕಾಂತ್‌ ಅಭಿನಯದ "ಪುದು ಕವಿತೈ' ಮತ್ತು ಹಿಂದಿಯಲ್ಲಿ ಅನಿಲ್‌ ಕಪೂರ್‌ ಅಭಿನಯದ "ಪ್ಯಾರ್‌ ಕಿಯಾ ಹೇ ಪ್ಯಾರ್‌ ಕರೇಂಗೆ' ಆಗಿ, "ಅನುರಾಗ ಅರಳಿತು' ಚಿತ್ರವು ತೆಲುಗಿನಲ್ಲಿ ಚಿರಂಜೀವಿ ಅಭಿನಯದ "ಘರಾನಾ ಮೊಗಡು' ಆಗಿ ರೀಮೇಕ್‌ ಆಗಿತ್ತು.

ಬಹುಶಃ ಜಾಗತಿಕ ಚಿತ್ರರಂಗದಲ್ಲಿ ರಾಜಕುಮಾರ್‌ ಅವರನ್ನು ಕುರಿತಾದ ಪುಸ್ತಕಗಳು ಬಂದಷ್ಟು, ಇನ್ನಾವ ನಟರ ಬಗ್ಗೆಯೂ ಬಂದಿಲ್ಲ ಎಂದರೆ ತಪ್ಪಿಲ್ಲ. ಪುನೀತ್‌ ರಾಜಕುಮಾರ್‌ ಅವರು ಬರೆದಿರುವ " ಡಾ ರಾಜಕುಮಾರ್‌ - ವ್ಯಕ್ತಿತ್ವದ ಹಿಂದಿರುವ ವ್ಯಕ್ತಿ', ಪತ್ರಕರ್ತ ರುಕ್ಕೋಜಿ ರಾವ್‌ ಅವರು ಬರೆದು ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ "ಡಾ ರಾಜಕುಮಾರ್‌ ಸಮಗ್ರ ಚರಿತ್ರೆ', ಜಗನ್ನಾಥರಾವ್‌ ಬಹುಳೆ ಅವರ "ವರನಟ', ಬಿ. ಗಣಪತಿ ಅವರ "ರಾಜ್‌: ಒಂದು ಮುತ್ತಿನ ಕಥೆ', ಅ.ನ. ಪ್ರಹ್ಲಾದ ರಾವ್‌ ಅವರ "ಬಂಗಾರದ ಮನುಷ್ಯ' ಗೌರಿ ಸುಂದರ್‌ ಸಂಪಾದಕತ್ವದಲ್ಲಿ ಬಂದ "ಕನ್ನಡ ಕಲಾಕಂಠೀರವ' ಸೇರಿದಂತೆ ರಾಜ್‌ ಕುರಿತು ಹಲವಾರು ಪುಸ್ತಕಗಳು ರಚನೆಯಾಗಿವೆ.

ರಾಜಕುಮಾರ್‌ ಅವರ ಮೊದಲ ಚಿತ್ರ "ಬೇಡರ ಕಣ್ಣಪ್ಪ' ತೆಲುಗಿನಲ್ಲಿ "ಕಾಳಹಸ್ತಿ ಮಹಾತ್ಮ$Âಂ' ಎಂಬ ಹೆಸರಿನಲ್ಲೂ ತಯಾರಾಗಿತ್ತು. ಆ ಚಿತ್ರದಲ್ಲೂ ಅವರೇ ನಟಿಸಿದ್ದರು. ಆ ನಂತರ ಅವರು ಯಾವುದೇ ಬೇರೆ ಭಾಷೆಯ ಚಿತ್ರಗಳಲ್ಲೂ ಅಭಿನಯಿಸಲಿಲ್ಲ. "ಬೇಡರ ಕಣ್ಣಪ್ಪ' ರಾಷ್ಟ್ರ ಪ್ರಶಸ್ತಿ ಪಡೆಯುವುದರ ಜೊತೆಗೆ ರಾಷ್ಟ್ರ ಪ್ರಶಸ್ತಿಯನ್ನು ಕನ್ನಡಕ್ಕೆ ತಂದುಕೊಟ್ಟ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.

"ಬೇಡರ ಕಣ್ಣಪ್ಪ' ಚಿತ್ರದಲ್ಲಿ ಪ್ರಾರಂಭವಾದ ರಾಜಕುಮಾರ್‌ ಯಾನ, "ಶಬ್ಧವೇಧಿ' ಮೂಲಕ ಮುಗಿಯಿತು. ಕೆ.ಎಸ್‌.ಎಲ್‌. ಸ್ವಾಮಿ ನಿರ್ದೇಶನದ "ಭಾಗ್ಯದ ಬಾಗಿಲು' ಚಿತ್ರವು ರಾಜಕುಮಾರ್‌ ಅಭಿನಯದ 100ನೇ ಚಿತ್ರವಾದರೆ, ಸಿಂಗೀತಂ ಶ್ರೀನಿವಾಸರಾವ್‌ ನಿರ್ದೇಶನದ "ದೇವತಾ ಮನುಷ್ಯ' 200ನೇ ಚಿತ್ರವಾಗಿತ್ತು. ಈ 200 ಪ್ಲಸ್‌ ಚಿತ್ರಗಳ ಪೈಕಿ 80ಕ್ಕೂ ಹೆಚ್ಚು ಚಿತ್ರಗಳಿಗೆ ಚಿ. ಉದಯಶಂಕರ್‌ ಅವರು ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ರಚಿಸಿದ್ದರು ಎನ್ನುವುದು ವಿಶೇಷ.

"ರಣಧೀರ ಕಂಠೀರವ' ಚಿತ್ರದಿಂದ ರಾಜಕುಮಾರ್‌ ಅವರ ಐತಿಹಾಸಿಕ ಚಿತ್ರಗಳ ಪಯಣ ಶುರುವಾಯಿತು. ನಂತರದ ದಿನಗಳಲ್ಲಿ "ಕಿತ್ತೂರು ಚೆನ್ನಮ್ಮ', "ಇಮ್ಮಡಿ ಪುಲಕೇಶಿ', "ಶ್ರೀ ಕೃಷ್ಣದೇವರಾಯ' ಮತ್ತು "ಮಯೂರ'ದಂತಹ ಐತಿಹಾಸಿಕ ಚಿತ್ರಗಳಲ್ಲಿ ರಾಜಕುಮಾರ್‌ ಅವರ ಅವಿಸ್ಮರಣೀಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ವಿಶೇಷವೆಂದರೆ, ರಾಜಕುಮಾರ್‌ ಅವರು ನಿರ್ಮಿಸಿದ ಒಂದೇ ಒಂದು ಚಿತ್ರವೆಂದರೆ ಅದು "ರಣಧೀರ ಕಂಠೀರವ' ಮಾತ್ರ. ಈ ಚಿತ್ರವನ್ನು ಅವರು ಜಿ.ವಿ. ಅಯ್ಯರ್‌, ಟಿ.ಎನ್‌. ಬಾಲಕೃಷ್ಣ ಮತ್ತು ನರಸಿಂಹರಾಜು ಅವರ ಸಹಯೋಗದೊಂದಿಗೆ ನಿರ್ಮಿಸಿದರು.

1963ರಲ್ಲಿ ಡಾ. ರಾಜಕುಮಾರ್‌ ಅಭಿನಯದ 14 ಚಿತ್ರಗಳು ಬಿಡುಗಡೆಯಾದವು. ನಂತರದ ವರ್ಷಗಳಲ್ಲಿ ಅಂದರೆ 64ರಲ್ಲಿ 10 ಚಿತ್ರಗಳು, 65ರಲ್ಲಿ 11 ಚಿತ್ರಗಳು, 66ರಲ್ಲಿ 11 ಚಿತ್ರಗಳು, 67ರಲ್ಲಿ 12 ಚಿತ್ರಗಳು, 68ರಲ್ಲಿ 16 ಚಿತ್ರಗಳು, 69ರಲ್ಲಿ 10 ಚಿತ್ರಗಳು, 70ರಲ್ಲಿ 12 ಚಿತ್ರಗಳು, 71ರಲ್ಲಿ 10 ಚಿತ್ರಗಳು, 72ರಲ್ಲಿ 8 ಚಿತ್ರಗಳು ಬಿಡುಗಡೆಯಾದವು. ನಂತರದ ವರ್ಷಗಳಲ್ಲಿ ಆ ಪ್ರಮಾಣ ಕ್ರಮೇಣ ಕಡಿಮೆಯಾಯಿತು.

ಒಬ್ಬ ವ್ಯಕ್ತಿ ಜೀವಿತವಾಗಿದ್ದಾಗಲೇ ಅವರ ಹೆಸರಿನಲ್ಲಿ ಸರ್ಕಾರ ಪ್ರಶಸ್ತಿಯೊಂದನ್ನು ಸ್ಥಾಪಿಸಿ ಕೊಡುವುದು ಅಪರೂಪ. ಅಂಥದ್ದೊಂದು ಹೆಗ್ಗಳಿಕೆ ಡಾ. ರಾಜಕುಮಾರ್‌ ಅವರಿಗಿದೆ. ಕನ್ನಡ ಚಿತ್ರರಂಗದಕ್ಕೆ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ಕೊಡುವ ಪ್ರಶಸ್ತಿಯನ್ನು ರಾಜಕುಮಾರ್‌ ಅವರ ಹೆಸರಿನಲ್ಲಿ ಸರ್ಕಾರ ಸ್ಥಾಪಿಸಿ, ಪ್ರತಿ ವರ್ಷ ಕೊಡುತ್ತಾ ಬಂದಿದೆ. ಇದು ಕನ್ನಡ ಚಿತ್ರರಂಗದ ಅತ್ಯನ್ನುತ ಪ್ರಶಸ್ತಿಯಾಗಿದೆ.

ಕನ್ನಡ ಚಿತ್ರರಂಗವಷ್ಟೇ ಅಲ್ಲ, ಬಹುಶಃ ಭಾರತೀಯ ಚಿತ್ರರಂಗದಲ್ಲೇ ರಾಜಕುಮಾರ್‌ ಅವರಿಗೆ ಸಿಕ್ಕಷ್ಟು ಬಿರುದುಗಳು ಮತಾöವ ನಟರಿಗೂ ಸಿಕ್ಕ ಉದಾಹರಣೆಗಳಿಲ್ಲ. ಅಭಿಮಾನಿಗಳಿಂದ "ನಟಸಾರ್ವಭೌಮ' ಎಂಬ ಬಿರುದು ಪಡೆದ ರಾಜಕುಮಾರ್‌ ಅವರು ನಂತರದ ದಿನಗಳಲ್ಲಿ "ಕನ್ನಡ ಕಂಠೀರವ', "ರಸಿಕರ ರಾಜ', "ಗಾನ ಗಂಧರ್ವ', "ಕಲಾ ಕೌಸ್ತುಭ' ಮುಂತಾದ ಹಲವು ಬಿರುದುಗಳು ಅವರನ್ನು ಅಲಂಕರಿಸಿದ್ದವು. ಆದರೆ, ಅಭಿಮಾನಿಗಳ ಪಾಲಿಗೆ ರಾಜಕುಮಾರ್‌ ಯಾವತ್ತೂ "ಅಣ್ಣಾವ್ರು' ಆಗಿಯೇ ಇದ್ದರು.

"ಮಹಿಷಾಸುರ ಮರ್ಧಿನಿ' ಚಿತ್ರದಲ್ಲಿ "ತುಂಬಿತು ಮನವ ತಂದಿತು ಸುಖವ ...' ಎಂಬ ಹಾಡನ್ನು ಎಸ್‌. ಜಾನಕಿ ಅವರ ಜೊತೆಗೆ ಹಾಡುವ ಮೂಲಕ ರಾಜಕುಮಾರ್‌ ಮೊದಲ ಬಾರಿಗೆ ಗಾಯಕರಾಗಿ ಗುರುತಿಸಿಕೊಂಡರು. ನಂತರ ಅದೆಷ್ಟೋ ವರ್ಷಗಳಲ್ಲಿ ಅವರು ತಮ್ಮ ಚಿತ್ರಗಳಿಗೆ ಹಾಡಿರಲಿಲ್ಲ. ನಂತರ "ಸಂಪತ್ತಿಗೆ ಸವಾಲ್‌' ಚಿತ್ರದ "ಯಾರೇ ಕೂಗಾಡಲಿ ...' ಹಾಡನ್ನು ಹಾಡುವುದರ ಜೊತೆಗೆ ಮುಂದಿನ ದಿನಗಳಲ್ಲಿ ತಮ್ಮ ಬಹುತೇಕ ಚಿತ್ರಗಳ ಹಲವು ಹಾಡುಗಳನ್ನು ರಾಜಕುಮಾರ್‌ ಹಾಡಿದರು.

ಕನ್ನಡ ಚಿತ್ರರಂಗಕ್ಕೆ ಬಾಂಡ್‌ ಎಂದರೆ ಅದು ರಾಜಕುಮಾರ್‌ ಒಬ್ಬರೇ. ಬೇರೆ ಭಾಷೆಗಳಲ್ಲಿ ಬಾಂಡ್‌ ಶೈಲಿಯ ಚಿತ್ರಗಳಲ್ಲಿ ಹಲವು ಕಲಾವಿದರು ಕಾಣಿಸಿಕೊಂಡಿದ್ದಾರೆ. ಆದರೆ, ಕನ್ನಡದಲ್ಲಿ ಮಾತ್ರ ಬಾಂಡ್‌ ಪರಂಪರೆ ಶುರುವಾಗಿದ್ದು ರಾಜಕುಮಾರ್‌ ಅವರಿಂದ ಮತ್ತು ಮುಕ್ತಾಯವಾಗಿದ್ದು ಅವರಿಂದಲೇ. "ಜೇಡರ ಬಲೆ'ಯಿಂದ ಶುರುವಾದ ಈ ಪರಂಪರೆ ನಂತರದ ದಿನಗಳಲ್ಲಿ "ಗೋವಾದಲ್ಲಿ ಸಿಐಡಿ 999', "ಆಪರೇಷನ್‌ ಜಾಕ್‌ಪಾಟ್‌ನಲ್ಲಿ ಸಿಐಡಿ 999', "ಆಪರೇಷನ್‌ ಡೈಮಂಡ್‌ ರಾಕೆಟ್‌' ವರೆಗೂ ಮುಂದುವರೆಯಿತು. "ಆಪರೇಷನ್‌ ಡೈಮಂಡ್‌ ರಾಕೆಟ್‌' ಚಿತ್ರದ ಕೊನೆಗೆ "ಆಪರೇಷನ್‌ ಗೋಲ್ಡನ್‌ ಗ್ಯಾಂಗ್‌' ಎಂಬ ಚಿತ್ರ ಬರುತ್ತದೆ ಎಂದು ತೋರಿಸಲಾಗುತ್ತದಾದರೂ, ಆ ಚಿತ್ರ ಬರಲಿಲ್ಲ. ಇನ್ನು "ಧೂಮಕೇತು', "ಸಿಐಡಿ ರಾಜಣ್ಣ', "ಬೆಂಗಳೂರು ಮೈಲ್‌', "ಭಲೇ ಹುಚ್ಚ' ಚಿತ್ರಗಳಲ್ಲೂ ರಾಜಕುಮಾರ್‌ ಸಿಐಡಿಯಾಗಿ ಅಭಿನಯಿಸಿದ್ದರು.

ರಾಜಕುಮಾರ್‌ ಅವರು ಒಟ್ಟು 12 ಚಿತ್ರಗಳಲ್ಲಿ ದ್ವಿಪಾತ್ರ ಮತ್ತು "ಕುಲಗೌರವ' ಹಾಗೂ "ಶಂಕರ್‌ ಗುರು' ಎಂಬ ಎರಡು ಚಿತ್ರಗಳಲ್ಲಿ ತ್ರಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಮೊದಲು ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡ ಚಿತ್ರವೆಂದರೆ "ಸತಿ ಶಕ್ತಿ'. ನಂತರದ ವರ್ಷಗಳಲ್ಲಿ "ಎಮ್ಮೆ ತಮ್ಮಣ್ಣ', "ಭಲೇ ಜೋಡಿ', "ದಾರಿ ತಪ್ಪಿದ ಮಗ', "ಬಬ್ರುವಾಹನ', "ಎಮ್ಮೆ ತಮ್ಮಣ್ಣ', "ಅದೇ ಕಣ್ಣು', "ನಾನೊಬ್ಬ ಕಳ್ಳ' ಮುಂತಾದ ಚಿತ್ರಗಳಲ್ಲಿ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ರಾಜಕುಮಾರ್‌ ಅವರಿಗೆ "ಕುಮಾರರಾಮ' ಮತ್ತು "ಭಕ್ತ ಅಂಬರೀಶ' ಚಿತ್ರಗಳಲ್ಲಿ ನಟಿಸಬೇಕು ಎಂಬ ಆಸೆ ಬಹಳವಾಗಿತ್ತು. ಆದರೆ, ಆ ಆಸೆ ಕೈಗೂಡಲಿಲ್ಲ. "ಕುಮಾರರಾಮ' ಮತ್ತು "ಭಕ್ತ ಅಂಬರೀಶ' ಎರಡೂ ಚಿತ್ರಗಳ ಮುಹೂರ್ತವಾಗಿತ್ತು. ಆದರೆ, ಕಾರಣಾಂತರಗಳಿಂದ ಆ ಚಿತ್ರಗಳು ಸೆಟ್ಟೇರಲಿಲ್ಲ. "ಗಂಡುಗಲಿ ಕುಮಾರರಾಮ' ಚಿತ್ರದಲ್ಲಿ ನಟಿಸುವ ಮೂಲಕ ಶಿವರಾಜಕುಮಾರ್‌ ತಮ್ಮ ತಂದೆಯ ಆಸೆಯನ್ನು ಈಡೇರಿಸಿದರು.

"ಬೇಡರ ಕಣ್ಣಪ್ಪ' ಚಿತ್ರದಲ್ಲಿ ರಾಜಕುಮಾರ್‌ ಅವರು ಕಣ್ಣಪ್ಪನ ಪಾತ್ರದಲ್ಲಿ ಕಾಣಿಸಿಕೊಂಡರೆ, ಹಲವು ವರ್ಷಗಳ ನಂತರ ಅದೇ ಕಥೆಯನ್ನಿಟ್ಟುಕೊಂಡು ಮಾಡಿದ ಶಿವರಾಜಕುಮಾರ್‌ ಅಭಿನಯದ "ಬೇಡರ ಕಣ್ಣಪ್ಪ' ಚಿತ್ರದಲ್ಲಿ ಕಣ್ಣಪ್ಪನ ಭಕ್ತಿಗೆ ಮೆಚ್ಚಿ ದರ್ಶನ ಕೊಡುವ ಶಿವನಾಗಿ ಕಾಣಿಸಿಕೊಂಡಿದ್ದರು.

"ಬೇಡರ ಕಣ್ಣಪ್ಪ' ನಂತರ ರಾಜಕುಮಾರ್‌ ಅವರು "ಹರಿ ಭಕ್ತ', "ಓಹಿಲೇಶ್ವರ', "ಭೂಕೈಲಾಸ', "ಶ್ರೀಕೃಷ್ಣ ಗಾರುಡಿ', "ದಶಾವತಾರ', "ನಾಗಾರ್ಜುನ', "ಸ್ವರ್ಣಗೌರಿ', "ಶ್ರೀ ರಾಮಾಂಜನೇಯ ಯುದ್ಧ' "ಶಿವಗಂಗೆ ಮಹಾತೆ¾', "ಬಬ್ರುವಾಹನ', "ಭಕ್ತ ಪ್ರಹ್ಲಾದ' ಸೇರಿದಂತೆ ಹಲವು ಪೌರಾಣಿಕ ಚಿತ್ರಗಳಲ್ಲಿ ನಟಿಸಿದ್ದಾರೆ.

ರಾಜಕುಮಾರ್‌ ಅವರ ಅಭಿನಯದ ಮೊದಲ ಸಾಮಾಜಿಕ ಚಿತ್ರ "ರಾಯರ ಸೊಸೆ'. ನಂತರದ ದಿನಗಳಲ್ಲಿ ಅವರು "ಅಣ್ಣ ತಂಗಿ', "ಅಬ್ಟಾ ಆ ಹುಡುಗಿ', "ಕಣ್ತರೆದು ನೋಡು', "ಗಾಳಿ ಗೋಪುರ', "ಭೂದಾನ', "ನಂದಾದೀಪ', "ಕನ್ಯಾರತ್ನ', "ಕುಲವಧು', "ಮನ ಮೆಚ್ಚಿದ ಮಡದಿ', "ಸಾಕು ಮಗಳು' ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿದರು.

ಪೌರಾಣಿಕ ಮತ್ತು ಸಾಮಾಜಿಕ ಚಿತ್ರಗಳ ಜೊತೆಗೆ ಹಲವು ದಾಸರ ಮತ್ತು ಸಂತರ ಕುರಿತಾದ ಚಿತ್ರಗಳಲ್ಲಿ ರಾಜ್‌ ಅಭಿನಯಿಸಿದ್ದರು. "ಭಕ್ತ ಕನಕದಾಸ', "ಭಕ್ತ ಕುಂಬಾರ', "ಮಹಾತ್ಮ ಕಬೀರ್‌', "ವಾಲ್ಮೀಕಿ', "ಸಂತ ತುಕಾರಾಂ', "ನವಕೋಟಿ ನಾರಾಯಣ', "ಸರ್ವಜ್ಞ ಮೂರ್ತಿ', "ಮಂತ್ರಾಲಯ ಮಹಾತೆ¾' ಹೀಗೆ ಹಲವು ಚಿತ್ರಗಳಲ್ಲಿ ರಾಜಕುಮಾರ್‌ ನಟಿಸಿದ್ದಾರೆ.

ಡಾ ರಾಜಕುಮಾರ್‌ ಅವರು 9 ಬಾರಿ ರಾಜ್ಯ ಸರ್ಕಾರ ನೀಡುವ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೊದಲು ರಾಜ್ಯ ಪ್ರಶಸ್ತಿ ಪಡೆದಿದ್ದು "ಬಂಗಾರದ ಹೂವು' ಚಿತ್ರದ ನಟನೆಗೆ. ನಂತರದ ವರ್ಷಗಳಲ್ಲಿ "ಕುಲಗೌರವ', "ಭಕ್ತ ಕುಂಬಾರ', "ಬಬ್ರುವಾಹನ', "ಹೊಸ ಬೆಳಕು', "ಹಾಲು ಜೇನು', "ದೇವತಾ ಮನುಷ್ಯ', "ಜೀವನ ಚೈತ್ರ' ಮತ್ತು "ಆಕಸ್ಮಿಕ' ಚಿತ್ರಗಳಿಗೆ ರಾಜ್ಯ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಡಾ ರಾಜಕುಮಾರ್‌ ಅವರನ್ನು ಅತೀ ಹೆಚ್ಚು ಚಿತ್ರಗಳಲ್ಲಿ ನಿರ್ದೇಶಿಸಿದವರು ವೈ.ಆರ್‌. ಸ್ವಾಮಿ. "ಭಕ್ತ ಕನಕದಾಸ' ಚಿತ್ರದಿಂದ "ಅಪೂರ್ವ ಸಂಗಮ'ವರೆಗೂ ಸ್ವಾಮಿ ನಿರ್ದೇಶನದ 17 ಚಿತ್ರಗಳಲ್ಲಿ ನಟಿಸಿದ್ದಾರೆ ಡಾ ರಾಜಕುಮಾರ್‌. ಇದಲ್ಲದೆ ದೊರೆ-ಭಗವಾನ್‌ ನಿರ್ದೇಶನದ 15 ಚಿತ್ರಗಳಲ್ಲಿ, ಟಿ.ವಿ. ಸಿಂಗ್‌ ಠಾಕೂರ್‌ ಅವರ 11 ಚಿತ್ರಗಳಲ್ಲಿ, ವಿಜಯ್‌ ಅವರ 11 ಚಿತ್ರಗಳಲ್ಲಿ, ಬಿ.ಆರ್‌. ಪಂತಲು ಮತ್ತು ಹುಣಸೂರು ಕೃಷ್ಣಮೂರ್ತಿ ಅವರ 9 ಚಿತ್ರಗಳಲ್ಲಿ ರಾಜಕುಮಾರ್‌ ನಟಿಸಿದ್ದಾರೆ.

ರಾಜಕುಮಾರ್‌ ತಮ್ಮ ವೃತ್ತಿಜೀವನದಲ್ಲಿ ಹಲವು ನಾಯಕಿಯರೊಂದಿಗೆ ನಟಿಸಿದ್ದು, ಈ ಪೈಕಿ ಜಯಂತಿ ಅವರೊಂದಿಗೆ 36 ಚಿತ್ರಗಳಲ್ಲಿ ನಟಿಸಿದ್ದು ಕನ್ನಡ ಚಿತ್ರರಂಗದ ಮಟ್ಟಿಗೆ ದಾಖಲೆ. ಲೀಲಾವತಿಯವರೊಂದಿಗೆ 33 ಚಿತ್ರಗಳಲ್ಲಿ, ಭಾರತಿ ಅವರ ಜೊತೆಗೆ 26 ಚಿತ್ರಗಳಲ್ಲಿ, ಕಲ್ಪನಾ ಅವರ ಜೊತೆಗೆ 19 ಚಿತ್ರಗಳಲ್ಲಿ ಪಂಢರಿಬಾಯಿ ಮತ್ತು ಬಿ. ಸರೋಜಾದೇವಿ ಅವರ ಜೊತೆಗೆ 11 ಚಿತ್ರಗಳಲ್ಲಿ ನಟಿಸಿದ್ದಾರೆ. ಆರತಿ, ಮಂಜುಳಾ, ಮಾಧವಿ, ಜಯಮಾಲ,ಲಕ್ಷ್ಮೀ, ಗೀತಾ, ಸರಿತಾ ಸಹ ರಾಜಕುಮಾರ್‌ ಅವರ ಹಲವು ಚಿತ್ರಗಳಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಆರಂಭದ ವರ್ಷಗಳಲ್ಲಿ ಡಾ ರಾಜಕುಮಾರ್‌ ಅವರ ಜೊತೆಗೆ ನಾಯಕಿಯರಾಗಿದ್ದ ಪಂಢರಿಬಾಯಿ ಮತ್ತು ಸಾಹುಕಾರ್‌ ಜಾನಕಿ ಅವರು ನಂತರದ ವರ್ಷಗಳಲ್ಲಿ ರಾಜ್‌ ಅವರ ತಾಯಿಯಾಗಿಯೂ ಕಾಣಿಸಿಕೊಂಡಿದ್ದಾರೆ.

ನಟನೆಗಾಗಿ ಡಾಕ್ಟರೇಟ್‌ ಪದವಿಯನ್ನು ಇಡೀ ಭಾರತ ಚಿತ್ರರಂಗದಲ್ಲೇ ಪಡೆದ ಮೊದಲ ನಟ ಎಂದರೆ ಅದು ಡಾ. ರಾಜಕುಮಾರ್‌. 1976ರಲ್ಲೇ ಮೈಸೂರು ವಿಶ್ವವಿದ್ಯಾಲಯವು ರಾಜಕುಮಾರ್‌ ಅವರಿಗೆ ಡಾಕ್ಟರೇಟ್‌ ಪದವಿಯನ್ನು ನೀಡಿ ಗೌರವಿಸಿತು. ನಂತರ ಭಾರತ ಸರ್ಕಾರದಿಂದ 1983ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡದಲ್ಲಿ ಮೊದಲು ಪದ್ಮಭೂಷಣ ಪ್ರಶಸ್ತಿ ಪಡೆದ ನಟ ಸಹ ಡಾ ರಾಜಕುಮಾರ್‌ ಅವರೇ. ಅದೇ ರೀತಿ ಕನ್ನಡಕ್ಕೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಯನ್ನು (1995) ಕನ್ನಡಕ್ಕೆ ತಂದು ಕೊಟ್ಟ ನಟ ಸಹ ಅವರೇ. ಇನ್ನು ರಾಜ್ಯ ಸರ್ಕಾರ ಕೊಡಮಾಡುವ "ಕರ್ನಾಟಕ ರತ್ನ' ಪ್ರಶಸ್ತಿ ಸಹ ಅವರಿಗೆ ಸಿಕ್ಕಿತ್ತು. ಅಮೇರಿಕಾದಲ್ಲಿ ರಾಜಕುಮಾರ್‌ ಅವರಿಗೆ ಕೆಂಟಕಿ ಕರ್ನಲ್‌ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ರಾಜಕುಮಾರ್‌.

ಡಾ ರಾಜಕುಮಾರ್‌ ಅವರ ಮೊದಲ ಚಿತ್ರ "ಬೇಡರ ಕಣ್ಣಪ್ಪ' ರಾಷ್ಟ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಆ ನಂತರ ಅವರ ಒಟ್ಟು 13 ಚಿತ್ರಗಳು ರಾಷ್ಟ್ರ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿವೆ. ಇನ್ನು "ಜೀವನ ಚೈತ್ರ' ಚಿತ್ರದ "ನಾದಮಯ ಈ ಲೋಕವೆಲ್ಲಾ ...' ಹಾಡಿಗೆ ಅವರಿಗೆ ಅತ್ಯುತ್ತಮ ಗಾಯಕ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು.

ರಾಜಕುಮಾರ್‌ ಅಭಿನಯದ "ಬಂಗಾರದ ಮನುಷ್ಯ' ಚಿತ್ರವು 70ರ ದಶಕದಲ್ಲಿ ಬಿಡುಗಡೆಯಾದ ಸಂದರ್ಭದಲ್ಲಿ ಸತತವಾಗಿ 104 ವಾರಗಳ ಪ್ರದರ್ಶನ ಕಂಡು, ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಸೃಷ್ಠಿಸಿತು. 80ರ ದಶಕದ ಕೊನೆಯಲ್ಲಿ ಚಿತ್ರ ಮತ್ತೂಮ್ಮೆ ಬಿಡುಗಡೆಯಾಗಿ 100 ದಿನಗಳನ್ನು ಪೂರೈಸಿತು.

ಸಂಗ್ರಹ: ಚೇತನ್‌ ನಾಡಿಗೇರ್‌
 

Back to Top