CONNECT WITH US  

ದೇವರೇಕೆ ಹೀಗೆ ಮಾಡಿದ?

ದಟ್ಟವಾದ ಅರಣ್ಯದಲ್ಲಿ ಒಂದು ವಿಶೇಷ ಮರವಿತ್ತು. ಮಾವಿನ ಮರ, ಗಂಧದ ಮರ, ಹಲಸಿನ ಮರಗಳಿಂದ ಈ ವಿಶೇಷ ಮರ ಸುತ್ತುವರಿದಿತ್ತು. ಆ ಮರದ ವಿಶೇಷತೆಯೆಂದರೆ ಅದು ಕುರೂಪಿ ಮರವಾಗಿತ್ತು. ಎಲ್ಲಾ ನೇರಕ್ಕೆ ಬೆಳೆದು, ವಿಸ್ತಾರವಾಗಿ ಹಬ್ಬಿದ್ದರೆ ಇದೊಂದು ಮರ ಮಾತ್ರ ಸೊಟ್ಟಗೆ, ವಿಕಾರವಾಗಿ ಬೆಳೆದಿತ್ತು. ಇದೇ ಕಾರಣಕ್ಕೆ ಸುತ್ತಲಿನ ಮರಗಳೆಲ್ಲಾ ಕುರೂಪಿ ಮರವನ್ನು ಸದಾ ಅಪಹಾಸ್ಯ ಮಾಡುತ್ತಿದ್ದವು. ಆ ಬೇಜಾರು ಕುರೂಪಿ ಮರಕ್ಕೂ ಇತ್ತು. ಮೊದ ಮೊದಲು ಆ ದೇವರು ತನಗೊಬ್ಬನಿಗೆ ಮಾತ್ರ ಏಕೆ ಈ ದುಸ್ಥಿತಿ ತಂದ ಎಂದು ಪ್ರಶ್ನೆ ಹಾಕಿಕೊಳ್ಳುತ್ತಿತ್ತು. ಆದರೆ ನಂತರ ಆ ಕುರಿತು ಚಿಂತಿಸಿ ಫ‌ಲವಿಲ್ಲ ಎಂದರಿತು ಇತರರ ಹೀಯಾಳಿಕೆಗಳಿಗೆ ಬೇಜಾರು ಪಟ್ಟುಕೊಳ್ಳುವುದನ್ನು ನಿಲ್ಲಿಸಿತು.

ಒಂದು ದಿನ ವ್ಯಕ್ತಿಯೊಬ್ಬ ಕಾಡಿಗೆ ಬಂದನು. ಮರಗಳೆಲ್ಲವೂ "ಯಾರಪ್ಪಾ ಈ ದಟ್ಟಾರಣ್ಯಕ್ಕೆ ಬಂದಿರುವವರು' ಎಂದು ಆಶ್ಚರ್ಯದಿಂದ ಅವನನ್ನೇ ನೋಡಿದವು. ಅವನು ಮರ ಕಡಿಯುವವನಾಗಿದ್ದನು. ಅವನು ತನ್ನ ಚೀಲದಿಂದ ಕೊಡಲಿಯನ್ನು ಹೊರತೆಗೆಯುತ್ತಿದ್ದಂತೆ ಮರಗಳೆಲ್ಲಾ ಹೌಹಾರಿದವು. ಅವನು ಹತ್ತಿರದ ಎಲ್ಲಾ ಮರಗಳನ್ನು ಗಮನಿಸುತ್ತಾ ಹೋದನು. ಸೊಟ್ಟದಾಗಿದ್ದ, ಕುರೂಪಿ ಮರವೂ ಅವನ ಕಣ್ಣಿಗೆ ಬಿತ್ತು. ಇತರೆ ಮರಗಳೆಲ್ಲಾ ಕುರೂಪಿ ಮರವನ್ನು ಕಡಿಯುತ್ತಾನೆಂದುಕೊಂಡು ಹಾಸ್ಯ ಮಾಡಿದವು. ಆದರೆ ಆತ, ಸೊಟ್ಟ ಮರದಿಂದ ತನಗೇನೂ ಉಪಯೋಗವಿಲ್ಲವೆಂದು ಕುರೂಪಿ ಮರವೊಂದನ್ನು ಬಿಟ್ಟು ಅದರ ಸುತ್ತಮುತ್ತಲಿದ್ದ ಮರಗಳನ್ನು ಕಡಿದು ಹಾಕಿದನು. ದೇವರು ಎಲ್ಲವನ್ನೂ ಒಳ್ಳೆಯದಕ್ಕೆ ಮಾಡಿರುತ್ತಾನೆ, ತನ್ನ ಕುರೂಪವೇ ಇಂದು ತನ್ನನ್ನು ಕಾಪಾಡಿತೆಂದು ಕುರೂಪಿ ಮರ ದೇವರಿಗೆ ಕೃತಘ್ನತೆ ಸಲ್ಲಿಸಿತು.

ವೇದಾವತಿ ಹೆಚ್‌. ಎಸ್‌.

Trending videos

Back to Top