CONNECT WITH US  

ಕಣ್‌ ತೆರೆದು ನೋಡಿ

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ? ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು

ಕೀಟಗಳನ್ನು ಹತ್ತಿರ ಬಿಟ್ಟುಕೊಳ್ಳದ ಪ್ರಾಣಿ
ನುಸಿ ಕೀಟಗಳನ್ನು ಓಡಿಸಲು ನಾವೇನೇನು ಮಾಡುವುದಿಲ್ಲ ಹೇಳಿ. ನಾನಾ ಬಗೆಯ ಕೀಟನಾಶಕಗಳು, ಸ್ಪ್ರೆàಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಹಿಂದೆಲ್ಲಾ ಆ ಕೆಮಿಕಲ್‌ ತುಂಬಾ ವಾಸನೆ ಸೂಸುತ್ತಿತ್ತು. ಅದಕ್ಕೆ ನಾವೆಲ್ಲರೂ ಹೊಂದಿಕೊಳ್ಳಬೇಕಾಗಿತ್ತು. ಆದರೆ ಈಗ ಹಾಗಿಲ್ಲ ಸುಗಂಧಭರಿತ ಸ್ಪ್ರೆàಗಳು ಬಂದಿವೆ. ಆದರೆ ಪ್ರಾಣಿಗಳಿಗೆ ನುಸಿ ಕೀಟಗಳು ತೊಂದರೆ ಕೊಡುವುದಿಲ್ಲವೇ? ಮನುಷ್ಯರನ್ನು ಮಾತ್ರ ಅವು ಹುಡುಕಿಕೊಂಡು ಬಂದು ಕಾಟ ಕೊಡುತ್ತವೆಯೇ? ಅಯ್ಯಯ್ಯೋ ಹಾಗಂತ ಯಾವತ್ತೂ ತಪ್ಪು ತಿಳಿಯಬೇಡಿ. ಆ ರೀತಿ ತಾರತಮ್ಯ ಮಾಡುವವರು ಮನುಷ್ಯರು ಮಾತ್ರ. ಪ್ರಾಣಿಗಳಿಗೆ ಎಲ್ಲವೂ ಒಂದೇ. ಪ್ರಾಣಿಗಳಿಗೂ ನುಸಿ ಕೀಟಗಳು ಕಾಟ ಕೊಡುತ್ತವೆ. ಅದಕ್ಕೇ ಅಲ್ಲವೇ ಜಾನುವಾರುಗಳು ತಮ್ಮ ಬಾಲವನ್ನು ಅತ್ತಿಂದಿತ್ತ ಅಲ್ಲಾಡಿಸಿಕೊಂಡಿರುವುದು. ಕುದುರೆಗಳು ತಮ್ಮ ಕಾಲುಗಳನ್ನು ಕೊಡವಿಕೊಳ್ಳುವುದು. ಆದರೆ ಇಲ್ಲೊಂದು ಪ್ರಾಣಿಗೆ ಅಂಥಾ ಯಾವ ಆ್ಯಕ್ಷನ್‌ನ ಅಗತ್ಯವೇ ಬೀಳ್ಳೋದಿಲ್ಲ. ಅವೇನು ಕೀಟನಾಶಕ ಪೂಸಿಕೊಳ್ಳುತ್ತವೆಯೇ? ಎಂದು ಮಾತ್ರ ಕೇಳಬೇಡಿ. ಅವುಗಳಿಗೆ ಎಲ್ಲಿಂದ ಸಿಗಬೇಕು ಕೀಟನಾಶಕ? ಅಂದಹಾಗೆ ಆ ಪ್ರಾಣಿ ಝೀಬ್ರಾ (ಹೇಸರಗತ್ತೆ). "ಹಾರ್ಸ್‌ ಫ್ಲೈ' ಎನ್ನುವ ಕೀಟ ಪ್ರಾಣಿಗಳಿಗೆ ತುಂಬಾ ಉಪದ್ರವ ಕೊಡುತ್ತಂತೆ. ಈ ಕೀಟಗಳು ಎಲ್ಲಾ ಪ್ರಾಣಿಗಳನ್ನು ಗೋಳು ಹುಯ್ದುಕೊಂಡರೂ ಹೇಸರಗತ್ತೆಯ ತಂಟೆಗೆ ಮಾತ್ರ ಹೋಗುವುದಿಲ್ಲ. ಈ ಅಚ್ಚರಿಯನ್ನು ಗಮನಿಸಿದ ವಿಜ್ಞಾನಿಗಳು ಈ ಕುರಿತು ಅಧ್ಯಯನ ನಡೆಸಿದಾಗ ಸ್ವಾರಸ್ಯಕರ ಮಾಹಿತಿ ಸಿಕ್ಕಿತ್ತು. 

ಆ ಕೀಟಗಳನ್ನು ಹೇಸರಗತ್ತೆಯ ಬಳಿ ಬಾರದಂತೆ ತಡೆಯುತ್ತಿದ್ದಿದ್ದು ಅವುಗಳ ಮೈಮೇಲಿನ ಕಪ್ಪು ಬಿಳುಪು ಪಟ್ಟೆಗಳು. ಹೇಗೆಂದರೆ ಬೆಳಕು ಅವುಗಳ ಮೈಮೇಲಿಂದ ಪ್ರತಿಫ‌ಲನಗೊಂಡಾಗ ಧ್ರುವೀಕರಣ(ಪೊಲಾರೈಸೇಷನ್‌) ವಿದ್ಯಮಾನ ಘಟಿಸುತ್ತಿತ್ತು. ಈ ವಿದ್ಯಮಾನವೇ ಕೀಟಗಳು ಹೇಸರಗತ್ತೆಯ ಬಳಿ ಬಾರದಂತೆ ತಡೆಯುತ್ತಿದ್ದವು. ಹಾಗೆಂದು ನಾವು ನೀವು ಮೈಮೇಲೆ ಕಪ್ಪು ಬಿಳುಪು ಬಣ್ಣ ಬಳಿದುಕೊಂಡರೆ ನಮ್ಮ ಬಳಿ ಸೊಳ್ಳೆಗಳು ಬಾರದು ಎಂದು ಮಾತ್ರ ತಿಳಿಯಬೇಡಿ!

ಬಾವಲಿ ಭಯೋತ್ಪಾದಕ ಪಕ್ಷಿಯಲ್ಲ
ಮನೆಯಲ್ಲಿ ಚಿಕ್ಕ ಮಗುವಿದ್ದರೆ ಹೆತ್ತವರು ಎಲ್ಲಿಗೂ ಹೋಗುವುದಿಲ್ಲ. ಏನೇ ಕಾರ್ಯಕ್ರಮವಿದ್ದರೂ ಕ್ಯಾನ್ಸಲ್‌ ಮಾಡುತ್ತಾರೆ. ಆದರೆ ಹೋಗಲೇ ಬೇಕಾದ ಸಂದರ್ಭ ಬಂದಾಗ ಆತ್ಮೀಯರಿಗೆ ಆ ಜವಾಬ್ದಾರಿ ವಹಿಸಿ ತಾವು ಬೇಗನೆ ಆ ಕಾರ್ಯಕ್ರಮಕ್ಕೆ ಹೋಗಿ ದಬದಬನೆ ಹಿಂದಿರುಗಿ ಬಂದುಬಿಡುತ್ತಾರೆ. ಮನುಷ್ಯರು ಆಪ್ತರ ನೆರವು ಪಡೆಯುವ ಹಾಗೆಯೇ ಬಾವಲಿಯೂ ಈ ವಿಷಯದಲ್ಲಿ ನೆರವು ಪಡೆಯುತ್ತವೆ ಎನ್ನುವುದು ನಿಮಗೆ ಗೊತ್ತಾ? ಹೆಣ್ಣು ಬಾವಲಿಗಳು ಅಗತ್ಯ ಬಿದ್ದಾಗ ಸಹವರ್ತಿಗಳ ಮರಿಯನ್ನು ನೋಡಿಕೊಳ್ಳುತ್ತವಂತೆ. ಅಷ್ಟು ಸಹಾಯಜೀವಿ ನಮ್ಮ ಬಾವಲಿ. ಗೂಬೆಯಂತೆಯೇ ಬಾವಲಿಗಳಿಗೂ ನಾವು ಭಯೋತ್ಪಾದಕರ ಪಟ್ಟ ಕಟ್ಟಿಬಿಟ್ಟಿದ್ದೇವೆ. ಸಿನಿಮಾಗಳಲ್ಲಿ, ಧಾರಾವಾಹಿಗಳಲ್ಲಿ ಇವನ್ನು ಹೆದರಿಕೆ ಹುಟ್ಟಿಸುವ ಹಾಗೆ ತೋರಿಸುತ್ತೇವೆ. ಆದರೆ ನಿಜಕ್ಕೂ ಅವು ಸ್ನೇಹಜೀವಿಗಳೇ. ಮನುಷ್ಯರನ್ನು ಸೇರಿದಂತೆ, ಯಾವುದೇ ಅಪರಿಚಿತ ಜೀವಿಯಾದರೂ ದೂರದಿಂದ ಗಾಬರಿ ಹುಟ್ಟಿಸುತ್ತೆ. ಆದರೆ ಅದರ ಬಗ್ಗೆ ಹೆಚ್ಚು ತಿಳಿದುಕೊಂಡಾಗಲಷ್ಟೇ ಅವುಗಳ ಮೇಲೆ ಪ್ರೀತಿ ಬರಲು ಸಾಧ್ಯ ಎನ್ನುವುದು ಬಾವಲಿಯ ನಿದರ್ಶನದಿಂದ ತಿಳಿಯುತ್ತದೆ.

ಹರ್ಷ


Trending videos

Back to Top