CONNECT WITH US  

ಕಣ್‌ ತೆರೆದು ನೋಡಿ

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ? ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು!

ಅನಾಥ ಮರಿಯನ್ನು ದತ್ತು ಪಡೆಯುವ ಅಳಿಲು
ತಂದೆ ತಾಯಿ ತೀರಿಕೊಂಡು ಮಗುವೊಂದು ಅನಾಥವಾಗಿಬಿಡುತ್ತೆ. ನೆಂಟರಿಷ್ಟರು ಆ ಮಗುವಿನ ಜವಾಬ್ದಾರಿ ತೆಗೆದುಕೊಳ್ಳಲು ಮುಂದೆ ಬರುವುದಿಲ್ಲ. ವಿಷಯ ತಿಳಿದ ದಂಪತಿಯೊಂದು ಮಗುವನ್ನು ದತ್ತು ತೆಗೆದುಕೊಳ್ಳಲು ಮುಂದೆ ಬರುತ್ತಾರೆ. ಇದು ಅನೇಕ ಕನ್ನಡ ಸಿನಿಮಾಗಳಲ್ಲಿ ಬರುವ ದೃಶ್ಯ. ನಿಜ ಜೀವನದಲ್ಲಿಯೂ ಇಂಥಾ ಉದಾಹರಣೆಗಳನ್ನು ನಾವು ಕಾಣಬಹುದು. ಇನ್ನೊಬ್ಬರ ಕರುಳ ಕುಡಿಯನ್ನು ತಮ್ಮ ಸ್ವಂತ ಕುಟುಂಬದೊಳಗೆ ಸೇರಿಸಿಕೊಳ್ಳುವ ಉದಾತ್ತ ಮನೋಭಾವವನ್ನು ಪ್ರಾಣಿಗಳ ಪ್ರಪಂಚದಲ್ಲೂ ಕಾಣಬಹುದು! ಆಶ್ಚರ್ಯ ಆಗುತ್ತಿದೆ ಅಲ್ವಾ? ಆ ದೊಡ್ಡ ಮನಸ್ಸಿನ ಪ್ರಾಣಿ ಬೇರಾವುದೂ ಅಲ್ಲ, ಪುಟ್ಟ ಗಾತ್ರದ ಅಳಿಲು. ಇನ್ನು ಮುಂದೆ "ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು' ಎಂಬ ಗಾದೆಯನ್ನು ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ಗೆ ಮಾತ್ರವಲ್ಲ ಅಳಿಲಿಗೂ ಹೇಳಬಹುದು. ಗಾತ್ರದಲ್ಲಿ ಚಿಕ್ಕದಾದರೂ ಅಳಿಲು, ವಿಶಾಲ ಮನೋಭಾವವನ್ನು ಹೊಂದಿದೆ. ಹೀಗಾಗಿಯೇ ಅಮ್ಮ ಇಲ್ಲದ ಮರಿಯನ್ನು, ಹೆಣ್ಣಳಿಲು ತನ್ನದೇ ಮರಿಯೆಂಬಂತೆ ಸಾಕಿ ಸಲುಹುತ್ತದೆ. ಹೆಣ್ಣು ಯಾವತ್ತಿದ್ದರೂ ಅಂತಃಕರಣವುಳ್ಳವಳು. ಯಾವ ಪ್ರಭೇದದಲ್ಲಿಯೇ ಆದರೂ ಹೆಣ್ಣು ಹೆಣ್ಣೇ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬಹುದು. 20 ವರ್ಷಗಳ ಸುದೀರ್ಘ‌ ಅಧ್ಯಯನದ ನಂತರ ಅಳಿಲು ದತ್ತು ಪಡೆಯುವ ವಿಚಾರ ಬೆಳಕಿಗೆ ಬಂದಿದೆ. ಇನ್ನು ಕೆಲ ಅಳಿಲುಗಳು ತಲೆ ಓಡಿಸುತ್ತವಂತೆ. ತಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಅನಾಥ ಅಳಿಲಿನ ಮರಿ ಕಂಡುಬಂದರೆ ಅದು ಯಾರದೆಂದು ಊಹಿಸಿ ಅವರ ನೆಂಟರಿಷ್ಟರ ಜಾಗಕ್ಕೆ ಹೋಗಿ ತಲುಪಿಸಿ ಬರುವುದಂತೆ. ಎಲ್ಲಾ ಅಳಿಲುಗಳೂ ಈ ರೀತಿಯ ವರ್ತನೆಗಳನ್ನು ತೋರುವುದಿಲ್ಲ ನಿಜ. ಆದರೆ ಇಂಥ ಉದಾತ್ತ ಮನೋಬಾವ ಅವುಗಳಲ್ಲೂ ಇರುವುದು ಅಚ್ಚರಿಯ ವಿಷಯವೇ ಸರಿ.

ಆಕ್ಟೋಪಸನ್ನು ತರಕಾರಿ ಶಾಪಿಂಗಿಗೆ ಕಳಿಸಬಹುದು
ತರಕಾರಿಯನ್ನೋ, ಹಣ್ಣನ್ನೋ ಕೊಳ್ಳಲು ಮಾರುಕಟ್ಟೆಗೆ ಹೋದಾಗ ನಾವೇನು ಮಾಡುತ್ತೇವೆ? ಮೊದಲು, ಹಣ್ಣನ್ನು ಕೈಯಿಂದ ಮುಟ್ಟಿ ಪರೀಕ್ಷಿಸುತ್ತೇವೆ. ಕೆಲವು ಅಂಗಡಿಯವರು ಮುಟ್ಟಬೇಡಿ ಎಂದು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಅಂಗಡಿಯವರ ಕೈಯಲ್ಲಿ ಮತ್ತಷ್ಟು ಬೈಸಿಕೊಳ್ಳುವ ಮನಸ್ಸಿದ್ದವರು ಕೈಲಿದ್ದ ಹಣ್ಣನ್ನು ಮೂಸಿಯೂ ನೋಡುವರು. ಆಗ ಅಂಗಡಿಯವನ ಪಿತ್ತ ನೆತ್ತಿಗೇರಿ ನಾಲ್ಕೈದು ಬೈಗುಳಗಳನ್ನೂ ಕೇಳಿಸಿಬಿಡುತ್ತಾನೆ. ಈ ವಿಷಯದಲ್ಲೇ ಅಷ್ಟಪದಿ ತುಂಬಾ ಅದೃಷ್ಟವಂತ ಅಂತ ಅನ್ನಿಸೋದು. ಯಾಕೆ ಗೊತ್ತಾ? ಅವುಗಳ ಕೈಗಳಲ್ಲಿ ರುಚಿ ಮತ್ತು ವಾಸನೆಯ ಗ್ರಂಥಿಗಳಿವೆ. ಎಸ್‌, ನೀವು ಓದಿದ್ದು ಸರಿಯಾಗಿಯೇ ಇದೆ. ನಮ್ಮ ನಾಲಗೆ ಮತ್ತು ಮೂಗಿನಲ್ಲಿರುವ ಗ್ರಂಥಿಗಳೆರಡೂ ಅವುಗಳ ಕೈಗಳಲ್ಲಿವೆ. ಹೀಗಾಗಿ ತರಕಾರಿ ಅಂಗಡಿಗೆ ಅವುಗಳೇನಾದರೂ ಹೋಗುವಂತಿದ್ದರೆ ಖಂಡಿತವಾಗಿ ಬೈಸಿಕೊಳ್ಳುತ್ತಿರಲಿಲ್ಲ. ಕೈನಿಂದಲೇ ಪರೀಕ್ಷಿಸಿ ತರಕಾರಿಯನ್ನು ಆರಿಸಿಬಿಡುತ್ತಿದ್ದವು. ರುಚಿ ತಿಳಿಯುವುದಲ್ಲದೆ, ವಾಸನೆ ಗ್ರಹಿಸುವುದಲ್ಲದೆ ಅದಕ್ಕಿಂತ ಮುಂದೇನನ್ನೂ ಕೈಗಳು ಮಾಡಲಾರವು. ಅಂದರೆ ತಿನ್ನುವ ಕೆಲಸವನ್ನು ಬಾಯಿಯೇ ಮಾಡಬೇಕು ಎಂದರ್ಥ! 

ಹರ್ಷ

Trending videos

Back to Top