ನೇರಳೆ ಮರದ ಮಾಲೀಕರು ಯಾರು?

ಬೆಜ್ಜಿಹಳ್ಳಿ ಎಂಬ ಊರಿನಲ್ಲಿ ಕೆಂಚಪ್ಪ ಎನ್ನುವ ಜಿಪುಣನಿದ್ದನು. ಊರಿನಲ್ಲಿ ಅವನಿಗೆ ಮೂರು ಎಕರೆ ಜಮೀನಿತ್ತು. ಜಮೀನಿನ ತುಂಬಾ ತೆಂಗಿನ ಮರಗಳಿದ್ದವು. ಮರಗಳ ಪಕ್ಕದಲ್ಲಿ, ಬದುವಿನ ಮೇಲೆ ಒಂದು ನೇರಳೆ ಮರವೂ ಇತ್ತು. ಹಣ್ಣು ಬಿಡುವ ಕಾಲವಾದ್ದರಿಂದ ಮರದ ತುಂಬೆಲ್ಲಾ ಹಣ್ಣುಗಳು ತುಂಬಿಕೊಂಡಿದ್ದವು. ವರ್ಷಗಳಿಂದ ಆ ಮರಕ್ಕೆ ಅನೇಕ ಪಕ್ಷಿಗಳು ಬರುತ್ತಿದ್ದವು. ಅದರ ಹಣ್ಣುಗಳನ್ನು ತಿಂದು ಖುಷಿಯಾಗಿದ್ದವು. ಅದು ಕೆಂಚಪ್ಪನ ಗಮನಕ್ಕೆ ಬಂತು. ಅವನಿಗೆ ಹಣ್ಣುಗಳನ್ನು ಕಿತ್ತು ಪೇಟೆಯಲ್ಲಿ ಮಾರಿ ಹಣ ಗಳಿಸುವ ಆಸೆಯಾಯಿತು. ಹೇಗಾದರೂ ಮಾಡಿ ತನ್ನ ಮರದ ಹಣ್ಣುಗಳನ್ನು ಪಕ್ಷಿಗಳಿಂದ ರಕ್ಷಿಸಬೇಕೆಂದು ನಿಶ್ಚಯಿಸಿದನು. ಆದ್ದರಿಂದ ದಿನನಿತ್ಯ ಹಣ್ಣು ತಿನ್ನಲು ಬರುತ್ತಿದ್ದ ಪಕ್ಷಿಗಳನ್ನು ಓಡಿಸಲು ಕಲ್ಲು ತೂರತೊಡಗಿದನು, ಬಲೆಯನ್ನು ಹಾಕಿದನು. ಹೀಗೆ ನಾನಾ ಕಸರತ್ತುಗಳನ್ನು ಮಾಡಿದನು.
ಕೆಂಚಪ್ಪನ ಜಮೀನಿನ ಪಕ್ಕದಲ್ಲಿಯೆ ಒಂದು ಕಾಲುದಾರಿಯಿತ್ತು. ದಿನನಿತ್ಯ ಈ ದಾರಿಯಲ್ಲಿ ಶಾಲಾ ಮಕ್ಕಳು ಶಾಲೆಗೆ ನಡೆದುಕೊಂಡು ಹೋಗುತ್ತಿದ್ದರು. ಕೆಂಚಪ್ಪ ದಿನನಿತ್ಯ ಕಿರುಚುತ್ತಾ, ಪಕ್ಷಿಗಳತ್ತ ಕಲ್ಲು ತೂರುತ್ತಿರುವುದನ್ನು ಶಾಲಾ ಬಾಲಕನೊಬ್ಬ ನೋಡಿದ. ಆ ಹುಡುಗ ಕೆಂಚಪ್ಪನ ಹತ್ತಿರ ಹೋಗಿ "ಆ ಪಕ್ಷಿಗಳಿಗೆ ಕಲ್ಲನ್ನು ಯಾಕೆ ಎಸೆಯುತ್ತಿದ್ದೀರಿ? ಅವುಗಳು ಏನು ತಪ್ಪು ಮಾಡಿವೆ?' ಎಂದು ಕೇಳಿದ. ಸಿಟ್ಟಿನಿಂದ ಕೆಂಚಪ್ಪ "ಈ ಪಕ್ಷಿಗಳು ನನ್ನ ಹೊಲದಲ್ಲಿರುವ ನೇರಳೆ ಮರದ ಹಣ್ಣುಗಳನ್ನೆಲ್ಲ ತಿನ್ನುತ್ತಿವೆ. ಅವನ್ನು ಮಾರುಕಟ್ಟೆಯಲ್ಲಿ ಮಾರಬೇಕೆಂದಿದ್ದೆ' ಎಂದನು.
ಕೆಂಚಪ್ಪನ ಉತ್ತರವನ್ನು ಕೇಳಿದ ಬಾಲಕ "ಈ ಮರವನ್ನು ಇಲ್ಲಿ ನೆಟ್ಟಿದ್ದು ಯಾರು?' ಎಂದು ಪ್ರಶ್ನಿಸಿದನು. ಆಗ ಕೆಂಚಪ್ಪ "ಯಾವುದೋ ಪಕ್ಷಿಯೊಂದು ನೇರಳೆ ಹಣ್ಣನ್ನು ತಿಂದು ಬೀಜವನ್ನು ಉದುರಿಸಿರಬಹುದು' ಎಂದು ಉತ್ತರಿಸಿದನು.
ಬಾಲಕ "ಹಾಗಾದರೆ ಪಕ್ಷಿಗಳಿಲ್ಲದೇ ಇರುತ್ತಿದ್ದರೆ ನಿನ್ನ ಜಮೀನಿನಲ್ಲಿ ಈ ಮರವೂ ಇರುತ್ತಿರಲಿಲ್ಲ ಎಂದಾಯ್ತು. ಅಂದರೆ, ಈ ಮರ ನಿಜವಾಗಲೂ ಅವುಗಳಿಗೆ ಸೇರಬೇಕಲ್ಲವೆ?' ಎಂದನು. ಬಾಲಕನ ಜಾಣ್ಮೆಗೆ ಕೆಂಚಪ್ಪ ತಲೆದೂಗಿದ. ಅಷ್ಟು ಹೇಳಿದ ಬಾಲಕ ಶಾಲೆಗೆ ಹೊತ್ತಾಯ್ತು ಎಂದು ಹೇಳಿ ಹೊರಟ. ಕೆಂಚಪ್ಪ ಯೋಚಿಸುತ್ತಾ ಕುಳಿತ. ಅವನಿಗೆ ಬಾಲಕ ಹೇಳಿದ್ದು ಸರಿ ಎನ್ನಿಸಿತು. ಹಿಂದಿನ ವರ್ಷ ಗದ್ದೆಗೆ ದಾಳಿಯಿಟ್ಟಿದ್ದ ಕೀಟಗಳನ್ನು ಪಕ್ಷಿಗಳೇ ತಿಂದು ಬೆಳೆಯನ್ನು ಉಳಿಸಿದ್ದವು. ಹೀಗಾಗಿ ಪಕ್ಷಿಗಳಿಂದಲೇ ತನಗೆ ಪ್ರಯೋಜನವಾಗುತ್ತಿದೆ ಎನ್ನುವುದನ್ನು ಮನಗಂಡ. ಪಕ್ಷಿಗಳನ್ನು ಓಡಿಸುವುದನ್ನು ಬಿಟ್ಟು ತನ್ನ ಪಾಡಿಗೆ ತಾನು ಮನೆಗೆ ಹಿಂದಿರುಗಿದ.
ಸಣ್ಣಮಾರಪ್ಪ, ಚಂಗಾವರ