CONNECT WITH US  

ಕಣ್‌ ತೆರೆದು ನೋಡಿ

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ? ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು!

ಸಾವಿರಾರು ಜೇನುನೊಣಗಳು ಕಾರಿನ ಹಿಂದೆ ಬಿದ್ದಿದ್ದೇಕೆ?

ಯಾರಾದರೂ ಮನೆಯಿಂದ ಕಾಣೆಯಾದರೆ ಮನೆ ಮಂದಿಗೆ ಗೊತ್ತಾಗಲು ಎಷ್ಟು ಸಮಯ ಬೇಕಾಗಬಹುದು? ಗಂಟೆಗಳ ಕಾಲವೇ ಹಿಡಿಯಬಹುದು. ಆದರೆ ಈ ಮನೆಯಿಂದ ಯಾರಾದರೂ ಕಾಣೆಯಾದರೆ 15 ನಿಮಿಷಗಳಲ್ಲಿ ಇಡೀ ಪರಿವಾರಕ್ಕೇ ಆ ವಿಷಯ ಗೊತ್ತಾಗುತ್ತದೆ. ಈ ಮನೆಯೇ ಜೇನುಗೂಡು. ಜೇನುನೊಣಗಳ ಒಗ್ಗಟ್ಟಿನ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ ಅಲ್ಲವೆ. ಅವುಗಳು ಗುಂಪಿನಲ್ಲಿಯೇ ದಾಳಿ ನಡೆಸುವುದನ್ನು ನೋಡಿದಾಗ ಅವುಗಳ ಸಾಂ ಕ ಶಕ್ತಿ ಅರಿವಾಗದೇ ಇರದು. ಅವುಗಳ ನೆಟ್‌ವರ್ಕ್‌ ಎಷ್ಟೊಂದು ಪ್ರಭಾವಶಾಲಿ ಎಂದರೆ ರಾಣಿ ಜೇನುಗೂಡಿನಿಂದ ಕಾಣೆಯಾದ 15 ನಿಮಿಷಗಳಲ್ಲಿ ಜೇನುಗೂಡಿನ ಎಲ್ಲಾ ಸದಸ್ಯರಿಗೆ ಆ ಮಾಹಿತಿ ತಲುಪುತ್ತದೆ. ನಮಗೇನೋ ಸೋಷಿಯಲ್‌ ಮೀಡಿಯಾಗಳಿರುವುದರಿಂದ ಮಾಹಿತಿ ಸಂವಹನ ತುಂಬಾ ಸುಲಭದ ಮಾತು. ಆದರೆ ಅಂಥ ಯಾವ ಸೌಲಭ್ಯ, ಸವಲತ್ತುಗಳು ಇಲ್ಲದೆ ಜೇನುನೊಣಗಳು ಕ್ಷಿಪ್ರವಾಗಿ ಕಾರ್ಯಚರಿಸುವುದು ಸೋಜಿಗದ ವಿಷಯವೇ ಸರಿ. ರಾಣಿ ಜೇನು ನಾಪತ್ತೆಯಾಗಿರುವುದು ತಿಳಿದ ತಕ್ಷಣ ಅವೆಲ್ಲವೂ ತಮ್ಮ ರಾಣಿಯನ್ನು ಹುಡುಕಲು ಶುರುಮಾಡುತ್ತವೆ. ಇಂಗ್ಲೆಂಡಿನಲ್ಲಿ ಒಮ್ಮೆ ಸಾವಿರಾರು ಜೇನುನೊಣಗಳು ಕಾರೊಂದರ ಹಿಂದೆ ಬಿದ್ದಿದ್ದವು. ಗಾಬರಿಯಾದ ಕಾರು ಚಾಲಕ ಅವುಗಳಿಂದ ದೂರ ಹೋಗಲು ವೇಗವಾಗಿ ಕಾರು ಚಲಾಯಿಸಿದ. ಆದರೆ ಎಷ್ಟೇ ವೇಗವಾಗಿ ಕಾರು ಚಲಾಯಿಸಿದರೂ ಜೇನುನೊಣಗಳು ಮಾತ್ರ ಕಾರಿನ ಬೆಂಬಿಡಲಿಲ್ಲ. ಈ ದೃಶ್ಯವನ್ನು ನೋಡುತ್ತಿದ್ದವರ ಮನದಲ್ಲಿ ಒಂದೇ ಪ್ರಶ್ನೆ ಇತ್ತು. ಜೇನುನೊಣಗಳು ಹಿಂಬಾಲಿಸುವಂಥ ಕೆಲಸವನ್ನು ಆ ಕಾರಿನ ಚಾಲಕ ಏನು ಮಾಡಿದ? ಅಸಲಿ ವಿಷಯವೇನು ಗೊತ್ತಾ? ಆ ಕಾರಿನ ಒಳಗೆ ರಾಣಿ ಜೇನು ಬಂಧಿಯಾಗಿಬಿಟ್ಟಿತ್ತು! ಅದನ್ನು ಕಾರಿನೊಳಗಿಂದ ಪಾರು ಮಾಡಲು ಸಾವಿರಾರು ಜೇನುನೊಣಗಳು ಹಲವು ಕಿ.ಮೀ. ಕ್ರಮಿಸುತ್ತಾ ಆ ಕಾರಿನ ಬೆನ್ನುಬಿದ್ದಿದ್ದವು.

ಹಕ್ಕಿಗಳು ಸೂಸು ಮಾಡುವುದಿಲ್ಲ

ಶೌಚಾಲಯಕ್ಕೆ ಹೋಗುವ ಸಂದರ್ಭ ಯಾರನ್ನೂ ಕೇಳಿಕೊಂಡು ಬರೋದಿಲ್ಲ. ಅದಕ್ಕೆ ಇಂಥದ್ದೇ ಘಳಿಗೆ, ಹೊತ್ತು ಗೊತ್ತು ಎಂಬುದೂ ಇಲ್ಲ. ಹೀಗಾಗಿಯೇ ಶಾಲೆಯಲ್ಲಿ ಪಾಠದ ಮಧ್ಯೆಯೋ, ಶುಭಸಮಾರಂಭಗಳಲ್ಲೋ ಕಿರುಬೆರಳನ್ನೆತ್ತಿ ತೋರುವ ಮಕ್ಕಳನ್ನು ಕಾಣಬಹುದು. ತಡವಾಗಿದ್ದರಂತೂ ಮುಗಿದೇ ಹೋಯಿತು. ಅವಸರವಸರದಿಂದ ಶೌಚಾಲಯಕ್ಕೆ ಓಡುವುದೇ ಗತಿ. ಮೂತ್ರಕ್ಕೆ ಹೋಗುವ ತಾಪತ್ರಯವೇ ಇಲ್ಲದ ಜೀವಿ ಎಂದರೆ ಹಕ್ಕಿಗಳು. ಹಾಗೆಂದು ಹಕ್ಕಿಗಳು ಜೀವನ ಪರ್ಯಂತ ಮೂತ್ರವನ್ನು ತಡೆಹಿಡಿಯುತ್ತವೆ ಎಂದುಕೊಳ್ಳದಿರಿ. ನಿಜಕ್ಕೂ ಅವುಗಳು ಮೂತ್ರ ಮಾಡುವುದಿಲ್ಲ. ಅವುಗಳು ನೀರು ಕುಡಿಯುವುದನ್ನು ಬಹುತೇಕ ಮಂದಿ ನೋಡಿರುತ್ತಾರೆ. ಹಾಗಿದ್ದರೆ ಆ ನೀರು ಎಲ್ಲಿ ಹೋಗುತ್ತದೆ? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿದ್ದರೆ ನಿಮಗೊಂದು ಶಹಬಾಸ್‌. ನೀವು ಚುರುಕು ಬುದ್ಧಿಯವರಾಗಿದ್ದೀರಿ. ಈಗ ಉತ್ತರಕ್ಕೆ ಬರೋಣ. ಮೂತ್ರದ ಮೂಲಕ ದೇಹದ ಹೊರಗೆ ಹೋಗುವ ವಸ್ತು ಯೂರಿಯಾ. ಆದರೆ ಹಕ್ಕಿಗಳ ದೇಹದಲ್ಲಿ ಯೂರಿಯಾ ಉತ್ಪತ್ತಿಯಾಗುವುದಿಲ್ಲ. ಯೂರಿಕ್‌ ಆ್ಯಸಿಡ್‌ ಉತ್ಪತ್ತಿಯಾಗುತ್ತದೆ. ಇದು ನೀರನ್ನು ಮರುಸಂಸ್ಕರಿಸಿ ಮರುಬಳಕೆಗೆ ಸಿದ್ಧವಾಗಿಸುತ್ತದೆ. ಅದರಿಂದ ಉಲಿಯುವ ಅಂಶ ಘನ ತ್ಯಾಜ್ಯದ(ಮಲ) ಮೂಲಕ ದೇಹದಿಂದ ಹೊರಕ್ಕೆ ಹೋಗುತ್ತದೆ. ಇನ್ನೊಂದು ಅರ್ಥದಲ್ಲಿ ಗ್ರಹಿಸಬಹುದಾದರೆ ಹಕ್ಕಿಗಳು ಮೂತ್ರವನ್ನು ಮನುಷ್ಯರಂತೆ ಜಲರೂಪದಲ್ಲಿ ಹೊರಸಾಗಿಸುವುದಿಲ್ಲ, ಬದಲಿಗೆ ಘನರೂಪದಲ್ಲಿ ಸಾಗಿಸುತ್ತವೆ ಎನ್ನಬಹುದು. ಹಕ್ಕಿಗಳ ದೇಹದೊಳಗೆ ನೀರು ಮರು ಸಂಸ್ಕರಣೆಗೆ ಒಳಪಡುವುದರಿಂದ ನೀರಿಲ್ಲದೆ ತುಂಬಾ ಕಾಲ ಇರಬಲ್ಲದು.

ಈ ಮೀನು ಕಚ್ಚಿದರೆ ಹೃದಯಾಘಾತ!

ಗಾಬರಿಯಾಗದಿರಿ! ಈ ಮೀನು ಹತ್ತಿರದಲ್ಲೆಲ್ಲೂ ಇಲ್ಲ. ಇದಿರುವುದು ದೂರದ ಆಸ್ಟ್ರೇಲಿಯಾ ಕಡಲ ತೀರದಲ್ಲಿ. ಇದರ ಹೆಸರು ಇರುಕಾಂಡಿj ಜೆಲ್ಲಿಫಿಶ್‌. ಈ ಮೀನಿನಿಂದ ಕಚ್ಚಿಸಿಕೊಂಡವರು "ಇರುಕಾಂಡಿj ಸಿಂಡ್ರೋಮ್‌'ಗೆ ತುತ್ತಾಗುತ್ತಾರೆ. ಅದರ ಕೊನೆಯ ಹಂತ ಹೃದಯಾಘಾತ. ಸೂಕ್ತ ಚಿಕಿತ್ಸೆ ಸಿಗದಿದ್ದರೆ ಗಾಯಾಳು ಕೊನೆಯುಸಿರೆಳೆಯುತ್ತಾರೆ. ಇರುಕಾಂಡಿj ಸಿಂಡ್ರೋಮ್‌ ಅನ್ನು ಮೊದಲು ಕಂಡುಹಿಡಿದಾತ ಚಾರ್ಲ್ಸ್‌ ಬಾರ್ನ್ಸ್ ಎಂಬ ಪ್ರಕೃತಿ ಶಾಸ್ತ್ರಜ್ಞ. ಆತ ಸ್ವತಃ ತಾನೇ ಆ ಮೀನಿನಿಂದ ಕಡಿಸಿಕೊಂಡಿದ್ದ. ನಂತರ ತನ್ನ ದೇಹದಲ್ಲಿ ಏನೇನು ಬದಲಾವಣೆ ಕಾಣುತ್ತದೆ ಎನ್ನುವುದನ್ನು ಪಟ್ಟಿ ಮಾಡಿದ. ಕಡೆಗೆ ಹೆಚ್ಚು ತಡ ಮಾಡದೆ ಆಸ್ಪತ್ರೆಗೆ ಓಡಿ ಚಿಕಿತ್ಸೆ ಪಡೆದ. ತನ್ನ ಅನುಭವವನ್ನು ಆತ ಸಾಕ್ಷ್ಯಚಿತ್ರದ ಮೂಲಕ ದಾಖಲಿಸಿದ. ಇರುಕಾಂಡಿjಯನ್ನು ಕಿಲ್ಲರ್‌ ಫಿಶ್‌ ಎಂದೇ ಕರೆಯುತ್ತಾರೆ. ಇಷ್ಟು ಅಪಾಯಕಾರಿಯಾದ ಮೀನು ಗಾತ್ರದಲ್ಲಿ ದೊಡ್ಡದಿರಬಹುದು, ನೋಡಲು ಭೀಕರವಾಗಿರಬಹುದು ಎಂದುಕೊಂಡರೆ ತಪ್ಪಾಗುತ್ತದೆ. ನೋಡಲು ಹತ್ತಿಯ ಉಂಡೆಯಂತೆ ಮುದ್ದಾಗಿ ಕಾಣುವ ಈ ಮೀನು ಕೆಲವೇ ಸೆಂಟಿಮೀಟರ್‌ಗಳಷ್ಟು ಉದ್ದವಿರುತ್ತದೆ. ಅದರ ದೇಹ ಮಿಕ್ಕ ಅಂಬಲಿ ಮೀನುಗಳಂತೆ ಪಾರದರ್ಶಕವಾಗಿರುವುದರಿಂದ ಸಮುದ್ರದಲ್ಲಿ ಗೋಚರವಾಗುವುದು ಕೂಡಾ ಕಷ್ಟ. ಈ ಜೀವಿಯ ವಿಷ ಎಷ್ಟು ತೀವ್ರವಾಗಿದೆ ಎನ್ನುವುದನ್ನು ತಿಳಿದರೆ ನೀವು ಹೌಹಾರುವುದು ಖಂಡಿತ. ಕಾಳಿಂಗ ಸರ್ಪದ 100ಪಟ್ಟು ಹೆಚ್ಚಿನ ವಿಷ ಇರುಕಾಂಡಿ ಮೀನಿನದು.

ಹರ್ಷ


Trending videos

Back to Top