CONNECT WITH US  

ತಿರುಗುಬಾಣವಾದ ಪಿತೂರಿ

ಒಂದೂರಲ್ಲಿ ರಾಮು ಮತ್ತು ಭೀಮು ಎಂಬ ಇಬ್ಬರು ಸ್ನೇಹಿತರಿದ್ದರು. ಇಬ್ಬರೂ ಅನೇಕ ವರ್ಷಗಳಿಂದ ಕುಂಬಾರಿಕೆಯಲ್ಲಿ ತೊಡಗಿದ್ದರು. ಸ್ನೇಹಿತರಾಗಿದ್ದರೂ ಅವರಿಬ್ಬರ ನಡುವೆ ವ್ಯತ್ಯಾಸಗಳಿದ್ದವು. ರಾಮು ಬಹಳ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದ. ಅಂದಿನ ಕೆಲಸವನ್ನು ಅಂದೇ ಮುಗಿಸುತ್ತಿದ್ದ. ಆಲಸ್ಯತನ ತೋರುತ್ತಿರಲಿಲ್ಲ. ಅವನ ಶ್ರಮ ಅವನ ಮಡಕೆಗಳಲ್ಲಿ ಕಾಣುತ್ತಿತ್ತು. ಅವನು ತಯಾರಿಸುತ್ತಿದ್ದ ಮಡಕೆಗಳು ಉತ್ತಮ ಗುಣಮಟ್ಟದ್ದಾಗಿರುತ್ತಿದ್ದವು. ಹೀಗಾಗಿ ಜನರು ಅವುಗಳನ್ನು ಕೊಳ್ಳಲು ಮುಗಿಬೀಳುತ್ತಿದ್ದರು. ಪರ ಊರಿನ ಮಾರುಕಟ್ಟೆಯಲ್ಲಿಯೂ ರಾಮುವಿನ ಮಡಕೆಗಳಿಗೆ ಬಹಳ ಬೇಡಿಕೆ ಇತ್ತು. 

ಅವನ ಗೆಳೆಯ ಭೀಮು ರಾಮುವಿಗೆ ತದ್ವಿರುದ್ಧ ಸ್ವಭಾವದವನು. ಅಂದಿನ ಕೆಲಸವನ್ನು ಅಂದೇ ಮುಗಿಸುತ್ತಿರಲಿಲ್ಲ. ಮೈಗಳ್ಳನೂ ಆಗಿದ್ದ. ಹೀಗಾಗಿ ಅವನ ಮಡಕೆಗಳು ಮುಟ್ಟಿದರೆ ಒಡೆದುಹೋಗುವಂತಿರುತ್ತಿದ್ದವು. ಜನರು ಅವುಗಳನ್ನು ಕೊಳ್ಳುತ್ತಲೂ ಇರಲಿಲ್ಲ. ಅದರ ಮೇಲೆ ಭೀಮು ದುರಾಸೆ ಪ್ರವೃತ್ತಿಯುಳ್ಳವನಾಗಿದ್ದ. ರಾಮು ಮತ್ತು ಬೀಮು ಹೇಗೆ ಸ್ನೇಹಿತರಾದರು ಎನ್ನುವುದು ಜನರಿಗೆ ಬಿಡಿಸಲಾರದ ಒಗಟಾಗಿತ್ತು.

ದುಡಿಮೆಯಿಂದ ಲಾಭವಾಗಿ ರಾಮುವಿನ ಬಳಿ ದುಡ್ಡು ಸೇರುತ್ತಿತ್ತು. ಕ್ರಮೇಣ ಭೀಮುವಿಗೆ ಅದನ್ನು ಕಂಡು ಸಹಿಸಿಕೊಳ್ಳಲಾಗಲಿಲ್ಲ. ಶುರುವಿನಲ್ಲಿ ಚಿಕ್ಕದಾಗಿ ಮೊಳೆತಿದ್ದ ಅಸೂಯೆಯ ಬೀಜ ದಿನಗಳು ಉರುಳುವಷ್ಟರಲ್ಲಿ ಹೆಮ್ಮರವಾಗಿ ಬೆಳೆದಿತ್ತು. ತನ್ನ ಮಡಕೆಗಳನ್ನು ಯಾಕೆ ಜನರು ಕೊಳ್ಳುತ್ತಿಲ್ಲ ಎಂದು ಅವನು ಚಿಂತಿಸಿದ. ಅವನಿಗೆ ತನ್ನ ಮಡಕೆಗಳಲ್ಲಿ ಗುಣಮಟ್ಟ ಇಲ್ಲ ಎನ್ನುವುದನ್ನು ಒಪ್ಪಿಕೊಳ್ಳಲಾಗಲಿಲ್ಲ. ಅವನು ತನ್ನ ನಷ್ಟಕ್ಕೆ ರಾಮುವನ್ನೇ ಹೊಣೆಗಾರನನ್ನಾಗಿಸಿದ. ಹೇಗಾದರೂ ಮಾಡಿ ಅವನನ್ನು ಊರಿನಿಂದ ಹೊರಗೆ ಓಡಿಸಿದರೆ ತನ್ನ ಮಡಕೆಗಳಿಗೆ ಬೇಡಿಕೆ ಬರುತ್ತದೆ ಎಂದು ಕೆಟ್ಟ ಯೋಚನೆ ಮಾಡಿದ.

ಭೀಮು ರಾಜನನ್ನು ನೋಡಲೆಂದು ಅರಮನೆಗೆ ಹೋದ. ಅರಮನೆಯ ಹೊರಗೆ ನಿಂತಿದ್ದ ರಾಜನ ಪಟ್ಟದಾನೆಯನ್ನು ನೊಡಿದಾಗ ಭೀಮುಗೆ ತಲೆಯಲ್ಲಿ ಕೆಟ್ಟ ಉಪಾಯ ಹೊಳೆಯಿತು. ಅವನು ರಾಜನ ಬಳಿ "ನಮ್ಮೂರಿನಲ್ಲಿ ರಾಮು ಎಂಬ ಅತ್ಯುತ್ತಮ ದರ್ಜೆಯ ಕುಂಬಾರ ಇದ್ದಾನೆ. ಅವನಿಗೆ ನಿಮ್ಮ ಕಪ್ಪು ಆನೆಯನ್ನು ಬಿಳಿಯದಾಗಿ ಮಾಡಿಕೊಡುವ ಸಾಮರ್ಥ್ಯ ಇದೆ' ಎಂದು ಹೇಳಿದ. ರಾಜ ನಂಬಲಿಲ್ಲ. ಆದರೆ ಭೀಮು "ಅವನನ್ನು ಕರೆಸಿ ಕೇಳಿದರೆ ಮೊದಲಿಗೆ ಒಪ್ಪಿಕೊಳ್ಳುವುದಿಲ್ಲ. ಆದರೆ ಕಠಿಣ ಶಿಕ್ಷೆ ಕೊಡುವುದಾಗಿ ಬೆದರಿಸಿದರೆ ಆನೆಯನ್ನು ಬೆಳ್ಳಗೆ ಮಾಡಿಕೊಡುತ್ತಾನೆ' ಎಂದು ರಾಜನ ಕಿವಿ ಚುಚ್ಚಿದ. ಈ ಮಾತನ್ನು ನಿಜವೆಂದು ನಂಬಿದ ರಾಜ ಕೂಡಲೇ ಭಟರನ್ನು ಕಳುಹಿಸಿ ರಾಮುವನ್ನು ಅರಮನೆಗೆ ಕರೆಸಿಕೊಂಡ. ತನ್ನ ಆನೆಯನ್ನು ಬಿಳಿಯಾಗಿಸಲು ಸೂಚಿಸಿದ. ರಾಜನ ಮಾತನ್ನು ಕೇಳಿ ರಾಮು ತಬ್ಬಿಬ್ಟಾದ. ತನಗೆ ಆ ಶಕ್ತಿ ಇಲ್ಲವೆಂದು ಬೇಡಿಕೊಂಡ. ಆದರೆ ರಾಜ ಕೇಳಲಿಲ್ಲ. ಈ ಕೆಲಸ ಮಾಡದಿದ್ದರೆ ಶಿರಚ್ಛೇದನ ಮಾಡುವುದಾಗಿ ಬೆದರಿಸಿದ. ಪಕ್ಕದಲ್ಲೇ ನಸುನಗುತ್ತಾ ನಿಂತಿದ್ದ ಭೀಮುವನ್ನು ನೋಡಿದ ರಾಮುವಿಗೆ ಇದೆಲ್ಲಾ ಅವನದೇ ಪಿತೂರಿ ಎಂದು ಅರ್ಥವಾಯಿತು. 

ಸ್ವಲ್ಪ ಯೋಚನೆ ಮಾಡಿದ ರಾಮು, "ಮಹಾರಾಜರೇ, ನಿಮ್ಮ ಆನೆಯನ್ನು ಬೆಳ್ಳಗೆ ಮಾಡುವುದು ಬಹಳ ಸುಲಭ. ಅದರ ಮೈಯನ್ನು ಹದವಾಗಿ ಕಾದ ನೀರಿನಲ್ಲಿ ತೊಳೆದು, ಅಂಟವಾಳ ಕಾಯಿ, ಸೀಗೇಕಾಯಿಪುಡಿ ಬೆರೆಸಿ ಸ್ವತ್ಛಗೊಳಿಸಬೇಕು, ಆದರೆ ಅದಕ್ಕಾಗಿ ಆನೆ ನಿಲ್ಲುವಷ್ಟು ದೊಡ್ಡದಾದ ಮಣ್ಣಿನ ಬುಗುಣಿಯ ಅವಶ್ಯಕತೆ ಇದೆ.  ಅಷ್ಟು ದೊಡ್ಡ ಮಣ್ಣಿನ ಬುಗುಣಿಯನ್ನು ಭೀಮು ಮಾತ್ರ ತಯಾರಿಸಲು ಸಾಧ್ಯ' ಎಂದು ಹೇಳಿಬಿಟ್ಟ. ರಾಜ ಭೀಮುವಿಗೆ ಒಂದೇ ವಾರದಲ್ಲಿ ಆನೆ ಹಿಡಿಯುವಷ್ಟು ದೊಡ್ಡದಾದ ಮಣ್ಣಿನ ಬುಗುಣಿಯನ್ನು ತಯಾರಿಸಬೇಕೆಂದು ಆಜ್ಞೆ ಹೊರಡಿಸಿದನು.

ಭೀಮುವಿನ ಉಪಾಯ ಅವನಿಗೆ ತಿರುಗುಬಾಣವಾಗಿತ್ತು. ಆದರೆ ರಾಜರಿಗೆ ಮಾಡುವುದಿಲ್ಲ ಎಂದು ಹೇಳಲಾಗದೆ ಮಣ್ಣಿನ ಬುಗುಣಿ ತಯಾರಿಯನ್ನು ಶುರು ಮಾಡಿದ. ನಾಲ್ಕು ಬಂಡಿಯಷ್ಟು ಮಣ°ನ್ನು ತರಿಸಿ, ಅರಮನೆಯ ಪ್ರಾಂಗಣದಲ್ಲಿಯೇ ದೊಡ್ಡ ಬುಗುಣಿಯನ್ನು ಸಿದ್ಧಪಡಿಸಿದನು. ರಾಮು ಆನೆಯನ್ನು ಬುಗುಣಿಯೊಳಗೆ ಇಳಿಸುತ್ತಿದ್ದಂತೆ ಅದರ ಭಾರಕ್ಕೆ ಮಣ್ಣಿನ ಬುಗುಣಿ ಒಡೆದು ಚೂರಾಯಿತು. ಇದರಿಂದ ಸಿಟ್ಟಿಗೆದ್ದ ರಾಜನು ಭೀಮುವನ್ನು ರಾಜ್ಯದಿಂದ ಗಡೀಪಾರು ಮಾಡಿದನು. ರಾಮು ನಡೆದುದೆಲ್ಲವನ್ನೂ ರಾಜರಿಗೆ ವಿವರಿಸಿದನು. ರಾಜ ಅವನಿಗೆ ಪಾರಿತೋಷಕ ನೀಡಿ ಕಳುಹಿಸಿಕೊಟ್ಟನು. 

ಹರೀಶ್‌ ಕುಮಾರ್‌


Trending videos

Back to Top